ಎಷ್ಟು ಸಾಹಸವಂತ ನೀನೇ ಹನುಮಂತ

Upayuktha
0



 ಮನೋಜವಂ ಮಾರುತತುಲ್ಯವೇಗಂ 

 ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ 

 ವಾತಾತ್ಮಜಂ ವಾನರಯೂಥಮುಖ್ಯಂ 

 ಶ್ರೀರಾಮದೂತಂ ಶರಣಂ ಪ್ರಪದ್ಯೆ 

 

ಮ್ಮ ಸನಾತನ ಹಿಂದೂಧರ್ಮದ ಎರಡು ಮಹಾಕಾವ್ಯಗಳು ರಾಮಾಯಣ & ಮಹಾಭಾರತಗಳಾಗಿವೆ,ಇವುಗಳಿಗೆ ಸಮಾನವಾದ ಮಹಾಕಾವ್ಯಗಳು ಜಗತ್ತಿನಲ್ಲೆಲ್ಲಿಯೂ ಇಲ್ಲ.ಇವು ನಮ್ಮ ಹೆಮ್ಮೆಯ ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮಗಳಾಗಿವೆ & ಗಂಗಾ ಹಿಮಾಲಯದಂತೆ ಶಾಶ್ವತವಾಗಿವೆ. ಆದಿಕವಿ ವಾಲ್ಮೀಕಿ ಮಹರ್ಷಿಗಳಿಂದ ರಚಿಸಲ್ಪಟ್ಟ ರಾಮಾಯಣದ ಪ್ರತೀ ಪಾತ್ರಗಳು ನಮ್ಮ ಬದುಕಿನ ಮೇಲೆ ವಿಶೇಷ ಪ್ರಭಾವ ಬೀರಿವೆ,ರಾಮ- ಲಕ್ಷ್ಮಣರೆಂದರೆ ನಮಗೆ ಅತೀ ಹತ್ತಿರದವರು ಎಂಬ ಭಾವನೆ ಮೂಡುತ್ತದೆ.ಈ ಪಾತ್ರಗಳು ಮಾನವೀಯ ಮೌಲ್ಯಗಳನ್ನು ಅತ್ಯಂತ ಸಮರ್ಥವಾಗಿ ಪ್ರತಿನಿಧಿಸುವಂತೆಯೇ ಇನ್ನೊಂದು ಪಾತ್ರ ಎಲ್ಲರ ಗಮನ ಸೆಳೆಯುತ್ತದೆ, ಅದು ಆಂಜನೇಯ.ನಮ್ಮ ದೇಶದಲ್ಲಿ ರಾಮನ ಗುಡಿಯಿಲ್ಲದ ಊರಿರಬಹುದು ಆದರೆ ಆಂಜನೇಯನ ಗುಡಿಯಿಲ್ಲದ ಊರೇ ಇಲ್ಲ.ಜಾತಿ,ಮತ,ಪಂಥಗಳನ್ನು ಮೀರಿ ಜನ ಆಂಜನೇಯನನ್ನು ಆರಾಧಿಸುತ್ತಾರೆ.ಹನುಮಂತನ ಪ್ರಭಾವ ಎಷ್ಟರ ಮಟ್ಟಿಗೆ ಇದೆ ಎಂದರೆ 'ರಾಮಾಯಣ' ಎಂಬ ಮಹಾಕಾವ್ಯಕ್ಕೆ ಇನ್ನೊಂದು ಹೆಸರಿಡಬಹುದಾದರೆ ಅದು 'ಸೀತಾಯಾಶ್ಚರಿತಂ',ಮತ್ತೊಂದು ಹೆಸರಿನಿಂದ ಕರೆಯಬಹುದಾದರೆ ಅದು 'ಹನುಮಾಯಣ'. ಅಂದರೆ ರಾಮಾಯಣದಲ್ಲಿ ಹನುಮಂತನ ಪಾತ್ರ ಅಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ. ಆಂಜನೇಯನ ಮಹಿಮೆಯೇ ಮುಖ್ಯವಾಗಿರುವ ಕಾಂಡಕ್ಕೆ ರಾಮಾಯಣದಲ್ಲಿ 'ಸುಂದರಕಾಂಡ ' ವೆಂದು ಕರೆದಿದ್ದಾರೆ.


