ಶ್ರೀವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ಶ್ರೀರಾಮ ನವಮಿಯನ್ನು ಆಚರಿಸುತ್ತಾರೆ. ಈ ದಿನ ಪುನರ್ವಸು ನಕ್ಷತ್ರದಲ್ಲಿ, ಮಧ್ಯಾಹ್ನದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಐದು ಗ್ರಹಗಳಿದ್ದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಜನ್ಮವಾಯಿತು.
ಶ್ರೀರಾಮನವಮಿಯ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ:
ದೇವತೆಗಳು ಮತ್ತು ಅವತಾರಗಳ ಜನ್ಮತಿಥಿಯಂದು ಭೂಮಿಯ ಮೇಲೆ ಅವರ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ಶ್ರೀರಾಮತತ್ತ್ವವು ಎಂದಿಗಿಂತ 1೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ನಾಮಜಪ, ಹಾಗೆಯೇ ಶ್ರೀರಾಮನ ಇತರ ಉಪಾಸನೆಗಳನ್ನು ಭಾವಪೂರ್ಣವಾಗಿ ಮಾಡುವುದರಿಂದ ಶ್ರೀರಾಮತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆಯಲು ಸಹಾಯವಾಗುತ್ತದೆ.
ಶ್ರೀರಾಮನವಮಿಯನ್ನು ಆಚರಿಸುವ ಪದ್ಧತಿ : ಅನೇಕ ರಾಮ ಮಂದಿರಗಳಲ್ಲಿ ಚೈತ್ರ ಶುಕ್ಲ ಪ್ರತಿಪದೆಯಿಂದ ಒಂಭತ್ತು ದಿನಗಳ ಕಾಲ ಈ ಉತ್ಸವವು ನಡೆಯುತ್ತದೆ. ರಾಮಾಯಣದ ಪಾರಾಯಣ, ಹರಿಕಥೆ ಮತ್ತು ರಾಮನ ಮೂರ್ತಿಗೆ ವಿವಿಧ ಶೃಂಗಾರ ಮುಂತಾದವುಗಳೊಂದಿಗೆ ಈ ಉತ್ಸವವನ್ನು ಆಚರಿಸುತ್ತಾರೆ. ನವಮಿಯಂದು ಮಧ್ಯಾಹ್ನ ರಾಮಜನ್ಮದ ಕೀರ್ತನೆಯಾಗುತ್ತದೆ. ಮಧ್ಯಾಹ್ನ ಕುಂಚಿಗೆ ಹಾಕಿದ ತೆಂಗಿನಕಾಯಿಯನ್ನು ತೊಟ್ಟಿಲಿನಲ್ಲಿಟ್ಟು ತೂಗುತ್ತಾರೆ.
ಭಕ್ತರು ಅದರ ಮೇಲೆ, ಗುಲಾಲು ಮತ್ತು ಹೂವುಗಳನ್ನು ಅರ್ಪಿಸುತ್ತಾರೆ.’ (ಕೆಲವು ಕಡೆಗಳಲ್ಲಿ ತೆಂಗಿನ ಕಾಯಿಯ ಬದಲು ಶ್ರೀರಾಮನ ಮೂರ್ತಿಯನ್ನು ತೊಟ್ಟಿಲಿನಲ್ಲಿ ಇಡುತ್ತಾರೆ.) ಈ ಸಂದರ್ಭದಲ್ಲಿ ಶ್ರೀರಾಮನ ಜನ್ಮದ ಗೀತೆಯನ್ನು ಹೇಳಲಾಗುತ್ತದೆ. ಅದರ ನಂತರ ಶ್ರೀರಾಮನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಪ್ರಸಾದವೆಂದು ಶುಂಠಿಚೂರ್ಣವನ್ನು ಕೊಡುತ್ತಾರೆ. ಕೆಲವು ಕಡೆಗಳಲ್ಲಿ ಶುಂಠಿಚೂರ್ಣದೊಂದಿಗೆ ಮಹಾಪ್ರಸಾದವನ್ನೂ ನೀಡುತ್ತಾರೆ.
ಶ್ರೀರಾಮನವಮಿಯ ಮಹತ್ವ : ತ್ರೇತಾಯುಗದಲ್ಲಿ ರಾಮನ ಜನ್ಮವಾದಾಗ ಕಾರ್ಯನಿರತವಾಗಿದ್ದ ಶ್ರೀವಿಷ್ಣುವಿನ ಸಂಕಲ್ಪ, ತ್ರೇತಾಯುಗದಲ್ಲಿನ ಅಯೋಧ್ಯಾವಾಸಿಗಳ ಭಕ್ತಿ ಭಾವ ಮತ್ತು ಪೃಥ್ವಿಯಲ್ಲಿನ ಸಾತ್ತ್ವಿಕ ವಾತಾವರಣದಿಂದಾಗಿ ಪ್ರಭು ಶ್ರೀರಾಮನ ಜನ್ಮದಿಂದ ಶೇ. 100 ರಷ್ಟು ಪರಿಣಾಮವಾಗಿತ್ತು.
