ಹರಿಹರಪುರದಲ್ಲಿ 'ವೈಭವದ ಬ್ರಹ್ಮೋತ್ಸವ' ಮತ್ತು 'ಅದ್ಧೂರಿ ಕೃಷಿ ಮೇಳ'

Upayuktha
0


ಹರಿಹರಪುರ: ಸಪ್ತ-ಋಷಿಗಳಲ್ಲಿ ಅಗಸ್ತ್ಯ ಮಹರ್ಷಿಗಳು ಅತ್ಯಂತ ಪ್ರಮುಖರು. ಅಗಸ್ತ್ಯ ಮಹರ್ಷಿಗಳು  ಲಕ್ಷ್ಮಿನರಸಿಂಹ ದೇವರನ್ನು ಕುರಿತು ತಪಸ್ಸು ಮಾಡಿದ ದಿವ್ಯಕ್ಷೇತ್ರ ಹರಿಹರಪುರ. ಅಗಸ್ತ್ಯ ಋಷಿಗಳು ಪೂಜಿಸಿದ ಶ್ರೀ ಲಕ್ಷ್ಮಿನರಸಿಂಹ ಸಾಲಿಗ್ರಾಮಗಳು ಹರಿಹರಪುರ ಧರ್ಮಪೀಠದ ಗುರು ಪರಂಪರೆಯಲ್ಲಿ ಸಂರಕ್ಷಿಸಲ್ಪಟ್ಟಿವೆ ಮತ್ತು ಇಂದಿಗೂ ಪೂಜಿಸಲ್ಪಡುತ್ತಿವೆ.


ದಕ್ಷಿಣ ಭಾರತದಲ್ಲಿ ಅಗಸ್ತ್ಯರನ್ನು ಮುಂದುವರಿದ ಕೃಷಿ ತಂತ್ರಗಳು ಮತ್ತು ನೀರಾವರಿ ವ್ಯವಸ್ಥೆಗಳ ಜ್ಞಾನವನ್ನು ತಂದ ವ್ಯಕ್ತಿಯಾಗಿ ಚಿತ್ರಿಸಲಾಗಿದೆ. ಬೆಳೆಗಳನ್ನು ಬೆಳೆಸಲು ಮತ್ತು ಕೃಷಿ ಬೆಳವಣಿಗೆಗೆ ಬೆಂಬಲ ನೀಡಲು ಅಗಸ್ತ್ಯರು ಶ್ರಮಿಸಿದ್ದರು ಎಂದು ನಂಬಲಾಗಿದೆ. ಕವೇರ ರಾಜನ ಮಗಳು, ಅಗಸ್ತ್ಯರ ಪತ್ನಿಯಾಗಿದ್ದ ಕಾವೇರಿ, ಜೀವ ನದಿಯಾಗಿ ಹರಿದು, ಕೃಷಿ ನೀರಾವರಿಗೆ ಆಧಾರ ಸ್ಥಂಬವಾಗಿರುವುದು ಪುರಾಣ ಪ್ರಸಿದ್ಧ ಕತೆ. ಅದೇ ರೀತಿ ಹರಿಹರಪುರದಲ್ಲಿ ತಪಸ್ಸು ಮಾಡುತ್ತಿದ್ದ ಅಗಸ್ತ್ಯರು ಕೃಷಿಯ ಋಷಿಯಾಗಿ ತುಂಗೆಯನ್ನು ನೀರಾವರಿಗೆ ಬಳಸಿಕೊಂಡು, ಕೃಷಿ ಕ್ಷೇತ್ರವನ್ನು 'ನೆಕ್ಸ್ಟ್ ಲೆವೆಲ್ಲಿಗೆ' ಬೆಳವಣಿಗೆ ಮಾಡಿದ್ದರಂತೆ.


