ಶ್ರಮಯೇವ ಜಯತೇ...ಮೇ 1 ಅಂತಾರಾಷ್ಟ್ರೀಯ ಕಾರ್ಮಿಕರ ದಿನ

Upayuktha
0


ಶ್ರಮಯೇವ ಜಯತೇ ಎನ್ನುತ್ತಾ ಜಗದ್ಗುರು ಶ್ರೀಕೃಷ್ಣ ಪರಮಾತ್ಮನು ಬೋಧಿಸಿದ ಕರ್ಮ ಸಿದ್ದಾಂತದಲ್ಲಿ ನಂಬಿಕೆ ಇಟ್ಟು, ದುಡಿಮೆಯೇ ದುಡ್ಡಿನ ತಾಯಿ ಎಂಬ ಮಾತನ್ನು ಸಾಕಾರಗೊಳಿಸಲು ಹೆಜ್ಜೆ ಹಾಕುತ್ತಾ, ದುಡಿಮೆಯ ನಂಬಿ ಬದುಕು, ಅದರಲ್ಲಿ ದೇವರ ಹುಡುಕು, ಆಗ ಬಾಳಲಿ ಬರುವುದು ಬೆಳಕು ಎಂಬ ಜನಜನಿತವಾದ ಹಾಡನ್ನು ಸ್ಮರಿಸುತ್ತ ಬಸವೇಶ್ವರರು ಪಾಲಿಸಿದ ಕಾಯಕವೇ ಕೈಲಾಸ ಎಂಬ ಸೂತ್ರದ ಮೇಲೆ ಕೆಲಸ ಮಾಡುತ್ತಿರುವ ಶ್ರಮಿಕ ಅಂದರೆ ಒಬ್ಬ ಕಾರ್ಮಿಕ ಅದ್ಭುತಗಳ ನಿರ್ಮಾತೃ ಮತ್ತು ಪ್ರತಿ ರಾಷ್ಟ್ರಕ್ಕೂ ದೊಡ್ಡ ಆಸ್ತಿ. ದುಡಿಮೆ ಮನುಷ್ಯನ ಘನತೆ ಮತ್ತು ಸೃಜನಶೀಲತೆಯ ಶ್ರೇಷ್ಠತೆಯನ್ನು ವ್ಯಕ್ತಪಡಿಸುವ ಏಣಿ ಎಂದು ಹೇಳಲಾಗುತ್ತದೆ. 

ರಸ್ತೆಗಳ ನಿರ್ಮಾಣ, ಬೃಹತ್ ಕಟ್ಟಡಗಳ ನಿರ್ಮಾಣ, ಸಣ್ಣ, ಮಧ್ಯಮ, ಬೃಹತ್  ಕಾರ್ಖಾನೆಗಳ ನಿರ್ಮಾಣ,  ಅಣೆಕಟ್ಟುಗಳ ನಿರ್ಮಾಣ, ಚಿಕ್ಕದರಿಂದ ಹಿಡಿದು ದೊಡ್ಡ ದೊಡ್ಡ ವಾಹನಗಳ ನಿರ್ಮಾಣ, ವಾಹನ ನಿಲ್ದಾಣಗಳ ನಿರ್ಮಾಣ, ವಿದ್ಯುತ್ ಸ್ಥಾವರಗಳ ನಿರ್ಮಾಣ, ವ್ಯವಸಾಯ, ಬ್ಯಾಂಕೋದ್ಯಮ ಮುಂತಾದ ಎಲ್ಲಾ ರೀತಿಯ ವ್ಯವಸ್ಥೆಗಳ ಹಿಂದೆ  ಶ್ರಮಿಕರ ಅಂದರೆ ಕಾರ್ಮಿಕರ ಕೈಗಳ ಶಕ್ತಿ ಅಗಾಧವಾಗಿದೆ ಎಂಬ ವಿಷಯ ನಮ್ಮೆಲ್ಲರಿಗೂ ಗೊತ್ತೇ ಇದೆ. ಕಾರ್ಮಿಕರು ಹಗಲು ರಾತ್ರಿಗಳೆನ್ನದೆ, ಬಿಸಿಲು ಮಳೆ ಗಾಳಿಗೂ ಜಗ್ಗದೆ, ಕಷ್ಟಪಟ್ಟು  ಕೆಲಸ ಮಾಡುತ್ತಾರೆ. ಕಠಿಣ ಪರಿಶ್ರಮ, ಸಮರ್ಪಣಾ ಭಾವಕ್ಕೆ ಕಾರ್ಮಿಕರೇ ಸಾಕ್ಷಿ... ಕಷ್ಟವನ್ನು ನುಂಗಿ ಖುಷಿ ಹಂಚುವವರು ಕಾರ್ಮಿಕರು... ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಬಹಳ ಹಿರಿದು. ಕಾರ್ಮಿಕರ ಶ್ರಮದಲ್ಲಿ ರಾಷ್ಟ್ರದ ಅಭಿವೃದ್ಧಿಯಡಗಿದೆ... ಈ ಶ್ರಮಜೀವಿಗಳೇ ಇಲ್ಲದ ದೇಶವನ್ನು ಊಹಿಸಲು ಸಾಧ್ಯವಿಲ್ಲ. ತಮ್ಮ ದುಡಿಮೆಯಿಂದಲೇ ತಮ್ಮ ಕುಟುಂಬವನ್ನು ಮುನ್ನಡೆಸುವ ಕಾರ್ಮಿಕರು ತಾವು ದುಡಿಯುತ್ತಿರುವ ಸಂಸ್ಥೆಯ ಅಭಿವೃದ್ಧಿಗೂ ಕಾರಣವಾಗುತ್ತಾರೆ... ಸರ್ವೋತ್ತಮ ಸೇವೆಯ ದುಡಿಮೆಯ ವರ್ಗವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮೇ 1 ನೇ ತಾರೀಖಿನಂದು ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಯನ್ನು ವಿಶ್ವದಾದ್ಯಂತ ಭಾರತವೂ ಸೇರಿ ಅನೇಕ ದೇಶಗಳಲ್ಲಿ ಆಚರಿಸಲಾಗುವುದು. 

