ತುಳುನಾಡ ನೆಲೆಯಲ್ಲಿ ನೆಲೆಯಾಗಿರುವ, ಸಪ್ತ ಭಾಷಾ ಸಂಗಮ ಭುವಿಯಲ್ಲಿ ಸಿಂಗರಿಸುವ, ಮದರಿಗೆ ಒಲಿದು ಎಲ್ಲರ ಸತ್ಕರಿಸುವ, ಮಧುವಾಹಿನಿ ದಿವ್ಯ ತಟದಿ ವಿರಾಜಮಾನವಾಗಿರುವ, ಭವ್ಯ ವಾಸ್ತು ಶೈಲಿಯಲ್ಲಿ ದಿವ್ಯತೆಯ ಅನುಭೂತಿಯಿಂದ ಪಸರಿಸುವ, ಕುಂಬಳೆ ಅರಸರ ಆಡಳಿತ ಕಾಲದಿ ಜೀರ್ಣೋದ್ಧಾರಗೊಂಡಿರುವ, ಮುದದಿಂದ ಒಲಿಯುವ ಮದವೂರ ವಿಘ್ನೇಶನು ನೆಲೆಸಿರುವ, ಕಾರ್ಣಿಕದ ಪರಮೇಶ್ವರನು ಪಾಪವ ಕಳೆಯುತ್ತಿರುವ, ಭಕ್ತರ ನೆಚ್ಚಿನ ತಾಣ, ಸಾಹಿತ್ಯ ತಿರುಳಲ್ಲಿದೆ ಕ್ಷೇತ್ರ ಪುರಾಣ, ಜಯಸಿಂಹನ ಇತಿಹಾಸ ಭವ್ಯ ಕಿರಣ ಸ್ಪರ್ಶದಿ ಕಂಗೊಳಿಸುವ ಕ್ಷೇತ್ರವೇ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ಕ್ಷೇತ್ರ. ಶ್ರೀ ಕ್ಷೇತ್ರವು ತನ್ನ ಕಾರ್ಣಿಕದ ಮಾಯೆಯಿಂದ ಎಲ್ಲರನ್ನೂ ತನ್ನತ್ತ ಸೆಳೆದು ಕೊಳ್ಳುತ್ತಿದೆ. ಜಟಾಧಾರಿಯಾದ ಶಿವನು ಮದನಂತೇಶ್ವರನಾಗಿಯೂ, ಸಕಲರ ದುರಿತಗಳ ಕಳೆಯುವ ಬೇಡುವ ಭಕ್ತರ ಇಚ್ಛೆಯ ಈಡೇರಿಸುವ ಸಿದ್ಧಿ ಬುದ್ಧಿಯ ನೀಡುವ ಅಧಿಪ, ಆದಿ ಪೂಜಿಪ ಗಣಪ ಸಿದ್ದಿ ವಿನಾಯಕನಾಗಿ ಇಲ್ಲಿ ನೆಲೆಯಾಗಿದ್ದರೆ, ನಾನಾ ಉಪ ದೇವರುಗಳ ನೆಲೆಯು ದಿವ್ಯ ಅನುಗ್ರಹವನ್ನು ನೀಡುತ್ತದೆ.
ಇತಿಹಾಸದ ಬೇರುಗಳಲ್ಲಿ ಶ್ರೀ ಕ್ಷೇತ್ರ:
ಮಧೂರು ಕ್ಷೇತ್ರ ಇತಿಹಾಸ ಪುರಾಣ ಕಥೆಗಳಲ್ಲಿ, ಜಾನಪದ ಕಥೆಗಳಲ್ಲಿ ತನ್ನದೇ ಆದ ಹಿರಿಮೆ ಗರಿಮೆಯನ್ನು ಹೊಂದಿದೆ. ಸ್ಕಂದ ಪುರಾಣದ ಸಹ್ಯಾದ್ರಿ ಖಂಡದ ಮಧುಪುರ ವಿಘ್ನೇಶ ಕ್ಷೇತ್ರ ಮಹಾತ್ಮೆ ಎನ್ನುವ ಭಾಗದಲ್ಲಿ ಧರ್ಮ ಗುಪ್ತನು ಪಯಸ್ವಿನಿ ತಟದಲ್ಲಿ ನಾಡಿನ ಕ್ಷೇಮಕ್ಕಾಗಿ ಯಾಗಾದಿ ಕಾರ್ಯವನ್ನು ಮಾಡಲು ಹೊರಡುತ್ತಾನೆ. ಆದರೆ ಅದು ಮಳೆ ಬಂದು ವಿಘ್ನವಾಗುತ್ತದೆ. ಇದಕ್ಕೆ ಕಾರಣವೇನೆಂದು ಋಷಿಗಳು ಕುಮಾರಧಾರದಲ್ಲಿನ ವಾಸುಕಿಯಲ್ಲಿ ಕೇಳಿದ್ದಾಗ ಗಣಪನನ್ನು ನೆನೆಯದೇ ಇದ್ದದ್ದು ಈ ವಿಘ್ನಕ್ಕೆ ಕಾರಣವಾಯಿತು, ಮಧುವಾಹಿನಿಯ ತಟಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಿ ಎನ್ನುತ್ತಾರೆ. ಅದರಂತೆ ಮಧುವಾಹಿಯ ತಟಕ್ಕೆ ತೆರಳಿ ಅಲ್ಲಿದ್ದ ಶಿವ ದೇವಾಲಯದ ಗೋಡೆಯ ಮೇಲೆ ಗಣಪನ ಚಿತ್ರ ಬರೆದು ಪೂಜಿಸಿದರು. ಇದರಿಂದ ತಲೆದೋರಿದ ಸಮಸ್ಯೆ ದೂರವಾಗಿ ಯಾಗಾದಿಗಳನ್ನು ಪೂರ್ಣ ಮಾಡಲಾಯಿತು ಎಂದಿದೆ.
