ಇಂದಿನ ಶಿವಮೊಗ್ಗ ಜಿಲ್ಲೆಯ ಉಡುತಡಿ ಗ್ರಾಮದಲ್ಲಿನ ಶಿವಶರಣ ದಂಪತಿಗಳಾದ ಓಂಕಾರ ಶೆಟ್ಟಿ ಮತ್ತು ಲಿಂಗಮ್ಮ ದಂಪತಿಯ ಏಕೈಕ ಕುವರಿ ನಮ್ಮ ಮಹಾದೇವಿ. ಮಹಾದೇವಿಯನ್ನು ಗರ್ಭದಲ್ಲಿ ಹೊತ್ತಿರುವಾಗಲೇ ತಾಯಿ ಲಿಂಗಮ್ಮ ಪೂಜೆ ಪುನಸ್ಕಾರ ಜಪ ತಪಗಳಲ್ಲಿ ನಿರತಳಾಗಿರುತ್ತಿದ್ದಳು. ಯಾವುದೋ ಒಂದು ಚಿಜ್ಯೋತಿ ತನ್ನ ಗರ್ಭದಲ್ಲಿ ಬೆಳೆಯುತ್ತಿದೆ ಎಂಬಂತಹ ಹಲವಾರು ಘಟನೆ ಗಳು ನಡೆದು ಆಕೆ ಸದಾ ಶಿವ ಧ್ಯಾನ ನಿರತಳಾಗಿರುತ್ತಿದ್ದಳು. ನವಮಾಸಗಳ ನಂತರ ಹುಟ್ಟಿದ ಮಗುವಿಗೆ ಗುರುಗಳಾದ ಲಿಂಗ ದೇವರು, ಮಹಾದೇವಿ ಎಂದು ಹೆಸರಿಟ್ಟರು.
ಚಿಕ್ಕ ಮಗುವಿದ್ದಾಗಿನಿಂದಲೂ ಮಹಾದೇವಿಯು ಪೂಜೆ ಧ್ಯಾನಗಳಲ್ಲಿ ತೊಡಗಿಕೊಂಡಿರುತ್ತಿದ್ದಳು. ಸ್ವಭಾವತಃ ಧರ್ಮಭೀರು ಮತ್ತು ಜ್ಞಾನಪಿಪಾಸುವಾಗಿದ್ದ ತಂದೆ ಓಂಕಾರ ಶೆಟ್ಟಿಯು ಮಗಳು ವಿದ್ಯೆ ಕಲಿಯಲಿ ಎಂದು ಮಠದ ಗುರುಗಳಾದ ಗುರುಲಿಂಗ ದೇವರಲ್ಲಿ ಕರೆತಂದು ಆಕೆಯ ವಿದ್ಯಾಭ್ಯಾಸಕ್ಕೆ ಓಂಕಾರ ಹಾಡಿದನು. ಮಠದಲ್ಲಿಯೇ ನಡೆಯುತ್ತಿದ್ದ ಗುರು ಮನೆಯಲ್ಲಿ ಮಹಾದೇವಿ ಅಕ್ಷರಾ ಭ್ಯಾಸವಲ್ಲದೆ, ವ್ಯಾಕರಣ ಪುರಾಣ ಕಾವ್ಯ ಮುಂತಾದ ಹಲವಾರು ವಿದ್ಯೆಗಳನ್ನು ಕಲಿತು ನಿರೀಕ್ಷೆಗೆ ಮೀರಿದ ಪ್ರಗತಿಯನ್ನು ಸಾಧಿಸಿ ದಳು. ಆಕೆಯ ಗ್ರಹಣ ಶಕ್ತಿ ಮತ್ತು ಕ್ರಮಯುಕ್ತ ಅಭ್ಯಾಸದ ಆಸಕ್ತಿ ಆಕೆಯ ಕಲಿಯುವ ವೇಗವನ್ನು ಹೆಚ್ಚಿಸಿತ್ತು. ಲಿಂಗಮ್ಮನ ಆಚರಣೆ ಗಳು, ಓಂಕಾರ ಶೆಟ್ಟಿಯ ಸತ್ವಪೂರ್ಣ ಜೀವನ, ಗುರುಲಿಂಗ ದೇವರ ವಿರಕ್ತಿಯ ತೇಜ ಈ ಮೂರು ಸೇರಿ ಮಹಾದೇವಿಯ ಬದುಕಿನ ರೂಪರೇಷೆಯನ್ನು ತೋರುವ ದಾರಿ ದೀಪಗಳಾದವು.
