ಬದಲಾಗುತ್ತಿರುವ ಜೀವನ ಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಯಾವತ್ತೂ ಒತ್ತಡದಿಂದ ಕೂಡಿದ ಕೆಲಸದ ವಾತಾವರಣದಿಂದಾಗಿ ಮನುಷ್ಯ ರೋಗಗಳ ದಾಸನಾಗುತ್ತಿರುವುದು ಬಹಳ ನೋವಿನ ಸಂಗತಿ. ವೈಜ್ಞಾನಿಕತೆ, ತಂತ್ರಜ್ಞಾನ ಮತ್ತು ಹೊಸ ಹೊಸ ಅವಿಷ್ಕಾರಗಳಿಂದಾಗಿ ವೈದ್ಯಕೀಯ ಕ್ಷೇತ್ರ ಶ್ರೀಮಂತವಾಗಿದ್ದರೂ, ಜನರು ಮಾತ್ರ ದಿನೇ ದಿನೇ ಹೊಸ ಹೊಸ ರೋಗಕ್ಕೆ ತುತ್ತಾಗುವುದು ಬಹಳ ಸೋಜಿಗದ ಮತ್ತು ವಿಪರ್ಯಾಸದ ಸಂಗತಿ.
ವ್ಯಾಯಾಮವಿಲ್ಲದ ಬದುಕು, ದಿಢೀರ್ ಹಸಿವು ನೀಗಿಸುವ ಜಂಕ್ ಸಿದ್ದ ಆಹಾರಗಳು ಹಾಗೂ ಕೃತಕ ಪಾನೀಯಗಳು ಮತ್ತು ಯಾವತ್ತೂ ಒತ್ತಡದಿಂದ ಕೂಡಿದ ಕೆಲಸದ ವಾತಾವರಣದಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಮಧುಮೇಹ, ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು ಮತ್ತು ಅರ್ಬುದ ರೋಗಕ್ಕೆ ತುತ್ತಾಗುವುದು ಬಹಳ ದೌರ್ಭಾಗ್ಯದ ಸಂಗತಿ. ಹೆಚ್ಚಿನ ಹೃದಯ ಸಂಬಂಧಿ ರೋಗಗಳನ್ನು ನಿಯಂತ್ರಿತ ಆರೋಗ್ಯಕರ ಆಹಾರ, ದೈಹಿಕ ವ್ಯಾಯಾಮಗಳಿಂದ ಕೂಡಿದ ಜೀವನ ಪದ್ಧತಿ ಮತ್ತು ಒತ್ತಡ ರಹಿತ ಕೆಲಸದ ವಾತಾವರಣದಿಂದ ತಡೆಯಬಹುದು ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಇಂತಹ ಒಂದು ಖರ್ಚು ರಹಿತ, ಬಹಳ ಸುಲಭದ ಮತ್ತು ಪರಿಣಾಮಕಾರಿಯಾಗಿ ರೋಗ ತಡೆಗಟ್ಟುವ ಒಂದು ವ್ಯಾಯಾಮವೇ ‘ಬಿರುಸು ನಡಿಗೆ’.
ಬಿರುಸು ನಡಿಗೆ ಎಂದರೆ ದಿನವೊಂದರಲ್ಲಿ 45ರಿಂದ 75 ನಿಮಿಷಗಳ ಕಾಲ ಬಿರುಸಾಗಿ ನಡೆಯುವುದು ಬಹಳ ಸುಲಭದ ಮತ್ತು ಖರ್ಚಿಲ್ಲದ ಈ ನಡಿಗೆ ಹಲವಾರು ರೋಗಗಳನ್ನು ತಡೆಯುತ್ತದೆ ಎಂದು ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿದೆ. ಆಲ್ಪಾ ಪಟೇಲ್ ಎಂಬವರ ನೇತೃತ್ವದಲ್ಲಿ ಅಮೇರಿಕನ್ ಕ್ಯಾನ್ಸರ್ ಸೊಸೈಟಿಯಲ್ಲಿ ನಡೆದ ಸಂಶೋಧನೆಯಂತೆ 1,40,000 ಮಂದಿ ಭಾಗವಹಿಸಿದ್ದ ಈ ಅಧ್ಯಯನದಲ್ಲಿ ಸುಮಾರು 95 ಶೇಕಡಾ ಮಂದಿ ಕನಿಷ್ಠ ಬಿರುಸು ನಡಿಗೆ ನಡೆಸಿದರೂ ಹೃದಯದ ಮತ್ತು ಮೆದುಳಿನ ತೊಂದರೆ ಕಡಿಮೆಯಾಗುತ್ತದೆ ಎಂದೂ ಸಾಬೀತಾಗಿದೆ. ಕನಿಷ್ಟ ವಾರದಲ್ಲಿ ಎರಡೂವರೆ ಗಂಟೆಗಳ ನಡಿಗೆಯಿಂದಲೂ ಸಾಕಷ್ಟು ರೋಗಗಳನ್ನು ತಡೆಯಬಹುದು ಎಂದು ತಿಳಿದುಬಂದಿದೆ. ಅದೇನೇ ಇರಲಿ ಏನೂ ಕೆಲಸವಿಲ್ಲದಿದ್ದಲ್ಲಿ, ಕನಿಷ್ಠ ದಿನಕ್ಕೆ ಅರ್ಧ ಗಂಟೆಗಳ ಬಿರುಸು ನಡಿಗೆ ನಡೆದರೂ ನಿಮ್ಮ ಆಯಸ್ಸು ವೃದ್ಧಿಯಾಗುವುದಂತೂ ಸುಳ್ಳಲ್ಲ.