ಅನಂತರ ಪ್ರತಿವರ್ಷ ಬರುವಂತಹ ಚೈತ್ರ ಶುಕ್ಲ ನವಮಿಗೆ ಬ್ರಹ್ಮಾಂಡದಲ್ಲಿನ ವಾತಾವರಣದಲ್ಲಿ ರಾಮತತ್ತ್ವವು ಪ್ರಕ್ಷೇಪಿಸಿ ವಾತಾವರಣವನ್ನು ಸಾತ್ತ್ವಿಕ ಮತ್ತು ಚೈತನ್ಯಮಯವನ್ನಾಗಿಸಲು ವಿಷ್ಣುಲೋಕದಿಂದ ಶ್ರೀರಾಮತತ್ತ್ವಯುಕ್ತ ವಿಷ್ಣುತತ್ತ್ವವು ಭೂಲೋಕದ ದಿಕ್ಕಿನತ್ತ ಪ್ರಕ್ಷೇಪಿತವಾಗುತ್ತದೆ ಮತ್ತು ಆ ದಿನ ಶ್ರೀರಾಮನ ಅಂಶಾತ್ಮಕ ಜನ್ಮವಾಗುತ್ತದೆ.
ಇದರ ಪರಿಣಾಮ ಇಡೀ ವರ್ಷವಿದ್ದು ಬ್ರಹ್ಮಾಂಡದಲ್ಲಿ ರಾಮ ತತ್ತ್ವಯುಕ್ತ ಸಾತ್ತ್ವಿಕತೆ ಮತ್ತು ಚೈತನ್ಯದ ಪ್ರಕ್ಷೇಪಣೆಯಾಗುತ್ತದೆ. ರಾಮ ತತ್ತ್ವಯುಕ್ತ ಸಾತ್ತ್ವಿಕತೆ ಮತ್ತು ಚೈತನ್ಯವನ್ನು ಬ್ರಹ್ಮಾಂಡದಲ್ಲಿನ ಪ್ರತಿಯೊಂದು ಸಜೀವ ಮತ್ತು ನಿರ್ಜೀವ ವಸ್ತುಗಳು ಗ್ರಹಿಸಿಕೊಳ್ಳುತ್ತವೆ ಮತ್ತು ಅದರಿಂದ ಅವುಗಳಿಗೆ ತಮ್ಮ ಕಾರ್ಯವನ್ನು ಒಳ್ಳೆಯ ರೀತಿಯಿಂದ ಮಾಡಲು ಸಾಧ್ಯವಾಗುತ್ತದೆ.
ರಾಮಭಕ್ತರ ಮಹತ್ವ : ಶ್ರೀರಾಮನಂತೂ ಶ್ರೇಷ್ಠ ಮತ್ತು ಪೂಜನೀಯನಾಗಿದ್ದನು, ಅಲ್ಲದೆ ಅವನ ಭಕ್ತರೂ ಅಷ್ಟೇ ವಂದನೀಯರಾಗಿದ್ದರು. ಕಲಿಯುಗದಲ್ಲಿ ಶ್ರೀರಾಮನು ಪುನಃ ಅವತಾರ ತಾಳಬಹುದು. ಆದರೆ ಶ್ರೀರಾಮನ ಸೀಮಾತೀತ ಭಕ್ತಿಯನ್ನು ಮಾಡುವಂತಹ ಉಚ್ಚ ಮಟ್ಟದ ಭಕ್ತರು ಸಿಗುವುದು ಕಠಿಣವಾಗಿದೆ.
ಸಾಧಕರು ಶ್ರೀರಾಮನ ಭಕ್ತರ ಗುಣಗಳನ್ನು ಅಂಗೀಕರಿಸಿ ಅದಕ್ಕನುಸಾರ ಸಾಧನೆ ಮಾಡಿದರೆ ಅವರ ಮೇಲೆ ಗುರುರೂಪೀ ಶ್ರೀರಾಮನ ಕೃಪೆಯಾಗಿ ಅವರಿಗೆ ಅಂತರ್ಬಾಹ್ಯ ಕ್ಷಾತ್ರಧರ್ಮ ಹೋರಾಟವನ್ನು ಯಶಸ್ವಿಯಾಗಿ ನಡೆಸಲು ಆಗುವುದು ಮತ್ತು ಅವರಲ್ಲಿ ಅಂತರ್ಬಾಹ್ಯ ರಾಮರಾಜ್ಯವು ಖಂಡಿತವಾಗಿಯೂ ಸ್ಥಾಪನೆಯಾಗುವುದು.
-ವಿನೋದ್ ಕಾಮತ್
ರಾಜ್ಯ ವಕ್ತಾರರು, ಸನಾತನ ಸಂಸ್ಥೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