ಶಿವಮೊಗ್ಗ: ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ, ಇಂಗ್ಲಿಷ್ ವಿಭಾಗ ಮತ್ತು ಐ ಕ್ಯೂ ಎ ಸಿ ವತಿಯಿಂದ ಇಂದು (ಏ.29) ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ವಿದ್ಯಾರ್ಥಿಗಳೇ ಸಂಪಾದಿಸಿದ ವಿದ್ಯಾರ್ಥಿ ಬರಹಗಳ "ಚಿತ್ತಾರ" ಈ-ಮ್ಯಾಗಝಿನ್ ಅನ್ನು ಖ್ಯಾತ ಪತ್ರಕರ್ತರು ಮತ್ತು ಕನ್ನಡ ಮೀಡಿಯಂ ಚಾನೆಲ್‌ನ ಪ್ರಧಾನ ಸಂಪಾದಕ ಹೊನ್ನಾಳಿ ಚಂದ್ರಶೇಖರ್ ಅವರು ಬಿಡುಗಡೆಗೊಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ರಾಜೇಂದ್ರ ಚೆನ್ನಿ ಅವರು "ಚಿತ್ತಾರ" ದ ಹಿನ್ನಲೆಯನ್ನು ವಿವರಿಸುತ್ತಾ ಹೇಗೆ ಕಾಲೇಜು ದಿನಗಳಲ್ಲೆ ವಿದ್ಯಾರ್ಥಿಗಳು ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿಕೊಳ್ಳಬೇಕು, ಹಸೆ ಚಿತ್ತಾರ ಹೇಗೆ ಹೆಣ್ಣು ಮಕ್ಕಳ ಅಭಿವ್ಯಕ್ತಿಯ ಮಾಧ್ಯಮವಾಗಿ ರೂಪುಗೊಂಡಿತು ಎಂದು ತಿಳಿಸಿ ಹಾಗೆಯೇ ಚಿತ್ತಾರ ಈ-ಮ್ಯಾಗಝಿನ್ ನಿರಂತರವಾಗಿ ವಿದ್ಯಾರ್ಥಿಗಳ ಕಾಲೇಜು ಜೀವನದಲ್ಲಿ ಸಾಹಿತ್ಯವನ್ನು ಸೃಷ್ಟಿಸುವ ವೇದಿಕೆಯಾಗಿ ಹೊರಹೊಮ್ಮಲಿ ಆ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಹೊರಬರಲಿ ಎಂದು ಹಾರೈಸಿದರು.
ಈ ಮ್ಯಾಗಝಿನ್ ಬಿಡುಗಡೆಗೊಳಿಸಿ ಮಾತನಾಡಿದ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ ಅವರು ಮುದ್ರಣ ಮಾಧ್ಯಮ ಅದರಲ್ಲೂ ಮೊಳೆಗಳನ್ನು ಜೋಡಿಸಿ ಪತ್ರಿಕೆ ತಯಾರು ಮಾಡುವ ಕಾಲಘಟ್ಟದಿಂದ ಪ್ರಸ್ತುತ ಸಂದರ್ಭದಲ್ಲಿ ತಂತ್ರಜ್ಞಾನ ಬಳಸಿ ಹೇಗೆ ಪತ್ರಿಕೆಗಳಾಗಲಿ, ಬರಹಗಳಾಗಲಿ ಹೊರಬರುತ್ತಿವೆ ಎಂದು ತಿಳಿಸಿ ಅವುಗಳ ಪ್ರಾಮುಖ್ಯತೆಯನ್ನು ವಿವರಿಸಿದರು.
ಮುದ್ರಣ ಮಾಧ್ಯಮವು ಮಾನವ ಸಂವಹನ ಮತ್ತು ಮಾಹಿತಿ ಹಂಚಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಸಾಧನವಾಗಿದೆ. ಗಟೆನ್ಬರ್ಗ್ ಮುದ್ರಣ ಯಂತ್ರದ ಆವಿಷ್ಕಾರದ ನಂತರ, ಪತ್ರಿಕೆಗಳು ಮತ್ತು ಮ್ಯಾಗಝಿನ್ಗಳ ಮೂಲಕ ಸುದ್ದಿಗಳು ಮತ್ತು ಸಾಹಿತ್ಯ ಭರದಿಂದ ಹರಡಿದವು. ಪತ್ರಿಕಾಭಿವೃದ್ಧಿಯಲ್ಲಿ ಇನ್ವರ್ಸ್ ಪಿರಮಿಡ್ ಮಾದರಿ ಮುಖ್ಯವಾದದು. ಈ ವಿಧಾನದಲ್ಲಿ ಪ್ರಮುಖ ಮಾಹಿತಿ ಮೊದಲಿಗೆ ನೀಡಲಾಗುತ್ತದೆ ಮತ್ತು ನಂತರ ಅಳವಡಿಸಬಹುದಾದ ಮಾಹಿತಿ ಕ್ರಮವಾಗಿ ಬರುತ್ತದೆ. ಎಡಿಟೋರಿಯಲ್ ಬರವಣಿಗೆಯಲ್ಲಿ ಈ ಶೈಲಿ ಸ್ಪಷ್ಟತೆ ಮತ್ತು ಗಮನ ಸೆಳೆಯಲು ಉಪಯುಕ್ತವಾಗಿದೆ ಎಂದು ತಿಳಿಸಿದರು.
