ಅನಾದ್ಯಂತ 2025: ಎನ್‌ಎಂಐಟಿಯಲ್ಲಿ ವಾರ್ಷಿಕ ರಾಷ್ಟ್ರೀಯ ಟೆಕ್ನೋ ಕಲ್ಚರಲ್ ಫೆಸ್ಟ್

Upayuktha
0




ಬೆಂಗಳೂರು: ‘ಸಾಂಸ್ಕೃತಿಕ ಉತ್ಸವಗಳು ವಿದ್ಯಾರ್ಥಿಗಳಲ್ಲಿ, ಅದರಲ್ಲೂ ತಂತ್ರಜ್ಞಾನದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಸಂವರ್ಧನೆಗೆ ಹಾಗೂ ಸಬಲೀಕರಣಕ್ಕೆ ನೆರವಾಗುತ್ತವೆ. ಏಕೆಂದರೆ ಇಲ್ಲಿ ಅವರೇ ಪಾತ್ರಧಾರಿಗಳು ಮತ್ತು ಸಂಘಟಕರು. ಇಂದಿನ ಇಪ್ಪತ್ತು-ಇಪ್ಪತೈದರ ಹರೆಯದ ಯುವಜನರನ್ನು ನಾವು ‘ಝಡ್’ ತಲೆಮಾರಿಗೆ ಸೇರಿದವರು ಎಂದು ಗುರುತಿಸುತ್ತೇವೆ. ಏಕೆಂದರೆ ಅಂತರ್ಜಾಲವನ್ನವಲಂಬಿಸಿ ಜೂಮ್ ಮಾಡಿ ಬೆಳೆದವರು ಅವರು. ಅಷ್ಟೇ ಅಲ್ಲ ಬೆರಳ ತುದಿಯಲ್ಲಿಯೇ ಇಡೀ ಜಗತ್ತನ್ನು ಅರ್ಥಮಾಡಿಕೊಂಡವರು. 


ನಿಜವಾದ ಅರ್ಥದಲ್ಲಿ ಅವರ ಸ್ವತಃ ತಾವಾಗಿಯೇ ಕಲಿತದ್ದು ಅಪಾರ. ಸಹಜವಾಗಿ ಅವರು ಹಿಂದಿನ ತಲೆಮಾರಿನವರಿಗಿಂತ ಜಾಣರು. ಆದರೆ ಎಲ್ಲರ ಸಹಯೋಗದಲ್ಲಿ ಕಾರ್ಯತತ್ಪರರಾಗುವುದು ಹಾಗೂ ಅರ್ಥಪೂರ್ಣ ಸಂವಾದಗಳಲ್ಲಿ ಪಾಲ್ಗೊಳ್ಳುವುದು ಇತ್ಯಾದಿಗಳನ್ನು ಈ ತೆರೆನ ಉತ್ಸವಗಳನ್ನು ಆಯೊಜಿಸಿ ಅವರಿಗೆ ನಿವೇದಿಸುವ ಅಗತ್ಯವಿದೆ’, ಎಂದು ನೋಕಿಯ ಮೊಬೈಲ್ ನೆಟ್ವರ್ಕ್ಸ್‌ನ  ನಿರ್ದೇಶಕಿ ಪೊನ್ನಿ ಕೃಷ್ಣಮೂರ್ತಿ ನುಡಿದರು.


ಅವರು ಬೆಂಗಳೂರು ನಗರದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿತ ಗೊಂಡಿದ್ದ ಪ್ರತಿಷ್ಠಿತ ರಾಷ್ಟ್ರಮಟ್ಟದ ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ಉತ್ಸವ ‘ಅನಾದ್ಯಂತ-2025’ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಮುಂದುವರಿದು ಅವರು, ‘ಕನಸು ಕಾಣುವ ಸ್ಥೈರ್ಯ ಎಲ್ಲರಲ್ಲಿ ಇರಬೇಕು. ಅದರಲ್ಲಿಯೂ ತಂತ್ರಜ್ಞಾನದ ವಿದ್ಯಾರ್ಥಿಗಳಿಗೆ ಇದು ಅತ್ಯವಶ್ಯ. ಏಕೆಂದರೆ ಕನಸು ಅನ್ವೇಷಣೆಗೆ ಪ್ರೇರೇಪಿಸುತ್ತದೆ. ಅನ್ವೇಷಣೆಗಳು ಜಗತ್ತಿನ ಸಮಾಜದ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತವೆ. ಈ ನಿಟ್ಟಿನಲ್ಲಿ ತಂತ್ರಜ್ಞರು ನೀಡುವ ಕೊಡುಗೆ ಅಪಾರ. ಈ ಹಾದಿಯಲ್ಲಿ ಸಾಗುವಾಗ ಎಲ್ಲರನ್ನೂ ಒಳಗೊಂಡು ಸಕ್ರಿಯರಾಗಬೇಕಿದೆ. ಒಳಗೊಳ್ಳುವಿಕೆಯ ಮನೋಧರ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಲೂ ನೆರವಾಗುತ್ತದೆ. ಇಂದಿನ ಔದ್ಯಮಿಕ ಜಗತ್ತು ಕೂಡ ಈ ತಲೆಮಾರಿನ ತಂತ್ರಜ್ಞರಿಂದ ಇದನ್ನೇ ನಿರೀಕ್ಷಿಸುತ್ತದೆ’ ಎಂದರು.


