ಪುಸ್ತಕಗಳು ಜೀವಂತ ಜ್ಞಾನದ ಗಣಿ. ಪುಸ್ತಕಕ್ಕಿಂತ ಅತ್ಯುತ್ತಮ ಸ್ನೇಹಿತನಿಲ್ಲ. ಜ್ಞಾನದ ನದಿ ಪೀಳಿಗೆಯಿಂದ ಪೀಳಿಗೆಗೆ ಹರಿಯಲು ಪುಸ್ತಕಗಳೇ ಆಧಾರ. ಗ್ರೀಕ್ ಸಾಹಿತ್ಯವು ರೋಮ್ ನಲ್ಲಿ ಮತ್ತೊಮ್ಮೆ ಜ್ಞಾನ ಪುನರುಜ್ಜೀವನಕ್ಕೆ ಕಾರಣವಾಗಿದ್ದು ಪುಸ್ತಕಗಳೇ ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ. ಪುಸ್ತಕಗಳಿಗೆ ಅಷ್ಟೊಂದು ಮಹತ್ವವಿದೆ.
ಬೇಸಿಗೆ ರಜೆಯಲ್ಲಿ ಬೇಸರವೆನಿಸಿದಾಗ ಪುಸ್ತಕಗಳ ಕಡೆ ನನ್ನಗಮನ ಸೆಳೆಯಿತು. ರ್ಯಾಕ್ ನಲ್ಲಿ ಜೋಡಿಸಿಟ್ಟಿದ್ದ ಪುಸ್ತಕಗಳ ಪೈಕಿ ಒಂದು ಪುಸ್ತಕವು ಆಕರ್ಷಕವಾಗಿ ಕಣ್ಣಿಗೆ ಬಿತ್ತು. ಪುಸ್ತಕವನ್ನು ತೆರೆದು ಓದುತ್ತಾ ಹೋದೆ. ಆಕರ್ಷಣೀಯ ವ್ಯಕ್ತಿತ್ವದ, ವಿದ್ಯಾರ್ಥಿಗಳಿಂದ ಅಕ್ಷರಬ್ರಹ್ಮನೆಂದು ಕರೆಸಿಕೊಂಡ, ಸರಳ ಜೀವನ ವಿರಳ ವ್ಯಕ್ತಿತ್ವದ ಉದಾತ್ತ ಚಿಂತಕ, ಅನರ್ಘ್ಯ ರತ್ನ, ದಣಿವರಿಯದ ಜೀವ, ಶೈಕ್ಷಣಿಕ ಚಿಂತಕರು, ವಿದ್ಯಾರ್ಥಿಗಳ ಭವಿಷ್ಯದ ಉಸಿರು ಜೆ.ಬಿ.ತಮ್ಮಣ್ಣ ಗೌಡರು ಎಂಬ ಪುಸ್ತಕವನ್ನು ಓದುತ್ತಾ ಹೋದಂತೆ ವಿದ್ಯಾರ್ಥಿಗಳಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳು ಜೆ.ಬಿ ತಮ್ಮಣ್ಣ ಗೌಡರ ಕುರಿತು ಅಭಿಪ್ರಾಯಗಳನ್ನು ಬರೆದಿರುತ್ತಾರೆ.
ಈ ಪುಸ್ತಕದಲ್ಲಿ ವಿವಿಧ ಗಣ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳಲ್ಲಿ ಕಂಡುಬರುವಂತೆ ತಮ್ಮಣ್ಣ ಗೌಡರು ತಮ್ಮ ಮನದ ಮಾತುಗಳಲ್ಲಿ ಹೇಳುವಂತೆ ಪ್ರತಿಯೊಂದು ಮಗುವು ಈ ದೇಶದ ಆಸ್ತಿಯಾಗಬೇಕು, ಪ್ರತಿ ಶಿಕ್ಷಕರೂ ನಮ್ಮ ದೇಶದ ಆಸ್ತಿಯೇ ಆಗಿರುತ್ತಾರೆ. ಮಕ್ಕಳು ಮತ್ತು ಪೋಷಕರು ಅಂಕಗಳಿಗೆ ಎಷ್ಟು ಮಹತ್ವ ನೀಡುತ್ತಾರೋ, ಅಷ್ಟೇ ಮಹತ್ವ ವ್ಯಕ್ತಿತ್ವ ನಿರ್ಮಾಣ, ನೈತಿಕ ಮೌಲ್ಯಗಳಾದ ಪ್ರಾಮಾಣಿಕತೆ, ನಂಬಿಕೆ, ವಿಶ್ವಾಸ, ಸುಳ್ಳು ಹೇಳದಿರುವುದು, ಒಳ್ಳೆಯದನ್ನು ಸ್ವೀಕರಿಸುವ ಮನೋಭಾವ ಮುಂತಾದವುಗಳಿಗೂ ನೀಡಬೇಕು.