ಇನ್ನು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬ್ರಹ್ಮಾಂಡ ಪುರಾಣದಲ್ಲಿ ಕ್ಷೇತ್ರಕ್ಕೂ ತುಳುನಾಡಿನ ಸೃಷ್ಟಿಗೆ ಕಾರಣನಾದ ಭೃಗು ಕುಲ ಪರಶುರಾಮನ ನಡುವಿನ ಸಂಬಂಧ ಕುರಿತು ಮೆಲುಕು ಹಾಕುತ್ತದೆ. ಪರಶುರಾಮನು ಕ್ಷತ್ರಿಯರನ್ನೆಲ್ಲ ವಧಿಸಿ ತಾನು ಪಡೆದ ಭೂಮಿಯನ್ನೆಲ್ಲ ಬ್ರಾಹ್ಮಣರಿಗೆ ದಾನ ಮಾಡಿ ಕನ್ಯಾಕುಮಾರಿಯಿಂದ ಗೋಕರ್ಣದ ವರೆಗೆ ಹೊಸ ನೆಲೆಯನ್ನು ಸೃಷ್ಟಿಸಿ, ದಕ್ಷಿಣದಿಂದ ಉತ್ತರಕ್ಕೆ ಸಂಚರಿಸಿ ಅಲ್ಲಲ್ಲಿ ಪುಣ್ಯಕ್ಷೇತ್ರಗಳನ್ನು ನಿರ್ಮಿಸಿದನು. ಅದರಂತೆ ಮಧುಪುರದಲ್ಲಿ ದೇವಾಲಯದೊಂದಿಗೆ ವಿಘ್ನೇಶ್ವರನ ಪ್ರತಿಷ್ಠೆಯನ್ನು ಮಾಡಿ ಅಪ್ಪಕಜ್ಜಾಯ ಮೊದಲಾದ ನೈವೇದ್ಯಗಳಿಂದ ಶಾಶ್ವತ ಪೂಜೆ ನಡೆಯುವಂತೆ ಮಾಡಿದನು' ಎಂದಿದೆ.
ಇನ್ನು ಕಾಸರಗೋಡಿನ ಪ್ರಾಚೀನ ರಾಜಕೀಯ ಸಾಂಸ್ಕೃತಿಕ ಧಾರ್ಮಿಕ ವಿಚಾರದ ಮೇಲೆ ಬೆಳಕು ಚೆಲುವ ಮಧ್ವವಿಜಯದಲ್ಲಿ ಮದವೂರಿನ ಉಲ್ಲೇಖ ಇರಲೇಬೇಕು. ಕ್ರಿ.ಶ. 11ನೇ ಶತಮಾನದ ಕಾವುಗೋಳಿಯ ತ್ರಿವಿಕ್ರಮ ಪಂಡಿತಾಚಾರ್ಯನ ಮಗ ನಾರಾಯಣ ಪಂಡಿತನು ಬರೆದ 'ಮಧ್ವವಿಜಯ'ದಲ್ಲಿ ಕುಂಬಳೆ ಇಮ್ಮಡಿ ಜಯಸಿಂಹನ ಅಪೇಕ್ಷೆಯಂತೆ ಮಧ್ವಾಚಾರ್ಯರು ಈ ಸೀಮೆಗೆ ಬಂದಾಗ ಮಧೂರು ದೇವಾಲಯವನ್ನು ಸಂದರ್ಶಿಸಿ ಅನಂತರ ವಿಷ್ಣುಮಂಗಲಕ್ಕೆ ತೆರಳಿದರೆಂಬ ಉಲ್ಲೇಖವಿದೆ. ಅದರಲ್ಲಿ ಶ್ರೀ ಮದನಂತೇಶ್ವರನ ಬಗ್ಗೆ ಮತ್ತು ಶ್ರೀ ಕ್ಷೇತ್ರದ ಬಗ್ಗೆಯೂ ಉಲ್ಲೇಖವಿದೆ. ಇವು ಶ್ರೀ ಕ್ಷೇತ್ರ ಮಧೂರಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತದೆ.
ಪುರಾಣ ಇತಿಹಾಸ ಕಥೆಗಳಲ್ಲಿ ಕಾರ್ಣಿಕ ಮಾಯೆಯಿಂದ ಕಂಗೊಳಿಸುವ ಶ್ರೀ ದೇವಾಲಯದ ಹುಟ್ಟು ಜಾನಪದ ಕಥೆಗಳ ಸಂಗ್ರಹದಲ್ಲೂ ಇದೆ. ಇಂದಿಗೂ ಇದು ಈ ಕಥೆ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವವರ ಬಾಯಿಂದ ಕೇಳಬಹುದು.
