ನಮ್ಮೂರಿನ ನಿಗಿನಿಗಿ ಕೆಂಡದಲ್ಲಿ ಬೇಯಿಸಿದ ಉಬ್ಬುರೊಟ್ಟಿ, ಹುಡಿಹೋಳಿಗೆ ಮತ್ತು ಕಾಯಿಹಾಲು. ಅಜ್ಜಿ ಉಪವಾಸದ ಫಳಾರವಾಗಿದ್ದ ಗೋದಿದೋಸೆ, ತೆಂಗಿನಕಾಯಿ, ಹಸಿಮೆಣಸಿನ ಚಟ್ಲಿ- ಇಂತವನ್ನೆಲ್ಲಾ ನೆನೆಸಿದರೆ ಚಪಲವಾಗಿ ಆದರೆ, ಅದೆಲ್ಲಾ ಎಲ್ಲಿ ಲಭ್ಯ? ಇದ್ದಿದ್ದರಲ್ಲೇ ಮ್ಯಾಗಿ ಊಟವನ್ನು ಟು ಮಿನಿಟ್ಸ್‌ನಲ್ಲಿ ಮಾಡಿ ಇಲ್ಲವೇ ಕೆಎಫ್‌ಸಿ ಫ್ರೈಡ್ ತಿಂದು ಹಸಿವು ನೀಗಿಸಿಕೊಳ್ಳುವ ಪರಿಪಾಠ ಮೈಗೂಡಿತ್ತು. ಈಗ ಚೆನ್ನಾಗಿ ಬದುಕಿ, ಬಾಳಬೇಕಾದರೆ ನಮ್ಮದೇ ಆಹಾರ ಪದ್ಧತಿ ಮೇಲು ಎಂಬ ತಿಳಿವಳಿಕೆ ಬರತೊಡಗಿದೆ.
ಇನ್ನು ಮುಂದೆಯೂ ನಾವು ಪರಿಸರವನ್ನು ಕಡೆಗಣಿಸಿದರೆ ಮುಂದೆ ದಿನ ಊಟಕ್ಕೆ ತರಕಾರಿಯೂ ಸಿಗಲಾರದು. ಹೊಟ್ಟೆಗೆ ಮೊಟ್ಟೆಯಾಗಲೀ, ಮೀನಾಗಲೀ ಬಂದು ಬೀಳಲಾರದು. ತರಕಾರಿಯದು ಕೂಡಾ, ಮೀನಿನ ಮಾರುಕಟ್ಟೆ ಮೀರಿಸುವ ಮಾದರಿಯಲ್ಲಿ ಬೇಕಾಬಿಟ್ಟಿ ರೇಟು ಮೇಲೇರುವ ಸಮಸ್ಯೆ ಬಗ್ಗೆ ಮಾಧ್ಯಮರು ಹೈಲೈಟು ಮಾಡುತ್ತಲೇ ಇರುತ್ತಾರೆ. ಮತ್ತೊಂದು ಗಮನ ಹರಿಸಬೇಕಾದ ಈ ಏನೆಂದರೆ ಬೆಳೆ ತೋಟದ ಕಾಯಿಪಲ್ಲೆಗಳದಿರಲಿ, ಕೆರೆ, ನದಿ, ಹೊಳೆ, ಕಡಲುಗಳ ಬಾಳೆಕಾಯಿಯದಿರಲಿ ಪರಿಸರ ಕಡೆಗಣಿಸುವಿಕೆಯಿಂದ ಉತ್ಪಾದನೆ, ಗುಣಮಟ್ಟದ ಮೇಲಾಗುವ ದುಷ್ಪರಿಣಾಮದ ಬಗೆಗಿನದು.
