ಡಾ. ಬಿ. ಆರ್. ಅಂಬೇಡ್ಕರ್ ವಿಶ್ವ ಕಂಡ ಮಹಾನ್ ನಾಯಕ: ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ

Upayuktha
0



ಕಾರವಾರ: ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತ ಮತ್ತು ವಿಶ್ವ ಕಂಡ ಮಹಾನ್ ನಾಯಕರಾಗಿದ್ದು, ಪ್ರತಿಯೊಬ್ಬರೂ ಅವರ ಜೀವನದಿಂದ ಕಲಿಯುವುದು ಸಾಕಷ್ಟಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರಿಯಾ ಹೇಳಿದರು.


ಅವರು ಸೋಮವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ  ನಗರಸಭೆ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ  ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ  ನಡೆದ ಡಾ.ಬಿ.ಆರ್ ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಅಂಬೇಡ್ಕರ್ ಅವರು ಅತ್ಯಂತ ಮೇಧಾವಿಗಳಾಗಿದ್ದು ಶಿಕ್ಷಣವೇ ಶಕ್ತಿ ಎಂದು ತಿಳಿದಿದ್ದು, ಶಿಕ್ಷಣದಿಂದಲೇ ತಮಗೆ ಎದುರಾಗಿದ್ದ ಅನೇಕ ಸವಾಲುಗಳನ್ನು ಮೆಟ್ಟಿ ನಿಂತರು. ಉನ್ನತ ಶಿಕ್ಷಣದಿಂದ  ಮಹಾರಾಜರ ಸರ್ಕಾರದಲ್ಲಿ ತಮಗೆ ಉನ್ನತ ಅವಕಾಶಗಳು ದೊರೆತರೂ ಸಹ ಸಮಾಜದ ಒಳಿತಿಗಾಗಿ ನಿರಾಕರಿಸಿ, ಸಾರ್ವಜನಿರ ಒಳಿತಿಗಾಗಿ ಕಾರ್ಯನಿರ್ವಹಿಸಿದರು ಎಂದರು.


ಸಂವಿಧಾನದಲ್ಲಿ ಸಮಾನತೆಯನ್ನು ಅಳವಡಿಸಿದ ಕಾರಣ ಲಿಂಗಬೇಧವಿಲ್ಲದೇ ಇಂದು ಮಹಿಳೆ ಮತ್ತು ಪುರುಷರಿಗೆ ಎಲ್ಲಾ ರಂಗಗಳಲ್ಲಿ ಸಮಾನವಾದ ಅವಕಾಶಗಳು ದೊರೆಯುವಂತಾಗಿದ್ದು , ಅವರು ಮಹಿಳಾ ಸಬಲೀಕರಣಕ್ಕೆ ಕೂಡಾ ಹೆಚ್ಚಿನ ಒತ್ತು ನೀಡಿದ್ದು,   ಇಂದು ರಾಜ್ಯದಲ್ಲಿ 10 ಕ್ಕೂ ಹೆಚ್ಚು ಮಹಿಳಾ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಆಡಳಿತ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ಅವರು  ದೇಶದಲ್ಲಿ ರಾಜ್ಯಗಳ ನಡುವಿನ ನೀರು ಹಂಚಿಕೆ ಕುರಿತು ಕಾನೂನು ರಚನೆ, ಕಾರ್ಮಿಕ ಕಾನೂನು ರಚನೆ, ಆರ್.ಬಿ.ಐ ಸ್ಥಾಪನೆ  ಸೇರಿದಂತೆ ಅನೇಕ ಮಹತ್ತರವಾದ ಕೊಡುಗೆಗಳನ್ನು ನೀಡಿದ್ದು  ಪ್ರತಿಯೊಬ್ಬರೂ ಅವರ ಎಲ್ಲಾ ಬರಹಗಳನ್ನು , ಸಾಧನೆಗಳನ್ನು ಓದಿ ಅರಿಯುವುದು ಅಗತ್ಯವಿದೆ ಎಂದರು.


ಭಾರತ ಸಂವಿಧಾನವು ದೇಶದ ಪ್ರತಿಯೊಬ್ಬ ಸಾರ್ವಜನಿಕರ ಒಳಿತಿಗಾಗಿ ರಚನೆಯಾಗಿದ್ದು, ಇದರ ಉದ್ದೇಶಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಅಧಿಕಾರಿಗಳು ಮತ್ತು ನೌಕರರದ್ದಾಗಿದ್ದು, ಕಚೇರಿಗಳಲ್ಲಿ ಅಂಬೇಡ್ಕರ್ ಪೋಟೋ ಅಳವಡಿಸಿದರೆ ಸಾಲದು , ಅದರ ಕೆಳಗೆ ಕುಳಿತು ಕರ್ತವ್ಯ ನಿರ್ವಹಣೆಯಲ್ಲಿ ತಪ್ಪುಗಳನ್ನು ಮಾಡದೇ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ, ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್ ಮಾತನಾಡಿ, ದೇಶದ ಸಂವಿಧಾನ ರಚನೆಯ ಕರ್ತೃವಾಗಿದ್ದ ಅಂಬೇಡ್ಕರ್ ಅವರು ದೇಶದ ಎಲ್ಲಾ ನಾಗರೀಕರಿಗೂ ಸಮಾನ ಕಾನೂನು ಮತ್ತು ಹಕ್ಕುಗಳನ್ನು ರೂಪಿಸಿದ್ದಾರೆ ಎಂದರು.


ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದ, ಜಿಲ್ಲಾ ಪ.ಜಾತಿ ಮತ್ತು ವರ್ಗಗಳ ನೌಕರರ ಒಕ್ಕೂಟದ ಅಧ್ಯಕ್ಷ ಜಿ.ಡಿ. ಮನೋಜ್ ಮಾತನಾಡಿ, ಅಂಬೇಡ್ಕರ್ ಯಾವುದೇ ಒಂದು ವರ್ಗ, ಸಮುದಾಯಕ್ಕೆ ಸೀಮಿತವಾಗಿರಲಿಲ್ಲ , ಇಡೀ ಸಮಾಜದ ಏಳಿಗೆಗಾಗಿ ಶ್ರಮಿಸಿದ್ದರು. ಭ್ರಾತೃತ್ವದಿಂದ ಸಮಾನತೆ ಮತ್ತು ಸ್ವಾತಂತ್ರ್ಯ ಎಂದು ನಂಬಿದ್ದರು. 


ಅಧಿಕಾರಹೀನರ ಕುರಿತ ಆಲೋಚನೆ ಮತ್ತು ಲಿಂಗ ಸೂಕ್ಷ್ಮ ಮತೆಯ ಪರಿಕಲ್ಪನೆಯನ್ನು ಹೊಂದುವ ಮೂಲಕ ಜನನಾಯಕರಾಗಿದ್ದರು. ಅವರ ಜೀವನ ತೆರೆದ ಪುಸ್ತಕವಾಗಿದ್ದು, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಸಮಾನತೆ ತರಲು ಕಾರಣರಾಗಿದ್ದು ಶೋಷಿತರ ಪರ ಅವರ ಹೋರಾಡಿದ್ದರು. ಅಂಬೇಡ್ಕರ್ ಅವರ ಸಾಮಾಜಿಕ ಆಲೋಚನೆಗಳು ಸಾಕಾರಗೊಳ್ಳಬೇಕು ಮತ್ತು ಅವರ ಸಮ ಸಮಾಜದ ಆಲೋಚನೆಗಳು ಪ್ರತಿಯೊಬ್ಬರಲ್ಲೂ ಮೂಡುವಂತಾಗಬೇಕು ಎಂದರು.


ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ದೀಪಕ್ ಕುಡಾಳಕರ್ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ದಲಿತರಿಗೆ ಮಾತ್ರವಲ್ಲ ಪ್ರತಿಯೊಂದು ವರ್ಗದವರಿಗೂ ಸೌಲಭ್ಯಗಳನ್ನು ಒದಗಿಸಿದ್ದಾರೆ, ಪ್ರತಿಯೊಬ್ಬರಿಗೂ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಸಂದೇಶಗಳನ್ನು ನೀಡಿದ್ದು, ಶಿಕ್ಷಣದಿಂದ ಮಾತ್ರ ಗುರಿ ಸಾಧನೆ ಸಾಧ್ಯ ಎಂದು ತಿಳಿಸಿದ್ದು, ಅವರನ್ನು ಪ್ರತಿಯೊಬ್ಬರೂ ಪ್ರತಿದಿನವೂ ನೆನೆಯಬೇಕಿದೆ ಎಂದರು.


ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ದ್ವಿತೀಯ ಪಿಯುಸಿ , ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು.


ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ನಗರಸಭೆ ಪೌರಾಯುಕ್ತ ಜಗದೀಶ್ ಹುಲಗೆಜ್ಜಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವೈ.ಕೆ. ಉಮೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ, ಪ.ವರ್ಗಗಳ ಸಮುದಾಯದ ಜಿಲ್ಲಾಧ್ಯಕ್ಷ ನಾಗರಾಜ್ ತಳವಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು,ಸಿಬ್ಬಂದಿಗಳು, ಜಿಲ್ಲೆಯ ಪ.ಜಾತಿ ಮತ್ತು ಪಂಗಡಗಳ ಸಂಘಟನೆಗಳ ಪದಾಧಿಕಾರಿಗಳು,  ಸಾರ್ವಜನಿಕರು , ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. 


ವೇದಿಕೆ ಕಾರ್ಯಕ್ರಮದ ಪೂರ್ವದಲ್ಲಿ ನಗರಸಭೆ ಆವರಣದಿಂದ ಡಾ.ಬಿ.ಆರ್. ಅಂಬೇಡ್ಕರ್‌ರವರ ಹಾಗೂ ಡಾ. ಬಾಬು ಜಗಜೀವನ ರಾಮ್ ರವರ ಭಾವಚಿತ್ರಗಳ ಮೆರವಣಿಗೆ ಹಾಗೂ ಕಲಾತಂಡಗಳಿಂದ ಮೆರವಣಿಗೆ ನಡೆಯಿತು. ಅಂಬೇಡ್ಕರ್ ಕುರಿತು ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದ್ದಿತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top