ಈ ಹಿಂದೆ ಮಧೂರು ಕ್ಷೇತ್ರದಿಂದ ಕೆಲವೇ ಕಿಲೋ ಮೀಟರ್ ದೂರದ ಉಳಿಯತಡ್ಕದಲ್ಲಿ ಮದರು ಎನ್ನುವ ಹರಿಜನ ಸ್ತ್ರೀಯು ಕತ್ತಿಯಿಂದ ಹುಲ್ಲನ್ನು ಸಂಗ್ರಹಿಸು ಕಾಯಕದಲ್ಲಿ ನಿರತಳಾಗಿದ್ದಳು, ಆಕಸ್ಮಿಕವಾಗಿ ಕೈಲ್ಲಿದ್ದ ಕತ್ತಿಯು ಕಲ್ಲಿಗೆ ತಾಗಿ ಜೋರಾಗಿ ರಕ್ತ ಒಸರಲು ಪ್ರಾರಂಭಿಸಿತು. ಭಯ ಚಕಿತಳಾದ ಸ್ತ್ರೀ ಇದನ್ನು ಸೀಮೆಯ ರಾಜನಲ್ಲಿ ಮುಟ್ಟಿಸಿದಳು. ಇದು ಸಾಮಾನ್ಯ ಕಲ್ಲಲ್ಲ ದೈವಿಕ ಶಕ್ತಿಯ ಚೈತನ್ಯ ರೂಪವೆಂದು ಅರಿತ ರಾಜನು ವೈದಿಕರು ಮತ್ತು ಊರಿನ ಸಮಸ್ತರ ಸಾಕ್ಷಿಯಾಗಿ ಮಧುವಾಹಿನಿಯ ಪುಣ್ಯ ತಟದಲ್ಲಿ ಹುಲಿ ದನ ತುಂಬಾ ಸ್ನೇಹದಿಂದ ಇದ್ದ ಸ್ಥಳದಲ್ಲಿ ಆ ಕಲ್ಲನ್ನು ಪ್ರತಿಷ್ಠೆ ಮಾಡಿ ಆಲಯವನ್ನು ಕಟ್ಟಿದ. ಅದು ಮುಂದೆ ಮದನಂತೇಶ್ವರ ಅರ್ಥಾತ್ ಶಿವ ದೇವಾಲಯವಾಗಿ ಪ್ರಖ್ಯಾತಿ ಪಡೆಯಿತು. ಆರಂಭದಲ್ಲಿ ಶಿವ ಸಾನಿಧ್ಯ ಮಾತ್ರವೇ ಇದ್ದು ಆ ಬಳಿಕ ಸಿದ್ಧಿ ವಿನಾಯಕನು ಇಲ್ಲಿ ಹೇಗೆ ನೆಲೆಸಿದ ಎನ್ನುವ ಕಥೆ ಪುರಾಣಗಳಲ್ಲಿ, ಜಾನಪದ ಕಥೆಗಳಲ್ಲಿಯೂ ಅದರಂತೆ, ಶಿವ ದೇವರ ಪೂಜಾದಿ ಕ್ರಮಗಳನ್ನು ತಂತ್ರಿಗಳ ನಿರ್ದೇಶನದಂತೆ ಮಾಡಲಾಗುತ್ತಿತ್ತು.
ವಾರ್ಷಿಕೋತ್ಸವದ ದಿನದಂದು ತಂತ್ರಿಗಳು ಅವ್ರ ಪರಿವಾರ ಮತ್ತು ಮಕ್ಕಳು ಈ ಪೂಜಾದಿ ಕಾರ್ಯದಲ್ಲಿ ಭಾಗವಹಿಸುವುದು ಸ್ವಾಭಾವಿಕವಾಗಿತ್ತು. ಹೀಗೆ ಹಿರಿಯರು ಪೂಜಾದಿ ಕಾರ್ಯದಲ್ಲಿ ಮಗ್ನ ನಾಗಿರುವಾಗ ಮಕ್ಕಳು ತಮ್ಮ ಬಾಲ ಕ್ರೀಡೆಯನ್ನು ದೇವಾಲಯದ ಒಳಗೆ ಆಡುವ ಮನಸು ಮಾಡಿ ದೇವಾಲಯದ ಒಂದು ಬದಿಯ ಗೋಡೆಯಲ್ಲಿ ಗಣಪನ ಚಿತ್ರವನ್ನು ಬರೆದು ಅದಕ್ಕೆ ಪೂಜಾದಿ ಕ್ರಮಗಳನ್ನು ನೆರವೇರಿಸಿದರು. ಹಿರಿಯರು ಪೂಜಾಕಾರ್ಯಕ್ಕೆ ತಂಡ ಅಕ್ಕಿಯ ಹುಡಿಯನ್ನು ನೀರಿನೊಂದಿಗೆ ಬೆರೆಸಿ ಉಂಡೆ ಕಟ್ಟಿ ದೇವರಿಗೆ ಅರ್ಪಿಸಿದರು. ಗೋಡೆಯ ಮೇಲೆ ಮೂಡಿದ ಚಿತ್ರ ಕೇವಲ ಚಿತ್ರವಾಗಿರದೆ ಅದು ಹತ್ತೂರನ್ನು ಕಾಯುವ ಶಕ್ತಿಯಾಗಿತ್ತು. ಮಕ್ಕಳ ಶ್ರದ್ದಾ ಭಕ್ತಿಗೆ ಗಣಪ ಸಂಪೂರ್ಣನಾಗಿ ಒಲಿದಿದ್ದಾನೆ ಎಂದು ತಂತ್ರಿಯವರಿಗೆ ತಿಳಿಯಿತು.