ಒಟ್ಟಿನಲ್ಲಿ, ಹರಿಹರಪುರದ ಇತಿಹಾಸಕ್ಕೂ, ಅಗಸ್ತ್ಯ ಮಹರ್ಷಿಗಳಿಗೂ, ಕೃಷಿ ತಂತ್ರಜ್ಞಾನ-ನೀರಾವರಿಗೂ ಕೊಂಡಿಗಳು ಬೆಸೆದಿರುವುದು ಹರಿಹರಪುರದ ಇತಿಹಾಸ ಸಾರುವ ಬರಹಗಳಲ್ಲಿ ಕಂಡು ಬರುತ್ತದೆ.


ಇದಕ್ಕೆ ಪೂರಕವಾಗಿ, ಅಗಸ್ತ್ಯ ಕ್ಷೇತ್ರ ಹರಿಹರಪುರದಲ್ಲಿ ದಿನಾಂಕ 08.04.2025 ರಿಂದ ನೆಡೆಯುವ ಐದು ದಿನಗಳ ಬ್ರಹ್ಮೋತ್ಸವ ಕಾರ್ಯಕ್ರಮದ ಜೊತೆ ಕೃಷಿ ಮೇಳ ವನ್ನು ಆಯೋಜಿಸಲಾಗಿದೆ.


ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರ ಪೂರ್ಣ ಅಶೀರ್ವಾದದೊಂದಿಗೆ, ಶ್ರೀ ಮಠದ ಆವರಣದಲ್ಲಿ ನೆಡೆಯುವ ಕೃಷಿ ಮೇಳ ದಲ್ಲಿ ಕೃಷಿ ಹಾಗೂ ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ.


ಇತ್ತೀಚೆಗೆ ಕೃಷಿಯಲ್ಲಿ ಕೂಲಿ ಕಾರ್ಮಿಕರ ಕೊರತೆ ಕಾಡುತ್ತಿದೆ. ಅದಕ್ಕೊಂದು ಸಣ್ಣ ಪರಿಹಾರವಾಗಿ ಜೊತೆಗೆ ಅನೇಕ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ನಿಟ್ಟಿನಲ್ಲಿ ಕೃಷಿಯನ್ನು ಆಧುನಿಕ ಮತ್ತು ಹೊಸದಾಗಿ ಆವಿಷ್ಕಾರಗೊಂಡಿರುವ ಕೃಷಿ ಯಂತ್ರೋಪಕರಣಗಳ ಬಳಕೆಗೆ ಪ್ರೋತ್ಸಾಹ ನೀಡುವುದು ಈ ಕೃಷಿ ಮೇಳದ ಉದ್ದೇಶ.  


ಇದರ ಜೊತೆಗೆ ಸ್ಥಳೀಯ ಗ್ರಾಮೀಣ ಮತ್ತು ಕೃಷಿ ಉತ್ಪನ್ನಗಳ ಮಾರಾಟ, ಸಾವಯವ-ದ್ರವರೂಪದ ಗೊಬ್ಬರಗಳ ಪರಿಚಯ-ಮಾರಾಟ, ವಿವಿಧ ಜಾತಿಯ ಹೂವು ಹಣ್ಣಿನ ಗಿಡಗಳ ಖರೀದಿಗೆ ಅವಕಾಶ ಇರುತ್ತದೆ.


ಕರಕುಶಲ ಉತ್ಪನ್ನಗಳು, ಬಿದಿರು, ವಾಟೆ, ಬೆತ್ತದ ಬುಟ್ಟಿಗಳನ್ನು ಮಾರುವ ಮಳಿಗೆಗಳು ಐದು ದಿನಗಳೂ ತೆರೆದಿರುತ್ತವೆ.