ಒಮ್ಮೆ ಕೊಂಕಣಿ ಮಸಾಲೆ ಮೀನಿನ ಅಡುಗೆ ವಿಶೇಷಕ್ಕೆ ಹೆಸರಾಗಿ ಸಮುದ್ರಾಹಾರ ಪ್ರಿಯರ ಹೊಟ್ಟೆ-ಹೃದಯಗಳೆರಡನ್ನೂ ಸೆಳೆದಿರುವ ಖಾನಾವಳ ಊಟ ಮಾಡುತ್ತಿರುವಾಗ ಪಕ್ಕದ ತಟ್ಟೆಯಲ್ಲಿದ್ದ ಕಾಣೆ ಮೀನಿನ ಗಾತ್ರ ದ ಬಂದಿತು. ಲೇಡೀಸ್ ಫಿಂಗರ್ ಎಂದೂ ಹೆಸರಿರುವ ಮೀನು ಚಿಕ್ಕ ಬೆಂಡೆಕಾಯಿಗಿಂತ ಸಣ್ಣಗಿತ್ತು. ತಿಂದರೆ ಮುಳ್ಳೇ ಅಧಿಕ. ಈಗ ಮೀನೇ ಬರಲ್ಲ ಸಾರ್, ಬರೋದೇ ಚಿಕ್ಕ ಸೈಜ್. ಒಮ್ಮೊಮ್ಮೆ ಇನ್ನೂ ಚಿಕ್ಕದಿರುತ್ತದೆಂದು ಸಪ್ಲಾಯರ್ ಸಮಜಾಯಿಷಿ ಹೇಳಿದ. ತಿನ್ನಲು ಎಂದಾಗ ಎಂಟತ್ತು ಇಂಚಾದರೂ ಉದ್ದವಿರಬೇಕಾದ ಕಾಣೆಯ-ಮರಿಗಳೇ ಡೈನಿಂಗ್ ಟೇಬಲ್‌ಗಳಲ್ಲಿ ಕಾಣ ತೊಡಗಿದೆಯೆಂದರೆ, ಅದರ ಓವರ್ ಎಕ್ಸಪ್ಲಾಯಿಟೇಶನ್ ನಡೆದಿದೆ ಎಂದೇ ಅರ್ಥ. ಅದು ಹಳೆಯ ಕಥೆ. ಈಗ ಊಟದ ತಟ್ಟೆಗೆ ಪದಾರ್ಥವಾಗಿ ಬಂದು ಬೀಳುವ ಸಿಗಡಿಗಳು, ಕೆಲವು ಜಾತಿ ಮೀನುಗಳು ಸಾಕಾಣಿಕೆದಾರರು ಕೊಡುವ ರೆಡಿಮೇಡ್ ಫುಡ್ ತಿಂದು ಬೆಳೆಯುವ ಉತ್ಪನ್ನಗಳು!
ನದಿಗಳು ಸಮುದ್ರ ಸೇರುವ ಅಳಿವೆಯಲ್ಲಿ ಮಾತ್ರ ಬೆಳೆಯುವ ಮೀನು ಕಾಣೆ. ಅದಕ್ಕೆ ಸಿಹಿ-ಉಪ್ಪು ನೀರುಗಳ ಮಿಶ್ರಣ ಬೇಕು. ಸಮುದ್ರದ ಕೊಡುಗೆಯಾದ ಸೀಗಡಿಯಲ್ಲಿ ನಾಲ್ಕು ತರಹಗಳಿವೆ. ಅದನ್ನೂ ಕೃತಕವಾಗಿ ನದಿಸೆರಗಿನಲ್ಲಿ ಬೆಳೆಸಿ, ಸಾಕಿ ರಫ್ತು ಮಾಡುವ ಸಂಸ್ಕೃತಿ ಎಂದೋ ಬಂದಿದೆ. ಹಾಗೆಯೇ ಆಳಿವೆಗಳಲ್ಲಿ ಕಾಣೆಯನ್ನು ಗೊಬ್ಬರದಂತೆ ಫುಡ್ ಹಾಕಿ ದೊಡ್ಡದಾಗಿಸುವ ತಂತ್ರವೂ ಆಳವಡಿಕೆಯಾಗಿದೆಯಂತೆ. ಇಂತಹ ಮೀನುಬೆಳೆಗಳು, ಕೇವಲ ಸೀಮೆ ಗೊಬ್ಬರದಲ್ಲಿ ಬೆಳೆದ ಹೈಬ್ರಿಡ್ ತರಕಾರಿಗಳಂತೆ ನೋಡಲು ಗಾತ್ರದಲ್ಲಿ ಬಣ್ಣದಲ್ಲಿ ಆಕರ್ಷಣೀಯವಾಗಿದ್ದರೂ, ತಿನ್ನಲು ರುಚಿಕಮ್ಮಿ. ಸಮುದ್ರ ತರಕಾರಿಗಳನ್ನು ಕೊಳಚೆ ನೀರಾಶ್ರಯದಿಂದಲೂ, ರಾಸಾಯನಿಕ ಗೊಬ್ಬರದ ರಾಶಿಯಿಂದಲೂ ಬೆಳೆಯ ಹೊರಟಿರುವುದಲ್ಲದೆ, ಖುಶಿ ಕಂಡಂತೆ ಕೀಟನಾಶಕಗಳನ್ನೆರಚಿ ಸಾಕುವುದೂ ಸಾಮಾನ್ಯ. ಆಗಲಿ. ಅದಕ್ಕೆಲ್ಲ ಕಾರಣ, ಯಾವುದರಲ್ಲೇ ಆಗಲಿ, ಸಂರಕ್ಷಿತ ಅಭಿವೃದ್ಧಿಯನ್ನು ಮರೆತು, ಅತಿಲಾಭ ಹೊಡೆಯುವ ವಾಣಿಜ್ಯೋದ್ದೇಶ ನಮ್ಮಲ್ಲಿಯೂ ಬಲವಾಗುತ್ತಿರುವುದೇ ಆಗಿದೆ.