ಮುಂದೆ ಅದಕ್ಕೆ ಪೂಜಾದಿ ಕಾರ್ಯವನ್ನು ನಡೆಸಿದರೆಂದು, ಮಕ್ಕಳು ಮಾಡಿದ "ಹಸಿ ಅಕ್ಕಿ ಹುಡಿಯಿಂದ ಕಲಸಿದ ಉಂಡೆ"ಯ ಪ್ರತೀಕವಾಗಿ ಬೆಲ್ಲ ಸೇರಿಸದ ಸಂಪೂರ್ಣ ಬೇಯದ 'ಪಚ್ಚಪ್ಪ"ದ ನೈವೇದ್ಯ ಅಂದಿನಿಂದ ಆರಂಭವಾಯಿತೆಂದು, ಮುಂದಿನ ದಿನಗಳಲ್ಲಿ ಸಿಹಿ ಅಪ್ಪಕಜ್ಜಾಯ, ಮೋದಕ ಮುಂತಾದ ಗಣಪನಿಗೆ ಇಷ್ಟವಾದ ಸೇವೆಗಳು ಆರಂಭವಾಯಿತೆಂದು ಇದೆ. ಮುಂದೆ ಚಿತ್ರದ ಮೇಲೆ ಕಡುಶರ್ಕರಪಾಕದಿಂದ ಈ ಚಿತ್ರದ ಉಬ್ಬು ಶಿಲ್ಪವನ್ನು ಮಾಡಿದರೆಂದೂ, ಅಲ್ಲಿಗೆ ಚಿಕ್ಕ ಬಾಗಿಲಿನಿಂದ ಕೂಡಿದ ಗುಡಿಯನ್ನು ನಿರ್ಮಿಸಿದರೆಂದೂ ಜಾನಪದ ಇತಿಹಾಸವಿದೆ.
ಮದರು ಎನ್ನುವ ಸ್ತ್ರೀಯಿಂದ ಮಧರು ಎಂದು ಕರೆಯಲ್ಪಡುತ್ತಿದ್ದ ಈ ಊರು ಕ್ರಮೇಣವಾಗಿ ಮುಂದೆ ಮಧೂರು ಆಯಿತು. ಮಧೂರು ಕ್ಷೇತ್ರದ ವಾಸ್ತು ಶೈಲಿಯು ಪ್ರಾಚೀನ ಕನ್ನಡ ಮಲಯಾಳಂ ವಾಸ್ತು ಶೈಲಿಯನ್ನು ಹೋಲುತ್ತದೆ. ದೇವಾಯಲಯವನ್ನು ಅಡೂರು ಮಾದರಿಯ ಗಜಪೃಷ್ಟ ಆಕೃತಿಯಲ್ಲಿ ದೇವಾಯಲವಿದೆ. ಶ್ರೀ ದೇವಾಯದಲ್ಲಿ ಪ್ರಧಾನವಾಗಿ ಮದನಂತೇಶ್ವರ ಮತ್ತು ಸಿದ್ದಿವಿನಾಯಕನನ್ನು ಪೂಜಿಸಿದರೆ ಕಾಶಿ ವಿಶ್ವನಾಥ, ಶಾಸ್ತ, ದುರ್ಗೆ, ಸುಬ್ರಹ್ಮಣ್ಯ, ಹಂಸರೂಪಿ ಸದಾಶಿವ, ವೀರಭದ್ರ ಸ್ವಾಮಿ ಎನ್ನುವ ಉಪದೇವರ ಗುಡಿಗಳನ್ನು ಇಲ್ಲಿ ನಾವು ಕಾಣಲು ಸಿಗುತ್ತದೆ. ಶ್ರೀ ಕ್ಷೇತ್ರದಲ್ಲಿ ಅಪ್ಪ, ಪಂಚಕಜ್ಜಾಯ, ರುದ್ರಾಭಿಷೇಕ, ಪಚ್ಚಪ್ಪ, ಗಣಪತಿ ಹೋಮ, ಮೋದಕ ಸೇರಿ ಮುಂತಾದ ಸೇವೆಗಳು ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ.
