ನಿಟ್ಟೆಯಲ್ಲಿ 'ಯಕ್ಷಗವಿಷ್ಟಿ' ಸಂಪನ್ನ: ಎಸ್ ಡಿ ಎಂ ಕಾನೂನು ಕಾಲೇಜು ಪ್ರಥಮ

Upayuktha
0


ಕಾರ್ಕಳ: ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ) ಮತ್ತು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಡಿಯಲ್ಲಿ ಆಹ್ವಾನಿತ ತಂಡಗಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ 'ಯಕ್ಷಗವಿಷ್ಟಿ' ಯನ್ನು ಇತ್ತೀಚೆಗೆ ನಿಟ್ಟೆಯಲ್ಲಿ ಹಮ್ಮಿಕೊಳ್ಳಲಾಯಿತು.


ನಿಟ್ಟೆಯ ಎನ್.ಎಮ್.ಎ.ಎಮ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನಿರಂಜನ್ ಎನ್.‌ ಚಿಪ್ಳೂಣ್ಕರ್‌ ಅವರ ಅಧ್ಯಕ್ಷತೆಯಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸ ವಾಸುದೇವ ರಂಗ ಭಟ್ಟ ಅವರು ಈ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ವಿದ್ಯಾಲಯಗಳ ಆಶ್ರಯದಿಂದ ಕಲೆ ಉಳಿಸಿ ಬೆಳೆಯುವುದಕ್ಕೆ ಸಹಕಾರಿಯಾಗುತ್ತಿದೆ

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಧೂರು ವಾಸುದೇವ ರಂಗಭಟ್ಟ ಅವರು "ಕೇವಲ ಕ್ಷೇತ್ರಗಳ ಆಶ್ರಯದಿಂದ ಹೊರಡುವ ಮೇಳಗಳಲ್ಲಿ ಒಮ್ಮೊಮ್ಮೆ ಕಲೆಯಿಂದ ಭಕ್ತಿ ಹೆಚ್ಚು ಮೇಳೈಸಿದರೂ, ಇಂಥ ಪ್ರಯತ್ನಗಳಿಂದ ಕಲೆಯ ಸತ್ವ ಉಳಿಸುವುದು ಸಾಧ್ಯ. ಕಲೆಯಲ್ಲಿ ಪ್ರತಿಷ್ಠಿತ ಸ್ಥಾನ ತಲುಪಿದ ಕಲಾವಿದನಿಗೆ ತನ್ನ ತಿರುಗಾಟದ ಮೇಳ ಅಥವಾ ಕ್ಷೇತ್ರದ ನಿರ್ದೇಶನವನ್ನು ಮೀರುವುದಕ್ಕೆ ಹೆಚ್ಚಾಗಿ ಆಸ್ಪದವಿರುವುದಿಲ್ಲ. ಮೇಳದ ಯಾಜಮಾನ್ಯ ಹೊಂದಿದವರಿಗೆ ಕ್ಷೇತ್ರದ ಭಕ್ತರ ಭಾವನೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕಾದ ಅನಿವಾರ್ಯತೆಯಿದೆ. ಸಂಘಟಕರಿಗೆ ಜನರಿಗೇನು ಬೇಕೋ ಅದನ್ನೇ ಕೊಡುವ ಆತುರತೆ ಕಂಡು ಬರುವುದು ಸಹಜ. ಆದರೆ ಪ್ರೇಕ್ಷಕರಲ್ಲಿ ಕಲೇತರವಾದ ವಿಷಯಗಳಿರದೆ ಪೂರ್ವಕಲಾ ವೈಭವದ ಅಭಿರುಚಿಯುಳ್ಳ ಸಂಸ್ಕಾರವನ್ನು ಸಿದ್ಧಪಡಿಸುವುದು ವಿದ್ಯಾರ್ಥಿಗಳ ನೇತೃತ್ವದಲ್ಲಿ, ಪ್ರಾಧ್ಯಾಪಕರ ಸಹಯೋಗದಲ್ಲಿ, ವಿದ್ಯಾಕೇಂದ್ರಗಳ ಆಶ್ರಯದಲ್ಲಿ ನಡೆಯುವ ಸ್ಪರ್ಧೆಯಿಂದ ಸಾಧ್ಯ. ಈ ನಿಟ್ಟಿನಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ನಡೆಸುವ ಯಕ್ಷಗವಿಷ್ಟಿ ಅಭಿನಂದನಾರ್ಹ" ಎಂದು ಅಭಿಪ್ರಾಯಪಟ್ಟರು.


