ಅಂಜನೀಗರ್ಭ ಸಂಭೂತೋ ವಾಯುಪುತ್ರೋ ಸನಾತನ:/
ಕುಮಾರೋ ಬ್ರಹ್ಮಚಾರೀಚ ತಸ್ಮೈಶ್ರೀ ಹನುಮತೇ ನಮ://
ಓಂ ಆಂಜನೇಯಾಯವಿದ್ಮಹೇ ಮಹಾಬಲಯಧೀಮಹಿ/
ತನ್ನೋ ಹನೂಮಾನ್ ಪ್ರಚೋದಯಾತ್//
ಆಂಜನೇಯಮತಿ ಪಾಟಲಾನನಂ/
ಕಾಂಚನಾದ್ರಿ ಕಮನೀಯವಿಗ್ರಹಂ/
ಪಾರಿಜಾತ ತರುಮೂಲವಾಸಿನಂ/
ಭಾವಯಾಮಿ ಪವಮಾನನಂದನಂ//
ಪ್ರಭು ಶ್ರೀರಾಮಚಂದ್ರನ ಚರಣ ಸೇವಕ, ಸದಾ ಶ್ರೀರಾಮ ತಾರಕಮಂತ್ರ ಜಪಿಸುವ ವೀರ ಹನುಮನ ಜನುಮ ದಿನವಿಂದು. ಚೈತ್ರಮಾಸದ, ಶುಕ್ಲಪಕ್ಷದ ಪೌರ್ಣಿಮೆಯಂದು ಮಾತೆ ಅಂಜನಾದೇವಿಯ ಗರ್ಭ ಸಂಜಾತ. ವಾಯುಪುತ್ರನೂ ಹೌದು.ಮುಖ್ಯಪ್ರಾಣನೆಂದರೆ ಭಯ ನಿವಾರಿಸುವವ, ಧೈರ್ಯ ತುಂಬುವವ. ಶಕ್ತಿಯ ಪ್ರತೀಕ, ಬ್ರಹ್ಮಚಾರಿ. ವಾನರದೇವ ಹನುಮನ ಜನ್ಮ ದಿನದಂದು ಹನುಮಂತನ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ನಾನಾ ಸೇವೆಗಳು, ಭಜನೆ, ಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸುವರು. ಶ್ರೀರಾಮ ಹರಿಕಥೆ, ರಾಮನ ಗುಣಗಾನ, ಚರಿತ್ರೆ ಹೇಳುವಲ್ಲಿ ಹನುಮನೂ ಇರುತ್ತಾನೆ ಎನ್ನುವ ನಂಬಿಕೆಯಿದೆ.
ಯತ್ರ ಯತ್ರ ರಘುನಾಥ ಕೀರ್ತನಂ
ತತ್ರ ತತ್ರ ಕೃತಮಸ್ತಕಾಂಜಲಿಂ/
ಭಾಷ್ಪಾವಾರಿ ಪರಿಪೂರ್ಣ ಲೋಚನಂ/
ಮಾರುತಿಂ ನಮತಾ//
ಅಂಜನಾದೇವಿಗೆ ಜನಿಸಿದ ದೈವಿಕ ಶಕ್ತಿಯ ಪುತ್ರನೀತ. ಶಿವನ ಅವತಾರವಂತೆ. ವಿಷ್ಣು ಭಗವಾನ್ ಮತ್ತು ಶಿವ ಪರಸ್ಪರ ಜೊತೆಯಲ್ಲೇ ಇರುವವರು. ಒಬ್ಬರನ್ನಗಲಿ ಮತ್ತೊಬ್ಬರಿಲ್ಲ. ಹಾಗೆಯೋ ಏನೋ ರಾಮಾವತಾರದಲ್ಲಿ ಹನುಮಂತನ ಅಸ್ಥಿತ್ವವನ್ನು ಕಾಣಬಹುದು. ಹುಟ್ಟಿದ ಶಿಶು ಸೂರ್ಯನನ್ನೇ ಹಣ್ಣೆಂದು ಭ್ರಮಿಸಿ ಹಿಡಿಯಲು ಹಾರಿದಾಗ ಸುರೇಂದ್ರನು ತನ್ನ ವಜ್ರಾಯುಧದಲ್ಲಿ ಬಡಿದನಂತೆ. ಬಿದ್ದು ದೈಹಿಕ ನೋವಿನಿಂದ ನರಳುತ್ತಿದ್ದ ಹನುಮನನ್ನು ಬ್ರಹ್ಮದೇವ ಮರುಜನ್ಮ ನೀಡಿದನೆಂದು ಶಿವಪುರಾಣದಲ್ಲಿ ಉಲ್ಲೇಖವಿದೆ.
