ಭವ ಬಂಧನದಲ್ಲಿ ಇದ್ದುಕೊಂಡೇ ಶ್ರೀರಾಮ ಸದ್ಗುಣಗಳ ಆಗರವಾದ ...

Upayuktha
0



ತ್ತರ ಭಾರತದ ಸರಯೂ ನದಿ ತೀರದಲ್ಲಿರುವ ಅಯೋಧ್ಯಾನಗರಿಯನ್ನು ಆಳುತ್ತಿದ್ದ ದಶರಥ ಮಹಾರಾಜನ ಮೊದಲ ಪುತ್ರ ರಾಮ ತನ್ನ ಸೋದರರಾದ ಲಕ್ಷ್ಮಣ, ಭರತ ಮತ್ತು ಶತ್ರುಘ್ನರೊಂದಿಗೆ ವಸಿಷ್ಟಾಶ್ರಮದಲ್ಲಿ ವಿದ್ಯಾಭ್ಯಾಸ ಮುಗಿಸಿ ವಿಶ್ವಾಮಿತ್ರರ ಆಶಯದಂತೆ ತಂದೆಯ ಹೇಳಿಕೆಯ ಮೇರೆಗೆ ಅರಮನೆ ಯಿಂದ ಹೊರಟು ಹಲವಾರು ರಾಕ್ಷಸರನ್ನು ಕೊಂದು ಮಿಥಿಲಾ ನಗರಿಯನ್ನು ಆಳುತ್ತಿದ್ದ ಜನಕರಾಜನ ಮಗಳು ಭೂಮಿಸುತೆ ಸೀತಾದೇವಿಯ ಸ್ವಯಂವರದಲ್ಲಿ ಶಿವ ಧನಸ್ಸನ್ನು ಹೆದೆ ಏರಿಸುವ ಮೂಲಕ ಗೆದ್ದು ಆಕೆಯನ್ನು ವಿವಾಹವಾಗಿ ಅಯೋಧ್ಯೆಗೆ ವಾಪಸಾದನು. ಇನ್ನೇನು ಯುವರಾಜ ಪಟ್ಟಾಭಿಷೇಕಕ್ಕೆ ತಯಾರಾ ಗುವಾಗ ತಂದೆಯು ತನ್ನ ಚಿಕ್ಕಮ್ಮನಿಗೆ ಕೊಟ್ಟ ವಚನವನ್ನು ನಿಭಾಯಿಸಲು 14 ವರ್ಷ ವನವಾಸಕ್ಕೆ ಪತ್ನಿ ಸೀತಾದೇವಿ ಮತ್ತು ಸೋದರ ಲಕ್ಷ್ಮಣರೊಡನೆ ಹೊರಟು ನಿಂತನು. 


ಕಾಡಿನಲ್ಲಿ ತನ್ನನ್ನು ಕಂಡು ಮೋಹಿಸಿದ ಶೂರ್ಪನಖಿಯನ್ನು ರಾಮನು ತಿರಸ್ಕರಿಸಿದನು. ಇದರಿಂದ ಅಪಮಾನಗೊಂಡ ಆಕೆ ರಾಮನನ್ನು ಹೀನಾಯವಾಗಿ ನಿಂದಿಸಿದಾಗ ಕೋಪಗೊಂಡ ಲಕ್ಷ್ಮಣನು ಶೂರ್ಪನಖಿಯ ಕಿವಿ ಮತ್ತು ಮೂಗನ್ನು ಕತ್ತರಿಸಿ ಆಕೆಯನ್ನು ವಿಕಾರಗೊಳಿಸಿದನು. ಶೂರ್ಪನಖಿ ತನ್ನ ಸಹೋದರ ರಾವಣನಲ್ಲಿ ರಾಮನ ಕುರಿತು ದೂರನ್ನು ನೀಡಿದಳು. ತನ್ನ ಸೋದರಿಗಾದ ಅವಮಾನದಿಂದ ಕೃದ್ಧನಾದ ರಾವಣನು ಸೀತೆಯನ್ನು ಅಪಹರಿಸಲು ಮಾರೀಚ ನೊಂದಿಗೆ ಹುನ್ನಾರ ನಡೆಸಿದನು.