ಇ-ಮ್ಯಾಗಜಿನ್ಗಳ ಇತಿಹಾಸವು ಡಿಜಿಟಲೀಕರಣದೊಂದಿಗೆ ಪ್ರಾರಂಭವಾಗಿ, ಈಗ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಂತೆ, ವಿಶ್ವದಾದ್ಯಂತ ಓದುಗರಿಗೆ ತಲುಪುತ್ತಿದೆ. ತಂತ್ರಜ್ಞಾನದಲ್ಲಿ ಉಂಟಾದ ಬೆಳವಣಿಗೆಗಳು ಬ್ಲಾಗಿಂಗ್ ಮುಂತಾದ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಕ್ತಿಪರ ಅಭಿವ್ಯಕ್ತಿಗೆ ವೇದಿಕೆಯಾಗಿವೆ. ಬ್ಲಾಗ್ಗಳು ಜನರ ಅಭಿಪ್ರಾಯಗಳನ್ನು, ರಚನಾತ್ಮಕ ಬರವಣಿಗೆಗಳನ್ನು ಹಂಚಿಕೊಳ್ಳಲು ನವೀನ ದಾರಿ ಒದಗಿಸಿವೆ. ಇಂದು ವಿದ್ಯಾರ್ಥಿಗಳು ಡಿಜಿಟಲ್ ಮಾಧ್ಯಮವನ್ನು ಬಳಸಿಕೊಂಡು ಸಾಹಿತ್ಯ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುತ್ತಿದ್ದಾರೆ.
ಕವನ, ಕಥೆ, ಲೇಖನಗಳು ಇತ್ಯಾದಿಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮುಗಳಲ್ಲಿ ಪ್ರಕಟಿಸಿ, ಅವರು ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸುತ್ತಿದ್ದಾರೆ. ಇಂತಹ ಡಿಜಿಟಲ್ ವೇದಿಕೆಗಳು ಹೊಸ ತಲೆಮಾರಿಗೆ ಸಾಹಿತ್ಯ ಪ್ರೀತಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿವರಿಸಿ ವಿದ್ಯಾರ್ಥಿಗಳ ಈ ಚಿತ್ತಾರದ ಪ್ರಯತ್ನವನ್ನು ಶ್ಲಾಘಿಸಿದರು.
ಕಾರ್ಯಕ್ರಮವನ್ನೂ ಉದ್ದೇಶಿಸಿ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಯವರು ಮಾತನಾಡಿ ಈ ಮ್ಯಾಗಝಿನ್ ಚಿತ್ತಾರವು ವಿದ್ಯಾರ್ಥಿಗಳ ಬರಹಗಳಿಗೆ ಪ್ರೇರೇಪಣೆ ಆಗಲಿ, ಹೊಸ ಬರಹಗಾರರು ಉದಯಿಸಲಿ ಎಂದು ಹಾರೈಸಿದರು.
ಪತ್ರಕರ್ತ ಹೊನ್ನಾಳಿ ಚಂದ್ರಶೇಖರವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಆಡಳಿತ ಶೈಕ್ಷಣಿಕ ಆಡಳಿತಗಾರ ಪ್ರೊ. ರಾಮಚಂದ್ರ ಬಾಳಿಗ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಭಾಗದ ಮುಖ್ಯಸ್ಥೆ ರೇಷ್ಮಾ ರವರು ವಂದಿಸಿದರು. ಅಂತಿಮ ಬಿ ಎ ವಿದ್ಯಾರ್ಥಿನಿ ಕು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಗಣೇಶ್ ಪ್ರಸಾದ್, ಉಪನ್ಯಾಸಕರಾದ ಕು. ಯೋಷಿತ, ಕು. ರೋಜಾ ಮತ್ತು ಕು. ಗೌರಿಶ್ರೀ ಉಪಸ್ಥಿತರಿದ್ದರು. ಅಂತಿಮ ವರ್ಷದ ಬಿ. ಎಸ್ಸಿ ವಿದ್ಯಾರ್ಥಿನಿ ಸ್ಪಂದನ ಕೆ ಎ ಇವರು ಸ್ವಾಗತ ಭಾಷಣವನ್ನು ಮಾಡಿದರು. ನಂತರ ಕು. ನಿಸ್ಸಿ ಸೌಂದರ್ಯ, ಅಂತಿಮ ವರ್ಷದ ಬಿ. ಎ ವಿದ್ಯಾರ್ಥಿನಿ ಅತಿಥಿ ಪರಿಚಯ ಮಾಡಿಕೊಟ್ಟರು.
ಚಿತ್ತಾರ ಈ ಮ್ಯಾಗಝಿನ್ ಅನ್ನು ಸಂಪಾದಿಸಿದ ವಿದ್ಯಾರ್ಥಿಗಳಾದ ಕು. ಶ್ರೇಯ, ಕು. ಮೈಮುನ ಅರ್ಫಾ, ಕು. ಅಪೂರ್ವ, ಅಂಶಮನ್, ಕು.ಶ್ರೀ ನಿಧಿ ಹೆಗ್ಡೆ ಹಾಗೂ ಮುಖ್ಯ ಸಂಪಾದಕರಾದ ಗ್ರಂಥಪಾಲಕ ಪ್ರೊ. ಗಣೇಶ ಹೆಚ್ ಕಾರ್ಯಕ್ರಮ ಸಂಯೋಜಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