ಅತ್ಯಾಚಾರಿ ಆಂಗ್ಲರಿಗೆ ಕಡಿವಾಣ ಹಾಕಿದ ಚಾಪೇಕರ ಸಹೋದರರು.
ಪ್ಲೇಗ್ ನ ನೆಪದಲ್ಲಿ ಪುಣೆಯ ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಅಧಿಕಾರಿ ರಾಡ್ ನನ್ನು ದಾಮೋದರ ಪಂತರು ಗುಂಡಿಕ್ಕಿ ಕೊಂದರು. ಆ ಸಮಯದಲ್ಲಿ ಐಯರ್ಸ್ಟ್ ಎಂಬ ಅಧಿಕಾರಿಗೆ ಬಾಳಕೃಷ್ಣರು ಗುಂಡು ಹಾರಿಸಿದರು. ಈ ಪ್ರಕರಣದಲ್ಲಿ ಸಂಚು ಮಾಡಿದವನನ್ನು ವಾಸುದೇವರು ಮುಗಿಸಿದರು. ಈ ಚಾಪೇಕರ ಸಹೋದರರನ್ನು ಆಂಗ್ಲರು ಗಲ್ಲಿಗೇರಿಸಿದರು. ಈ ಮೂವರು ಸೋದರರು ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು.
ಕ್ರಾಂತಿಕಾರಿ ಕಾರ್ಯದ ಅವಶ್ಯಕತೆಯೆಂದು ಪ್ರತಿದಿನ ಸಾವಿರದ ಇನ್ನೂರು ಸೂರ್ಯ ನಮಸ್ಕಾರ ಮತ್ತು ಹನ್ನೊಂದು ಮೈಲಿಗಳ ವೇಗ ಸಾಧಿಸುವುದು:
ದಾಮೋದರ ಹರಿ ಚಾಪೇಕರ ಅವರ ಮೂಲ ಮನೆತನ ಕೊಂಕಣದ ವೇಳಣೇಶ್ವರದ್ದು; ಆದರೆ ಅವರ ಪೂರ್ವಜರು ಪುಣೆಯ ಸಮೀಪದ ಚಿಂಚವಾಡಕ್ಕೆ ಬಂದು ನೆಲೆಸಿದರು. ಅಲ್ಲಿಯೇ 25.06.1869 ರಂದು ದಾಮೋದರ ಪಂತರ ಜನನವಾಯಿತು.
ಬಾಲ್ಯದಿಂದಲೂ ದಾಮೋದರ ಪಂತರು ಮತ್ತು ಅವರ ಇಬ್ಬರು ಸಹೋದರರಾದ ಬಾಳಕೃಷ್ಣ ಮತ್ತು ವಾಸುದೇವ ಅವರಿಗೆ ಹಿಂದುಸ್ತಾನವನ್ನು ಪರಕೀಯರ ದಾಸ್ಯದಿಂದ ಮುಕ್ತಗೊಳಿಸುವ ಹಂಬಲವಿತ್ತು. ಕ್ರಾಂತಿಕಾರಿ ಕಾರ್ಯದ ಅವಶ್ಯಕತೆಯಿಂದ ಅವರು ಪ್ರತಿದಿನ ಸಾವಿರದ ಇನ್ನೂರು ಸೂರ್ಯ ನಮಸ್ಕಾರಗಳನ್ನು ಹಾಕುತ್ತಿದ್ದರು, ಹಾಗೆಯೇ ಒಂದು ಗಂಟೆಯಲ್ಲಿ ಹನ್ನೊಂದು ಮೈಲಿಗಳಷ್ಟು ವೇಗವಾಗಿ ಓಡುವ ಸಾಮರ್ಥ್ಯವನ್ನು ಸಹ ಅವರು ಪಡೆದಿದ್ದರು.