ವನವಾಸದ ಸಮಯದಲ್ಲಿ ಚಿನ್ನದ ಜಿಂಕೆಯನ್ನು ಕಂಡು ಅದನ್ನು ಪಡೆಯುವ ಪತ್ನಿಯ ಬಯಕೆಯನ್ನು ಈಡೇರಿಸಲು ರಾಮನು ಮಾಯಾಮೃಗದ ಬೆಂಬತ್ತಿ ಹೋದನು. ಇದೇ ಸಮಯವನ್ನು ಸಾಧಿಸಿ ಸನ್ಯಾಸಿಯ ವೇಷದಲ್ಲಿ ಬಂದ ರಾವಣನಿಗೆ ಭಿಕ್ಷೆ ನೀಡಲು ಉದ್ಯುಕ್ತಳಾಗಿ, ಪತಿಯನ್ನು ಅರಸಿ ಹೋದ ಮೈದುನ ಲಕ್ಷ್ಮಣನು ತನ್ನ ರಕ್ಷಣೆಗಾಗಿ ಹಾಕಿದ ಲಕ್ಷ್ಮಣ ರೇಖೆಯನ್ನು ದಾಟಿದಳು. ಲಕ್ಷ್ಮಣ ರೇಖೆಯನ್ನು ದಾಟಿ ಬಂದ ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗು ವಾಗ ಜಟಾಯು ಎಂಬ ಪಕ್ಷಿಯು ರಾವಣನನ್ನು ಎದುರಿಸಿ ಮೃತವಾಯಿತು. 

ಪತ್ನಿಯನ್ನು ಕಳೆದುಕೊಂಡ ರಾಮನು ತನ್ನ ಸೋದರನೊಂದಿಗೆ ಆಕೆಯನ್ನು ಹುಡುಕುತ್ತಾ ಕಿಷ್ಕಿಂದೆಗೆ ಬಂದು ಋಷ್ಯಮೂಕ ಪರ್ವತದಲ್ಲಿದ್ದ ಸುಗ್ರೀವ ಮತ್ತಿತರ ವಾನರ ಪಡೆಯನ್ನು ಭೇಟಿಯಾದನು. ವಾಲಿಯನ್ನು ವಧಿಸಿ ಸುಗ್ರೀವನಿಗೆ ಆತನ ರಾಜ್ಯವನ್ನು ಮರಳಿಸಿದ ರಾಮನು ವಾನರ ವೀರ ಆಂಜನೇಯನನ್ನು ಸ್ವರ್ಣ ಲಂಕೆಗೆ ದೂತನಾಗಿ ಕಳುಹಿಸಿದನು. ಅಗಾಧ ಸಮುದ್ರವನ್ನು ಒಂದೇ ಏಟಿಗೆ ಹಾರಿ ದಾಟಿದ ಹನುಮನು ಸ್ವರ್ಣಲಂಕೆಯ ಅಶೋಕವನದಲ್ಲಿ ಸೀತೆಯನ್ನು ಭೇಟಿ ಯಾಗಿ ರಾಮನ ಸಂದೇಶವನ್ನು ಆಕೆಗೆ ನೀಡಿದನು. ಮರಳಿ ರಾಮನ ಬಳಿ ಬಂದ ಹನುಮನು ಸೀತೆಯ ಚೂಡಾಮಣಿಯನ್ನು ರಾಮನಿಗೆ ನೀಡಿ ರಾವಣನ ಸ್ವರ್ಣಲಂಕೆಯಲ್ಲಿ ಆಕೆಯ ಇರುವನ್ನು ದೃಢೀಕರಿಸಿದನು.