ದುಡಿಯುವ ವರ್ಗದವರ ಮೇಲಿನ ದಬ್ಬಾಳಿಕೆ ತಡೆಗಟ್ಟಲು ಮತ್ತು ಅವರ ಏಳಿಗೆಗಾಗಿ ಕಾರ್ಯಕ್ರಮ ರೂಪಿಸಲು ಈ ದಿನವನ್ನು ಮೇ ದಿನ ಅಥವಾ ವಿಶ್ವ ಕೂಲಿ ಕಾರ್ಮಿಕರ  ( WORLD LABOURS' DAY / MAY DAY ) ದಿನವೆಂದು ಆಚರಿಸಲಾಗುತ್ತಿದೆ. ವಿಶ್ವದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಬಹಳ ದೊಡ್ಡದು. ಪ್ರತಿಯೊಂದು ವಲಯದಲ್ಲಿ ಶ್ರಮಿಕರ ಬೆವರಿನ ಶ್ರಮ ಮಹತ್ವವಾದದ್ದು. ಕಾರ್ಮಿಕರು ತಮ್ಮ ದುಡಿಮೆಯಿಂದ ತಮ್ಮ ಕುಟುಂಬವನ್ನು ಪೋಷಿಸುವ ಜೊತೆಗೆ ತಮ್ಮ ಸಂಸ್ಥೆಯ ಅಭಿವೃದ್ಧಿಗೂ ಕಾರಣರಾಗುತ್ತಾರೆ. ಈ ಮೂಲಕ ಒಂದು ದೇಶದ ಪ್ರಗತಿಗೂ ಕಾರಣರಾಗುತ್ತಾರೆ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗೆ ಸೇವೆಸಲ್ಲಿಸುವ ಕಾರ್ಮಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಮತ್ತು ಕಾರ್ಮಿಕರ ಹಕ್ಕುಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಸಲುವಾಗಿ ಅಂತರರಾಷ್ಟ್ರೀಯ ಕಾರ್ಮಿಕ  ದಿನವನ್ನು ಆಚರಿಸಲಾಗುತ್ತದೆ. 

ಐತಿಹಾಸಿಕ ಹಿನ್ನೆಲೆ
ವೈಜ್ಞಾನಿಕ ಸಮಾಜವಾದದ ಪ್ರವರ್ತಕರಾದ ಕಾರ್ಲ್‌ಮಾರ್ಕ್ಸ್ ಹಾಗೂ ಫ್ರೆಡ್ರಿಕ್ ಎಂಗೆಲ್ಸ್ ರವರು ಕಾರ್ಮಿಕರು ದಿನದ ಎಂಟು ಗಂಟೆಗಳು ಮಾತ್ರ ಕೆಲಸ ಮಾಡಬೇಕು ಮತ್ತು ಅಂತಹ ನಿಯಮಗಳು ಜಾರಿಗೆ ಬರಬೇಕು ಎಂದು ತಮ್ಮ ಅನೇಕ ಬರವಣಿಗೆಗಳಲ್ಲಿ ಪ್ರತಿಪಾದಿಸಿದ್ದರು. 