ಶ್ರೀ ಸನ್ನಿಧಿಯಲ್ಲಿರುವ ಇತಿಹಾಸ ಕುರುಹುಗಳು:
ದೇವಾಲಯದಲ್ಲಿ ಕೆಳದಿ ಅರಸರ 16ನೇ ಶತಮಾನಕ್ಕೆ ಕಾಲಕ್ಕೆ ಸೇರಿದ ಎರಡು ವೀರಗಲ್ಲುಗಳನ್ನು ನಾವು ಕಾಣಬಹುದಾಗಿದೆ. ಒಂದು ಬೆಡಿ ಕಟ್ಟೆಯ ಬಳಿ ಇದ್ದರೆ, ಮತ್ತೊಂದು ದೇವಾಲಯದ ರಾಜಾಂಗಣದ ಈಶಾನ್ಯ ಭಾಗದಲ್ಲಿದೆ.
ಯಕ್ಷಗಾನ ಮತ್ತು ಮಧೂರು ಶ್ರೀ ಕ್ಷೇತ್ರಕ್ಕೂ ಅವಿನಾಭಾವ ಸಮಂಧವಿದೆ. ಯಕ್ಷಾಗಾನ ಪಿತಾಮಹ ಎಂದೆನಿಸಿಗೊಂಡ ಪಾರ್ತಿಸುಬ್ಬ ಗಣಪನ ಪರಮ ಭಕತನಾಗಿದ್ದ. ಆತ ಗಣಪನ ಅಭಿಷೇಕಕ್ಕಾಗಿ ನೀಡಿದ ಧಾರಾ ಬಟ್ಟಲು ಇಂದಿಗೂ ನಾವು ಕಾಣಬಹುದು ಮಾತ್ರವಲ್ಲದೆ, ಪಾರ್ತಿಸುಬ್ಬನ ಯಕ್ಷಗಾನ ಸ್ತುತಿಯ ಆರಂಭದಲ್ಲಿ ಮಧೂರು ದೇವ್ರ ಸ್ತುತಿಯನ್ನು ನಾವು ನೋಡಬಹುದಾಗಿದೆ.
ಚಂದ್ರ ಶಾಲೆಯ ಮಾಡಿನ ಮೇಲೇರುವ ಖಡ್ಗದ ಗುರುತನ್ನು ನಾವು ಇಂದಿಗೂ ನೋಡಬಹುದು. ಇದು ಟಿಪ್ಪು ಸುಲ್ತಾನ 1784 ರಲ್ಲಿ ಮಧೂರು ದೇವಾಲಯವನ್ನು ಕೆಡವುತ್ತಾ ಮುಂದೆ ಬಂದಾಗ ದಾಹವಾಗುತ್ತೆ. ಬಾಯಾರಿದಾಗ ಆತ ಅಲ್ಲೇ ಇದ್ದ ರಸ ಬಾವಿಯ ನೀರನ್ನು ಕುಡಿದು ಮನ ಪರಿವರ್ತನೆ ಅಯಿತು. ನನ್ನ ಆಕ್ರಮಣವನ್ನು ನಿಲ್ಲಿಸಿ ತಾನು ಬಣದ ಕುರುಹಾಗಿ ಖಡ್ಗ ಗುರುತನ್ನು ಮಾಡಿದ ಎಂದು ಇತಿಹಾಸ ಇದೆ.
ವಿದೇಶಿ ವಿದ್ವಾಂಸರು ಕೂಡ ಮಧೂರು ದೇವಾಲದ ವಾಸ್ತು ಶೈಲಿಯನ್ನು ಕಂಡು ಬೆರಗಾಗಿದ್ದಾರೆ. ಅಮೇರಿಕಾದ ವಿಸ್ಸೋರಿ ವಿವಿ ಅಧ್ಯಾಪಕನಾದ ವಿಲಿಯಂ ಎ ನೊಬೆಲ್ ಈ ದೇವಾಲಯಕ್ಕೆ ಭೇಟಿ ನೀಡಿದ್ದ. ಆತ ಮೂರು ಅಂತಸ್ತಿನ ಅಪರೂಪದ ವಾಸ್ತು ವಿನ್ಯಾಸವನ್ನು ನೋಡಿ ಈ ದೇವಾಲಯವು ಮೇರು ವಾಸ್ತು ಶೈಲಿಯನ್ನು ಹೊಂದಿದೆ, ಇದು ಕೇರಳದ ಪ್ರಾಚ್ಯವಸ್ತು ಕಾಲ ಶೈಲಿಯಲ್ಲಿಯೇ ವಿಶೇಷ ಎಂದು ತನ್ನ ದಾಖಲೆಗಳಲ್ಲಿ ಉಲೇಖಿಸಿದ್ದಾನೆ.