ಯಕ್ಷಗಾನದ ಹಾಸ್ಯ ಲೋಕವನ್ನು ಶ್ರೀಮಂತಗೊಳಿಸಿದ ಬಂಟ್ವಾಳ ಜಯರಾಮ ಆಚಾರ್ಯರು ಕಲಾರಸಿಕರ ಹೃದಯದಲ್ಲಿ ಸದಾ ಬದುಕಿರುವ ಹೆಸರು. ವಿಶಿಷ್ಟಪೂರ್ಣ ಹಾಸ್ಯ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿ , ನಗುವಿನ ಅಲೆಯನ್ನು ತೇಲಿಸಿದವರು ಇವರು. ಹಿಮ್ಮೇಳ ಮುಮ್ಮೇಳವೆರಡನ್ನೂ ಸಂಪೂರ್ಣ ಅಭ್ಯಸಿಸಿ ಓರ್ವ ಸವ್ಯಸಾಚಿ ಕಲಾವಿದನಾಗಿ ಗುರುತಿಸಿಕೊಂಡ ಸಾಧಕರಿವರು. ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಖ್ಯಾತಿಯನ್ನು ಪಡೆದ ಇವರು ನಿಟ್ಟೆ ಕಾಲೇಜಿನ ಯಕ್ಷಗಾನದ ತಂಡದ ಹಾಸ್ಯ ಪ್ರಸ್ತುತಿಯ ಔನ್ನತ್ಯಕ್ಕೆ ನಿಸ್ವಾರ್ಥಿಯಾಗಿ ತಮ್ಮ ಬೆಂಬಲವನ್ನು ನೀಡಿದ್ದಾರೆ. ಕಲಾರಂಗದಲ್ಲಿ ಇವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತಾ ನಿಟ್ಟೆಯ ಎನ್.ಎಮ್.ಎ.ಎಮ್. ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಯಕ್ಷಗವಿಷ್ಟಿ -ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯ ರಂಗಸ್ಥಳಕ್ಕೆ 'ಕೀರ್ತಿಶೇಷ ಬಂಟ್ವಾಳ ಜಯರಾಮ ಆಚಾರ್ಯ ವೇದಿಕೆ' ಎಂದು ಹೆಸರಿಸಿ ಗೌರವಿಸಲಾಯಿತು.


ಸಂಸ್ಥೆಯ ಪರಿಸರದ ಐದು ಕಾಲೇಜಿನ ಕಲಾವಿದರು “ರತ್ನಾವತಿ ಕಲ್ಯಾಣ” ಪ್ರಸಂಗವನ್ನು ಸ್ಪರ್ಧೆಯ ಅಂಗವಾಗಿ ಆಡಿತೋರಿಸಿದರು.


ಭಾಗವಹಿಸಿದ ಕಾಲೇಜುಗಳು:

1. ಗೋವಿಂದ ದಾಸ ಕಾಲೇಜು, ಸುರತ್ಕಲ್

2. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಮಂಗಳೂರು

3. ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್,ಬಂಟಕಲ್ಲು

4. ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮದರ್ಜೆ ಕಾಲೇಜು, ಕಟೀಲು

5. ಸಂತ ಅಲೋಶಿಯಸ್ ವಿಶ್ವವಿದ್ಯಾಲಯ (ಪರಿಗಣಿತ), ಮಂಗಳೂರು


ಈ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ  ಮುರಳೀಧರ ಭಟ್, ಶೃತಕೀರ್ತಿರಾಜ ಎಸ್ ಹಾಗೂ ಚಂದ್ರಶೇಖರ ಭಟ್ ಕೆ ಆಗಮಿಸಿದರು.