ಈ ಉತ್ಸವದಲ್ಲಿ ಅಪರಿಮಿತ ಉತ್ಸಾಹ ಹಾಗೂ ತೀವ್ರಬದ್ಧತೆಯಿಂದ ರಾಷ್ಟ್ರದ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳನ್ನು ಪ್ರತಿನಿಧಿಸಿದ್ದ ಸಹಸ್ರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಲದ ‘ಅನಾದ್ಯಂತ’ದ ಚರ್ಚೆಯ ವಿಷಯ– ‘ರಿಧಮ್ ಆಫ್‌ ಭಾರತ’ ಅಂದರೆ ‘ಭಾರತದ ಪ್ರಗತಿಯ ಲಯ’ ಎಂಬುದು. ‘ಅನಾದ್ಯಂತ-2025’, ತಂತ್ರಜ್ಞಾನದ ಸದ್ಬಳಕೆಗೆ ಹಾಗೂ ವಿಕಸಿತ ಭಾರತ ಕುರಿತಂತೆ ಅನ್ವೇಷಣಾಧಾರಿತ ಸಂವಾದಗಳಿಗೆ ವೇದಿಕೆ ಕಲ್ಪಿಸಿದೆ.


ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದ ದಕ್ಷಿಣ ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿ ಹಾಗೂ ಶಾಸ್ತ್ರೀಯ ನೃತ್ಯ ಕಲಾವಿದೆ ಲಕ್ಷೀ ಗೋಪಾಲಸ್ವಾಮಿ ಅವರು ಮಾತನಾಡಿ- ‘ಕಾಲೇಜು ಶಿಕ್ಷಣ ಮುಗಿದ ಮೇಲೆ ವಿದ್ಯಾರ್ಥಿಗಳು ನಿಜವಾದ ಜಗತ್ತನ್ನು ಪ್ರವೇಶಿಸಬೇಕಾಗುತ್ತದೆ. ಈ ನೈಜ ಜಗತ್ತಿನಲ್ಲಿ ಯಶಸ್ವಿಯಾಗಲು ಅಗತ್ಯವಾಗಿ ಬೇಕಾಗಿರುವುದು ಪ್ರೀತಿಸುವ ಸ್ವಭಾವ ಹಾಗೂ ಕರುಣೆ ತುಂಬಿದ ಅಂತಃಕರಣ. ಈ ತೆರೆನ ಸಾಂಸ್ಕೃತಿಕ ಉತ್ಸವಗಳು ವಿದ್ಯಾರ್ಥಿಗಳು ತಮ್ಮ ಸ್ವಭಾವಗಳನ್ನು ಸಕಾರಾತ್ಮಕವಾಗಿ ಬೆಳೆಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದರು.



ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಸ್ವಾಗತಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಆವರಣದ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ, ಶೈಕ್ಷಣಿಕ ಮುಖ್ಯಸ್ಥ ಡಾ. ಜೆ. ಸುಧೀರ್ ರೆಡ್ಡಿ, ಅನಾದ್ಯಂತ ಉತ್ಸವದ ಶಿಕ್ಷಕ ಸಂಯೋಜಕರಾದ ವಿದ್ಯಾರ್ಥಿ ಕಲ್ಯಾಣ ವಿಭಾಗದ ಮುಖ್ಯಸ್ಥೆ ಡಾ. ಹಿತಾ ಡಿ. ಶೆಟ್ಟಿ, ಮತ್ತು ಡಾ. ಎ.ಸಿ. ರಾಮಚಂದ್ರ, ಉತ್ಸವದ ತಾಂತ್ರಿಕ ವಿಭಾಗವಾದ ‘ಗೀಕ್‌ ಮೇಹೆಮ್’ನ ಶಿಕ್ಷಕ ಸಂಯೋಜಕ ಡಾ. ಪರಮೇಶಾಚಾರಿ ಬಿ.ಡಿ, ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂದಿದ್ದರು.


ಉತ್ಸವದಲ್ಲಿ ‘ಕೋಡ್ ವರ‍್ಸ್’, ‘ಸೋಲೋ ಡ್ಯಾನ್ಸ್’, ‘ಮೋನೋ ಆ್ಯಕ್ಟಿಂಗ್’, ‘ಸ್ಟ್ರೀಟ್ ಪ್ಲೇ, ‘ಕ್ವಿಜ್‌, ‘ರೀಲ್ ಮೇಕಿಂಗ್’, ‘ಮೊಬೈಲ್ ಫೋಟೋಗ್ರಫಿ’, ‘ಬ್ಯಾಟಲ್ ಆಫ್‌ ಬ್ಯಾಂಡ್ಸ್’, ಚಿತ್ರಕಲೆ ಸ್ಫರ್ಧೆ, ‘ಟ್ಯಾಟೂ ಮೇಕಿಂಗ್’, ನೃತ್ಯ, ಚರ್ಚಾ ಸ್ಪರ್ಧೆ, ಕ್ರೀಡೆ, ‘ಕೊರಿಯೋ ನೈಟ್’, ಫ್ಯಾಶನ್ ಶೋ ಮೊದಲಾದ ಚಟುವಟಿಕೆಗಳೂ ನಡೆದವು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top