ಕ್ರಿ.ಶ. 1866 ರಲ್ಲಿ ಸ್ವಿಡ್ಜರ್ ಲ್ಯಾಂಡ್ ನ ಜಿನೀವಾದಲ್ಲಿ ನಡೆದ ಮೊದಲನೆ ಅಂತರರಾಷ್ಟ್ರೀಯ ಸಭೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. 1866 ರ ಆಗಸ್ಟ್‌ನಲ್ಲಿ ಅಮೆರಿಕೆಯ 60 ಕಾರ್ಮಿಕ ಸಂಘಟನೆಗಳಿಗೆ ಸೇರಿದ ಲಕ್ಷಾವಧಿ ಕಾರ್ಮಿಕರು ಜೊತೆ ಜೊತೆಯಲ್ಲೇ ಈ ತೀರ್ಮಾನವನ್ನು ಕೈಗೊಂಡಿದ್ದರು. ಹೀಗಾಗಿ ಎಂಟು ಗಂಟೆಗಳ ಕೆಲಸದ ದಿನದ ಬೇಡಿಕೆ ವಿಶ್ವದ ಎಲ್ಲ ಕಾರ್ಮಿಕರ ಬೇಡಿಕೆಯಾಗಿ ಪರಿವರ್ತಿತಗೊಂಡಿತು. ಆದರೆ, ಈ ಬೇಡಿಕೆಯನ್ನು ಸಾಧಿಸಿಕೊಳ್ಳಲು ಅಮೆರಿಕಾದ ಚಿಕಾಗೋ ನಗರದ ( HAY MARKET SQUARE ) ಹೇ ಮಾರ್ಕೆಟ್ ಸ್ಕ್ವೇರ್ ‌ನಲ್ಲಿ ನಡೆದ ಹೋರಾಟ ವಿಶ್ವ ಕಾರ್ಮಿಕ ಹೋರಾಟಗಳ ಇತಿಹಾಸದಲ್ಲಿ ರೆಡ್ ಲೆಟರ್ ಡೇ ಅಂದರೆ ಒಂದು ಮಹತ್ವದ ದಿನವಾಗಿ ಪರಿಣಮಿಸಿತು. ಕ್ರಿ.ಶ 1886 ಮೇ 1, ಕಾರ್ಮಿಕ ಹೋರಾಟಗಳ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ. ಅಂದು ಅಮೆರಿಕಾದಲ್ಲಿ ಸುಮಾರು ಐದು ಲಕ್ಷ ಜನ, ಎಂಟು ಗಂಟೆಯ ಕೆಲಸದ ದಿನಕ್ಕಾಗಿ ಪ್ರದರ್ಶನವನ್ನು ಹೂಡಿದ್ದರು. ಇವರಲ್ಲಿ ಸುಮಾರು ಎರಡು ಲಕ್ಷ ಜನ ಮುಷ್ಕರವನ್ನು ಹೂಡಿದ್ದರು. ಅಂದು ಚಿಕಾಗೋ ನಗರದಲ್ಲೇ 80 ಸಾವಿರ ಕಾರ್ಮಿಕರು ಮುಷ್ಕರವನ್ನು ಹೂಡಿದ್ದರು ಎಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಕಾರ್ಮಿಕ ಸಂಘಟನೆಯೊಂದು ಶಕ್ತವಾಗಿ ರಚನೆಗೊಳ್ಳುವ ಮೊದಲು ಕಾರ್ಮಿಕರನ್ನು 12-16 ಗಂಟೆ ದುಡಿಸಿಕೊಳ್ಳುತ್ತಿದ್ದರು. ಯಾವುದೇ ಸೌಲಭ್ಯಗಳಿಲ್ಲದೆ ಕಡಿಮೆ ವೇತನಕ್ಕೆ ಜನರು ಹೆಚ್ಚು ಕಾಲ ದುಡಿಯಬೇಕಿತ್ತು. ಕಂಪನಿಗಳು ಕಾರ್ಮಿಕರನ್ನು ಗುಲಾಮರ ರೀತಿ ದುಡಿಸಿ ಕೊಳ್ಳುತ್ತಿತ್ತು. ಇದನ್ನು ವಿರೋಧಿಸಿ ಅನೇಕ ಕಾರ್ಮಿಕ ಸಂಘಗಳು ಮುಷ್ಕರಕ್ಕೆ ಕರೆ ನೀಡಿದ್ದವು. ಈ ಸಂದರ್ಭದಲ್ಲಿ ಅಮೆರಿಕದ ಚಿಕಾಗೊ ನಗರದ ಮಾರುಕಟ್ಟೆಯಲ್ಲಿ ಬಾಂಬ್ನ್ನು ಸ್ಪೋಟಿಸಲಾಯಿತು. ಇದರಿಂದ ಕಾರ್ಮಿಕರು ಮತ್ತು ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿತು. ಈ ಸಂಘರ್ಷದಲ್ಲಿ ಅನೇಕ ಮಂದಿ ಸಾವನ್ನಪಿದ್ದರಲ್ಲದೆ, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇದು ಹತ್ಯಾಕಾಂಡವೆನಿಸಿತು. ಈ ಹತ್ಯಾಕಾಂಡವನ್ನು ವಿಶ್ವದ ಹಲವಾರು ಕಾರ್ಮಿಕ ಸಂಘಟನೆಗಳು ವಿರೋಧಿಸಿದವು. ಕಾರ್ಮಿಕರ ಮೇಲಾದ ದೌರ್ಜನ್ಯ ವಿರೋಧಿಸಿ 1889ರಲ್ಲಿ ಪ್ಯಾರಿಸಿನಲ್ಲಿ ಅಂತರಾಷ್ಟ್ರೀಯ ಸಮಾಜವಾದಿ ಸಮ್ಮೇಳನ ನಡೆಸಲಾಯಿತು. 

