ಹೊನ್ನಾವರ ಖಾಸಗಿ ವಾಣಿಜ್ಯ ಬಂದರು ಯೋಜನೆ ಬೇಡ: ಸಿಎಂಗೆ ಮೀನುಗಾರರ ಆಗ್ರಹ

Upayuktha
0



ಬೆಂಗಳೂರು:  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ಯೋಜನೆಯನ್ನು ಕೈಬಿಡುವಂತೆ ರಾಷ್ಟ್ರೀಯ ಮೀನುಗಾರರ ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. 

ಈ ಯೋಜನೆಗಾಗಿ ಪರಿಸರ ಸೂಕ್ಷ್ಮ ಕಡಲತೀರದ 5 ಕಿಲೋಮೀಟರ್ ಉದ್ದದ ಮೀನುಗಾರರ ವಸತಿ ನೆಲೆಯಲ್ಲಿ ಚತುಷ್ಪತ ರಸ್ತೆ ಮತ್ತು ರೈಲು ಮಾರ್ಗದ ನಿರ್ಮಾಣ ಯೋಜನೆ ಕೈಬಿಡಬೇಕು. ಮೀನುಗಾರರ ಹಾಗೂ ಬಂದರು ವಿರೋಧಿ ಹೋರಾಟಗಾರರ ಮೇಲೆ ಪೊಲೀಸರು ದಾಖಲಿಸಿರುವ ಪ್ರಕರಣಗಳನ್ನು ಕೂಡಲೇ ಕೈಬಿಡುವಂತೆ ಒತ್ತಾಯಿಸಿದ್ದಾರೆ.


ಜಿಲ್ಲೆಯ ಪರಿಸರ ಮತ್ತು ಜನಸಾಮಾನ್ಯರ ಹಿತವನ್ನು ಕಡೆಗಣಿಸಿ, ಸಾಂಪ್ರದಾಯಿಕ ಮೀನುಗಾರಿಕೆ, ಮೀನುಗಾರರ ಜೀವನೋಪಾಯ, ವಸತಿ ನೆಲೆಗಳಿಗೆ ಆತಂಕ ಆಗುವಂತೆ ಕರಾವಳಿಯ ಧಾರಣಾ ಸಾಮರ್ಥ್ಯ ಮೀರಿ ಟೊಂಕದಲ್ಲಿ ಮತ್ತು ಅಂಕೋಲೆಯ ಕೇಣಿಯಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ಮೂಲದ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಮತ್ತು ಕಾರವಾರದ ಬಂದರನ್ನು ರವೀಂದ್ರನಾಥ ಠಾಗೋರ ಕಡಲತೀರದವರೆಗೆ  ವಿಸ್ತರಣೆ ಮಾಡುವ ಸರ್ಕಾರದ ಅವೈಜ್ಞಾನಿಕ ಪರಿಸರ ವಿರೋಧಿ ಧೋರಣೆಯನ್ನು  ಕೈಬಿಡುವಂತೆ ರಾಷ್ಟ್ರೀಯ ಮೀನುಗಾರ ಕಾರ್ಮಿಕರ ವೇದಿಕೆಯ ನಿಯೋಗವು ಖಂಡಿಸುವುದಾಗಿ ಹೇಳಿದೆ. 


ವೇದಿಕೆಯ ಅಧ್ಯಕ್ಷ ರಾಮಕೃಷ್ಣ ತಾಂಡೇಲ, ಪ್ರಧಾನ ಕಾರ್ಯದರ್ಶೀ ಅಲೆನ್ಸಿಯೋ ಸಿಮೋಯಿಸ್, ಸಂಯೋಜಕ ವಿಕಾಸ ತಾಂಡೇಲ, ಉಜ್ವಲಾ ಪಾಟೀಲ, ಲಕ್ಷೀ.ಟಿ, ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ, ಕಾಸರಕೋಡ ಟೊಂಕದ ಬಂದರು ವಿರೋಧಿ ಹೋರಾಟ ಸಮೀತಿಯ ರಾಜೇಶ ತಾಂಡೇಲ, ಗಣಪತಿ ತಾಂಡೇಲ, ರಿಜ್ವಾನ ಮೈದಿನ ಸಾಬ, ಅನ್ಸಾರ ಇಷ್ಮಾಯಿಲ್. ಸಾಬ  ರಾಜು ಈಶ್ವರ ತಾಂಡೇಲ, ಅಂಕೋಲಾ ಕೇಣಿಯ ಬಂದರು ವಿರೋಧಿ ಹೋರಾಟ ಸಮೀತಿಯ ಸಂಜೀವ ಬಲೇಗಾರ, ಜ್ಞಾನೇಶ್ವರ, ಗಿರೀಶ ಹರಿಕಂತ್ರ,  ಹೂವಾ ಖಂಡೇಕರ್, ವೆಂಕಟೇಶ್ ದುರ್ಗೇಕರ್, ಜ್ಞಾನೇಶ್ವರ ಹರಿಕಂತ್ರ, ಗಿರೀಶ್ ಬಳೆಗಾರ್. ಮತ್ತು ಉ.ಕ.ಮೀನುಗಾರರ ಫೇಡರೇಷನ್ನಿನ ಪದಾಧಿಕಾರಿಗಳು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿದ್ದರು. 