ದಾಮೋದರ ಮತ್ತು ಬಾಳಕೃಷ್ಣ ಅವರು ಮುಂಬಯಿಯ ರಾಣಿ ವಿಕ್ಟೋರಿಯಾಳ ಪ್ರತಿಮೆಗೆ ಡಾಂಬರು ಬಳಿದು ಚಪ್ಪಲಿಗಳ ಹಾರವನ್ನು ಹಾಕಿದ್ದು:
ದಾಮೋದರ ಪಂತರ ತಂದೆ ಹರಿಭಾವು ಅವರು ಪ್ರತಿ ಚಾತುರ್ಮಾಸದಲ್ಲಿ ಮುಂಬಯಿಗೆ ಹೋಗಿ ಪ್ರವಚನಗಳನ್ನು ನೀಡುವ ಪದ್ಧತಿ ಇತ್ತು. 1896 ರ ಚಾತುರ್ಮಾಸದಲ್ಲಿ ತಮ್ಮ ತಂದೆಯೊಂದಿಗೆ ಮುಂಬಯಿಗೆ ಹೋದ ದಾಮೋದರ ಮತ್ತು ಬಾಳಕೃಷ್ಣ ಅವರು ಅಲ್ಲಿನ ರಾಣಿ ವಿಕ್ಟೋರಿಯಾಳ ಪ್ರತಿಮೆಗೆ ಡಾಂಬರು ಬಳಿದು ಚಪ್ಪಲಿಗಳ ಹಾರವನ್ನು ಹಾಕಿದರು. ಆ ಸಮಯದಲ್ಲಿ ಕಾಂಗ್ರೆಸ್ ಅಧಿವೇಶನಗಳು ಬ್ರಿಟಿಷ್ ರಾಣಿಯ ಸ್ತುತಿಯಿಂದ ಪ್ರಾರಂಭವಾಗುತ್ತಿದ್ದವು, ಇದು ತಿಳಿದಿರುವವರಿಗೆ ಈ ಧೈರ್ಯಶಾಲಿ ಕೃತ್ಯದ ಬೆಲೆ ತಿಳಿಯುತ್ತದೆ!
ಸನ್ನಿಪಾತ (ಪ್ಲೇಗ್) ರೋಗದ ನೆಪದಲ್ಲಿ ಆಂಗ್ಲ ಅಧಿಕಾರಿ ರಾಡ್ ನಿಂದ ನಾಗರಿಕರ ಮೇಲೆ ದೌರ್ಜನ್ಯ:
1896 ರಲ್ಲಿ ಗ್ರಂಥಿಗಳ ಸನ್ನಿಪಾತ (ಪ್ಲೇಗ್) ರೋಗವು ಪುಣೆಯಲ್ಲಿ ವೇಗವಾಗಿ ಹರಡಲು ಪ್ರಾರಂಭಿಸಿತು. ಸರಕಾರವು ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ‘ರಾಡ್’ ಎಂಬ ಐ.ಸಿ.ಎಸ್. ಅಧಿಕಾರಿಯನ್ನು ನೇಮಿಸಿತು. ಅವನ ಬಿಳಿಯ ಸೈನಿಕರು ಮನೆಗಳನ್ನು ತಪಾಸಣೆ ಮಾಡುವ ನೆಪದಲ್ಲಿ ನಾಗರಿಕರ ಮೇಲೆ ದೌರ್ಜನ್ಯ ಎಸಗಲು ಪ್ರಾರಂಭಿಸಿದರು.