ದಿನಗಳದಂತೆ ಸ್ವಾಭಿಮಾನ, ದಿಟ್ಟತನದ ಪ್ರತೀಕವಾಗಿದ್ದ ಮಹಾದೇವಿ ವಿನಯದ ಹೆಸರಿನಲ್ಲಿ ಮೂಢತನವ ಮಾಡಲು ಒಪ್ಪುತ್ತಿ ರಲಿಲ್ಲ. ಚಿಕ್ಕಂದಿನಲ್ಲಿ ಶ್ರೀಶೈಲದ ಚೆನ್ನಮಲ್ಲಿಕಾರ್ಜುನ ದೇವರನ್ನು ತನ್ನ ಪತಿ ಎಂದು ನಿಶ್ಚಯಿಸಿದ ಮಹಾದೇವಿ ಹರೆಯಕ್ಕೆ ಬಂದಾಗ ಇನ್ನಷ್ಟು ಪೂಜೆ ಜಪತಪಗಳನ್ನು ಮಾಡುತ್ತಾ ಚೆನ್ನ ಮಲ್ಲಿಕಾರ್ಜುನನನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿದಳು.
ಆಗಾಗ ವಚನಗಳನ್ನು ರಚಿಸುತ್ತಿದ್ದ ಮಹಾದೇವಿವಚನದ ಮೂಲಕ ತನ್ನ ಮನದ ಭಾವನೆಗಳನ್ನು ಹೊರಹಾಕಿದಳು.
"ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ, ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿಪಲ್ಲ ಗೊರವನು ಬಂದೆನ್ನನೆರೆದ ನೋಡವ್ವ ಆತನ ನಪ್ಪಿಕೊಂಡು ತಳವೆಳಗಾದೆನು ಚೆನ್ನಮಲ್ಲಿಕಾರ್ಜುನನ ಕಂಡು ಕಣ್ಣು ಮುಚ್ಚಿ ತೆರೆದು ತಳವೆಳಗಾದೆನು"
ತನ್ನ ಸಮವಯಸ್ಕ ಸ್ನೇಹಿತರಂತೆ ಉಡುಗೆ ತೊಡುಗೆ ವಸ್ತ್ರಾಭರಣ ಆಟ ಪಾಠಗಳಲ್ಲಿ ಶೃಂಗಾರ ಸಾಧನಗಳಲ್ಲಿ ಖುಷಿ ಕಾಣದ ಮಹಾದೇವಿ ಪ್ರಾತಃಕಾಲದಲ್ಲಿ ಎದ್ದು ಇಡೀ ಮನೆಯನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಶುಚಿರ್ಭೂತಳಾಗಿ ಶುದ್ಧ ವಸ್ತ್ರ ಧರಿಸಿ ದೇವರ ಪೂಜೆಯಲ್ಲಿ ನಿರತಳಾಗುತ್ತಿದ್ದಳು. ಅಂಗೈಯಲ್ಲಿ ಲಿಂಗವನ್ನು ಹಿಡಿದು ಗಂಟೆಗಳ ಕಾಲ ಧ್ಯಾನ ನಿರತಳಾಗುತ್ತಿದ್ದ ಮಹಾ ದೇವಿಯ ಮುಖದಲ್ಲಿ ಮೂಡುತ್ತಿದ್ದ ದಿವ್ಯ ಕಾಂತಿ, ತೇಜಸ್ಸನ್ನು ಕಂಡು ಆಕೆಯ ಧ್ಯಾನಭಂಗ ಮಾಡದಿರಲು ತಂದೆ ಓಂಕಾರ ಶೆಟ್ಟಿಯು ಪತ್ನಿ ಲಿಂಗಮ್ಮನಿಗೆ ತಾಕೀತು ಮಾಡುತ್ತಿದ್ದನು. ಧ್ಯಾನದಲ್ಲಿ ನಿರತಳಾಗುತ್ತಿದ್ದ ಮಹಾದೇವಿ ತನ್ನ ಪತಿಯಾದ ಚೆನ್ನಮಲ್ಲಿ ಕಾರ್ಜುನನ ಕಾಣುವಿಕೆಯ ವಿರಹದಿಂದ ಬಳಲಿ ಬೆಂಡಾಗುತ್ತಿದ್ದಳು.