ಮೂಡಪ್ಪ ಸೇವೆ:
ಶ್ರೀ ಕ್ಷೇತ್ರದಲ್ಲಿ ನಡೆಯುವ ಪೂಜಾದಿ ಕ್ರಮದಲ್ಲಿ ಅತೀ ಪ್ರಸಿದ್ಧಿ ಪಡೆದಿರುವ ಸೇವೆ ಎಂದರೆ ಅದು ಉದಯಾಸ್ತಮಾನ ಸೇವೆ ಮತ್ತು ಪಚ್ಚಪ್ಪ ಸೇವೆ ಗಣಪನಿಗೆ ಪ್ರಿಯವಾದ ಸೇವೆ ಎಂದು ಎನಿಸಿಗೊಂಡಿದೆ. ಉದಯಾಸ್ತಮಾನ ಸೇವೆಯನ್ನು ಶುಭ ಕಾರ್ಯ ನಡೆಸುವ ಮೊದಲು ಸಂಕಲ್ಪ ಮಾಡುವುದು, ಇಷ್ಟಾರ್ಥಗಳು ಈಡೇರಿದ ಬಳಿಕ ಸೇವೆಯನ್ನು ಮಾಡಿಸುವುದು ಪ್ರಮುಖ ಎಂದೆನಿಸಿಕೊಂಡಿದೆ. ಮಧೂರು ಎಂದ ಕೂಡಲೇ ನೆನಪಾಗುವ ಅಪ್ಪ ಕಜ್ಜಾಯ ಭಕ್ತರ ಬಾಯಿಯಿಂದ ನೀರೂರಿಸುವುದು ಸುಳ್ಳಲ್ಲ. ಗಣಪನಿಗೆ ಪ್ರಿಯವಾದ ತಿನಿಸು ಅವನಿಗೆ ಸಮರ್ಪಣೆ ಮಾಡಿ ಪ್ರಸಾದ ರೂಪದಲ್ಲಿ ನೀಡುವ ಪದ್ಧತಿಯ ಹಿನ್ನಲೆ ನಿಮಗೆ ತಿಳಿದಿದೆ. ಗಣಪನಿಗೆ ಅಪ್ಪ, ಉದಯಾಸ್ತಮಾನ, ಸಹಸ್ರ ಅಪ್ಪ, ಮೂಡಪ್ಪ ಎಂಬೀ ಬಗೆಯಾದ ಸೇವೆ ನಡೆಯುತ್ತದೆ. ಅದರಲ್ಲೂ ಮೂಡಪ್ಪ ಮಧೂರಿನಲ್ಲಿ ಈ ಬಾರಿ ನಡೆಯಲಿರುವ ಮೂಡಪ್ಪ ಸೇವೆಯ ಬಗೆ ತಿಳಿಯಲೇಬೇಕು.
ಮಧೂರು ಶ್ರೀ ಮಹಾಗಣಪತಿಗೆ ನಡೆಯುವ ಸೇವೆಗಳಲ್ಲಿ ಅತೀ ಮಹತ್ವದ ಹಾಗೂ ಅತ್ಯಪೂರ್ವವಾದುದು 'ಮೂಡಪ್ಪ'ವೆಂಬುದರಲ್ಲಿ ಎರಡು ಮಾತಿಲ್ಲ. ಇದು ಅತ್ಯಂತ ಶ್ರದ್ದಾ ಭಕ್ತಿಯಿಂದ ನಡೆಯುವ ಪೂಜೆಯಾಗಿದೆ. ಸೀಮೆಯ ಇತರ ತೀರ್ಥ ದೇವಾಲಯವಾದ ಅಡೂರು, ಕಾವು ಕಣಿಪುರದಲ್ಲಿ ವಿಶೇಷ ಪೂಜಾದಿ ಕ್ರಮ ನಡೆಸಿ ಅಲ್ಲಿನ ಪ್ರಸಾದವನ್ನು ಸನ್ನಿಧಿಗೆ ತಂದು ಬಳಿಕ ಸೀಮೆಯ ಪ್ರಧಾನ ದೇವಸ್ಥಾನವಾದ ಪೈಕ, ಬೆದ್ರಡ್ಕ, ಅಂಬಿಲಡ್ಕ, ಪುತ್ತಿಗೆ ದೇವಾಲಯದಲ್ಲಿ ಸೇವೆ ನಡೆಸಿ ಪ್ರಾರ್ಥನೆ ಸಲ್ಲಿಸಬೇಕು. ಆ ಬಳಿಕ ಮಧೂರಿನಲ್ಲಿ ಧ್ವಜಾರೋಹಣದೊಂದಿಗೆ ಸಂಭ್ರಮದೊಂದಿಗೆ ಐದು ದಿನಗಳ ವಿಶೇಷ ಉತ್ಸವ ಶುರುವಾಗುತ್ತೆ. ನಾಲ್ಕನೆಯ ದಿನದ ಉತ್ಸವದ ಬಳಿಕ ಶ್ರೀ ಸಿದ್ಧಿವಿನಾಯಕನಿಗೆ ಈ ಚರಿತ್ರಾರ್ಹ ಸೇವೆ ಸಲ್ಲಿರುವುದು ಈ ಹಿಂದೆ ನಡೆದು ಕೊಂಡು ಬಂದ ಆಚರಣೆ.