ಬಾಳಕೃಷ್ಣರು ವಾಸುದೇವ ರಾಯರ ‘ಗೊಂದ್ಯಾ ಆಲಾऽ ರೇ ಆಲಾ…’ ಎಂಬ ಸಂಕೇತ ಕೇಳಿ ಐಯರ್ಸ್ಟ್ಗೆ ಮತ್ತು ರಾಡ್ ನ ಹತ್ಯೆ :
ಪುಣೆಯ ಈ ದೌರ್ಜನ್ಯಗಳು ಚಾಪೇಕರ ಸಹೋದರರ ಹೃದಯದಲ್ಲಿ ಪ್ರತೀಕಾರದ ಕಿಚ್ಚನ್ನು ಹೆಚ್ಚಿಸುತ್ತಾ ಹೋದವು. ರಾಡ್ ನ ಮೇಲೆ ಸೇಡು ತೀರಿಸಿಕೊಳ್ಳುವ ಅವಕಾಶ ಚಾಪೇಕರ ಸಹೋದರರಿಗೆ ಶೀಘ್ರದಲ್ಲೇ ಸಿಕ್ಕಿತು. 1897 ನೇ ವರ್ಷ ರಾಣಿ ವಿಕ್ಟೋರಿಯಾಳ ಆಳ್ವಿಕೆಯ 60 ನೇ ವರ್ಷವಾಗಿತ್ತು. ಆ ನಿಮಿತ್ತ ಪುಣೆಯ ಗಣೇಶ ಖಿಂಡಿಯಲ್ಲಿರುವ ರಾಜಭವನದಲ್ಲಿ ಸಮಾರಂಭವನ್ನು ಆಯೋಜಿಸಲಾಗಿತ್ತು. 22.6.1897 ರ ರಾತ್ರಿ ಗಣೇಶ ಖಿಂಡಿಯ ಸಮಾರಂಭ ಮುಗಿದ ನಂತರ ರಾಡ್ ಮತ್ತು ಐಯರ್ಸ್ಟ್ ತಮ್ಮ ಪ್ರತ್ಯೇಕ ಕುದುರೆ ಗಾಡಿಗಳಲ್ಲಿ ಹೊರಟರು.
ಐಯರ್ಸ್ಟ್ನ ಕುದುರೆ ಗಾಡಿ ಮುಂದೆ ಇತ್ತು. ವಾಸುದೇವ ರಾಯರ ‘ಗೊಂದ್ಯಾ ಆಲಾऽ ರೇ ಆಲಾ…’ ಎಂಬ ಸಂಕೇತ ಕೇಳಿದ ತಕ್ಷಣ ಮತ್ತು ರಾಡ್ ನಂತೆ ಕಾಣುವ ಐಯರ್ಸ್ಟ್ನ ಕುದುರೆ ಗಾಡಿ ಕಾಣಿಸಿದ ತಕ್ಷಣ ಬಾಳಕೃಷ್ಣ ಓಡುತ್ತಿರುವ ಕುದುರೆ ಗಾಡಿಗೆ ಹತ್ತಿ ತಮ್ಮ ‘ರಿವಾಲ್ವರ್’ ಅನ್ನು ಐಯರ್ಸ್ಟ್ನ ತಲೆಯಲ್ಲಿ ಖಾಲಿ ಮಾಡಿದರು. ಆದರೂ ದೂರದಿಂದ ಬರುತ್ತಿರುವ ರಹಸ್ಯ ಕೂಗು ನಿಲ್ಲುತ್ತಿಲ್ಲ ಎಂದು ತಿಳಿದ ತಕ್ಷಣ ದಾಮೋದರ ಪಂತರಿಗೆ ವಿಷಯ ಅರ್ಥವಾಯಿತು.
ಬಾಳಕೃಷ್ಣ ಪಂತರು ಕಸಿದುಕೊಂಡ ಅವಕಾಶ ಮತ್ತೆ ಸಿಕ್ಕಿದ ಸಂತೋಷವೂ ಅವರಿಗಾಯಿತು. ರಾಂಡ್ ನ ಗಾಡಿಯ ಹಿಂದೆ ಓಡುತ್ತಿದ್ದ ವಾಸುದೇವ ರಾಯರನ್ನು ತಡೆದು ಅವರು ತಾವೇ ಗಾಡಿಯ ಮೇಲೆ ಹತ್ತಿದರು. ಮೇಲ್ಛಾವಣಿಯ ಪರದೆಯನ್ನು ಸರಿಸಿ ಅವರು ಬೆನ್ನು ಮಾಡಿದ ರಾಡ್ ನ ಮೇಲೆ ತಮ್ಮ ರಿವಾಲ್ವರ್ ಅನ್ನು ಖಾಲಿ ಮಾಡಿದರು. ದಾಮೋದರ ಪಂತರು ಕಾರ್ಯ ಸಿದ್ಧಿಯ ಸಂತೋಷದಲ್ಲಿ ಗಾಡಿಯಿಂದ ಕೆಳಗಿಳಿದರು; ಆದರೆ ಎರಡೂ ಘಟನೆಗಳು ಗಾಡಿ ಓಡಿಸುವವರ ಗಮನಕ್ಕೆ ಬರಲೇ ಇಲ್ಲ.
