ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಪ್ರಮುಖ ಮಹೋತ್ಸವಗಳಲ್ಲಿ ಮಹತ್ತರವಾದ ದ್ವೈವಾರ್ಷಿಕ ಶ್ರೀಕೃಷ್ಣಪೂಜಾ ಪರ್ಯಾಯ ದೀಕ್ಷೆ ಸ್ವೀಕರಿಸುವ ಯತಿಗಳು ಮಂಡಿಸುವ ಸರ್ವಜ್ಞ ಪೀಠಕ್ಕೆ ಸುವರ್ಣ ಕವಚ ಸಮರ್ಪಣೆ ಸೌರಯುಗಾದಿಯ (ಏಪ್ರಿಲ್ 14 ಸೋಮವಾರ) ಪರ್ವದಿನದಂದು ಪೂರ್ವಾಹ್ನ 9.30ಕ್ಕೆ ನಡೆಯಲಿದೆ.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸರ್ವಜ್ಞಪೀಠದಲ್ಲಿ ಶ್ರೀಕೃಷ್ಣನ ಉತ್ಸವಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಶ್ರೀಕೃಷ್ಣನಿಗೆ ಸಮರ್ಪಿಸುವರು. ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಉಪಸ್ಥಿತರಿರುವರು.
ಬಳಿಕ ಉತ್ಸವಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ರಥಬೀದಿಯಲ್ಲಿ ಯುಗಾದಿ ಉತ್ಸವ ನಡೆಯಲಿದೆ.
ಬೆಳಿಗ್ಗೆ 10.30ಕ್ಕೆ ಚಂದ್ರಶಾಲೆಯಲ್ಲಿ ಪುತ್ತಿಗೆ, ಅದಮಾರು ಹಾಗೂ ಭಂಡಾರಕೇರಿ ಶ್ರೀಗಳ ಉಪಸ್ಥಿತಿಯಲ್ಲಿ ವಿಶ್ವಾವಸು ಸಂವತ್ಸರದ ಪಂಚಾಂಗ ಶ್ರವಣ ನಡೆಯಲಿದೆ.
ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಸರ್ವಜ್ಞ ಪೀಠಕ್ಕೆ ಸುವರ್ಣ ಕವಚ ಸಮರ್ಪಣೆ ಯೋಗಾಯೋಗವಾಗಿದ್ದು, ಭಕ್ತರು ಅಪೂರ್ವವಾದ ಈ ಮಹೋತ್ಸವದಲ್ಲಿ ಭಾಗವಹಿಸುವಂತೆ ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