ಮಾರುಕಟ್ಟೆಯ ಗೋಲಿಬಾರ್ನಲ್ಲಿ ಮೃತರಾದ ಕಾರ್ಮಿಕರ ನೆನಪಿಗಾಗಿ ಮೇ ಒಂದನ್ನು  ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲು ಸಮ್ಮೇಳನದಲ್ಲಿ ನಿರ್ಧರಿಸಲಾ ಯಿತು. ಮೇ ದಿನಾಚರಣೆಯು ಎಂಟು ಗಂಟೆಗಳ ಕೆಲಸದ ದಿನದ ಹೋರಾಟವಾಗಿದ್ದು ಇದರ ಮಹತ್ವವನ್ನು ವಿಶ್ವದಲ್ಲೇ ಪ್ರಥಮ ಸಮಾಜವಾದಿ ರಾಷ್ಟ್ರ ನಿರ್ಮಾಪಕ, ರಷ್ಯಾ ಕ್ರಾಂತಿಕಾರಿ ನಾಯಕ ಲೆನಿನ್ ಬಣ್ಣಿಸಿದ್ದು ಹೀಗೆ: "ಮೇ ದಿನಾಚರಣೆ ಒಂದು ಸಾಂಪ್ರದಾಯಿಕ ಕ್ರಿಯೆಯಲ್ಲ. ಶೋಷಿತವರ್ಗಗಳ ಹಾಗೂ ರಾಷ್ಟ್ರಗಳ ವಿಮೋಚನೆಗಾಗಿ ನಡೆಸಬೇಕಾದ ಕ್ರಾಂತಿಕಾರಿ ಹೋರಾಟಗಳು, ರಾಜಕೀಯ ಹೋರಾಟಗಳು, ಸಾಮ್ರಾಜ್ಯಶಾಹಿ ವಿರೋಧಿ ಅಂತಾರರಾಷ್ಟ್ರೀಯ ಕಾರ್ಮಿಕ ವರ್ಗದ ಹೋರಾಟ, ಇವುಗಳಿಗಾಗಿ ಅವಶ್ಯವಾದ ಚೈತನ್ಯವನ್ನು ಕಾರ್ಮಿಕರು ಬೆಳೆಸಿಕೊಳ್ಳಬೇಕಾದ ಮಹತ್ವದ ದಿನ ಇದು. ತಮಗೆ ಸಂಬಂಧಿಸಿದ ದಿನನಿತ್ಯದ ಬೇಡಿಕೆಗಳಿಗಾಗಿ ಸಣ್ಣ ಸಣ್ಣ ಬೇಡಿಕೆಗಳಿಗಾಗಿ ಆಂದೋಲನ ನಡೆಸುವ ಸಂದರ್ಭವಲ್ಲ ಇದು. ಇಂಥವು ವರ್ಷಾದ್ಯಂತ ಇದ್ದೇ ಇರುತ್ತವೆ. ಕಾರ್ಮಿಕರು ಇವೆಲ್ಲವುಗಳನ್ನು ಅರಿತುಕೊಂಡು ಮೇ ದಿನಾಚರಣೆಯನ್ನು ಆಚರಿಸುವುದು ಅತ್ಯವಶ್ಯ" ಎಂದು ಹೇಳಿದ್ದಾರೆ. 