20 ವರ್ಷಗಳ ಹಿಂದೆ ಮೀನು ಎಂದರೆ ಮೂಗು ಮುರಿದು ಮಾರು ದೂರ ಹಾರುತ್ತಿದ್ದ ಬೆಂಗಳೂರಿಗರು ಈಗ ಮೀನು ಹುರಿದು ತಿನ್ನುವುದರಲ್ಲಿ ಬಕಾಸುರರಾಗುತ್ತಿದ್ದಾರೆ. ಮಂಗೂರು, ಮದ್ರಾಸ್‌ಗಳಿಂದ ಬರುವ ಟನ್‌ಗಟ್ಟಳೆ ಮೀನುಗಳೂ ಸಾಕಾಗದೆ ಬೆಲೆ ಸಮುದ್ರಮಟ್ಟದಿಂದ ಘಟ್ಟಕ್ಕೇರಿದೆ. ಬೆಂಗಳೂರಂತೂ ಈಗ ಮಹಾಭಾರತ ದೇಶದಲ್ಲಿಯೇ ಅತ್ಯಂತ ಹೆಚ್ಚು ಮೀನು ಬೇಡಿಕೆಯಿರುವ ನಗರವೆಂದು ಮನ್ನಣೆ ಪಡೆದಿದೆ. ಹಾಗೆಯೇ, ವಿದೇಶಗಳಿಗೆ ರಫ್ತುಗೊಂಡ ಮೀನು, ಪ್ರಾನೂ ತಿರಸ್ಕೃತವಾದರೆ, ಫಾರೈನ್ ಕ್ವಾಲಿಟಿಯೆಂಬ ಸ್ಟಿಕ್ಕರ್ ಅಂಟಿಸಿಕೊಂಡು ಬಂದಿಳಿಯುವುದೇ ಬೆಂಗಳೂರಿಗಂತೆ. ಮೂವತ್ತು ವರುಷಗಳ ಹಿಂದೆ ಮೀನೂಟದ ಹೊಟೇಲುಗಳನ್ನು ಇಲ್ಲಿ ಬೆರಳೆಣಿಕೆಯಲ್ಲಿ ಹೇಳಬಹುದಿತ್ತು. ಈಗ ಗೂಗಲ್ ಸರಿನಲ್ಲಿ ಹೊಸಹೊಸ ಹೊಟೇಲುಗಳನ್ನು ಹುಡುಕಿಕೊಳ್ಳಬಹುದು. ಮೀನಡುಗೆ ಖಾದ್ಯಗಳ ಸವಿಯನ್ನು ಬೆಂಗ್ಯೂರಿಗರಿಗೆ ತಡೆಯಲಿಕ್ಕಾಗುವುದಿಲ್ಲ.
ಮೀನು ಎಂದರೆ ತುಳುವರು ಮಾತ್ರವಲ್ಲ, ಬೆಂಗಾಲಿಗಳು, ಮಲೆಯಾಳಿಗಳು, ಕನ್ನಡಿಗರು, ಬಿಲ್ಲವರು, ಬಂಟರು, ಭಟ್ಟರು, ಗೌಡ್ರು, ರೋಯ್‌ಗಳು, ಮನೋನ್‌ರು, ಸಮಾರ್ಜಿಗಳು ಎಂದು ಜಾತಿಬೇಧ, ಪ್ರಾಂತಭೇದವಿಲ್ಲದೆ ಸರ್ವಸಮಾನರಾಗಿ ಆಕರ್ಷಿತರು.