ಚಾಪೇಕಾರ ಬಂಧುಗಳಿಗೆ ಗಲ್ಲುಶಿಕ್ಷೆ:
ಕೆಲವು ತಿಂಗಳುಗಳ ನಂತರ ದ್ರಾವಿಡ ಸಹೋದರರ ಚಾಡಿ ಮಾತಿನಿಂದ ದಾಮೋದರ ಪಂತ ಮತ್ತು ಬಾಳಕೃಷ್ಣ ಪಂತರನ್ನು ಬಂಧಿಸಲಾಯಿತು. ಅವರ ಮೇಲೆ ಮೊಕದ್ದಮೆ ನಡೆದು 18.4.1898 ರಂದು ದಾಮೋದರ ಪಂತರಿಗೂ ಮತ್ತು 12.5.1899 ರಂದು ಬಾಳಕೃಷ್ಣ ಪಂತರಿಗೂ ಗಲ್ಲು ಶಿಕ್ಷೆ ವಿಧಿಸಲಾಯಿತು.
ಚಾಪೇಕರ ಸಹೋದರರ ಈ ಕಥೆ ಇಲ್ಲಿಗೆ ಮುಗಿಯಲಿಲ್ಲ. ದ್ರಾವಿಡ ಸಹೋದರರ ಚಾಡಿಯ ವಿಷಯ ತಿಳಿದ ತಕ್ಷಣ ಕಿರಿಯ ವಾಸುದೇವ ಪಂತರು ಕೋಪಗೊಂಡರು. ಮಹಾದೇವ ರಾನಡೆ ಎಂಬ ಸ್ನೇಹಿತನ ಸಹಾಯದಿಂದ ಅವರು ಚಾಡಿ ಹೇಳಿದ ದ್ರಾವಿಡ ಸಹೋದರರನ್ನು ಕೊಂದರು ಮತ್ತು 08.05.1899 ರಂದು ಅವರು ಸ್ವತಃ ಗಲ್ಲಿಗೇರಿದರು.
ರಾಂಡ್ ನ ಹತ್ಯೆಯ ಸಮಯದಲ್ಲಿ ದಾಮೋದರ ಪಂತರ ವಯಸ್ಸು 27 ವರ್ಷ, ಮಧ್ಯದ ಬಾಳಕೃಷ್ಣ ಪಂತರ ವಯಸ್ಸು 24 ವರ್ಷ ಮತ್ತು ಕಿರಿಯ ವಾಸುದೇವ ರಾಯರ ವಯಸ್ಸು 18 ವರ್ಷ! ಈ ಇಪ್ಪತ್ತು-ಇಪ್ಪತ್ತೈದು ವರ್ಷ ವಯಸ್ಸಿನ ಯುವಕರ ಅಪಾರ ತ್ಯಾಗ ಮತ್ತು ಶೌರ್ಯವನ್ನು ನೋಡಿ ಇಂದಿಗೂ ಎದೆ ಹೆಮ್ಮೆಯಿಂದ ತುಂಬಿ ಬರುತ್ತದೆ! ಮೂವರು ಸೋದರರು ರಾಷ್ಟ್ರ ಕಾರ್ಯಕ್ಕಾಗಿ ಮಾಡಿದ ಈ ಬಲಿದಾನ ಜಗತ್ತಿನಲ್ಲಿಯೇ ಅನನ್ಯ!
ರಾಷ್ಟ್ರ ಮತ್ತು ಧರ್ಮ ರಕ್ಷಣೆಗಾಗಿ ಪ್ರತಿದಿನ ಬಲೋಪಾಸನೆ ಮಾಡುವ ಚಾಪೇಕರ ಸಹೋದರರ ಆದರ್ಶವನ್ನು ನಾವೂ ಪಾಲಿಸೋಣ. ಚಾಪೇಕರ ಸಹೋದರರಿಗೆ ವಿನಮ್ರ ನಮನಗಳು!
- ಶರತ್ ಕುಮಾರ್
ಜಿಲ್ಲಾ ಸಮನ್ವಯಕರು
ಹಿಂದೂ ಜನಜಾಗೃತಿ ಸಮಿತಿ, ಬೆಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