ಆಂಜನೇಯನು ವಾಯುದೇವರ ಕೃಪೆಯಿಂದ ಕೇಸರಿ ಎಂಬ ವಾನರ & ಅಂಜನಾದೇವಿಯರ ಮಗನಾಗಿ ಜನಿಸುತ್ತಾನೆ. ಇವನು ಜನಿಸುತ್ತಲೇ ಸೂರ್ಯನನ್ನು ನೋಡಿ ಹಣ್ಣೆಂದು ಭ್ರಮಿಸಿ ಅವನನ್ನು ಹಿಡಿಯಲು ಆಕಾಶಕ್ಕೆ ಹಾರುತ್ತಾನೆ.ಆಗ ಇವನನ್ನು ನಿಗ್ರಹಿಸಬೇಕೆಂದು ಇಂದ್ರನು ತನ್ನ ವಜ್ರಾಯುಧವನ್ನು ಪ್ರಯೋಗಿಸಿದಾಗ ಹನುಮಂತ ಮೂರ್ಛೆಹೋಗುತ್ತಾನೆ.ಇದರಿಂದ ಕೋಪಗೊಂಡ ವಾಯುದೇವನು ತನ್ನ ಚಲನೆಯನ್ನು ನಿಲ್ಲಿಸಿದಾಗ ಲೋಕದ ಚರಾಚರ ಪ್ರಾಣಿಗಳು ಮರಣಭಯದಿಂದ ತತ್ತರಿಸುತ್ತವೆ. ಸ್ವತಃ ಬ್ರಹ್ಮದೇವರು ವಾಯುವನ್ನು ಸಮಾಧಾನಪಡಿಸುತ್ತಾರೆ & ದೇವಾನುದೇವತೆಗಳು ಆಂಜನೇಯನಿಗೆ ವರದಾನಕೊಡುತ್ತಾರೆ. ಹೀಗಾಗಿ ತನ್ನ ಬಲ,ವೀರ್ಯ,ಸಾಮರ್ಥ್ಯಗಳಿಂದ ಹನುಮ ಗರುಡನಿಗೂ, ವಾಯುವಿಗೂ ಸಮಾನನಾದನು.ಯೋಗಶಾಸ್ತ್ರದ ಪರಮ ರಹಸ್ಯಗಳೆಲ್ಲವನ್ನೂ ಅರಿತನು.ಹನುಮನ ಸಾಮರ್ಥ್ಯ ಕೇವಲ ದೇಹದ್ದು ಮಾತ್ರವಲ್ಲ; ಬುದ್ಧಿಯದು,ಮನಸ್ಸಿನದೂ ಕೂಡ ಆಗಿವೆ.


ರಾಮಾಯಣದ ಕಥೆಯಲ್ಲಿ ಹನುಮಂತನ ಪ್ರವೇಶವಾಗುವದು ಕಿಷ್ಕಿಂಧಾಕಾಂಡದಲ್ಲಿ ,ಕಿಷ್ಕಿಂಧೆಯೆಂದರೆ ನಮ್ಮ ಕನ್ನಡ ನಾಡಿನ ಹಂಪೆಯ ಪ್ರದೇಶ.ಹೀಗಾಗಿ ಮಹಾಬಲಿ ಹನುಮಂತ ನಮ್ಮ  ಕರುನಾಡ ಸಂಸ್ಕೃತಿಯ ಸಾರಸ್ವರೂಪ,ಕರುನಾಡ ಕಣ್ಮಣಿ,ಕನ್ನಡದ ಕುವರನೆಂಬುದು ನಮಗೆಲ್ಲ ಹೆಮ್ಮೆಯ ವಿಷಯ. ಹನುಮಂತ ಸುಗ್ರೀವನ ಜೊತೆ ಕಿಷ್ಕಿಂಧೆಯಲ್ಲಿ ಇರುವಾಗ,ಸೀತೆಯನ್ನು ಅರಸುತ್ತ ಶ್ರೀರಾಮನು ಕಿಷ್ಕಿಂಧೆಗೆ ಬರುತ್ತಾನೆ .ಆಗ ಇವರಿಬ್ಬರ ಭೇಟಿಯಾಗಿ,ತನ್ನ ಸ್ವಾಮಿಯಾದ ರಾಮನಿಗೆ ಸಹಾಯಮಾಡಲು ಮುಂದಾಗುತ್ತಾನೆ.ರಾಮ ಮೊದಲ ನೋಟದಲ್ಲೇ ಆಂಜನೇಯನ ಶುದ್ಧವಾದ ಮಾತು,ಮಿತಭಾಷೆ,ಶಾಂತಸ್ವಭಾವ,ಬ್ರಹ್ಮಚರ್ಯದ ತೇಜಸ್ಸನ್ನು ಕಂಡು ಮಾರುಹೋಗುತ್ತಾನೆ.ಅದೇ ರೀತಿಯಲ್ಲಿ ಹನುಮನು ಶ್ರೀರಾಮನ ಪರಮಭಕ್ತನಾಗಿ,  ನಾನು ಶ್ರೀರಾಮನ ದಾಸ ನೆಂದು  ದಾಸತ್ವದ ಮಹತಿಯನ್ನು ಜಗಕೆಲ್ಲ ಸಾರಿದ ಪ್ರಪ್ರಥಮ ಹರಿದಾಸನಾಗಿದ್ದಾನೆ.ನೂರು ಯೋಜನ ವಿಸ್ತಾರದ ಮಹಾಸಮುದ್ರವನ್ನು ಹಾರಿ ಸೀತೆಯು,ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ.ಮುಂದೆ ರಾವಣನೊಂದಿಗೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರುವಲ್ಲಿ ಹನುಮಂತ ಶ್ರೀರಾಮನಿಗೆ ಹಲವು ವಿಧದಲ್ಲಿ ನೆರವಾಗುತ್ತಾನೆ.