ಫಿಶ್ ಎಂದ ಕೂಡಲೇ "ಬಾಂಗ್ಡಾ ಈಸ್ ದಿ ಬೆಸ್ಟ್" ಎನ್ನುತ್ತಿದ್ದವರೆಲ್ಲರೂ ಈಗ ಕಾಣೆ, ಬೂತಾಯಿ, ಮಾಂಜಿ, ಸುರಾಯಿ, ಕೊಡ್ಡಾಯಿ, ಕೊಳ್ಳತ್ತರು ಎಂದು ಮೀನಾವಳ ಪ್ರಭೇದಗಳನ್ನೆಲ್ಲಾ ಗುರುತಿಸಿ ಚಪ್ಪರಿಸುವ ಗುಣಮಟ್ಟ ಬೆಳೆದಿದೆ.
ಹಳೆಯ ತಲೆಮಾರಿನ ನಮ್ಮ ಮೀನುಗಾರ ಹಿರಿಯರಲ್ಲಿ ಸಾಂಪ್ರದಾಯಿಕ ಬುದ್ದಿಮತ್ತೆ ಹಾಗೂ ಜ್ಞಾನ. ಎರಡೂ ಇತ್ತು. ಹೊಟ್ಟೆ, ಬದುಕಿಗೆ ಕೊಡುವ ಕಡಲತಾಯಿ ಬಗ್ಗೆ ಪೂಜ್ಯ ಭಾವನೆ ಸ್ಪುರಿಸುವ ನಂಬಿಕೆಗಳಿದ್ದವು. ಮೀನು ಸಂತತಿ ವೃದ್ಧಿಸುವ ಮಳೆಗಾಲದಲ್ಲಿ ಮೀನುಗಾರಿಕೆ ಮಾಡಿದರೆ, ಮರಿಮೀನು, ಮೊಟ್ಟೆ ಹಿಡಿದರೆ ಕಡಲಮ್ಮ ಕೋಪತಾಳಿ ಶಾಪ ಕೊಟ್ಟಾಳೆಂಬ ಭಯಭೀತಿಗಳಿದ್ದವು. ಅವೆಲ್ಲ ಸಾಮಾಜಿಕ, ಧಾರ್ಮಿಕ ಕಟ್ಟಳೆಗಳು "ವೈಜ್ಞಾನಿಕವಲ್ಲ, ಮೂಢನಂಬಿಕೆಗಳು" ಎಂಬ ಭಾವನೆ ಬೆಳೆಸಿದ ಆಧುನಿಕತೆಯ ಭರದಲ್ಲಿ ಮುಳುಗಿ ಹೋಗಿವೆ. ಮುಂದೇನಾದೀತೆಂಬ ಚಿಂತೆಯಿಲ್ಲದೆ ಬಾಚಿ ತೆಗೆದು ಕಡಲ ಹೊಟ್ಟೆ ಬರಿದು ಮಾಡಿ ಸಂಪಾದಿಸುವ ವಾಣಿಜ್ಯೋದ್ಯಮದ ದಾಸರಾಗಿದ್ದೇವೆ. ಮಳೆಗಾಲದಲ್ಲಿ ಮೀನು ಮೊಟ್ಟೆಯಿಟ್ಟು ಸಂಸಾರ ಬೆಳೆಸುವ ಸಂದರ್ಭದಲ್ಲಿ ಕಳ್ಳಾಟಿಕೆ ಮೀನುಗಾರಿಕೆಯಾಗುತ್ತಿದೆ ಯೆಂಬ ವರದಿ ನಮ್ಮ ಕರಾವಳಿಯಿಂದಲೇ ಬರುತ್ತಿದೆ.
ಏಡಿಗಳು (ಕ್ರಾಬ್) ನಮ್ಮ ಕಡಲತಡಿಯ ಆಹಾರ ಸರಪಳಿಗೆ ಕೊಡುವ ಕೊಡುಗೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ನಮ್ಮೂರಿನಲ್ಲಿ ಅಮ್ಮನನ್ನು ಕಳೆದುಕೊಂಡ ಎಳೆ ಬೊಮ್ಮಟೆಕಾಯಿಗಳಿಗೆ ಡೆಂಜಿ (ಕ್ರಾಬ್) ಮಾಂಸವನ್ನು ತೆಳ್ಳಗಾಗಿಸಿ ಗಂಜಿಯಂತೆ ಕೊಡುವ ಕ್ರಮವಿತ್ತೆಂದು ಕೇಳಿ ತಿಳಿದಿದ್ದೇನೆ. ಮುಂದುವರಿದ ದೇಶಗಳಲ್ಲಿ ಇಂತಹ ಪ್ರಾಕೃತಿಕ ಆಹಾರ ಸಬಲೀಕರಣ ಸರಪಳಿಗಳ ಬಗ್ಗೆ ಅಧ್ಯಯನ ಮಾಡಿ, ಕಾಪಾಡುವ ಬಗ್ಗೆ ಸಾಕಷ್ಟು ಪಾಸಿಟೀವ್ ಪ್ರೋಗ್ರಾಮುಗಳು ನಡೆಯುತ್ತಿವೆ.