1945 ರಲ್ಲಿ ವಿಶ್ವ ಸಂಸ್ಥೆಯ ಸ್ಥಾಪನೆಯೊಂದಿಗೆ ಇದರ ಅಂಗ ಸಂಸ್ಥೆಯಾಗಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು 1946 ರಲ್ಲಿ ಲೀನವಾಯಿ ತು. ವಿಶ್ವದ ಕಾರ್ಮಿಕರ ಕೆಲಸದ ವೇಳೆಯ ನಿಯಂತ್ರಣ, ಸಾಕಾದಷ್ಟು ವೇತನ ನೀಡಿಕೆ, ಕಾರ್ಯನಿಮಿತ್ತ ಕಾರ್ಮಿಕರಿಗೆ ಬರಬಹುದಾದ ಕಾಯಿಲೆಗಳು ಹಾಗೂ ಒದಗಬಹುದಾದ ಅಪಘಾತಗಳಿಂದ ರಕ್ಷಣೆ, ನಿವೃತ್ತಿ ವೇತನ, ಕಾರ್ಮಿಕರಿಗೆ ಆಂತರಿಕ ಸೌಲಭ್ಯಗಳನ್ನು ದೊರಕಿಸಿಕೊಡುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಸ್ಥಾಪಿಸಿ ಸಾರ್ವತ್ರಿಕ ಶಾಂತಿ ಸಾಧಿಸುವುದು, ಎಲ್ಲ ರಾಷ್ಟ್ರಗಳು ಕಾರ್ಮಿಕ ಸ್ಥಿತಿಗತಿಗಳ ವಿಚಾರದ ಬಗ್ಗೆ ಒಂದು ಸರ್ವಸಾಮಾನ್ಯ ಕ್ರಮವನ್ನನುಸರಿಸಿ ಅದರಂತೆ ಕಾರ್ಮಿಕರಿಗೆ ಅನುಕೂಲಗಳನ್ನು ಕಲ್ಪಿಸುವುದು ಮುಂತಾದವು ಈ ಸಂಸ್ಥೆಯ ಮುಖ್ಯ ಉದ್ದೇಶಗಳಾಗಿವೆ. ಪ್ರಾದೇಶಿಕ ಚಟುವಟಿಕೆಗಳನ್ನು ಕೈಗೊಂಡು ಔದ್ಯೋಗಿಕ ಮಂಡಲಿಗಳನ್ನು ರಚಿಸಿ, ಕಾರ್ಮಿಕರಿಗೆ ಸೌಲಭ್ಯ ಒದಗಿಸುವುದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಕಾರ್ಮಿಕ ಪ್ರತಿನಿಧಿಗಳ ನಿರ್ದೇಶಕ ಮಂಡಲಿಗಳನ್ನೂ ಈ ಸಂಸ್ಥೆ ಸ್ಥಾಪಿಸಿದೆ. ಒಟ್ಟಿನಲ್ಲಿ ಹೇಳುವುದಾದರೆ ಕಾರ್ಮಿಕರಂಗದಲ್ಲಿ ಈ ಸಂಸ್ಥೆ ಹಾಕಿಕೊಂಡಿರುವ ಯೋಜನೆಗಳು ಮತ್ತು ನೆರವೇರಿಸುತ್ತಿರುವ ಕಾರ್ಯಗಳು ಕಾರ್ಮಿಕರ ಕಲ್ಯಾಣಕ್ಕೆ ಸಹಕಾರಿಯಾಗಿವೆ.

ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು (ILO) ಪ್ರತಿ ವರ್ಷ ವಿಭಿನ್ನ ಥೀಮ್ ಅಥವಾ ವಿಷಯವನ್ನು ಪ್ರಕಟಿಸುತ್ತದೆ. 2025 ರ ಅಂತರರಾಷ್ಟ್ರೀಯ ಕಾರ್ಮಿಕ ದಿನದ ಥೀಮ್ ಈ ರೀತಿ ಇದೆ " ಸಾಮಾಜಿಕ ನ್ಯಾಯ ಮತ್ತು ಯೋಗ್ಯ ಕೆಲಸ. ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯ." ಬದಲಾಗುತ್ತಿರುವ ಹವಾಮಾನದಲ್ಲಿ ಕಾರ್ಮಿಕರಿಗೆ ಕೆಲಸದಲ್ಲಿ ಸುರಕ್ಷತೆ ಬೇಕಾಗಿದೆ ಮತ್ತು ಆರೋಗ್ಯವನ್ನು ಖಾತ್ರಿಪಡಿಸುವುದು ಎಲ್ಲಕ್ಕಿಂತಲೂ ಮುಖ್ಯವಾಗಿದೆ. ವಿಶ್ವದ ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯದ ಮೇಲೆ ಹವಾಮಾನ ಬದಲಾವಣೆಯ ಪ್ರಭಾವದ ಕುರಿತು ಹೊಸ ದತ್ತಾಂಶಗಳನ್ನು ILO ತಿಳಿಸಿಕೊಡುತ್ತದೆ.

"ವಿಶ್ವಕಾರ್ಮಿಕ ದಿನಾಚರಣೆ"ಯು ಪ್ರಾರಂಭವಾಗಿ 139 ವರುಷಗಳು ಕಳೆದು, ಇಂದು (ಮೇ 1, 2025) 140ನೆಯ ಆಚರಣೆ ವಿಶ್ವದಾದ್ಯಂತ ನಡೆಯುತ್ತಿರುವ ಸಂದರ್ಭದಲ್ಲಿ, ಈ ದಿನಾಚರಣೆಯ ಉಗಮ, ಇತಿಹಾಸ ಹಾಗೂ ಪ್ರಸ್ತುತತೆಗಳ ಒಂದು ವಿವೇಚನೆಯು ಔಚಿತ್ಯಪೂರ್ಣವಾಗುತ್ತದೆ. ಇತ್ತೀಗಷ್ಟೇ ಕೋವಿಡ್- 19 ಎಂಬ ವ್ಯಾಪಕ ಸಾಂಕ್ರಾಮಿಕ ಸಾಮಾಜಿಕ ಪಿಡುಗು ಭಾರತವೂ ಸೇರಿದಂತೆ ಇಡೀ ವಿಶ್ವದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟ ತಂದೊಡ್ಡಿದ್ದಿತು. ಅದೆಷ್ಟೋ ಬಲಿಷ್ಠ ರಾಷ್ಟ್ರಗಳು ನಲುಗಿ ಹೋಗಿವೆ. ಈಗ ತಾನೇ ಸಂಕಷ್ಟಗಳನ್ನು ನಿವಾರಿಸುವಲ್ಲಿ ಪ್ರಯತ್ನಗಳನ್ನು ಮಾಡುತ್ತಿವೆ. ಇಂತಹ ಸನ್ನಿವೇಶದಲ್ಲಿ ನಾವೆಲ್ಲರೂ ನಮ್ಮ ಶ್ರಮವನ್ನು ರಾಷ್ಟ್ರದ ಅಭಿವೃದ್ಧಿಗಾಗಿ ನೀಡೋಣ. ರಾಷ್ಟ್ರದ ಆರ್ಥಿಕ ಭದ್ರತೆ ಹಾಗೂ ಎಲ್ಲಾ ರೀತಿಯ ಸುಭದ್ರತೆಗೂ ಶ್ರಮಿಸೋಣ. ಕಠಿಣ ಪರಿಶ್ರಮ ನಮ್ಮನ್ನು ಎಂದೂ ಸೋಲುವುದಕ್ಕೆ ಬಿಡದು. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವ ದಿನ ಇದು. ಜಗತ್ತಿನ ರಾಷ್ಟ್ರಗಳ ಅಭಿವೃದ್ಧಿಗೆ ನಿತ್ಯವೂ ಬೆವರು ಹರಿಸುತ್ತಿರುವ ಪ್ರತಿಯೋರ್ವ ಕಾರ್ಮಿಕರಿಗೂ ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು. 

-ಕೆ.ಎನ್.ಚಿದಾನಂದ ಹಾಸನ 




إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top