ತೆಗೆಸಿದ ಜನಿವಾರವ ಇನ್ವಿಜಿಲೇಟರ್
ತೆಗೆಸಿದ ಜನಿವಾರವ
ತೆಗೆಸಿದ ಜನಿವಾರ ನೂಕಿದ ಕೈಯಾರ
ಬೇಕೆನುತಲಿ ಜಾತಿಯ ತುಳಿಯಬೇಕೆಂದು ||
ಎಂಟ್ರಿ ಪರೀಕ್ಷೆಗೆ ಕರೆಸಿ ಆನಂದದಿ
ಎಂಟ್ರಿಯಲ್ಲಿಯೆ ನಿಲಿಸಿ
ನಂದಿಸಿ ಮನಸನು ದ್ವೇಷದ ಜಲದಲಿ
ಎಂದೆಂದಿಗೂ ಮೇಲಕೆ ಬರದಿರು ಎಂದು||
ಕಂಡ ಕಂಡವರೊಡನೆ ಅಲೆದಿ
ಧರ್ಮದೊಳಗಿನ ಜಾತಿಯ ಎಳದಿ,
ಪುಂಡ ನೀತನ ನೂಕು ಎಂದು ನಿಂದಿಸಿ
ಹಗೆಹೊಗೆಯೊಳ ಮನಸಲಿ "ನೀವೆಲ್ಲಛೀ" ಎಂದು ||
ಉಪವೀತವನು ಕಡಿದು ಕಟುಕನ ನುಡಿಯಲಿ
ಅಪಹಾಸ್ಯ ಸೂತ್ರವನು
ನಸುನಗುತಲಿ ತೆಗೆದಲ್ಲಿಯೆ ಎಸೆಯುತ
ಉಸುರುತ ಚೋದ್ಯದಿ ಹೆದರಿಕೆ ಮೂಡಿಸಿ ||
(ಶಿಶುನಾಳ ಷರೀಫರು ಇದ್ದಿದ್ರೆ ಈ ರೀತಿ ತಾವೇ ಅಣಕು ಗೀತೆಯನ್ನು ಬರೆಯುತ್ತಿದ್ದರೇನೊ!!. ಶಿಶುನಾಳ ಷರೀಫರ ಕ್ಷಮೆ ಕೋರಿ, CET ಪರೀಕ್ಷಾ ಸಂದರ್ಭದಲ್ಲಿ ಜನಿವಾರ ತೆಗೆಸಿದ ಮೂರ್ಖ ಶಿಖಾಮಣಿಗಳ ಕೃತ್ಯವನ್ನು ಖಂಡಿಸಿ, ಹೀಗೊಂದು ಅಣಕು ಗೀತೆಯನ್ನು ಬರೆಯುವ ಪ್ರಯತ್ನ ಮಾಡಲಾಗಿದೆ)
*****
ಶೀಲ, ಚಾರಿತ್ರ್ಯ, ಸಂಸ್ಕಾರಗಳ ಪರ್ವತ ಗುರು ಗೋವಿಂದಭಟ್ಟರ ಮನೆಯಲ್ಲಿ ಮುಸಲ್ಮಾನರ ಒಬ್ಬ ಹುಡುಗ ಓಡಾಡತೊಡಗಿದ. ಗೋವಿಂದಭಟ್ಟರು ತಮ್ಮ ಇಡೀ ಆಧ್ಯಾತ್ಮ ಸಾಮ್ರಾಜ್ಯದ ಸಂಪೂರ್ಣ ಆಸ್ತಿಗೆ ಅಧಿಕಾರಿ ಆಗುವ ರೀತಿಯಲ್ಲಿ ಆತನನ್ನು ತರಬೇತಿಗೊಳಿಸಲು ಅಣಿಯಾದರು. ಸಂಸ್ಕಾರ ನೀಡಿದರು. ತಾವೇ ತಂದೆಯಾಗಿ ಜನಿವಾರ ಹಾಕಿ ದೀಕ್ಷೆಕೊಟ್ಟರು. ಒಬ್ಬ ಬ್ರಾಹ್ಮಣ ಗುರು ಮುಸಲ್ಮಾನರ ಮಗ ಶರೀಫರನ್ನು ಮನೆಗೆ ಕರೆತಂದು ಜಾತಿಯ ಮಾತನ್ನೆ ಎತ್ತದ ಮಡಿ ಮೈಲಿಗೆಯನ್ನು ಕಿತ್ತು ಹಾಕಿದ ಗುರುಗೋವಿಂದ ಭಟ್ಟರು, ಧರ್ಮ ಸಾಮರಸ್ಯ, ಪರಧರ್ಮ ಸಹಿಷ್ಣುತೆ, ಜಾತ್ಯಾತೀತದ ನಿಲುವು ಸಂಸ್ಕಾರದ ಸೌರಭಕ್ಕೆ ನಾಂದಿ ಹಾಡಿದ್ದರು.