ನಮ್ಮೂರುಗಳಿಗೆ ಮುಂದಾಲೋಚನೆಯಿಲ್ಲದೆ ಲಾಭೋದ್ದೇಶದಿಂದ ದೂರದ ದೇಶಗಳಿಂದ ಆಮದು ಮಾಡಿಕೊಂಡ ಕಾಂಗ್ರೆಸ್ ಹುಲ್ಲು, ನೇರಳೆ ಬಣ್ಣದ ಹೂಬಿಡುವ ತೇಲು ಸಸ್ಯ-ವಾಟರ್ ಹೇಸಿಂತ್ ಮತ್ತು ಭಾರೀ ವೇಗದಲ್ಲಿ ಸಂತಾನವೃದ್ಧಿ ಮಾಡುತ್ತದೆಂದು ತಂದು ಕೆರೆಕಟ್ಟೆಗಳಲ್ಲಿ ತಂದು ಹಾಕಿದ ಇತರೆಲ್ಲಾ ಮೀನುಗಳನ್ನು ತಿಂದು ಮುಕ್ಕುವ ಆಫ್ರಿಕನ್ ಕಾರ್ಪ್ ಎಂಬ ಮೀನು ತಂದಿತ್ತಿರುವ ಸಂಕಟಗಳ ಸರಮಾಲೆ ಏನೆಂದು ಹೇಳುವುದು!
ಮಳೆಗಾಲದ ಮೇ ತಿಂಗಳಿನಿಂದ ಆಗಸ್ಟ್‌ವರೆಗೆ ಸಮುದ್ರ ಮೀನುಗಾರಿಕೆ ಮಾಡಿದರೆ, ಕಡಲಮ್ಮನಿಗೆ ಕೋಪ ಬರುತ್ತದೆಂದು ಫಿಶಿಂಗ್ ಬ್ಯಾನ್ ಹಾಕುವ ಸಂಸ್ಕೃತಿ ನಮ್ಮ ಮೀನುಗಾರರಿಗೆ ಹಿರಿಯರಿಂದ ಬಂದಿದೆ. ಏಕೆಂದರೆ, ಅದು ಮೀನು ಮೊಟ್ಟೆಯಿಟ್ಟು ಮರಿಮಾಡುವ ಸೀಸನ್. ಆದರೆ, ಹೊಸ ಮೆಕಾನ್ಸೆಸ್ಟ್ ಬೋಟುಗಳು- ಎಂಟತ್ತು ದಿನಗಳ ಕಾಲ ಸಾಗರದಲ್ಲಿಯೇ ಇದ್ದು ಮೀನುಗಾರಿಕೆ ಆಧುನಿಕತೆ ಬಂದ ಮೇಲೆ ಅದೆಲ್ಲಾ ಮೂಢನಂಬಿಕೆಗಳೆಂದು ಹಳೆಪದ್ಧತಿ ಮರೆಯುತ್ತಾ ಬಂದಿದೆ. ಈ ರಾಜ್ಯದವರು ಮೀನುಗಾರಿಕೆ ಮಾಡದಿದ್ದರೆ, ಆ ರಾಜ್ಯದವರು ಮಾಡಲು ಬರುತ್ತಾರೆ. ಆವರೂ ಬಾರದಿದ್ದರೆ, ಕೊರಿಯನರು, ಚೀನಿಯರು ಎಂದು ವಿದೇಶೀ ಬೋಟುಗಳೂ ಸಮುದ್ರದ ಗಡಿದಾಟಿ ಬಂದು ಮೀನು ಹಿಡಿಯುವ ಕಾಲವಿದು. ಯಾವುದು ಸೈಯನ್ಸ್? ಯಾವುದು ಮೂಢನಂಬಿಕೆ? ಯಾವುದು ನಷ್ಟ, ಯಾವುದು ಲಾಭ? ತೂಕ ಹಾಕಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