ಲಾಭಗಳು ಏನು?
1. ಹೃದಯವನ್ನು ಶಕ್ತಿಶಾಲಿಯಾಗಿಸಿ ಹೃದಯಾಘಾತವನ್ನು ತಡೆಯುತ್ತದೆ. ಬಹಳ ಸರಳ ಮತ್ತು ಸುಲಭವಾದ ಈ ವ್ಯಾಯಾಮದಿಂದ ಕೆಟ್ಟ ಕೊಲೆಸ್ಟ್ರಾಲ್ (LDL) ಕಡಿಮೆಯಾಗಿ, ಒಳ್ಳೆಯ ಕೊಲೆಸ್ಟಾಲ್ (HDL) ಜಾಸ್ತಿಯಾಗುತ್ತದೆ. ಅದೇ ರೀತಿ 30 ನಿಮಿಷಗಳ ಬಿರುಸು ನಡಿಗೆಯಿಂದ ದೇಹದ ರಕ್ತದ ಒತ್ತಡ ಹತೋಟಿಗೆ ಬಂದು ಸ್ಟ್ರೋಕ್ ಉಂಟಾಗುವ ಸಾಧ್ಯತೆ 27 ಶೇಕಡಾ ಕಡಿಮೆಯಾಗುತ್ತದೆ.
2. ಬಿರುಸು ನಡಿಗೆ ನಿಯಮಿತವಾಗಿ ಮಾಡುವುದರಿಂದ ಟೈಪ್ 2 ಡಯಾಬಿಟಿಸ್ ಉಂಟಾಗುವ ಸಾಧ್ಯತೆ ಸುಮಾರು 60 ಶೇಕಡಾ ಕಡಿಮೆಯಾಗುತ್ತದೆ. ಯಾಕೆಂದರೆ ದೇಹದ ತೂಕ ಮತ್ತು ಬೊಜ್ಜು ಕರಗಿ ಮಧುಮೇಹದ ಸಾಧ್ಯತೆ ಕಡಿಮೆಯಾಗುತ್ತದೆ. ಅದೇ ರೀತಿ ದೊಡ್ಡ ಕರುಳು, ಗರ್ಭಕೋಶ ಮತ್ತು ಎದೆಗೂಡಿನ ಕ್ಯಾನ್ಸರ್‌ನ ಸಾಧ್ಯತೆ 20 ಶೇಕಡಾ ಕಡಿಮೆಯಾಗುತ್ತದೆ.
3. ದಿನವೊಂದರಲ್ಲಿ 30 ನಿಮಿಷಗಳ ಕಾಲ ಗಂಟೆಗೆ 2 ಮೈಲಿ ವೇಗದಲ್ಲಿ ನಡೆದಲ್ಲಿ ಸುಮಾರು 75 ಕ್ಯಾಲರಿಗಳಷ್ಟು ಕೊಬ್ಬು ಕರಗುತ್ತದೆ. ಗಂಟೆಗೆ 3 ಮೈಲಿ ವೇಗದಲ್ಲಿ ನಡೆದರೆ 100 ಕ್ಯಾಲರಿ ಮತ್ತು ಗಂಟೆಗೆ 4 ಮೈಲಿ ವೇಗದಲ್ಲಿ ನಡೆದಲ್ಲಿ 150 ಕ್ಯಾಲರಿ ಕರಗುತ್ತದೆ. ಒಟ್ಟಿನಲ್ಲಿ ಜಾಸ್ತಿ ನಡೆದಷ್ಟೂ ಜಾಸ್ತಿ ಕೊಬ್ಬು ಕರಗಿ ನೀವು ಮತಷ್ಟು ಆರೋಗ್ಯವಂತರಾಗುತ್ತೀರಿ.