ಶ್ರೀ ಮಹಾಗಣಪತಿಯ ಗರ್ಭಗೃಹದೊಳಗೆ ಕಬ್ಬಿನ ಬೇಲಿಯನ್ನು ರಚಿಸಿ ಅದರೊಳಗೆ ಹದಿನಾರು ಮುಡಿ ಅಕ್ಕಿಯ ಅಪೂಪ ಅಥವಾ ಅಪ್ಪವನ್ನೂ, ಒಂದು ಮುಡಿ ಅಕ್ಕಿಯ ಪಚ್ಚಪ್ಪವನ್ನೂ, ನೂರ ಎಂಟು ತೆಂಗಿನಕಾಯಿಗಳ ಅಷ್ಟದ್ರವ್ಯವನ್ನೂ ತುಂಬಲಾಗುವುದು. ನಡು ನಡುವೆ ಜೇನು, ಕಲ್ಲು ಸಕ್ಕರೆ, ತುಪ್ಪಗಳನ್ನೂ ಬಳಸಲಾಗುವುದು. ಇವೆಲ್ಲವೂ ವಿಗ್ರಹದ ಜಿಹ್ವಾಗ್ರದ ವರೆಗೆ ಅವರಿಸುವುದು. ಫಲಪುಷ್ಪಗಳಿಂದ ಅಲಂಕರಿಸಿ, ಪೂಜಿಸಿ ಪ್ರಾರ್ಥಿಸಿ ಕವಾಟ ಬಂಧನ ಮಾಡಲಾಗುವುದು.
ಮರುದಿನ ಪೂರ್ವಾಹ್ನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದು ವೇದಘೋಷಗಳೊಂದಿಗೆ ಕವಾಟೋದ್ಘಾಟನೆಯಾಗುವುದು. ಈ ಕ್ಷಣ ಗಣಪನ ದರ್ಶನವು ಜೀವನದಲ್ಲಿ ಅಪರೂಪದ ಕ್ಷಣವೇ ಆಗಿರುತ್ತದೆ. ಪರಮಾತ್ಮನನ್ನು ನೋಡಿದ ಕಣ್ಣುಗಳು ಧನ್ಯತೆಯ ಅನುಭೂತಿಯನ್ನು ಪಡೆಯುತ್ತದೆ. ದೇವರಿಗೆ ಅರ್ಪಿಸಿದ ಅಪ್ಪ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ. ರಾತ್ರಿ ಉತ್ಸವ ನಡೆದು ಅವಭೃತ ಸ್ನಾನ ಮಂತ್ರಾಕ್ಷತೆಗಳೊಂದಿಗೆ ಈ ಮಹಾ ಸೇವಾ ಭಾಗ್ಯವು ಪೂರ್ಣಗೊಳ್ಳುವುದು. ಸೇವಾವಧಿಯ ಐದೂ ದಿವಸಗಳಲ್ಲಿ ಶ್ರೀ ಮದನಂತೇಶ್ವರ ಹಾಗೂ ಸಿದ್ಧಿವಿನಾಯಕರಿಗೆ ವಿಶೇಷ ಕಲಶಾಭಿಷೇಕ, ವಿಶೇಷ ಅರ್ಚನೆ, ಹೋಮಗಳು, ನೈವೇದ್ಯ ಇತ್ಯಾದಿ ಸೇವೆಗಳೂ, ವೇದ ಪಾರಾಯಣ, ಪುರಾಣ ಪ್ರವಚನಗಳೂ, ಮಹಾ ಅನ್ನಸಂತರ್ಪಣೆಯಿಂದ ಜರಗುತ್ತದೆ.
ಕ್ಷೇತ್ರದಲ್ಲಿ ವರ್ಷದ ವಿಶೇಷ ಆಚರಣೆಗಳೆಂದರೆ ಧವನ ಪೂಜೆ, ಗಣೇಶ ಚತುರ್ಥಿ, ನವರಾತ್ರಿ ಉತ್ಸವ, ಧನು ಪೂಜೆ, ದೀಪಾವಳಿ, ಷಷ್ಠಿ, ಶಿವರಾತ್ರಿ, ವಸಂತ ಪೂಜೆ, ವಾರ್ಷಿಕ ಉತ್ಸವಗಳು ವಾರ್ಷಿಕವಾಗಿ ನಡಯುತ್ತದೆ. ಆದ್ರೆ ಅಷ್ಟಬಂಧ ಬ್ರಹ್ಮಕಲಶ ಮತ್ತು ಮೂಡಪ್ಪ ಸೇವೆಯು ಅಪರೂಪದಲ್ಲಿ ಅಪರೂಪದ ದಿನಗಳಲ್ಲಿ ಮಾತ್ರ ನಡೆಯುವ ಆಚರಣೆ. ಬ್ರಹ್ಮಕಲಶ ಸಾಮಾನ್ಯವಾಗಿ ಎಲ್ಲರೂ ಕೇಳಿರುವ ಮಾತು ಆದ್ರೆ ಮೂಡಪ್ಪ ಸೇವೆಯನ್ನು ಜನರು ಕೇಳಿರುವುದು ಮತ್ತು ನೋಡಿರುವುದು ತುಂಬಾನೇ ಅಪರೂಪವಾಗಿದೆ.
ಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಗಳ ಉಲ್ಲೇಖಗಳು:
1784 ಟಿಪ್ಪುವಿನ ದಾಳಿಯ ಸಮಯದಲ್ಲಿ ಮಾಯಿಪ್ಪಾಡಿ ಅರಸರು ದೇವಾಲಯಕ್ಕೆ ಯಾವುದೇ ಅಪಾಯ ಎದುರಾಗದಿರಲಿ ಎಂದು ಗಣಪನಿಗೆ ಹರಕೆಯನ್ನು ಹೊತ್ತಿದ್ದರು. ಟಿಪ್ಪು ಆರಂಭದಲ್ಲಿ ದೇವಾಲಯದ ಕೆಡುವ ಉತ್ಸಹದಲ್ಲೂ ಇದ್ದರು ತಡ ಬಳಿಕ ಆ ನಿರ್ಧಾರದಿಂದ ಹಿಂದೆ ಸರಿದು ತನ್ನ ರಾಜಧಾನಿಯತ್ತ ನಡೆದ. ದೇವಾಲಯ ಮತ್ತು ರಾಜ್ಯ ರಕ್ಷಣೆಯಾದ ಕಾರಣ 1795ರಲ್ಲಿ ಮೂಡಪ್ಪ ಸೇವೆಯನ್ನು ಮಾಡಲಾಗಿತ್ತು. ಇದು ಮೊದಲ ಮೂಡಪ್ಪ ಸೇವೆಯೆಂದು ಇತಿಹಾಸ ಪುಟಗಳಲ್ಲಿ ದಾಖಲೆಯಾಗಿದೆ.
1797 ರಲ್ಲಿ ಕೂಡ್ಲು ದೊಡ್ಡ ಸುಬ್ಬಯ್ಯ ಶ್ಯಾನುಭೋಗರ ನೇತೃತ್ವದಲ್ಲಿ ಎರಡನೇ ಮೂಡಪ್ಪ ಸೇವೆಯು ಜರಗಿತು.
1962 ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ಏಪ್ರಿಲ್ 6 ರಿಂದ 10ರ ತನಕ ನಡೆಯಿತು.
1965 ಫೆಬ್ರವರಿ 19 ರಿಂದ 48 ದಿನಗಳ ಕಾಲ ಶ್ರೀ ಸನ್ನಿಧಿಯಲ್ಲಿ ಶ್ರೀ ಶೃಂಗೇರಿ ಜಗದ್ಗುರು ಸಮುಖದಲ್ಲಿ ಸಿದ್ಧಿವಿನಾಯಕನಿಗೆ ಕೋಟಿ ನಾಮಾರ್ಚನೆ ನಡೆಯಿತು.
1982 ಅಕ್ಟೋಬರ್ 17ರಂದು ಶ್ರೀ ಮಹಾಗಣಪತಿ ಯಜ್ಞವೂ ಅದೇ ತಿಂಗಳ 31ರಂದು ನವಗ್ರಹ ಯಜ್ಞವೂ ಜರಗಿತು.
1982 ದಶಂಬರ 28ರಿಂದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಂದ್ರ ಭಾರತಿಗಳ ಸನ್ನಿಧಿಯೊಂದಿಗೆ ರುದ್ರ ಯಾಗವು ಜರಗಿತು.
1986 ಜನವರಿ 21ರಿಂದ 28ರ ವರೆಗೆ ಋಕ್ ಸಂಹಿತಾ ಯಾಗ ಹಾಗೂ ಮಹಾಗಣಪತಿ ಯಾಗಗಳು ನಡೆದುವು.
1992ರಲ್ಲಿ ಬಹಳ ಅದ್ದೂರಿಯಾಗಿ ಅಷ್ಟಬಂಧ ಬ್ರಹ್ಮ ಕಲಶ ಮತ್ತು ಮೂಡಪ್ಪ ಸೇವೆ ಜರುಗಿತು.
ಈ ರೀತಿಯಾಗಿ ಮಧೂರು ದೇವಾಲಯದಲ್ಲಿ ಮಹತ್ವ ಎನಿಸಿಕೊಂಡಿರುವ ಪೂಜಾದಿ ಕ್ರಮಗಳು ಜರುಗಿದವು. ಇದೀಗ ದೇವಾಲಯದಲ್ಲಿ ನೂತನ ಪರ್ವ ಕಾಲ ಸನಿಹಿಸುತ್ತಿದೆ ಎಂದೇ ಹೇಳಬಹುದು. ದೇವಾಲಯ ಕೋಟ್ಯಂತರ ವೆಚ್ಚದಲ್ಲಿ ಜೀರ್ಣೋದ್ದಾರಗೊಂಡು, ಹಲವು ವರುಷಗಳ ವಿರಾಮದ ಬಳಿಕ ಮಧೂರು ಶ್ರೀ ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶ ಮತ್ತು ಮೂಡಪ್ಪ ಸೇವೆ 2025 ಮಾರ್ಚ್ 27 ರಿಂದ ಏಪ್ರಿಲ್ 7 ರ ತನಕ ವಿವಿಧ ವೈದಿಕ ಧಾರ್ಮಿಕ ಸಾಂಸ್ಕೃತಿಕ ಆಚರಣೆಗಳು ನಡೆಯುತ್ತಿವೆ. ಈ ಪುಣ್ಯವನ್ನು ಸಹಸ್ರಾರು ಕಣ್ಣುಗಳು ಕಣ್ತುಂಬಿಕೊಳ್ಳುತ್ತಿವೆ.
- ಗಿರೀಶ್ ಪಿಎಂ, ಕಾಸರಗೋಡು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