ರಾಜ್ಯದಲ್ಲಿ ಅಕ್ರಮ ಶಾಲೆಗಳಿಗೆ ಸಕ್ರಮ ಭಾಗ್ಯ

Upayuktha
0


ಬೆಂಗಳೂರು: ರಾಜ್ಯದಲ್ಲಿ ಸರ್ಕಾರದ ಮಾನ್ಯತೆ ಪಡೆಯದೆ ಅನಧಿಕೃತವಾಗಿ ನಡೆಯುತ್ತಿರುವ ಖಾಸಗಿ ಶಾಲೆಗಳನ್ನು ಸಕ್ರಮ ಗೊಳಿಸಲು ಅವಕಾಶ ಕಲ್ಪಿಸಲಾಗಿದೆ. 2023-24 ಮತ್ತು ಅದಕ್ಕೂ ಹಿಂದಿನ ವರ್ಷಗಳಲ್ಲಿ ಮಾನ್ಯತೆಯೇ ಇಲ್ಲದೆ ಅಥವಾ ಮಾನ್ಯತೆ ನವೀಕರಣ ಮಾಡಿಕೊಳ್ಳದೆ ನಡೆಯುತ್ತಿರುವ ಖಾಸಗಿ ಶಾಲೆಗಳು ಬಾಕಿ ಇರುವ ಹಿಂದಿನ ಎಲ್ಲ ವರ್ಷಗಳಿಗೆ ಮತ್ತೆ ಅರ್ಜಿ ಸಲ್ಲಿಸಿ ಮಾನ್ಯತೆ/ನವೀಕರಣ ಪಡೆಯಲು ಅವಕಾಶ ನೀಡಿದೆ. 


ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಾಲಮಿತಿಯಲ್ಲಿ ಹೊಸ ಮಾನ್ಯತೆ, ಮಾನ್ಯತೆ ನವೀಕರಣಕ್ಕೆ ಆನ್‌ಲೈನ್‌ ತಂತ್ರಾಂಶದ ಮೂಲಕ ಅಕ್ರಮ ಶಾಲೆಗಳಿಗೆ ಅವಕಾಶ ನೀಡಿದೆ. 


 2024-25ನೇ ಸಾಲಿಗೆ ಹಿಂದಿನ ಸಾಲುಗಳಿಗೆ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಇಲ್ಲದೆ ನಡೆಯುತ್ತಿರುವ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಅಂಥ ಶಾಲೆಗಳಿಗೆ ಅಂತಿಮ ಎಚ್ಚರಿಕೆಯೊಂದಿಗೆ ಈ ಅವಕಾಶ ಕಲ್ಪಿಸಲಾಗಿದೆ. ಆದರೂ ಮಾನ್ಯತೆ ಪಡೆಯಲು ವಿಫಲವಾಗುವ ಶಾಲೆಗಳ ನೋಂದಣಿ ರದ್ದುಪಡಿಸಲು ಡಿಡಿಪಿಐಗಳಿಗೆ ಸೂಚಿಸಿದೆ.


ಏ.28ರಿಂದ ಮೇ 13ರವರೆಗೆ ಖಾಸಗಿ ಶಾಲೆಗಳು ಬಾಕಿ ಇರುವ ಶೈಕ್ಷಣಿಕ ಸಾಲುಗಳಿಗೆ ಹೊಸ ಮಾನ್ಯತೆ ಪಡೆಯಲು ಅಥವಾ ಮಾನ್ಯತೆ ನವೀಕರಣಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಆಯಾ ಜಿಲ್ಲಾ ಉಪನಿರ್ದೇಶರ ಕಚೇರಿಯಲ್ಲಿ ಅರ್ಜಿ ಬಂದ ದಿನದಿಂದ 5 ದಿನಗಳಲ್ಲಿ ಪರಿಶೀಲಿಸಿ ಅಗತ್ಯವಿದ್ದರೆ ಆಕ್ಷೇಪಣೆ ಸಹಿತ ಶಾಲಾ ಆಡಳಿತ ಮಂಡಳಿಗೆ ಅರ್ಜಿ ಹಿಂದಿರುಗಿಸಬಹುದು. ಈ ಪ್ರಕ್ರಿಯೆಗೆ ಮೇ 3ರಿಂದ 31ರವರೆಗೆ ಕಾಲಾವಕಾಶವಿರುತ್ತದೆ. ನಂತರ ಏಳು ದಿನಗಳಲ್ಲಿ ಆಡಳಿತ ಮಂಡಳಿಗಳು ಡಿಡಿಪಿಐ ಕಚೇರಿಯ ಆಕ್ಷೇಪಣೆಗಳಿಗೆ ಅಗತ್ಯ ಮಾಹಿತಿ/ದಾಖಲೆ ಒದಗಿಸಿ ಮತ್ತೆ ಅರ್ಜಿ ಕಳುಹಿಸಬಹುದು. 

ಈ ಪ್ರಕ್ರಿಯೆಗೆ ಮೇ 5ರಿಂದ ಜೂನ್‌ 6ರವರೆಗೆ ಅವಕಾಶ ಇರುತ್ತದೆ. ಆಕ್ಷೇಪಣೆ ಸರಿಪಡಿಸಿ ಬಂದ ಅರ್ಜಿಗಳನ್ನು ಇತ್ಯರ್ಥಪಡಿಸಿ ಅರ್ಹ ಶಾಲೆಗಳಿಗೆ ಮಾನ್ಯತೆ ನೀಡುವ, ಮಾನ್ಯತೆ ನವೀಕರಣ ಪ್ರಮಾಣ ಪತ್ರ ನೀಡಲು ಹಾಗೂ ಅರ್ಜಿ ತಿರಸ್ಕೃತವಾಗಿದ್ದಲ್ಲಿ ತಿರಸ್ಕೃತ ಆದೇಶ ನೀಡುವುದನ್ನು ಐದು ದಿನಗಳಲ್ಲಿ ನೀಡಬೇಕು. ಈ ಪ್ರಕ್ರಿಯೆ ಮೇ 6ರಿಂದ 17ರ ವೇಳೆಗೆ ಪೂರ್ಣಗೊಳ್ಳಬೇಕೆಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಎಲ್ಲಾ ಜಿಲ್ಲಾ ಡಿಡಿಪಿಐಗಳಿಗೆ ಕಾಲಮಿತಿ ನಿಗದಿಪಡಿಸಿದ್ದಾರೆ. ಇನ್ನು ಅರ್ಜಿ ಸಲ್ಲಿಕೆ, ಪರಿಶೀಲನೆ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ giaprimarycpi@gmail.com ಗೆ ಮಾಹಿತಿ ಸಹಿತ ವಿವರ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top