ರಾಮಾಯಣದ ಸುಂದರಕಾಂಡದಲ್ಲಿ ವೀರಹನುಂತನ ಬಗ್ಗೆಯೇ ಓದಬಹುದು. ಸಮುದ್ರೋಲ್ಲಂಘನ ಗೈದ ಸಾಹಸಿ. ಲೋಕಮಾತೆ, ಜನಕಸುತೆ ರಾಮಚಂದಿರನ ಹೃದಯವಲ್ಲಭೆ ಸೀತಾನ್ವೇಷಣೆ ಗೈದವ. ಶ್ರೀರಾಮ ಸುಗ್ರೀವಗೆ ಸಖ್ಯ ಬೆಳೆಸಿದವ. ವಾಲಿಮೋಕ್ಷದ ಅನಂತರ ದುಃಖದಲ್ಲಿದ್ದ ಸುಗ್ರೀವ, ಅಂಗದರಿಗೆ ವಿವೇಕದ ಮಾತುಗಳನ್ನಾಡಿ ನವಚೈತನ್ಯ ತುಂಬಿದವ. ಮಕ್ಕಳು ಹೆದರಿಕೊಂಡಾಗ ಹನುಮನ ಹೆಸರು ಹೇಳಿದರೆ ಸಾಕಂತೆ.
ಸಂಜೀವಿನಿ ಬೆಟ್ಟವನ್ನೇ ಲಕ್ಷ್ಮಣನಿಗಾಗಿ ಹೊತ್ತು ತಂದ ಸಾಹಸಿ, ರಾಮಸೇವಕ. ನಿಸರ್ಗದಲ್ಲೇ ಬೆಳೆದ ಕಾರಣ ಕಷ್ಟಸಹಿಷ್ಣು. ವಾಯುದೇವನು ಬ್ರಹ್ಮಾಂಡ ಸೃಷ್ಟಿಯ ರಹಸ್ಯವನ್ನು ಬಾಲಕನಿಗೆ ಬೋಧಿಸಿದನಂತೆ. ಅಮರತ್ವದ ವರ ಸೀತಾಮಾತೆಯಿಂದ. ಇಚ್ಛಾರೂಪಿ, ಮೇಧಾವಿ. ಶಿವನಿಂದ ಅಜೇಯನೆಂಬ ವರವನ್ನು ಪಡೆದ, ಏಖಮುಖಿ ಹನುಮಂತನಿಂದ ಸಹಸ್ರಮುಖಿ ಹನುಮನವರೆಗೆ ಪ್ರತಿಷ್ಠಾಪಿಸಿ ಪೂಜಿಸಲ್ಪಡುವ, ಶ್ರೀರಾಮಬಂಟ, ಅಜೇಯ, ದಶನಾಮಾಂಕಿತ ಪಾರ್ಥನ ರಥದ ಧ್ವಜದಲ್ಲಿರುವ, ವೀರಹನುಮನ ಭಜಿಸಿ ಪುನೀತರಾಗೋಣ.
ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಆರೋಗತಾ/
ಅಜಾಡ್ಯಂ ವಾಕ್ಪಟುತ್ವಂಚ ಹನುಮತ್ ಸ್ಮರಣಾತ್ ಭವೇತ್//
ಹನುಮನ ಕೃಪೆ ಸದಾ ಇರಲಿ.
- ರತ್ನಾ ಕೆ ಭಟ್, ತಲಂಜೇರಿ, ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