 ವಾನರಸೇನೆ ನಿರ್ಮಿಸಿದ ಸೇತುಬಂಧದ ಮೂಲಕ ಸಮುದ್ರ ದಾಟಿದ ರಾಮನು ರಾವಣನೊಂದಿಗೆ ನಡೆದ ಭೀಕರ ಯುದ್ಧದಲ್ಲಿ ರಾವಣನ ಸೋದರ ಕುಂಭಕರ್ಣನು ಸಾವಿಗೀಡಾದನು.ರಾವಣನ ಮಗ ಇಂದ್ರಜಿತುವಿನ ಕೈಯಲ್ಲಿ ಲಕ್ಷ್ಮಣನು ಗಾಯಗೊಂಡು ಮೂರ್ಚಿತನಾದಾಗ ವೈದ್ಯರ ಸಲಹೆಯಂತೆ ಹನುಮನು ಸಂಜೀವಿನಿ ಮೂಲಿಕೆ ಇರುವ ಪರ್ವತವನ್ನು ಹೊತ್ತು ತಂದನು. ಮುಂದೆ ರಾಮ ರಾವಣರ ನಡುವೆ ನಡೆದ ಭೀಕರ ಯುದ್ಧದಲ್ಲಿ ರಾಮನು ರಾವಣನನ್ನು ವಧಿಸಿ ಜಯ ಗಳಿಸಿದನು. ತಾನು ಗಳಿಸಿದ ಸ್ವರ್ಣ ಲಂಕೆಯನ್ನು ರಾವಣನ ಸೋದರ ವಿಭೀಷಣನಿಗೆ ಪಟ್ಟಗಟ್ಟಿದನು. 

ತನ್ನ ಪಾತಿವ್ರತ್ಯವನ್ನು ಯಾರೂ ಶಂಕಿಸಬಾರದೆಂದು ಅಗ್ನಿ ಪ್ರವೇಶ ಮಾಡಿದ ಸೀತೆ ಪುನೀತಳೆಂದು ಕರೆಯಲ್ಪಟ್ಟಳು. ಮುಂದೆ ರಾಮನು ಅಯೋಧ್ಯೆಗೆ ಮರಳಿ ತನ್ನ ತಾಯಂದಿರ,ಸೋದರ ಭರತನ ಮತ್ತು ಪುರ ಜನರ ಆಶಯದಂತೆ ಮಹಾರಾಜನಾಗಿ ಬಹಳಷ್ಟು ಕಾಲ ರಾಜ್ಯಭಾರ ಮಾಡಿದನು.
ಇದು ನಾವು ನೀವೆಲ್ಲರೂ ಅರಿತ ರಾಮಾಯಣದ ಸಂಕ್ಷಿಪ್ತ ಕಥೆ.

ಇಷ್ಟೇ ಆದರೆ ರಾಮ ಓರ್ವ ರಾಜನೆಂದು ಪ್ರಸಿದ್ಧನಾಗುತ್ತಿದ್ದ ಮಾತ್ರ ಆದರೆ ರಾಮ ಆದರ್ಶ ವ್ಯಕ್ತಿ ಎನಿಸಿದ, ದೈವ ರೂಪವೆನಿಸಿದ ಮುಂದೆ ದೇವರೇ ಆದ.
*ರಾಮನು ಅಖಂಡ ಭೋಗ ಭಾಗ್ಯದಲ್ಲಿ ಇರುವ ವಯಸ್ಸಿನಲ್ಲಿ ಗುರುಹಿರಿಯರಿಗೆ ವಿಧೇಯನಾಗಿ ಗುರುಕುಲದ ನಿಯಮಗಳಿಗೆ ಬದ್ಧನಾಗಿ ತನ್ನ ಸೋದರ ರೊಂದಿಗೆ ಗುರುಕುಲದಲ್ಲಿ ಇದ್ದು ವಿದ್ಯೆ ಕಲಿತನು.