ಲಾಸ್ಟ್ ಬಟ್ ನಾಟ್ ಲೀಸ್ಟ್!!:

ಮಲೆನಾಡಿನ ರುಚಿಕರ ಭೋಜನದ ಅವಿಭಾಜ್ಯ ಅಂಗಗಳಾದ: 

ಊಟದ ರುಚಿ ಹೆಚ್ಚಿಸುವ ಉಪ್ಪಿನಕಾಯಿಗಳು, 

ಕುರುಂ ಕುರುಂ ಚಿಪ್ಸ್-ಹಪ್ಪಳ-ಸಂಡಿಗೆ, ಮುಂಬರುವ ಮಳೆಗಾಲಕ್ಕೆ ಇಂಗ್ಮೆಣಸು, ಮಜ್ಜಿಗೆ ಮೆಣಸು, ದಿಂಡಿನಕಾಯಿ ಗೊಜ್ಜು, ತೊಕ್ಕು, 

ದೋಸೆ-ರೊಟ್ಟಿಗೆ ನಂಜಿಕೊಳ್ಳಲು ಆಲೆಮನೆಯಿಂದ ನೇರವಾಗಿ ಬಂದ ಜೋನಿಬೆಲ್ಲ, 

ಘಮಘಮಿಸುವ ರುಚಿಯಾದ ಸಾರು-ಸಾಂಬಾರ್-ಚಟ್ಣಿ ಪುಡಿಗಳು, 

ಶುದ್ಧ ತುಪ್ಪ, ಪರಿಶುದ್ಧ ಜೇನು ತುಪ್ಪ, 

ಕೋಡುಬಳೆ, ಚಕ್ಕುಲಿ, ಚಕ್ಕುಲಿ ಹಿಟ್ಟುಗಳು ನಿಮ್ಮ ಖರೀದಿಗೆ ಲಭ್ಯವಿರುತ್ತದೆ.


ಬ್ರಹ್ಮೋತ್ಸವ ಮತ್ತು ಕೃಷಿ ಮೇಳದಲ್ಲಿ ಪಾಲ್ಗೊಂಡು, ಶ್ರೀ ಶಾರದೆ, ಶ್ರೀ ಲಕ್ಷ್ಮೀ ನರಸಿಂಹ, ಶ್ರೀ ಅಗಸ್ತ್ಯ ಮಹರ್ಷಿಗಳ, ಶ್ರೀ ಶಂಕರಾಚಾರ್ಯರ ದರ್ಶನ ಮಾಡಿ, ರಾಜ್ಯದ ಬೇರೆ ಬೇರೆ ಕಡೆಗಳಿಂದ ಆಗಮಿಸುತ್ತಿರುವ ಅನೇಕ ಮಠಗಳ ಪೀಠಾಧಿಪತಿಗಳ ಆಶೀರ್ವಾದವನ್ನು ಪಡೆದು ಕೃತಾರ್ಥರಾಗೋಣ ಬನ್ನಿ.


ಕೊನೆಯಲ್ಲಿ ಒಂದು ವಿನಂತಿ: 

ನೀವು ಬರುವಾಗ, ತ್ಯಾಜ್ಯವಾಗಬಹುದಾದ ಯಾವ ಪ್ಲಾಸ್ಟಿಕ್‌ನ್ನು ತರಬೇಡಿ. ತಂದ ಯಾವ ಪ್ಲಾಸ್ಟಿಕ್ ತ್ಯಾಜ್ಯವನ್ನು ಹರಿಹರಪುರದಲ್ಲಿ ಉಳಿಸಬೇಡಿ. ಪ್ಲಾಸ್ಟಿಕ್‌ನ್ನು ಕಡಿಮೆ ಬಳಸುವ ಮೂಲಕ ಪರಿಸರಕ್ಕೂ, ಸಕಲ ಜೀವಿಗಳಿಗೂ, ಮುಂದಿನ ತಲೆಮಾರಿಗೂ ಒಂದು ಶುಭಾಶಯ ಕೋರೋಣ.  


ವೈಭವದ ಬ್ರಹ್ಮೋತ್ಸವ ಮತ್ತು ಕೃಷಿ ಮೇಳಗಳಿಗೆ ನಿಮ್ಮ ಆಗಮನವನ್ನು ಹರಿಹರಪುರ ನಿರೀಕ್ಷಿಸುತ್ತಿದೆ.



- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top