4. ವಯಸ್ಕರು ಕೂಡಾ ಬಿರುಸು ನಡಿಗೆ ಮಾಡಬಹುದು. ವಾರದಲ್ಲಿ 6 ಮೈಲಿ ಅಥವಾ ಜಾಸ್ತಿ ನಡೆದಲ್ಲಿ ಮೆದುಳು ಮುದುಡುವುದನ್ನು ಕಡಿಮೆ ಮಾಡಿ, ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. 65 ವರ್ಷ ಕಳೆದ ಬಳಿಕ ಪ್ರತಿ 15ರಲ್ಲಿ ಒಬ್ಬರಿಗೆ ನೆನಪಿನ ಶಕ್ತಿ ಕುಂದಿಸುತ್ತದೆ ಮತ್ತು 80 ವರ್ಷ ಕಳೆದ ಬಳಿಕ ಪ್ರತಿ 5ರಲ್ಲಿ ಒಬ್ಬರಿಗೆ ನೆನಪಿನ ಶಕ್ತಿ ಕುಂದಬಹುದು. ಆದರೆ ನಿಯಮಿತವಾಗಿ ಬಿರುಸುನುಡಿಗೆ ಮಾಡಿ, ನೆನಪಿನ ಶಕ್ತಿ ಕುಂದದಂತೆ ಮಾಡಬಹುದು.
5. ಬಿರುಸು ನಡಿಗೆ ನಿಯಮಿತವಾಗಿ ಮಾಡುವುದರಿಂದ ನಿಮ್ಮ ದೇಹದ ಕಾಲುಗಳ ಮಾಂಸಖಂಡಗಳು ಶಕ್ತಿಶಾಲಿಯಾಗುತ್ತದೆ ಮತ್ತು ನಿತಂಬದ ಸ್ನಾಯುಗಳು ಶಕ್ತಿಶಾಲಿಯಾಗುತ್ತದೆ. ಅದೇ ರೀತಿ ಹೊಟ್ಟೆಯ ಭಾಗದ ಸ್ನಾಯು ಖಂಡಗಳು ಶಕ್ತಿಯುತವಾಗಿ, ಹೆಚ್ಚಿನ ಕೊಬ್ಬು ಶೇಖರಣೆಯಾಗದಂತೆ ತಡೆಯುತ್ತದೆ. ಸೊಂಟದ ಸುತ್ತ ಅನಿಯಂತ್ರಿತ ಕೊಬ್ಬು ಶೇಖರಣೆಯಾಗುವುದನ್ನು ತಡೆಯುತ್ತದೆ. ಮತ್ತು ದೇಹದ ಬೆನ್ನು ಹುರಿಯನ್ನು ನೇರವಾಗಿಸಿ ಚಲನೆಯನ್ನು ನಿಯಂತ್ರಿಸುತ್ತದೆ.
6. ಹೊರಾಂಗಣದಲ್ಲಿ ತೆಳು ಬಿಸಿಲಿಗೆ ಬಿರುಸು ನಡಿಗೆ ಮಾಡುವುದರಿಂದ ಸೂರ್ಯನ ಕಿರಣಗಳಿಂದ ವಿಟಮಿನ್ ಡಿ ದೇಹಕ್ಕೆ ದೊರೆತು, ಮೂಳೆಗಳು ಶಕ್ತಿಶಾಲಿಯಾಗುತ್ತದೆ ಮತ್ತು ದೇಹದ ರಕ್ಷಣಾ ವ್ಯವಸ್ಥೆಗೂ ಸುದೃಢವಾಗುತ್ತದೆ. ಈ ಕಾರಣದಿಂದಲೇ ಮಕ್ಕಳನ್ನು ಹೆಚ್ಚು ಹೊರಾಂಗಣ ಆಟಕ್ಕೆ ಹೋಗುವಂತೆ ಪ್ರಚೋದಿಸಲಾಗುತ್ತದೆ.
7. ಬಿರುಸು ನಡಿಗೆಯಿಂದ ದೇಹದ ರಕ್ತನಾಳಗಳ ಸಂಕುಚಿತ ಮತ್ತು ವಿಕಸಿತವಾಗಿ ಆರೋಗ್ಯವಂತ ವಾಗುತ್ತದೆ ಮತ್ತು ದೇಹದ ಎಲ್ಲಾ ಅಂಗಾಂಗಗಳ ಜೀವಕೋಶಗಳಿಗೂ ನಿಯಮಿತವಾಗಿ ಆಮ್ಲಜನಕ ಸಿಗುವಂತಾಗಿ ದೇಹ ಮತ್ತಷ್ಟು ಉಲ್ಲಸಿತವಾಗುತ್ತದೆ ಮತ್ತು ಯಾವತ್ತೂ ವ್ಯಕ್ತಿ ಹಸನ್ಮುಖಿಯಾಗಲು ಸಾಧ್ಯವಾಗುತ್ತದೆ.