ಅಹವಾಲು ಆಲಿಸಿ ಮನವಿ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ, ಮೀನುಗಾರರ ಬೇಡಿಕೆಗಳು ಮನವರಿಕೆಯಾಗಿವೆ. ಬಂದರು ವಿರೋಧಿ ಹೋರಾಟದಲ್ಲಿ ಹಿಂದೆ ಮುಂಚೂಣಿಯಲ್ಲಿದ್ದ ಅಂದಿನ ಶಾಸಕ ಮಂಕಾಳ ವೈದ್ಯರೇ ಇಂದು ಬಂದರು ಖಾತೆ ಸಚಿವರಾಗಿದ್ದಾರೆ. ಅವರನ್ನು ಮತ್ತೂ ಸಂಬಂದಪಟ್ಟ ಅಧಿಕಾರಿಗಳನ್ನು ಕರೆದು ಚರ್ಚಿಸುತ್ತೇನೆ. ಸಮಸ್ಯೆ ಬಗೆಹರಿಸುವ  ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಾಧ್ಯವಾದರೆ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು. 


ಪೋಲಿಸ್ ಬಲಪ್ರಯೋಗದಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರು ನಿರ್ಮಿಸುವ ಅವೈಜ್ಞಾನಿಕ ಜನವಿರೋಧಿ ಕ್ರಮವನ್ನು ತಡೆಯಲು, ಅಮಾಯಕ-ಬಡ ಮೀನುಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಜೈಲಿಗೆ ಕಳಿಸಿರುವ, ವಾಣಿಜ್ಯ ಬಂದರು ನಿರ್ಮಾಣ ಮಾಡುವ ಅವೈಜ್ಞಾನಿಕ, ಪರಿಸರ ಮತ್ತು ಮೀನುಗಾರಿಕೆ ವಿರೋಧಿ ನೀತಿಯನ್ನು ಕೈಬಿಡಬೇಕು ಎಂದು ಸಂಘಟನೆ ಪ್ರಮುಖರು ಒತ್ತಾಯಿಸಿದರು. 


ಪರಿಸರ, ಜೀವ ವೈವಿಧ್ಯತೆ, ಜನರ ಆರೋಗ್ಯ ಮತ್ತು ಜೀವನೋಪಾಯಕ್ಕೆ ಮಾರಕವಾಗುವ ವಾಣಿಜ್ಯ ಬಂದರುಗಳ ನಿರ್ಮಾಣ ಮಾಡುವುದು ತೀರ ಅವೈಜ್ಞಾನಿಕ ಮತ್ತು ಮುಂದಿನ ಪೀಳಿಗೆಗೆ ಇದು ಅಪಾಯಕಾರಿ ಎಂದು ಅನೇಕ ತಜ್ಞರು ಎಚ್ಚರಿಸಿದ್ದಾರೆ. ಕಡಲಾಮೆಗಳು ಮೊಟ್ಟೆ ಇಡುವ ಪರಿಸರ ಸೂಕ್ಷ್ಮ  ಮತ್ತು ಸಾಂಪ್ರದಾಯಿಕ ಮೀನುಗಾರಿಕೆಯ ಪ್ರಮುಖ ತಾಣವಾಗಿರುವ, ಕುಡಿಯುವ ನೀರಿನ ದೈನಂದಿನ ಅಗತ್ಯಗಳನ್ನು ಪೂರೈಸುತ್ತಿರುವ ಜೀವನದಿ ಶರಾವತಿಯ ಸಂಗಮ ಪ್ರದೇಶವಾಗಿರುವ 3ಕಿ.ಮೀ .ಉದ್ದಕ್ಕೂ ಅಸ್ತಿತ್ವದಲ್ಲಿರದ  ಕಚ್ಛಾ ರಸ್ತೆಯ ಸುಧಾರಣೆಯ ನೆಪದಲ್ಲಿ ಕಲ್ಲುಮಣ್ಣು ಸುರಿದು ವನ್ಯ ಜೀವಿಕಾಯ್ದೆ ಸಹಿತ ವಿವಿಧ ನಿಯಮಗಳನ್ನು ಉಲ್ಲಂಘಿಸಿ ಇಲ್ಲಿ ಹೊಸದಾಗಿ ಪಕ್ಕಾ ರಸ್ತೆ ನಿರ್ಮಿಸುವ ಪ್ರಯತ್ನ ನಡೆಸಲಾಗಿದೆ ಎಂದು ನಿಯೋಗ ದೂರಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


إرسال تعليق

0 تعليقات
إرسال تعليق (0)
To Top