*ನವ ವಿವಾಹಿತನಾಗಿ ಅಯೋಧ್ಯೆಗೆ ಮರಳಿದ ರಾಮನು ತನ್ನ ಚಿಕ್ಕಮ್ಮನಿಗೆ ತಂದೆ ನೀಡಿದ ವಚನಕ್ಕೆ ಬದ್ಧನಾಗಿ ಅರಮನೆಯ ಭೋಗ ಭಾಗ್ಯಗಳನ್ನು ತ್ಯಜಿಸಿ ನಾರು ಮಡಿಯನ್ನುಟ್ಟು ಕಾಡಿಗೆ ತೆರಳಿ ಪರ್ಣಕುಟಿಯಲ್ಲಿ ವಾಸವಿದ್ದು ಗೆಡ್ಡೆ ಗಣಸುಗಳನ್ನು ತಿಂದು ಜೀವನ ನಡೆಸಿದನು. 

*ತನ್ನ ವನವಾಸಕ್ಕೆ ಕಾರಣಳಾದ ತಾಯಿ ಕೈಕೇಯಿಯನ್ನು ದ್ವೇಷಿಸದೆ, ಆಕೆಯ ಪುತ್ರ ಭರತನು ರಾಜ್ಯಕ್ಕೆ ಮರಳುವಂತೆ ಮಾಡಿದ ಆಗ್ರಹಕ್ಕೂ ಬಗ್ಗದೆ ಕಾಡಿನಲ್ಲಿಯೇ ಉಳಿದುಕೊಂಡನು.

*ಧರ್ಮ ಕಾರ್ಯಗಳಿಗೆ ಯಾಗಾದಿಗಳಿಗೆ ಅಡ್ಡಿ ಮಾಡಿದ ರಾಕ್ಷಸರನ್ನು ಸದೆಬಡಿದನು. ತಾನು ವಿಷ್ಣುವಿನ ದಶಾವತಾರಗಳಲ್ಲಿ ಒಂದೆಂಬ ಅರಿವನ್ನು ಹೊಂದಿದ್ದರೂ ಕೂಡ ಎಂದು ತನ್ನ ದೈವತ್ವವನ್ನು ಮಾನವನಾದ ರಾಮನ ಮೇಲೆ ಹೇರಲಿಲ್ಲ. ಸದಾ ಧರ್ಮ ರಕ್ಷಕನಾಗಿ ಧರ್ಮ ಪಾಲಕನಾಗಿದ್ದನು.

*ಪತ್ನಿಯನ್ನು ಕಳೆದುಕೊಂಡಿದ್ದರೂ ಕೇವಲ ವಾನರ ಸೈನ್ಯದ ಸಹಾಯದಿಂದ ಯುದ್ಧ ಮಾಡಿ ಗೆದ್ದನು. ರಾಕ್ಷಸೇಂದ್ರನಾದ ರಾವಣನು ತನ್ನ ಕಡುವೈರಿಯಾಗಿದ್ದರು ಆತನ ಶಿವ ಭಕ್ತಿಗೆ ಮಾರುಹೋಗಿದ್ದ ರಾಮನು ಆತನ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದನು. 

*ಇಂದ್ರನ ಅಮರಾವತಿಯನ್ನು ನಾಚಿಸುವಂತಹ ಸ್ವರ್ಣ ಲಂಕೆಯನ್ನು ಗೆದ್ದರೂ ರಾವಣನ ಸಹೋದರ ವಿಭೇಷಣನಿಗೆ ಲಂಕೆಯ ರಾಜನಾಗಿ ಪಟ್ಟಾಭಿಷೇಕ ಮಾಡಿದನು. 