ಹನುಮಂತ ಸಪ್ತ ಚಿರಂಜೀವಿಗಳಲ್ಲಿ ಒಬ್ಬ, ಮಹಾಬ್ರಹ್ಮಚಾರಿ,ಅದ್ವಿತೀಯ ಪಂಡಿತ,ಮಹಾ ಮೇಧಾವಿ,ಸಂಗೀತ ವಿಶಾರದ,ಇಚ್ಛಾರೂಪಿ.ಎಂಥದೇ ಕಾರ್ಯವನ್ನೂ ಮಾಡಬಲ್ಲ ಮಹಾ ಪರಾಕ್ರಮಿ,ಇಂತಹ ವಿಶಿಷ್ಟ ಸಾಮರ್ಥ್ಯಗಳಿಂದಾಗಿಯೇ ರಾಮನ ಪರಮಭಕ್ತನಾದ .ಇಂದಿಗೂ ಚಿರಂಜೀವಿಯೆಂದೇ ಪ್ರಖ್ಯಾತನಾಗಿರುವ ಹನುಮಂತ ಎಲ್ಲಿ ರಾಮಕಥೆ,ರಾಮಕೀರ್ತನೆಗಳು ಜರುಗುತ್ತವೆಯೋ ಅಲ್ಲಿ ಭಕ್ತಿಯಿಂದ ಕೈಮುಗಿದು ಕೇಳುತ್ತಾನೆಯೆಂದೇ ಭಕ್ತವಲಯದಲ್ಲಿ ನಂಬಿಕೆಯಿದೆ.ಪ್ರಥಮ ಹರಿದಾಸನಾದ ಹನುಮಂತನನ್ನು ಮುಂದೆ ಬಂದ  ಹರಿದಾಸ-ದಾಸಿಯರೆಲ್ಲ ತಮ್ಮ ರಚನೆಗಳ ಮೂಲಕ ನಾನಾರೀತಿಯಿಂದ ಹಾಡಿಹೊಗಳಿದ್ದಾರೆ.ಹನುಮಂತನು ಚೈತ್ರಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಜನಿಸಿದ,ಈ ಪರಮಪುಣ್ಯ ದಿನದಂದು ನಾಡಿನಾದ್ಯಂತ ಅವನ ಜನ್ಮದಿನೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹನುಮಜಯಂತಿಯ ದಿನ ಅಂಜನಿಪುತ್ರ ಹನುಮಂತನನ್ನು ಶ್ರದ್ಧೆಯಿಂದ ಪೂಜಿಸುವವರ ಸಂಕಷ್ಟಗಳು ದೂರವಾಗಿ ಶನಿ ಬಾಧೆ,ಕುಜದೋಷ ನಿವಾರಣೆಯಾಗಿ ಅಭೀಷ್ಟಸಿದ್ಧಿಯಾಗುತ್ತದೆ ಎಂಬುದು ಆಸ್ತಿಕವಲಯದಲ್ಲಿ ಬಲವಾದ ನಂಬಿಕೆಯಿದೆ. 


✍️ ವೀಣಾ ಬರಗಿ.ಹುಬ್ಬಳ್ಳಿ




 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top