ಸರ್ವವಿಧ ಸುಗುಣ ಮೌಲ್ಯಗಳನ್ನು ಮಕ್ಕಳಲ್ಲಿ ಕಲಿಸುವುದು ಶಿಕ್ಷಕರದ್ದೇ ಜವಾಬ್ದಾರಿಯಾಗಿರುತ್ತದೆ. ಇಂದು ಶಾಲಾ ತರಗತಿ ಕೊಠಡಿಯಲ್ಲಿ ಶಿಕ್ಷಕರು ನೀಡುವ ಶಿಕ್ಷಣ ವಿದ್ಯಾರ್ಥಿಗಳಿಗೆ ಭದ್ರ ಬುನಾದಿಯಾಗಿ ಭವಿಷ್ಯದಲ್ಲಿ ಉತ್ತಮ ನಾಗರಿಕರು, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳು, ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ನಿಷ್ಠೆಯಿಂದ ತೊಡಗಿಸಿಕೊಳ್ಳುವಂತೆ ಆಗಬೇಕು. ಸುಂದರ ನಾಳೆಗಳ ಸೃಷ್ಟಿಗೆ ವರ್ತಮಾನದ ಶಿಕ್ಷಕರ ಶ್ರಮ ಸಾರ್ಥಕವಾಗಬೇಕು. ವಿದ್ಯಾರ್ಥಿಯು ಭಯಮುಕ್ತ ಒತ್ತಡ ರಹಿತ ವಾತಾವರಣದಲ್ಲಿ ಕಲಿಯಬೇಕು. ಸಮಾಜದಲ್ಲಿ ಒಬ್ಬರಿಗೊಬ್ಬರು ಸಹಕಾರ ತತ್ವದ ಮೂಲಕ ಬದುಕಬೇಕು. ರೂಪುಗೊಳ್ಳುವ ಪ್ರತೀ ವಿದ್ಯಾರ್ಥಿಯೂ ಸಹೃದಯತೆಯನ್ನು ಮೈಗೂಡಿಸಿಕೊಂಡು ದೇಶದ ಆಸ್ತಿಯಾಗಬೇಕು ಎಂದು ಹೇಳುತ್ತಾರೆ.
ವಿದ್ಯಾರ್ಥಿಗಳ ಭವಿಷ್ಯದ ಉಸಿರು ಜೆ.ಬಿ. ತಮ್ಮಣ್ಣ ಗೌಡರು ಎಂಬ ಹೊತ್ತಿಗೆಯು ಹೇಳುವಂತೆ ಸಮಾಜ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾದ ಮೊರಾರ್ಜಿ ದೇಸಾಯಿ ಸರ್ಕಾರಿ ಮಾದರಿ ಶಾಲೆ ಕಂದಲಿಯಲ್ಲಿ ಪ್ರಾಂಶುಪಾಲರಾಗಿ ತಮ್ಮಣ್ಣಗೌಡರು ವಿದ್ಯಾರ್ಥಿಸ್ನೇಹಿ ವಾತಾವಾರಣ ನಿರ್ಮಾಣ ಮಾಡಿದ್ದು, ಪ್ರತೀ ವರ್ಷದ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಹಾಕಿಕೊಂಡ ಕಾರ್ಯಕ್ರಮಗಳು, ಬಡಮಕ್ಕಳ ಬಗೆಗೆ ಅವರಿಗಿದ್ದ ಕಾಳಜಿ, ಪರಿಸರ ಪ್ರೀತಿ, ಹಸಿರು ಶಾಲೆಯ ನಿರ್ಮಾಣ ಎಲ್ಲವೂ ತಿಳಿದು ಬರುತ್ತದೆ.
ಸದಾ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡ ತಮ್ಮಣ್ಣ ಗೌಡರು ಜೀವನದಲ್ಲಿ ಮದುವೆಯೇ ಆಗದೇ ಬ್ರಹ್ಮಚಾರಿಯಾಗಿ ಬದುಕಿದವರು. ಶಾಲೆಯ ಮಕ್ಕಳನ್ನೇ ತನ್ನ ಮಕ್ಕಳೆಂದು ತಿಳಿದು, ಆ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟು ಬೆಳೆಸಿದರು. ತಮ್ಮ ಸ್ವಂತ ಸಂಬಳದ ಹಣದಿಂದ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿರುವ ಇವರು ಈಗಲೂ ಅದನ್ನು ಮುಂದುವರಿಸುತ್ತಿರುವುದು ಅವರ ಕೊಡುಗೈ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
ತಮ್ಮಣ್ಣ ಗೌಡರ ಕೈಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಅವರನ್ನು ದೈವತ್ವಕ್ಕೆ ಏರಿಸಿರುವುದು ತಿಳಿದು ಬರುತ್ತದೆ. ತಮ್ಮಣ್ಣ ಗೌಡರು ಸರಳತೆಯ ಸಾಕಾರಮೂರ್ತಿಯಾಗಿ ಮಕ್ಕಳಿಗೆ ಸದಾ ಸ್ಫೂರ್ತಿಯಾಗಿದ್ದಾರೆ. ಇಂದಿಗೂ ಅವರ ವಿದ್ಯಾರ್ಥಿಗಳು ವಿದೇಶಿ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುವಷ್ಟು ಜವಾಬ್ದಾರಿಯುತ ನಾಗರೀಕರಾಗಿ ಬೆಳೆದಿದ್ದಾರೆ. ಒಟ್ಟಾರೆಯಾಗಿ ಪುಸ್ತಕವು ಜೆ.ಬಿ.ತಮ್ಮಣ್ಣ ಗೌಡರ ಸಮಗ್ರ ವ್ಯಕ್ತಿತ್ವದ ಚಿತ್ರಣವನ್ನು ಹಲವರ ಅಭಿಪ್ರಾಯಗಳ ಮೂಲಕ ಕಟ್ಟಿಕೊಡುತ್ತದೆ.
ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಕಛೇರಿಯಲ್ಲಿ ಶಿಕ್ಷಣಾಧಿಕಾರಿಯಾಗಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷಾ ಜಿಲ್ಲಾ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಾಗ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಗುಣಮಟ್ಟವನ್ನು ಹೆಚ್ಚಿಸಲು ಹಾಕಿಕೊಂಡ ಕಾರ್ಯಕ್ರಮ, ಅದನ್ನು ಅನುಷ್ಠಾನಗೊಳಿಸಿ ಎಲ್ಲಾ ಹಂತದ ಅಧಿಕಾರಿಗಳೊಂದಿಗೆ ಸ್ನೇಹ, ವಿಶ್ವಾಸದಿಂದ ಬೆರೆತು ಎಸ್.ಎಸ್.ಎಲ್ ಸಿ, ಫಲಿತಾಂಶದಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನಗಳಿಸಲು ಪಡೆದ ಸಹಕಾರ ಎಲ್ಲವೂ ಈ ಪುಸ್ತಕದ ಮೂಲಕ ತಿಳಿದುಬರುತ್ತದೆ.
ಶಿಕ್ಷಕರಿಂದ ಹಿಡಿದು ಉನ್ನತ ಅಧಿಕಾರಿಗಳೂ ಇಷ್ಟಪಡುವ ವ್ಯಕ್ತಿತ್ವವನ್ನು ರೂಪಿಸಿಕೊಂಡ ತಮ್ಮಣ್ಣಗೌಡರ ಸಾಧನೆಗಳನ್ನು ಗುರುತಿಸಿದ ಜಿಲ್ಲಾಡಳಿತ ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ವಿದ್ಯಾರ್ಥಿಗಳೇ ಸ್ವತಃ ಮುಂದೆ ಬಂದು ಈ ಹೊತ್ತಿಗೆಯನ್ನು ಹೊರತಂದು ಗೌರವ ಸಲ್ಲಿಸಿರುತ್ತಾರೆ. ಉತ್ತಮ ಸಮಾಜ ನಿರ್ಮಾಣಕ್ಕೆ ಇಂತಹ ಸದ್ಗುಣ ಶೀಲ ವ್ಯಕ್ತಿತ್ವದ ಪ್ರಜೆಗಳ ಅಗತ್ಯತೆ ಬಹಳವಿದೆ ಎಂಬುದು ಮತ್ತು ಅವರಿಗೂ ದೇವರು ಎಂದಿಗೂ ಆರೋಗ್ಯ ಮತ್ತು ಆಯುಷ್ಯವನ್ನು ನೀಡಲಿ ಎಂಬ ಎಲ್ಲ ಬರಹಗಾರರ ಅಭಿಪ್ರಾಯಗಳು ಈ ಪುಸ್ತಕದಲ್ಲಿ ವ್ಯಕ್ತವಾಗುತ್ತದೆ.
ತಮ್ಮಣ್ಣಗೌಡರು ಉತ್ತಮ ವಾಕ್ಪಟುವಾಗಿದ್ದು, ತಮ್ಮ ಭಾಷಣದಲ್ಲಿ ಉತ್ತಮ ವಿಚಾರಗಳನ್ನು ತಿಳಿಸುತ್ತಾರೆ. ಹಾಗಾಗಿ ಇವರನ್ನು ಭಾಷಣಕಾರರಾಗಿ ಗುರುತಿಸಲಾಗುತ್ತಿದೆ. ಅತ್ಯುತ್ತಮ ವೇದಿಕೆಗಳಲ್ಲಿ ಉತ್ತಮ ಭಾಷಣಗಳನ್ನು ಮಾಡಿರುತ್ತಾರೆ. ಈ ಎಲ್ಲಾ ವಿಚಾರಗಳನ್ನು ಪುಸ್ತಕವು ತಿಳಿಸುತ್ತಾ ಮಾದರಿಯಾಗಿ ಮತ್ತು ಶಾಶ್ವತವಾಗಿ ನಿಲ್ಲುತ್ತದೆ.
-ಕೆ.ಎನ್. ಚಿದಾನಂದ ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