ಇತ್ತೀಚಿನ ದಿನಗಳಲ್ಲಿ, ಯಕ್ಷಗಾನ ಸ್ಪರ್ಧೆಯಲ್ಲಿ ಎಲ್ಲಾ ತಂಡಗಳು ಒಂದೇ ಪ್ರಸಂಗವನ್ನು ಪ್ರದರ್ಶಿಸುವ ಅಪರೂಪದ ನಿಯಮವನ್ನು ಒಳಗೊಂಡ ವಿಶಿಷ್ಟ ಕಾರ್ಯಕ್ರಮವಿದಾಗಿದ್ದು ನೋಂದಣಿ ಮತ್ತು ಮೌಲ್ಯಮಾಪನಗಳು ಕಾಗದ ರಹಿತವಾಗಿ, ಅಂತರ್ಜಾಲಾಧರಿತವಾಗಿ ನಡೆಯಿತು. ಈ ಮೂಲಕ ಪರಂಪರೆ ಮತ್ತು ತಂತ್ರಜ್ಞಾನದ ಅಪೂರ್ವ ಸಮ್ಮಿಲನಕ್ಕೆ ಈ ಯಕ್ಷಗವಿಷ್ಟಿ ವೇದಿಕೆಯಲ್ಲಿ ನಡೆಯಿತು. ತಂಡಗಳ ಏಕ ಪ್ರಸಂಗದ ತೀವ್ರ ಪೈಪೋಟಿಯ ಪಂಥಕ್ಕೆ ಸಾಕ್ಷಿಯಾಯಿತು.


ಸ್ಪರ್ಧೆಯ ಬಳಿಕ ಆತಿಥೇಯ ಕಾಲೇಜಿನ ಕಲಾವಿದರು ತೆಂಕು ಮತ್ತು ಬಡಗು ಯಕ್ಷಗಾನ ಪ್ರದರ್ಶನವನ್ನು ನಡೆಸಿಕೊಟ್ಟರು. ನಂತರ ಸಂಜೆ 7:30 ಕ್ಕೆ ಪ್ರಸಿದ್ಧ ಸಂಗೀತ ನಿದರ್ಶಕ ರವಿ ಬಸ್ರೂರು ಅವರು ಆಗಮಿಸಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದರು.


ಇಂಥ ಒಳ್ಳೆಯ ಆಲೋಚನೆ ಎಲ್ಲಾ ವಿದ್ಯಾಸಂಸ್ಥೆಗಳಲ್ಲೂ ಬರುವಂತಾಗಲಿ

ವೀಕ್ಷಕರನ್ನುದ್ದೇಶಿಸಿ ಮಾತನಾಡಿದ ಅವರು "ಇದೀಗ ಯಕ್ಷಗಾನವನ್ನು ಬೆಳ್ಳಿತೆರೆಯ ಮೇಲೆ ನೋಡುವ ನನ್ನ 12 ವರ್ಷಗಳ ಕನಸು ವೀರಚಂದ್ರಹಾಸ ಸಿನೆಮಾದ ಮೂಲಕ ಸಾಕಾರಗೊಳ್ಳಲಿದೆ, ಕಲಾಭಿಮಾನಿಗಳ ಪ್ರೋತ್ಸಾಹ ಬೇಕಿದೆ. ಇವತ್ತು ರವಿ ಬಸ್ರೂರು ಅನ್ನುವ ಹೆಸರನ್ನು ಜನ ಗುರುತಿಸುವಂತಾಗಿದ್ದರೆ, ಅದಕ್ಕೆ ಮುಖ್ಯ ಕಾರಣ, ಯಕ್ಷಗಾನ. ಎಲ್ಲಿ ಸಂಗೀತವಿದೆಯೋ, ಅಲ್ಲಿ ಜನಜೀವನದಲ್ಲಿ ಸಕ್ರಿಯತೆ ಹಾಗೂ ಉತ್ಸಾಹ ತನ್ನಿಂತಾನೇ ಕಂಡುಬರುತ್ತದೆ ಅನ್ನುವುದು ವಿಜ್ಞಾನದ ಮಾತು. ಕರಾವಳಿಗರು ಬುದ್ಧಿವಂತರು ಎಂದು ಕರೆಸಿಕೊಳ್ಳುವುದಕ್ಕೆ ಪ್ರಮುಖ ಕಾರಣಗಳಲ್ಲೊಂದು, ಪುರಾಣಗಳ ಸಾರವನ್ನು ತಿಳಿಸಿಕೊಡುವ ಯಕ್ಷಗಾನ. ಅಂಥ ಯಕ್ಷಗಾನಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಾದ ಅಳಿಲು ಸೇವೆ, ವೀರ ಚಂದ್ರಹಾಸ ಎಂಬ ಯಕ್ಷಚಿತ್ರ. ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಯಕ್ಷಗಾನದ ವೈಭವವನ್ನು ಬೆಳ್ಳಿತೆರೆ ಮೇಲೆ ನೋಡುವ ಪ್ರಯತ್ನ ಈ ಚಿತ್ರ, ಇದಕ್ಕೆ ಎಲ್ಲರ ಸಹಕಾರ ಬೇಕಿದೆ. ಇಂಥ ಆರೋಗ್ಯಕರ ಸ್ಪರ್ಧೆಗಳು ಇನ್ನಷ್ಟು ಬೆಳೆಯುತ್ತಿರುವುದು ಸಂತಸದ ವಿಚಾರ" ಎಂದರು. ನಂತರ ನಡೆದ ಸಂವಾದ ಸುತ್ತಿನಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.


