ಕನ್ನಡ, ಸಂಸ್ಕೃತ ಭಾಷೆಯ ಪ್ರವೀಣರಾದ ಡಾ॥ಪಿ ಎಸ್ ರಾಮಾನುಜಂ ಅವರು ಹಿರಿಯ ಪೊಲೀಸ್ ಅಧಿಕಾರಿಗಳು ಎಂಬುದು ವಿಶೇಷ. ಚಾಮರಾಜನಗರ ಹತ್ತಿರ ಬ್ಯಾಡಮೂಡ್ಲು ಹಳ್ಳಿಯಲ್ಲಿ ತಾರೀಕು 16-10-1941 ರಂದು ಜನಿಸಿದರು. ತಮ್ಮ ಗ್ರಾಮದಲ್ಲಿ ಪ್ರಾಥಮಿಕ ಅಭ್ಯಾಸ ಮಾಡಿ, ಚಾಮರಾಜ ನಗರದಲ್ಲಿ ಇಂಟರ್ ಮಿಡಿಯಟ್ ಪಾಸು ಮಾಡಿದರು. ನಂತರ ಮೈಸೂರಿನಲ್ಲಿ ಮಹಾರಾಜಾ ಕಾಲೇಜಿನಲ್ಲಿ ಸಂಸ್ಕೃತ ಆನರ್ಸ್ ಮತ್ತು ಎಂ.ಎ ಪದವಿ ಪ್ರಥಮ ಶ್ರೇಣಿಯಲ್ಲಿ ಪಾಸಾದರು.
ಬಾಲ್ಯದಲ್ಲಿಯೇ ಸಂಸ್ಕೃತ, ಸಾಹಿತ್ಯ, ದಶ೯ನ,ಹಳೆಗನ್ನಡ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿ ಕನ್ನಡ ಪಂಡಿತ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀಣ೯ರಾದರು. ಗುರುಕುಲ ಪದ್ದತಿಯಲ್ಲಿ ಅಧ್ಯಯನ ಮಾಡಿ, ಪಾಂಡಿತ್ಯ ಗಳಿಸಿ, ಅಖಿಲ ಭಾರತ ಪೊಲೀಸ್ ಸೇವೆಯನ್ನು ಆಯ್ಕೆ ಮಾಡಿಕೊಂಡರು. ವೃತ್ತಿಯಲ್ಲಿಯೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ಸೃಜನಶೀಲತೆ ಬೆಳೆಸಿದರು.
ವೃತ್ತಿಯ ಜೊತೆಗೆ, ಸಮಾನಂತರವಾಗಿ ಸಾಹಿತ್ಯಕ ವ್ಯಕ್ತಿತ್ವವನ್ನು ರೂಪಿಸಿದ ಅಧಿಕಾರಿಗಳು. ಯುಜಿಸಿ ಯಲ್ಲಿ ಫೆಲೋಶಿಪ್ ಪಡೆದು, ಮೈಸೂರಿನಲ್ಲಿ ಮಾನಸಗಂಗೋತ್ರಿಯಲ್ಲಿ ವೈಶೇಷಿಕ ದರ್ಶನದ ಮೇಲೆ ಪಿಎಚ್‌ಡಿ ಪದವಿ ಗಳಿಸಿ, ನಂತರ ಅಧ್ಯಯನ ಮಾಡಿ, ವಿಶ್ವವಿದ್ಯಾಲಯದ ಅತ್ಯುನ್ನತ ಪದವಿ ಡಿ.ಲಿಟ್ ಗಳಿಸಿದ ಮಹನೀಯರು.
ಸಂಗೀತದಲ್ಲೂ ಆಸಕ್ತಿ ಹೊಂದಿ, ಹಿರಿಯ ವಿದ್ವಾಂಸರಾದ ಪುಟ್ಟಸ್ವಾಮಿ, ಶಿವರುದ್ರಪ್ಪನವರ ಬಳಿ ಪಿಟೀಲನ್ನು ಅನೇಕ ಕಾಲ ಅಭ್ಯಾಸ ಮಾಡಿದರು. ಸಂಗೀತ ಶಾಸ್ತ್ರದಲ್ಲಿ ಒಬ್ಬ ಚಿಂತಕರಾಗಿ, ಅನೇಕ ಲೇಖನಗಳನ್ನು, ಸಂಗೀತ ಶಾಸ್ತ್ರ ಅಕಾಡೆಮಿ ಪತ್ರಿಕೆಗಳಲ್ಲಿ ಪ್ರಕಟಿಸಿದರು. 1966 ರಲ್ಲಿ ಐಪಿಎಸ್ ಪ್ರವೇಶಿಸಿ, ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿದರು. ಇವರು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾಗಿ ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿದೇ೯ಶಕರಾಗಿ, ಆಯುಕ್ತರಾಗಿ, ಗೃಹ ಸಚಿವಾಲಯದ ಕಾರ್ಯದರ್ಶಿಯಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ, ಆಯುಕ್ತರಾಗಿ ಗೃಹಸಚಿವಾಲಯದ ಕಾರ್ಯದರ್ಶಿಯಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ಪ್ರಥಮ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿದರು. ತದನಂತರ ಪೊಲೀಸ್ ಇಲಾಖೆಯಲ್ಲಿ ಅಡಿಷನಲ್ ಡಿಐಜಿ ಕಾರ್ಯ ನಿರ್ವಹಿಸಿದರು. ಭಾರತ ಸರಕಾರ ಇವರ ಕಾರ್ಯವನ್ನು ಗುರುತಿಸಿ, ಶ್ಲಾಘನೀಯ ಸೇವಾ ಪೊಲೀಸ್ ಪದಕ ನೀಡಿತು.ಅದೇ ರೀತಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾಪದಕ ನೀಡಿ ಗೌರವಿಸಲಾಯಿತು.
