ನಂಬಿಕೆ ಬಹಳ ದೊಡ್ಡ ವಿಚಾರ. ನಾವು ಯಾರನ್ನೂ ಸುಮ್ಮಸುಮ್ಮನೆ ನಂಬುವುದಿಲ್ಲ. ನಮ್ಮ ಮುಂದೆ ನಿಂತು ಮಾತನಾಡುವವರ ಮಾತು, ಕೃತಿ, ನಡತೆ ಇವೆಲ್ಲವನ್ನು ಅವಲೋಕನ ಮಾಡುತ್ತೇವೆ. ಒಮ್ಮೊಮ್ಮೆ ಏಕಾಏಕಿ ನಂಬಿ ಮೋಸ ಹೋಗುವುದು ಉಂಟು. ಹಾಗೆಂದ ಮಾತ್ರಕ್ಕೆ ಯಾವಾಗಲೂ ಮೋಸ ಹೋಗುತ್ತೇವೆ ಎಂದಲ್ಲ. ನಂಬಿಕೆಯಲ್ಲಿ ಸ್ವಲ್ಪ ಎಚ್ಚರಿಕೆಯೂ ಇರಬೇಕಾಗುತ್ತದೆ.
ಹಾಗೆಂದು ಯಾರನ್ನೂ ನಂಬುವುದಿಲ್ಲ ಎಂದು ಹೇಳಲಾಗುವುದಿಲ್ಲ. ಏಕೆಂದರೆ ನಮ್ಮ ಬದುಕು- ಬವಣೆ, ಬಾಳು ಗೋಳು, ಸುಖ-ದುಃಖ, ಹಿನ್ನಡೆ - ಮುನ್ನಡೆ, ಸೋಲು-ಗೆಲುವು ಎಲ್ಲವೂ ನಂಬಿಕೆಯ ಮೇಲೆ ನಿಂತಿರುತ್ತವೆ. ಚಿಂಟು ಮತ್ತು ಮಿಂಟು ಎಂಬ ಇಬ್ಬರು ಹುಡುಗರು ಎಂಟನೇ ತರಗತಿಯಲ್ಲಿ ಓದುತ್ತಿದ್ದರು. ಚಿಂಟುವಿಗೆ ಗುರುಗಳ ಪಾಠದಲ್ಲಿ ಮತ್ತು ಅವರ ಮಾತಿನ ಮೇಲೆ ಬಹಳ ನಂಬಿಕೆ ಇತ್ತು. ಆದರೆ ಮಿಂಟು ಸ್ವಲ್ಪ ವಿಭಿನ್ನ. ಅವನಿಗೆ ಯಾರ ಮೇಲೂ ನಂಬಿಕೆಯಿರುತ್ತಿರಲಿಲ್ಲ. ಅನುಮಾನದ ಪ್ರಾಣಿ. ಗುರುಗಳ ಪಾಠದಿಂದ ಹಿಡಿದು, ಸ್ನೇಹಿತರ ಮಾತುಗಳು, ಸಹೋದರನ ನಡವಳಿಕೆ, ಯಾವುದನ್ನು ನಂಬುತ್ತಿರಲಿಲ್ಲ. ಎಲ್ಲವನ್ನು ಅನುಮಾನದಿಂದಲೇ ನೋಡುತ್ತಿದ್ದ ಮತ್ತು ಹಾಗೆಯೇ ಯೋಚಿಸುತ್ತಿದ್ದ. ಇಂಥ ಅನುಮಾನಗಳಿಂದ ಮಿಂಟು ಅನೇಕ ಸಲ ಅವಮಾನಗಳನ್ನು ಎದುರಿಸಿದ್ದಾನೆ. ಗುರುಗಳಿಂದ ಶಿಕ್ಷೆಯನ್ನೂ ಅನುಭವಿಸಿದ್ದಾನೆ. ಹೀಗೆಯೇ ಅವರಿಬ್ಬರ ವ್ಯಾಸಂಗದ ಬದುಕು ಸಾಗುತ್ತಿತ್ತು.
ಎಂಟನೇ ತರಗತಿಯ ವಾರ್ಷಿಕ ಪರೀಕ್ಷೆಗಾಗಿ ವಿದ್ಯಾರ್ಥಿಗಳ ಸಿದ್ಧತೆ ನಡೆದಿತ್ತು. ಚಿಂಟು ನಂಬಿಕೆಯಿಂದ ಓದಿದನು. ಮಿಂಟುವಿಗೆ ಪಠ್ಯಪುಸ್ತಕದ ಮೇಲಾಗಲಿ, ಗುರುಗಳ ಮೇಲಾಗಲಿ, ತನ್ನ ಓದಿನಲ್ಲಾಗಲಿ ಒಂದು ಸ್ವಲ್ಪವೂ ನಂಬಿಕೆಯರಲಿಲ್ಲ. ಚಿಂಟುವಿಗೆ ತಾನು ಮಾಡುವ ಕೆಲಸದಲ್ಲಿ ಅಪಾರ ನಂಬಿಕೆ ಇತ್ತು ಮತ್ತು ಅದನ್ನು ಶ್ರದ್ಧೆ ಹಾಗೂ ನಿಷ್ಠೆಯಿಂದ ಮಾಡುತ್ತಿದ್ದನು. ಚಿಂಟು ಮತ್ತು ಮಿಂಟು ಇಬ್ಬರೂ ಎಂಟನೇ ತರಗತಿಯ ವಾರ್ಷಿಕ ಪರೀಕ್ಷೆಗೆ ಕುಳಿತರು. ಚಿಂಟು ತನ್ನ ಉತ್ತರಗಳನ್ನು ಪರೀಕ್ಷೆಯ ನಿರ್ದಿಷ್ಟ ಸಮಯದೊಳ ಗಾಗಿ ನಂಬಿಕೆಯಿಂದ ಬರೆದನು. ಆದರೆ ಮಿಂಟುವಿಗೆ ಉತ್ತರಗಳು ಗೊತ್ತಿದ್ದರೂ ಬರೆಯುವಾಗ ಸರಿಯೋ ತಪ್ಪೋ, ಸರಿಯೋ ತಪ್ಪೋ ಎಂಬು ಅನುಮಾನದ ಪೆಡಂಭೂತ ಕಾಡುತ್ತಲೇ ಇತ್ತು. ಹೀಗೆಯೇ ಯೋಚಿಸುತ್ತಾ, ಚಿಂತಿಸುತ್ತಾ ಕುಳಿತುಕೊಂಡ ಮಿಂಟು ಒಂದೇ ಒಂದು ಪ್ರಶ್ನೆಗೂ ಉತ್ತರ ಬರೆಯದೇ ಖಾಲಿ ಹಾಳೆಯನ್ನು ಕೊಡಬೇಕಾಯಿತು. ಅಂತಿಮವಾಗಿ ಎಂಟನೇ ತರಗತಿಯ ಫಲಿತಾಂಶ ಪ್ರಕಟವಾದಾಗ ನಂಬಿಕೆಯಿಂದ ಪರೀಕ್ಷೆ ಬರೆದ ಚಿಂಟು ಉತ್ತೀರ್ಣನಾಗಿದ್ದನು. ಚಿಂಟುವಿಗೆ ನಂಬಿಕೆಯೇ ಬೆಳಕಾಗಿತ್ತು. ಆದರೆ ಮಿಂಟು ಎಂಟನೇ ತರಗತಿಯಲ್ಲೇ ಡುಂಕಿ ಹೊಡೆದನು.