ಮತ್ತೆ ಮತ್ತೆ ಆತನನ್ನು ನೋಡಬೇಕೆಂಬ ಹಂಬಲಕ್ಕೊಳಗಾಗುತ್ತಿದ್ದಳು. ಇಹಪರದ ಅರಿವಿರದೆ ದಿನಗಟ್ಟಲೆ ಧ್ಯಾನದಲ್ಲಿ ಮುಳು ಗೇಳುತ್ತಿದ್ದ ಮಹಾದೇವಿಯನ್ನು ಕಂಡು ತಾಯಿ ಲಿಂಗಮ್ಮ ಕಳವಳ ಕೊಳಗಾಗಿ ಗುರುಲಿಂಗದೇವರಲ್ಲಿ ಈ ಕುರಿತು ಪ್ರಶ್ನಿಸಿದಾಗ ಅವರು 'ಅವ್ವ... ನೀ ಹಡೆದದ್ದು ಇಹಕ್ಕೆ ಸಲ್ಲುವ ಮಗಳಲ್ಲ, ಆಕೆ ಬಸವಣ್ಣನವರ ಪ್ರೀತಿಯ ಮಗಳು.. ಅವರಿಗೇ ಸಲ್ಲುವಳು. ಮುಂದೊಮ್ಮೆ ಆಕೆ ಲೋಕಮಾತೆಯಾಗುವಳು ಆಕೆಯನ್ನು ತಡೆಯಬೇಡ' ಎಂದು ಹೇಳಿದರು.
ಒಂದೊಮ್ಮೆ ತಾಯಿಯ ಒತ್ತಾಸೆಯ ಮೇರೆಗೆ ಉತ್ಸವವನ್ನು ನೋಡಲು ಹೋದ ಮಹಾದೇವಿಯು ಮಹಾರಾಜ ಕೌಶಿಕನ ಕಣ್ಣಿಗೆ ಬಿದ್ದು, ಮಹಾದೇವಿಯ ಸೌಂದರ್ಯಕ್ಕೆ ಬೆರಗಾಗಿ ಕೌಶಿಕನು ಮದುವೆಯ ಪ್ರಸ್ತಾಪವನ್ನು ಕಳುಹಿಸಿದನು. ಪರಿಸ್ಥಿತಿಯ ಒತ್ತಡ ಮತ್ತು ಅನಿವಾರ್ಯತೆಯಿಂದಾಗಿ ಮಹಾದೇವಿಯು ಮೂರು ಷರತ್ತುಗಳನ್ನು ಹಾಕಿ ಕೌಶಿಕನನ್ನು ವಿವಾಹವಾಗಲು ಒಪ್ಪಿಕೊಂಡಳು.
1. ಆಕೆಯ ಒಪ್ಪಿಗೆ ಇಲ್ಲದೆ ದೈಹಿಕ ಸಂಬಂಧಕ್ಕೆ ಬಳಸದಿರುವುದು, 2. ಸದಾಶಿವ ಪೂಜೆಯನ್ನು ಮಾಡುವ ಸ್ವಾತಂತ್ರ್ಯ, 3. ಶಿವ ಭಕ್ತರ ಮತ್ತು ಜ್ಞಾನಿಗಳ ಜೊತೆ ಮಾತಾಡುವ ಸ್ವಾತಂತ್ರ್ಯವನ್ನು ಅರಮನೆಯಲ್ಲಿ ತನಗೆ ಕೊಡಬೇಕು ಎಂದು ಮೂರು ಷರತ್ತುಗಳನ್ನು ಹಾಕಿದಳು.
ಆಕೆಯ ಸಾತ್ವಿಕ ಚೆಲುವಿನ ಮೋಹದಿಂದ ಹುಚ್ಚನಾದ ದೊರೆ ಕೌಶಿಕನು ಶರತ್ತುಗಳಿಗೆ ಬದ್ಧವಾಗಿರಲು ಒಪ್ಪಿಕೊಂಡ. ಆದರೆ ವಿವಾಹದ ನಂತರದ ದಿನಗಳಲ್ಲಿ ಆ ಶರತ್ತುಗಳನ್ನು ನಿರ್ವಹಿಸಲಾಗದೆ ಹೋಗಿ ಆಕೆಯ ಸೀರೆಯ ಸೆರಗಿಗೆ ಕೈ ಹಾಕಿದಾಗ ಆತನಿಗೆ ಅಗ್ನಿಯ ಜ್ವಾಲೆ ಸೋಕಿದಂತಾಗಿ ದಿಗ್ಮೂಢನಾದನು ಕೌಶಿಕ ಮಹಾರಾಜ. ಶರತ್ತು ಮುರಿದು ಸೀರೆ ಸೆಳೆದ ಆತನನ್ನು ತೊರೆದು ನಿರ್ವಾಣ ಸ್ಥಿತಿಯಲ್ಲಿಯೇ ಮಹಾದೇವಿಯು ಬಸವಕಲ್ಯಾಣದೆಡೆಗೆ ನಡೆದಳು.