ಡಾ॥ ಪಿ ಎಸ್. ರಾಮಾನುಜಂ ಅವರು ತಮ್ಮ ಇಲಾಖೆಯಲ್ಲಿರುವಾಗಲೇ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 30ಕ್ಕೂ ಹೆಚ್ಚು ಮಹತ್ವದ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪನ್ನು ಮೂಡಿಸಿದರು. ಪತ್ರಿಕೆಗಳಲ್ಲಿ ಹಾಸ್ಯದ ಲೇಖನಗಳು, ಕವನ, ಕಥೆ, ಇವರು ಬರೆದು ಪ್ರಖ್ಯಾತರಾದ ಅಧಿಕಾರಿಗಳು. ಪ್ರಬಂಧ, ವಿಮರ್ಶೆ, ಸಂಶೋಧನೆ, ಲಲಿತಪ್ರಬಂಧಗಳನ್ನು ಸಹ ಬರೆದರು. ವಿದ್ವತ್ ಪೂರ್ಣ ಲೇಖನಗಳನ್ನು ಬರೆದು ಸೃಜನಶೀಲ ಸಾಹಿತ್ಯ ರಚಿಸಿ, ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರು.
ಹತ್ತು ಆಯ್ದ ಕವನ ಸಂಕಲನಗಳು, ಒಂದು ಕಾವ್ಯಗಳ ಸಂಕಲನ ಕಥಾಗುಚ್ಛ ಪೌರಾಣಿಕ ಕಥೆಗಳ ಹಾಗೂ ಐತಿಹ್ಯದ ರೋಚಕ ಕಥೆಗಳನ್ನು ಬರೆದರು. ವಿಡಂಬನೆ, ಪ್ರಬಂಧ ಸಹ ರಚಿಸಿದ ಮಹಾನುಭಾವರು. ಅಂಕಣ ಕ್ಷೇತ್ರದಲ್ಲಿ "ನೂರೊಂದು ನೆನಪು" ಬರೆದ ಲೇಖಕರು. ಆತ್ಮ ಚರಿತ್ರೆ ಅಂಶಗಳನ್ನು ಹೊಂದಿರುವ ಸಂಕಲನ ಸ್ವಾನುಭವದ ಸಾಂಸ್ಕೃತಿಕದಿಂದ ಕೂಡಿದ ವಿಶ್ಲೇಷಣೆ ಭಾರತೀಯ ಮೌಲ್ಯಗಳ ವಿಶ್ವರೂಪ ನಿರೂಪಿಸಿದ ಅದ್ಭುತ ಕೃತಿ. ಪ್ರಹಸನಗಳು, ನಾಟಕಗಳನ್ನು ಸಹ ಬರೆದರು. ಅವುಗಳು ದೂರದರ್ಶನದಲ್ಲಿ, ಆಕಾಶವಾಣಿಯಲ್ಲಿ ಅನೇಕ ಬಾರಿ ಬಿತ್ತರಗೊಂಡವು.
ಸಂಶೋಧನೆ, ವಿಮರ್ಶೆಯ ಕೃತಿಗಳು ಹೊರಬಂದವು. ಪೊಲೀಸ್ ಕೈಪಿಡಿ ಬರೆದರು. ಇವರ ಕಾವ್ಯಗಳು ಶಬ್ಧಕ್ಕಿಂತ ಅರ್ಥದ ವ್ಯಾಪ್ತಿಯನ್ನು ಹೆಚ್ಚು ಹೊಂದಿವೆ. ಜ್ಞಾನಪೀಠವು ಪ್ರತಿವರ್ಷ ಕಾವ್ಯಕ್ಕಾಗಿ ಹೊರತರುವ ಇವರ ಕವನಗಳನ್ನು ಹಿಂದಿ ಭಾಷೆಗೆ ಅನುವಾದಗೊಂಡು ಸಂಪುಟಗಳನ್ನು ಪ್ರಕಟ ಪಡಿಸಿದೆ. ಅನೇಕ ಧ್ವನಿ ಸುರುಳಿ ಬಿಡುಗಡೆಗೊಂಡಿವೆ.
ಡಾ॥ ಪಿ ಎಸ್ ರಾಮಾನುಜಂ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುದ್ದಣ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂಸ್ಕೃತ ವಿದ್ಯಾಲಂಕಾರ ಪ್ರಶಸ್ತಿ ಲಭಿಸಿವೆ. ಹಲವಾರು ವಿದ್ವತ್ ಗೋಷ್ಠಿಯಲ್ಲಿ ಸಹ ಭಾಗವಹಿಸಿ, ಗೌರವಿಸಲ್ಪಟ್ಟ ಮಹನೀಯರು. ಸ್ವಂತಿಕೆ, ಸ್ವೋಪಜ್ಞತೆ, ಹಾಗೂ ಪರಿವಾದರಾಹಿತ್ಯ ರಾಮಾನುಜಂ ಅವರ ಕಾವ್ಯದ ವಿಶಿಷ್ಟತೆ ಇವರ ಬರಹದ ಸೃಜನಶೀಲತೆ. ಹೀಗೆ ಕನ್ನಡದಲ್ಲಿ ಮತ್ತು ಸಂಸೃತದಲ್ಲೂ ಅಪಾರ ಪಾಂಡಿತ್ಯ ಪಡೆದು, ಆಡಳಿತದಲ್ಲೂ ದಕ್ಷತೆ ಸಾಧಿಸಿದ ಕನ್ನಡ ನಾಡಿನ ಅಪರೂಪದ ಹಿರಿಯ ಸಾಹಿತಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