ಅದಮಾರು ಕಿರಿಯ ಶ್ರೀಗಳಿಂದಲೂ ಪಾದಯಾತ್ರೆ
ಉಡುಪಿ: ಪೇಜಾವರ ಮಠಾಧೀಶಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಅನೇಕ ಅನನ್ಯ ಸಾಧನೆಗಳಿಂದ ದೇಶಮಾನ್ಯತೆಯನ್ನು ಪಡೆದವರು. ಅದರಲ್ಲಿ ಒಂದು ಅವರು ದೇಶಾದ್ಯಂತ ನಡೆಸಿದ ಪಾದಯಾತ್ರೆ.
ಒಂದು ಯೋಜನ ದೂರ ಎಂದರೆ 10 ಸಾವಿರ ಮೈಲಿಗಳು! ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸುಮಾರು 30 ವರ್ಷಗಳ ಕಾಲ ತಮ್ಮ ನೂರಾರು ಶಿಷ್ಯರು ಅಭಿಮಾನಿಗಳು ಭಕ್ತರೊಂದಿಗೆ ಪ್ರತಿ ವರ್ಷ ಪಾದಯಾತ್ರೆಯ ಮೂಲಕ ದೇಶದುದ್ದಗಲ ಸುಮಾರು 2 ಯೋಜನ ಅಂದರೆ 20 ಸಾವಿರ ಮೈಲುಗಳಿಗೂ ಅಧಿಕ ದೂರ ಪಾದಯಾತ್ರೆ ನಡೆಸಿ ನೂರಾರು ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸಿದ್ದು ಒಂದು ಅಪೂರ್ವ ದಾಖಲೆ. ಪ್ರಸ್ತುತ ದೇಶದಲ್ಲೇ ಈ ರೀತಿ ಇಷ್ಟು ದೂರ ಪಾದಯಾತ್ರೆ ನಡೆಸಿದ ದಾಖಲೆಯುಳ್ಳ ಬೇರೆ ಯತಿಗಳು ಪ್ರಾಯಃ ಬೇರೆ ಇರಲಿಕ್ಕಿಲ್ಲ! ದೇಶದ ಬೇರೆ ಬೇರೆ ಸ್ಥಳಗಳಿಂದಾರಂಭಿಸಿ 4 ಬಾರಿ ಉತ್ತರದ ಬದರೀನಾಥವನ್ನು ಪಾದಯಾತ್ರೆಯಲ್ಲಿ ಶ್ರೀಗಳು ಸಂದರ್ಶಿಸಿದ್ದು ಉಲ್ಲೇಖನೀಯ.
ಅದರ ಜೊತೆಗೆ ಪಾದಯಾತ್ರೆಯ ಸಂದರ್ಭದಲ್ಲಿ ನೂರಾರು ದಲಿತ ಬಂಧುಗಳ ಶೋಷಿತರ ಬಡಾವಣೆಗಳ ಭೇಟಿ, ಸಾವಿರಾರು ಭಕ್ತರನ್ನೂ ಭೇಟಿ ಮಾಡಿ ಅವರ ಉಭಯ ಕುಶಲೋಪರಿ ವಿಚಾರಿಸಿ ಆಶೀರ್ವದಿಸಿದ್ದು ವಿಶೇಷ.
ಬಹಳ ಸಂತೋಷದ ವಿಷಯವೆಂದರೆ ಇದೀಗ ಮತ್ತೊಬ್ಬ ಉಡುಪಿಯ ಯತಿಗಳು ಈ ಹಿಂದೆ ಮಧ್ವಗುರುಗಳೇ ಮೊದಲಾದ ಜಗದ್ಗುರುಗಳು ಅ ನಂತರ ಅನೇಕ ಪ್ರಾತಃ ಸ್ಮರಣೀಯ ಯತಿಗಳು ಹಾಗೂ ಪೇಜಾವರ ಶ್ರೀಗಳೇ ಮೊದಲಾದವರಂತೆಯೇ ಪಾದಯಾತ್ರೆಯ ಮೂಲಕ ದೇಶದ ತೀರ್ಥ ಕ್ಷೇತ್ರಗಳ ಸಂಚಾರ ಆರಂಭಿಸಿರುವುದು.
ಶ್ರೀ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಇದೇ ಎಪ್ರಿಲ್ 26 ರಿಂದ ಆರಂಭಿಸಿ ಮೇ15 ರ ವರೆಗೆ ತಮಿಳುನಾಡಿನ ಘಟಿಕಾಚಲದಿಂದ ಆರಂಭಿಸಿ ಆಂಧ್ರ ಪ್ರದೇಶದ ನರಸಿಂಹ ಕೊಂಡದ ವರೆಗೆ ಶ್ರೀಗಳು ಪವಿತ್ರ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಪುಣ್ಯ ಕಾರ್ಯಕ್ಕಾಗಿ ಭಕ್ತರು ಅವರ ಪಾದಾರವಿಂದಗಳಿಗೆ ಅವರ ಧೀಶಕ್ತಿಗೆ ಶತಶತಪ್ರಣಾಮಗಳನ್ನು ಸಲ್ಲಿಸುತ್ತಿದ್ದಾರೆ.
- ಜಿ ವಾಸುದೇವ ಭಟ್ ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