ಪ್ರೇಮಿಗಳ ದಿನಾಚರಣೆ ಎಂದೊಡನೆ ನೆನಪಾಗುವುದು ವಿದೇಶಿ ರೀತಿಯ ಆಚರಣೆ. ಒಂದು ಕ್ಲಬ್ಬಿಗೆ ಹೋಗಿ ಅಲ್ಲಿ ತಮಗಿಷ್ಟವಾದ ಸಂಗೀತದೊಂದಿಗೆ ತಮಗೆ ಇಷ್ಟ ಬಂದವರೊಟ್ಟಿಗೆ ನೃತ್ಯ ಮಾಡುವುದು ನಂತರ ತಮಗಿಷ್ಟವಾದ ತಿನಿಸು ಪಾನೀಯದೊಂದಿಗೆ ಆ ದಿನವನ್ನು ಮುಕ್ತಾಯಗೊಳಿಸುವುದು.
ಆದರೆ ಪ್ರೇಮಿಗಳ ದಿನಾಚರಣೆಯನ್ನು ಸುಮಾರು 100 ಜನಕ್ಕೂ ಹೆಚ್ಚು ಸ್ಪರ್ಧಿಗಳೊಂದಿಗೆ ಫೆಬ್ರವರಿ 1ನೇ ತಾರೀಖಿನಿಂದ 13ನೇ ತಾರೀಖಿನವರೆಗೆ ಸತತ 13 ಸ್ಪರ್ಧೆಗಳನ್ನು ಮಾಡಿರುವರೆಂದರೆ ನಮ್ಮೆಲ್ಲರ ಪ್ರೀತಿಯ ಮಧುಅಕ್ಷರಿಯವರು. ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಸಂಸ್ಥೆಯಿಂದ ಪ್ರತಿದಿನವು ಒಂದೊಂದು ಆನ್‌ಲೈನ್ ಸ್ಪರ್ಧೆಯನ್ನು ನಡೆಸಿತು.
ಪ್ರೇಮಗೀತೆ ರಚನೆ, ಪ್ರೇಮ ಪತ್ರ ಬರವಣಿಗೆ, ಪ್ರೇಮದ ಬಗ್ಗೆ ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆ, ನಾಟಕ ರಚನೆ ಸ್ಪರ್ಧೆ, ಬೇರೆಯವರ ಕವನ ವಾಚನ, ವಚನಗಳಲ್ಲಿ ಪ್ರೇಮ, ಜಾನಪದಗೀತೆಯಲ್ಲಿ ಪ್ರೇಮಗೀತೆ, ಗಝಲ್ ರಚನೆ, ಮುಂತಾದ ರಚನೆ ಮತ್ತು ವಿಡಿಯೋ ಮಾಡಿ ಕಳಿಸುವಂತಹ ಅತ್ಯದ್ಭುತವಾದ ಮತ್ತು ಅವಿಸ್ಮರಣೀಯವಾದ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಪ್ರತಿಯೊಂದು ಸ್ಪರ್ಧೆಗೂ ಒಬ್ಬೊಬ್ಬರು ತೀರ್ಪುಗಾರರನ್ನು ನೇಮಿಸಿ ಅವರಿಂದ ಫಲಿತಾಂಶ ಪಡೆದು ವಿಜೇತರ ಹೆಸರನ್ನು ಘೋಷಿಸಿದ್ದಾರೆ.
ಇಂತಹ ಅದ್ಭುತವಾದ ಕೆಲಸವು ಅಕ್ಷರ ಚಪ್ಪರ ಸಂಸ್ಥೆಯ ಮಧುಅಕ್ಷರಿ ಮಾಡಿ, ಪ್ರೇಮಿಗಳ ದಿನಾಚರಣೆಯನ್ನು ಹೀಗೂ ಮಾಡಬಹುದು ಎಂದು ತೋರಿಸಿ ಒಬ್ಬ ಮಾದರಿ ಮಹಿಳೆಯಾಗಿ ಮೆರೆದಿದ್ದಾರೆ.
ಮಧು ಹುಟ್ಟಿದ್ದು ದಾವಣಗೆರೆಯಲ್ಲಿ. ತಂದೆ ದಿವಂಗತ ಪರಶುರಾಮರಾವ್, ತಾಯಿ ಧರ್ಮಬಾಯಿ. ಬಾಲ್ಯ ಎಲ್ಲಾ ಅರಸೀಕೆರೆಯಲ್ಲಿ. ಸೈಂಟ್ ಮೇರಿಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೈಮರಿ ಸ್ಕೂಲ್, ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ಹೈಸ್ಕೂಲ್, ಕೋಡಿಮಠ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಬೆಂಗಳೂರಿನ ಮಹಾವೀರ ಜೈನ್ ಕಾಲೇಜಿನಲ್ಲಿ ನರ್ಸಿಂಗ್ ಮುಗಿಸಿ, ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ 9 ವರ್ಷ ಕೆಲಸ ಮಾಡಿ, ಪರೀಕ್ಷೆ ಬರೆದು ಈಗ 4 ವರ್ಷದಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರೈಮರಿ ಸ್ಕೂಲ್ ನಲ್ಲೇ ಕವಿತೆ ಚೆನ್ನಾಗಿ ಬರೆಯುತ್ತಿದ್ದರಿಂದ ಆಗಲೇ ಶಾಲೆಯಿಂದ ಸಿಸ್ಟರ್ ಮೈಸೂರಿಗೆ ಕರೆದುಕೊಂಡು ಹೋಗಿದ್ದರು. ಸಾಹಿತ್ಯ, ಕಲೆ, ಕರಕುಶಲ ಎಲ್ಲವೂ ಅವರ ಹವ್ಯಾಸ.
ಇವರ ಸಾಹಿತ್ಯಸೇವೆ ಹೀಗೇ ಮುಂದುವರೆಯಲಿ, ಜನಮನ್ನಣೆ, ಪ್ರಶಸ್ತಿಗಳು ದೊರೆಯಲಿ ಎಂಬುದೇ ನಮ್ಮ ಆಶಯ.
- ಸಾವಿತ್ರಮ್ಮ ಓಂಕಾರ್ ಅರಸೀಕೆರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