ಚಿಗುರುವ ಪ್ರಕೃತಿಯು ಹರುಷವ ತರುತಿರೆ
ನಗುವಿನ ನಗವನು ಧರಿಸಿ
ಚಿಗುರೆಲೆ ನಡುವಲಿ ಕೋಗಿಲೆ ಪಾಡಿದೆ
ಮೊಗದಲಿ ಸಂತಸ ಭರಿಸಿ
ಜೀವಿಗಳೆಲ್ಲ ನಿರೀಕ್ಷೆಯ ಧರಿಸಿವೆ
ಭಾವಿಸಿ ಗೆಲುವಿದೆಯೆಂದು
ನೋವಿನ ದಿನಗಳು ಮುಗಿಯಲು ಮುಂದಿವೆ
ಭಾವನೆ ಒಲಿಯುವುದೆಂದು
ಬಾನಿಗು ಭೂಮಿಗು ಭಾನುವಿನಿಂದಲೆ
ಬೋನವು ದೊರೆಯುವುದಂತೆ
ಮಾನವನಾದಿಯ ಸರ್ವ ಸಮಾಜಕೆ
ಮಾನ ಯುಗಾದಿಯದಂತೆ
ರಂಗದ ರಂಗಿನ ಸಂಗ ಲವಂಗದ
ಅಂಗದ ರಚನೆಗೆ ದಣಿವು
ಶೃಂಗದ ಬುಡದಲಿ ನದಿ ತೊರೆ ಧರೆಯಲಿ
ಹೊಂಗೆಯ ನೆರಳಿನ ತಣುವು
ಯುಗ ಯುಗದಾದಿಯು ಯುಗದಲಿ ನಡೆದಿದೆ
ಜಗದೊಳು ಜೀವನ ಯಜ್ಞ
ಭಗ ಭಗನುರಿಯುವ ಸೂರ್ಯನ ಬಿಸಿಲಿನ
ದಗೆಯೊಳು ಬೆಳೆಸುವ ಪ್ರಜ್ಞ
ಮಾನವ ದಾನವರಾರಿಗು ಬಗ್ಗದ
ದಾನಿಯದಾದನೆ ದೇವ
ಕಾನನದಾಚೆಗು ಕಡಲಿನ ಒಡಲಲು
ಭೋನವನಿತ್ತಿವ ಕಾವ
ಗಬ್ಬವದಾಗಲಿ ಹಬ್ಬವ ಗೈಯುವ
ಹೆಬ್ಬಯಕೆಯ ಸಿರಿಯಿಂದು
ಕಬ್ಬಿನ ಬೆಲ್ಲವ ಬೇವಿನ ಕಹಿಯೊಳು
ಹಬ್ಬಿಸಿ ಹಂಚುವೆವೆಂದು
ಒಲ್ಲೆವು ನಾವ್ಗಳು ಬೆಲ್ಲದ ನುಡಿಯೊಳ
ಸಲ್ಲದ ಸಂಪ್ರತಿ ಕಮ್ಮ
ಸಲ್ಲಲಿ ಎಮ್ಮಯ ಸಂಸ್ಕೃತಿ ಪದ್ಧತಿ
ಗೆಲ್ಲಲಿ ಭಾರತಿ ಅಮ್ಮ
- ವೈಲೇಶ. ಪಿ.ಎಸ್. ಕೊಡಗು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