ಒಬ್ಬ ಹರೆಯದ, ತುಂಬು ಯೌವ್ವನದ ಹೆಣ್ಣುಮಗಳು ಅಂಗದ ಮೇಲೆ ವಸ್ತ್ರವಿಲ್ಲದೆ ತನ್ನ ಗಂಡನಾದ ಚನ್ನಮಲ್ಲಿಕಾರ್ಜುನನನ್ನು ಹುಡುಕುವ ಮುನ್ನ ಆಧ್ಯಾತ್ಮ ಲೋಕದಲ್ಲಿ ಇನ್ನಷ್ಟು ಅರಿಯುವ, ಶರಣ ಸದ್ಭಕ್ತರೊಡನೆ ಬೆರೆಯುವ ಆಕಾಂಕ್ಷೆಯಿಂದ ಬಸವಕಲ್ಯಾಣ ದೆಡೆಗೆ ನಡೆದಳು. ಹಸಿವಾದರೆ ಊರೊಳಗೆ ಭಿಕ್ಷಾನ್ನಗಳುಂಟು ತೃಷೆಯಾದರೆ ಕೆರೆ, ಬಾವಿ ಹಳ್ಳಗಳುಂಟು. ಶಯನಕ್ಕೆ ಹಾಳು ದೇಗುಲಗಳುಂಟು ಚೆನ್ನ ಮಲ್ಲಿಕಾರ್ಜುನಯ್ಯ ಆತ್ಮ ಸಂಗಾತಕ್ಕೆ ನೀನೆನಗುಂಟು ಎಂದು ಆಕೆ ಕೇಳಿದವರಿಗೆ ನಿರ್ಭೀತಳಾಗಿ ಉತ್ತರಿಸಿದಳು.
ಆಕೆಯು ಬರುವುದನ್ನು ತಮ್ಮ ದಿವ್ಯಚಕ್ಶುಗಳಿಂದ ಅರಿತ ಅನುಭವ ಮಂಟಪದ ಅಲ್ಲಮಪ್ರಭು, ಬಸವಣ್ಣ ರಾದಿಯಾಗಿ ಆಕೆಯನ್ನು ಕರೆತರಲು ಕಿನ್ನರಿ ಬೊಮ್ಮಯ್ಯನನ್ನು ಕಳುಹಿಸಿದರು. ಕಿನ್ನರಿ ಬೊಮ್ಮಯ್ಯನೊಡನೆ ಅನುಭವ ಮಂಟಪ ಪ್ರವೇಶಿಸಿದ ಮಹಾದೇವಿ ಯನ್ನು ಅತ್ಯಂತ ಕಠಿಣವಾಗಿ ಪ್ರಶ್ನಿಸಿದ ಅಲ್ಲಮ ಪ್ರಭುಗಳು ಮಹಾದೇವಿಯ ಘನ ಮಹಿಮೆಯನ್ನು ಆಕೆಯು ನೀಡಿದ ಉತ್ತರಗಳ ಮೂಲಕ ಇಡೀ ಜಗತ್ತಿಗೆ ಸಾರಿದರು. ಇಡೀ ಅನುಭವ ಮಂಟಪದ ಶರಣರೆಲ್ಲ ಕರತಾಡನ ಮಾಡುತ್ತಾ ಮಹಾದೇವಿಯನ್ನು ಅಕ್ಕ ಮಹಾದೇವಿ , ಮಹಾದೇವಿಯಕ್ಕ ಎಂದು ಕರೆದು ಗೌರವಿಸಿದರು.