ಜನಿವಾರ ಹಾಕಿ, ಸಂಸ್ಕಾರ ನೀಡಿ ವ್ಯಕ್ತಿಯನ್ನು, ಸಮಾಜವನ್ನು ಮೇಲೆತ್ತುವ ಗೋವಿಂದ ಭಟ್ಟರಂತವರು, ಸಂಸ್ಕಾರ ಪಡೆದು ಆರೋಗ್ಯಕರ ಸಮಾಜ ನಿರ್ಮಿಸಿದಂತಹ ಷರೀಫರಂತವರು ರಾಜಕಾರಣ, ಅಧಿಕಾರ ವ್ಯವಸ್ಥೆಯಲ್ಲಿ ಇರಬೇಕಿತ್ತು. ದುರಂತ, ಜಾತಿಗಳನ್ನು ಒಡೆಯುವ, ಜಾತಿಯ ಹೆಸರಲ್ಲಿ ಅವ ಹೇಳನ ಮಾಡುವ ಬುದ್ಧಿ ದಾರಿದ್ರ್ಯದ ರಾಜಕಾರಣಿಗಳು, ಸಂಸ್ಕಾರವನ್ನೇ ಅವಮಾನಿಸುವ ಅಧಿಕಾರಿಗಳು ಸಮಾಜಕ್ಕೆ ಕಂಟಕರಾದವರು ಆಯಾಕಟ್ಟಿನ ಜಾಗದಲ್ಲಿ ವಿರಾಜಮಾನರಾಗುತ್ತಿದ್ದಾರೆ.
ಕಾಮನ್ ಸೆನ್ಸ್ ಇಲ್ಲದವರು ಕಾಮನ್ ಎಂಟ್ರೆನ್ಸ್ ಟೆಸ್ಟ್‌ನ ಇನವಿಜಿಲೇಟರ್!!
****
ಶಿಶುನಾಳ ಷರೀಫರ ಸುಂದರವಾದ "ಹಾಕಿದ ಜನಿವಾರವ" ಮೂಲ ಕೃತಿ:
ಹಾಕಿದ ಜನಿವಾರವ ಸದ್ಗುರುನಾಥ
ಹಾಕಿದ ಜನಿವಾರವ
ಹಾಕಿದ ಜನಿವಾರವ ನೂಕಿದ ಭವಭಾರ
ಬೇಕೆನುತಲಿ ಬ್ರಹ್ಮಜ್ಞಾನ ಉಚ್ಚರಿಸೆಂದು ||
ಸಂಧ್ಯಾವಂದನೆ ಕಲಿಸಿ ಆನಂದದಿ
ಬಿಂದು ವರ್ಗವ ನಿಲಿಸಿ
ನಂದಿಸಿ ಮನಸನು ಆತ್ಮ ಜಲದಲಿ
ಎಂದೆಂದಿಗೂ ಯಮದುಂದುಗವಳಿಯೆಂದು ||
ಕಂಡ ಕಂಡವರೊಡನೆ ಅಲೆದಿ
ಧರ್ಮಲಂದ ರಜತೆ ಯಾಕೆ ಬೆರದಿ?
ಪುಂಡ ನಿತನ ನೂಕು ಎಂದು ನಿಂದಿಸೆ
ಗುರುಗಂಡೆಂದರೀತನೆ ನೀವಲ್ಲಛೀ ಎಂದು ||
ಶಿಶುನಾಳಧೀಶ ಗುರು ತನ್ನೊಡಲೊಳು
ವಶವಾದ ಸೂತ್ರವನು
ನಸುನಗುತಲಿ ತೆಗೆದಲ್ಲಿಯೆ ತೊಡಿಸಿದ
ಉಸುರಿದ ಮಂತ್ರವ ಹೊಸಬನ ಮೂಡುತ
(ಮೇಲಿನ ಷರೀಫರ ಮೂಲ ಪದ್ಯ ಮತ್ತು ಗುರು ಗೋವಿಂದ ಭಟ್ಟರ ಬಗೆಗಿನ ಮಾಹಿತಿಯನ್ನು ಪುಸ್ತಕಗಳಿಂದ ಪಡೆಯಲಾಗಿದೆ)
ಜನಿವಾರ ಧರಿಸುವುದು ಯಾವುದೋ ಒಂದು ಸಮುದಾಯದವರಲ್ಲ. ಹಿಂದೂ ಧರ್ಮದಲ್ಲಿನ ಅನೇಕ ಸಮುದಾಯದಲ್ಲಿ ಜನಿವಾರ ಧಾರಣೆಯ ಪದ್ಧತಿ ಇದೆ. ಆ ಎಲ್ಲ ಸಮುದಾಯದವರ ಪರವಾಗಿ, ಜನಿವಾರ ತೆಗೆಸಿ ಸಮುದಾಯಕ್ಕೆ, ಹಿಂದು ಧರ್ಮಕ್ಕೆ ಅವಮಾನ ಮಾಡಿದವರ ಕೃತ್ಯವನ್ನು ಖಂಡಿಸೋಣ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