*ಪುರ ಜನರ ಮಾತುಗಳಿಗೆ ಪತ್ನಿ ಸೀತಾದೇವಿ ಬಲಿಯಾಗಬಾರದೆಂದು ಆಕೆಯ ಅಗ್ನಿ ಪ್ರವೇಶಕ್ಕೆ ಮೌನ ಸಮ್ಮತಿಯನ್ನು ನೀಡಿದನು. *ಮರಳಿ ಅಯೋಧ್ಯೆಗೆ ಬಂದ ನಂತರ ತನ್ನ ತಾಯಿ ಕೌಸಲ್ಯಗೆ ನೀಡಿದಷ್ಟೇ ಗೌರವವನ್ನು ಉಳಿದಿಬ್ಬರು ತಾಯಂದಿರಾದ ಸುಮಿತ್ರ ಮತ್ತು ಕೈಕೆಯರಿಗೆ ನೀಡಿದನಲ್ಲದೆ, ಕೈಕೆಯಿಯು ತನ್ನ ಆಕೃತ್ಯಕ್ಕಾಗಿ ಸದಾ ಮರುಗದಿರುವಂತೆ ಕೇಳಿಕೊಂಡನು. 

ಇತಿಹಾಸದ ಪ್ರಕಾರ ಸುಮಾರು 1000 ವರ್ಷ ರಾಮನು ರಾಜ್ಯವಾಳಿದನು ಎಂದು ಹೇಳುತ್ತಾರೆ. ಈ ಸಮಯ ಭಾರತ ದೇಶದ ಉತ್ತರ ಭಾಗದ ಅಯೋಧ್ಯೆ ರಾಮ ರಾಜ್ಯವಾಗಿತ್ತು. ಸುಖ ಶಾಂತಿ ನೆಮ್ಮದಿ ಸಮೃದ್ಧಿ ಎಲ್ಲವೂ ನೆಲೆಸಿತ್ತು. ಭವ ಬಂಧನದಲ್ಲಿ ಇದ್ದುಕೊಂಡೆ ಶ್ರೀರಾಮನು  ಸದ್ಗುಣಗಳ ಆಗರವಾಗಿ, ಪಿತೃ ವಾಕ್ಯ ಪರಿಪಾಲಕನಾಗಿ, ಒಳ್ಳೆಯ ಸಹೋದರನಾಗಿ ಮರ್ಯಾದಾ ಪುರುಷನಾಗಿ, ಏಕ ಪತ್ನಿ ವ್ರತಸ್ಥನಾಗಿ, ದಕ್ಷ ರಾಜನಾಗಿ ಬಾಳಿ ಬದುಕಿದ. ಅಂತೆಯೇ ಇತಿ ಹಾಸದಲ್ಲಿ ಆತ ಅಜರಾಮರನಾದ, ಮಾನವತೆಯಿಂದ ದೇವತ್ವದೆಡೆಗೆ ನಡೆದ. ಕೊನೆಗೆ ಪ್ರಭು ಶ್ರೀರಾಮ ದೇವರೇ ಆದನು. ಅಂತೆಯೇ ಪ್ರಭು ಶ್ರೀ ರಾಮನು ಹುಟ್ಟಿದ ಚೈತ್ರ ಮಾಸದ ನವಮಿ ತಿಥಿಯನ್ನು ರಾಮನವಮಿ ಎಂದು ದೇಶದೆಲ್ಲೆಡೆ ಸಂತಸ ಸಡಗರದಿಂದ ಆಚರಿಸುತ್ತಾರೆ. ಎಲ್ಲರೂ ಪ್ರಭು ಶ್ರೀರಾಮನ ಆದರ್ಶ ಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಯುವ ಪೀಳಿಗೆಗೆ ಹರಸುತ್ತಾ. ಎಲ್ಲರಿಗೂ ಶ್ರೀ ರಾಮನವಮಿಯ ಶುಭಾಶಯಗಳು.

-ವೀಣಾ ಹೇಮಂತ್ ಗೌಡ ಪಾಟೀಲ್,  ಮುಂಡರಗಿ ಗದಗ್




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top