ಜನಿವಾರ ಪ್ರಕರಣ: ಹಿಂದೂ ಸಂಪ್ರದಾಯದ ಆಚಾರ ವಿಚಾರಗಳನ್ನು ಅವಮಾನಿಸಿರುವುದು ಖಂಡನೀಯ
ಮಂಗಳೂರು: ಕರ್ನಾಟಕದ ಸರ್ವ ಜನಾಂಗದ ಶಾಂತಿ ತೋಟವನ್ನು ಸರ್ವನಾಶ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಹಿಂದೂಗಳನ್ನು ದ್ವೇಷಿಸುತ್ತಿದ್ದು, ವಿದ್ಯಾರ್ಥಿಯ ಭವಿಷ್ಯದ ಹಿತಾಸಕ್ತಿಯನ್ನು ಕಡೆಗಣಿಸಿ ಹಾಗೂ ಹಿಂದೂ ಸಂಪ್ರದಾಯದ ಆಚಾರ ವಿಚಾರಗಳನ್ನು ಅಪಚಾರವೆಸಗಿರುವುದು ಖಂಡನೀಯ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿ ಅವಮಾನಿಸಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಂಸದರು, ವರ್ಷಪೂರ್ತಿ ಕಷ್ಟಪಟ್ಟು ಅಧ್ಯಯನ ಮಾಡಿ ಒಳ್ಳೆಯ ಭವಿಷ್ಯಕ್ಕಾಗಿ ಸಿಇಟಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಯಜ್ಞೋಪವೀತ ತುಂಡರಿಸಿರುವುದು ಹಿಂದೂಗಳ ಶ್ರದ್ದೆಯ ಮೇಲೆ ನಡೆದ ಆಕ್ರಮಣವಾಗಿದೆ.
ಕೈಯಲ್ಲಿ ಕಟ್ಟಿಕೊಂಡಿದ್ದ ಕಾಶಿದಾರ ಮತ್ತು ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನು ಬಲವಂತವಾಗಿ ತೆಗೆಸಿರುವುದು ಸನಾತನ ಹಿಂದು ಧರ್ಮದ ಭಾಗವಾದ ಬ್ರಾಹ್ಮಣ ಸಮಾಜಕ್ಕೆ ಮಾಡಿದ ಅವಮಾನ. ಸಿದ್ದರಾಮಯ್ಯ ಸರ್ಕಾರ ಪರೀಕ್ಷೆಯ ತಪಾಸಣೆ ನೆಪದಲ್ಲಿ ಮಾಂಗಲ್ಯವನ್ನು ತೆಗೆಯಲು, ಜನಿವಾರ ತುಂಡರಿಸಲು ಪ್ರಚೋದಿಸಿರುವುದು ಅಕ್ಷಮ್ಯ. ಉದ್ದೇಶ ಪೂರ್ವಕವಾಗಿ ಮಾಡಲಾದ ಈ ಕೃತ್ಯ ಕಾಂಗ್ರೆಸ್ ಸರ್ಕಾರದ ಹೀನ ಮನಸ್ಥಿತಿಯ ಮುಖವಾಡವನ್ನು ಬಯಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಜ್ಞೋಪವೀತವು ಕೇವಲ ಒಂದು ದಾರವಲ್ಲ; ಅದು ಜ್ಞಾನದ ಸಂಕೇತ, ಸಂಯಮದ ಪ್ರತೀಕ. ಇದು ವಟುವಿನ ಬದುಕಿಗೆ ಒಂದು ಮಹತ್ವದ ತಿರುವು ನೀಡುವ ಸಂಸ್ಕಾರ. ಇಂತಹ ಪವಿತ್ರ ಸಂಸ್ಕಾರವನ್ನು ಕಡೆಗಣಿಸಿ, ಅದನ್ನು ತೆಗೆದುಹಾಕುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಯ ಭಾವನೆಯನ್ನು ಘಾಸಿಗೊಳಿಸುವುದರ ಜತೆಗೆ ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗಳಿಗೂ ತೀವ್ರ ನೋವುಂಟು ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಾಜದಲ್ಲಿ ದ್ವೇಷದ ಬೀಜವನ್ನು ಬಿತ್ತುತ್ತಿದ್ದು, ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4 ರಷ್ಟು ಮುಸ್ಲಿಮರಿಗೆ ಮೀಸಲಾತಿ, ಜಾತಿ ಗಣತಿಯಲ್ಲಿಯೂ ತಾರತಮ್ಯ, ಜನಿವಾರದಂತಹ ಕೃತ್ಯಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ವರ್ಗದ ಜನರನ್ನು ಓಲೈಸುತ್ತಿರುವುದು ಕೋಮುವಾದದ ಅತಿರೇಕದ ನಡೆಗಳಾಗಿವೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಕ್ಷಣ ರಾಜ್ಯದ ಜನತೆಯ ಕ್ಷಮೆಯಾಚಿಸಿ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