ಸ್ಪರ್ಧೆಯ ವಿಜೇತರನ್ನು ಘೋಷಿಸಿ ಬಹುಮಾನಗಳನ್ನು ವಿತರಿಸಲಾಯಿತು. ಈ ವೇಳೆ ವೇದಿಕೆಯ ಮುಖ್ಯ ಅತಿಥಿಯಾಗಿ WENAMITAA - ನಿಟ್ಟೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜೀವನ್ ಕೆ ಶೆಟ್ಟಿ , ಮುಲ್ಕಿ ಉಪಸ್ಥಿತರಿದ್ದರು.


ನನ್ನ ಕಣ್ಣಿಗೆ ಯಕ್ಷಗಾನ ಕೇವಲ ಕಲೆಯಲ್ಲಿ, ಭಕ್ತಿಮಾರ್ಗ

"ಯಕ್ಷಗಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಸಂಯೋಜನೆಯಲ್ಲಿ ಸಿಗುವ ಆನಂದ, ಬೇರೆ ಕಾರ್ಯಕ್ರಮಗಳಲ್ಲಿ ಸಿಗುವುದಿಲ್ಲ. ಈ ಸ್ಪರ್ಧೆಯ ಲೋಗೋ, ಅದರ ರಂಗೋಲಿ ಎಲ್ಲವೂ ವಿದ್ಯಾರ್ಥಿಗಳಿಂದಲೇ ಮಾಡಲ್ಪಟ್ಟಿರುವುದು ಇನ್ನೂ ವಿಶೇಷ ಆನಂದ ತಂದಿದೆ. ಇಂಥ ಕಾರ್ಯಕ್ರಮಗಳು ಇನ್ನಷ್ಟು ಆಗಲಿ, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು "- ಜೀವನ್ ಕೆ ಶೆಟ್ಟಿ


ನಡೆದ ಯಕ್ಷಗವಿಷ್ಟ ಸ್ಪರ್ಧೆಯ ಸಮಗ್ರ ತಂಡ ಪ್ರಶಸ್ತಿಗಳ ವಿವರ :

ಪ್ರಥಮ :ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಮಂಗಳೂರು

ದ್ವಿತೀಯ : ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್, ಬಂಟಕಲ್ಲು

ತೃತೀಯ: ಸಂತ ಅಲೋಶಿಯಸ್ ವಿಶ್ವವಿದ್ಯಾಲಯ (ಪರಿಗಣಿತ), ಮಂಗಳೂರು


ಸ್ಪರ್ಧೆಯ 6 ಪಾತ್ರದ ಅತ್ಯುತ್ತಮ ಪಾತ್ರಧಾರಿಗಳಿಗೆ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು.




 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top