ಮುಂದೆ ಕೆಲ ಕಾಲ ಬಸವಕಲ್ಯಾಣದಲ್ಲಿಯೇ ತಂಗಿದ ಅಕ್ಕನು ಮತ್ತೆ ಚೆನ್ನಮಲ್ಲಿಕಾರ್ಜುನನ ಹುಡುಕುತ್ತಾ ಶ್ರೀಶೈಲಕ್ಕೆ ಹೋಗುವ ಆಶಯವನ್ನು ವ್ಯಕ್ತಪಡಿಸಿ ಹೀಗೆ ಹೇಳಿದಳು. ಅಯ್ಯಾ ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ತನು ಶುದ್ಧವಾಯಿತು, ಅಯ್ಯಾ ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ಮನ ಶುದ್ಧವಾಯಿತು, ಅಯ್ಯಾ ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ಪ್ರಾಣ ಶುದ್ಧವಾಯಿತು ಅಯ್ಯಾ ನಿಮ್ಮ ಅನುಭಾವಿಗಳು ಎನ್ನ ಒರೆದೊರೆದು ಆಗು ಮಾಡಿದ ಕಾರಣ ಚೆನ್ನಮಲ್ಲಿಕಾರ್ಜುನಯ್ಯ
ಎಂದು ಹೇಳಿ ಶರಣ ಸಂಕುಲವನ್ನು ಬೀಳ್ಕೊಂಡು ಶ್ರೀಶೈಲದ ಕಡೆಗೆ ಪ್ರಯಾಣ ಬೆಳೆಸಿದಳು. ಮಾರ್ಗ ಮಧ್ಯದಲ್ಲಿ ಆಕೆಯ ಬಳಿ ಬಂದು ಕ್ಷಮೆ ಕೋರಿದ ಮಹಾರಾಜ ಕೌಶಿಕನನ್ನು ಅಕ್ಕಮಹಾದೇವಿಯು ಕ್ಷಮಿಸಿದಳು.
"ಅಲ್ಲದವರೊಡನಾಡಿ ಎಲ್ಲ ಸಂಗವ ತೊರೆದೆ ನಾನು, ನಾರಿ ಸಂಗವ ತೊರೆದೆ ನೀರ ಹೊಳೆಯ ತೊರೆದೆ ನಾನು ಚೆನ್ನಮಲ್ಲಿಕಾ ರ್ಜುನನ ಕೂಡುವ ಭರದಿಂದ ಎಲ್ಲ ಸಂಗವ ತೊರೆದೆ ನಾನು"ಎಂದು ತನ್ನ ಮನದ ಭಾವವನ್ನು ವಚನದ ಮೂಲಕ ಸಾರುತ್ತಾ ಅಕ್ಕ ಶ್ರೀಶೈಲದ ಮಲ್ಲಿಕಾರ್ಜುನ ದೇವರ ಬಳಿ ಸಾಗಿದಳು.
ಮಲ್ಲಯ್ಯನ ದರ್ಶನ ಮಾಡಿದ ನಂತರ ಸಂಭ್ರಮಿತಳಾದ ಅಕ್ಕಮಹಾದೇವಿ ಮುಂದೆ ಪಾತಾಳ ಗಂಗೆಯ ಇನ್ನೊಂದು ದಡದಲ್ಲಿದ್ದ ಕದಳಿವನದ ಗುಹೆಯಲ್ಲಿ ತನ್ನ ಜೀವಿತದ ಕೊನೆಯವರೆಗೂ ಉಳಿದಳು. ಅಲ್ಲಿಯೇ ಅಕ್ಕ ಗುಹೆಯಲ್ಲಿ ಜಪ ತಪ ಧ್ಯಾನಗಳಲ್ಲಿ ನಿರತಳಾಗಿ ಅಲ್ಲಿಯೇ ಲಿಂಗೈಕ್ಯಳಾದಳು.
ಸಾವಿರ ವರ್ಷಗಳ ಹಿಂದೆಯೇ ಜೀವಿಸಿದ ಅಕ್ಕಮಹಾದೇವಿಯ ವಚನಗಳು ಇಂದಿಗೂ ಪ್ರಸ್ತುತ. ನೇರ ದಿಟ್ಟ ಮತ್ತು ನಿಷ್ಟುರವಾದ ಸತ್ಯಗಳನ್ನು ತನ್ನ ವಚನಗಳಲ್ಲಿ ಪ್ರತಿಪಾದಿಸಿದ ಅಕ್ಕ ಸ್ತ್ರೀ ಕುಲಕ್ಕೆ ಮಾತ್ರವಲ್ಲ ಇಡೀ ಮನುಕುಲಕ್ಕೆ ಮಾದರಿ ಮಹಿಳೆ. ಕನ್ನಡದ ಮೊತ್ತ ಮೊದಲ ಕವಯತ್ರಿ, ಸಂಸಾರದ ಸಾಗರದಲ್ಲಿ ಇದ್ದು ಕೂಡ ಸನ್ಯಾಸಿಯ ಜೀವನ ಸಾಗಿಸಿದ ವೀರ ವಿರಾಗಿಣಿ, ಅಕ್ಕನ ಬದುಕಿನ ಆದರ್ಶ ನಮಗೆಲ್ಲರಿಗೂ ಮಾದರಿಯಾಗಲಿ.
-ವೀಣಾ ಹೇಮಂತ್ ಗೌಡ ಪಾಟೀಲ್ , ಮುಂಡರಗಿ ಗದಗ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