8. ಬಿರುಸು ನಡಿಗೆಯಿಂದ ಮೆದುಳಿಗೂ ರಕ್ತ ಪರಿಚಲನೆ ಜಾಸ್ತಿಯಾಗಿ ಆಂಟಿ ಆಕ್ಸಿಡೆಂಟ್‌ಗಳು ರಕ್ತದಲ್ಲಿ ಕಡಿಮೆಯಾಗುತ್ತದೆ ಮತ್ತು ಮನಸ್ಸಿನ ಜಡತ್ವವನ್ನು ನಿವಾರಿಸುವಲ್ಲಿ ಬಿರುಸು ನಡಿಗೆ ಮಹತ್ವದ ಪಾತ್ರ ವಹಿಸುತ್ತದೆ. ರಕ್ತದಲ್ಲಿ ಉಲ್ಲಸಿತವಾಗುವ ರಸದೂತಗಳು ಹೆಚ್ಚು ಹೆಚ್ಚು ಉತ್ಪತ್ತಿಯಾಗಿ, ಮನೋ ವ್ಯಾಕುಲತೆಯನ್ನು ದೂರ ಮಾಡಿ, ಖಿನ್ನತೆಯನ್ನು ಹೊಡೆದೋಡಿಸಿ ವ್ಯಕ್ತಿ ಯಾವತ್ತೂ ಧನಾತ್ಮಕ ಚಿಂತನೆ ಮಾಡುವಂತೆ ಮೆದುಳನ್ನು ಪ್ರಚೋದಿಸುತ್ತದೆ.
9. ನಿಯಮಿತವಾಗಿ ಬಿರುಸು ನಡಿಗೆ ಮಾಡುವುದರಿಂದ ಮೂಳೆಗಳು ಶಕ್ತಿ ಶಾಲಿಯಾಗುತ್ತದೆ ಮತ್ತು ಅಸ್ಥಿರಂಧ್ರತೆ ಅಥವಾ ಆಸ್ಟಿಯೊ ಪೊರೊಸಿಸ್ ಎಂಬ ಟೊಳ್ಳು ಮೂಳೆ ರೋಗ ಬರದಂತೆ ತಡೆಯುತ್ತದೆ ಎಂದೂ ಸಂಶೋಧನೆಗಳಿಂದ ಸಾಬೀತಾಗಿದೆ.
ಕೊನೆಮಾತು: ಬದುಕಿನ ಪಯಣದಲ್ಲಿ ಪ್ರತಿ ದಿನವೂ ಹೊಸ ದಿನವೇ ಹೀಗಿರುವಾಗ ನಮ್ಮ ದಿನವನ್ನು ಕನಿಷ್ಠ 30 ನಿಮಿಷಗಳ ಬಿರುಸು ನಡಿಗೆಯಿಂದ ಆರಂಭಿಸಿದಲ್ಲಿ ಮನಸ್ಸಿಗೆ ಉಲ್ಲಾಸ, ನೆಮ್ಮದಿ, ದೇಹಕ್ಕೆ ಒಂದು ಹೊಸ ಚೈತನ್ಯ ಬರುವುದರಲ್ಲಿ ಸಂದೇಹವಿಲ್ಲ. ಯಾವುದೇ ವಿಶೇಷ ತಯಾರಿ ಇಲ್ಲದೆ. ಖರ್ಚು ರಹಿತ ಈ ದೈಹಿಕ ವ್ಯಾಯಾಮ ಮಾಡುವುದರಿಂದ ಹಲವಾರು ರೋಗವನ್ನು ಸುಲಭವಾಗಿ ತಡೆಯಬಹುದೆಂದು ಸಂಶೋಧನೆಗಳಿಂದ ಸಾಬೀತಾಗಿದೆ. ಇನ್ನು ತಡವೇಕೆ ಗೆಳೆಯರೇ? ಬನ್ನಿ ಜೊತೆಯಾಗಿ ನಡೆಯೋಣ ಬದುಕಿನ ಪಯಣದಲ್ಲಿ ಬಿರುಸು ನಡಿಗೆಗೊ ಸ್ವಲ್ಪ ಅಸ್ಪದ ನಿಡೋಣ ಮತ್ತು ನೂರು ಕಾಲ ಸುಖವಾಗಿ ನೆಮ್ಮದಿಯಿಂದ ಬದುಕೋಣ ಅದರಲ್ಲಿಯೇ ನಮ್ಮ ಮತ್ತು ಸಮಾಜದ ಹಿತ ಅಡಗಿದೆ.
- ಡಾ| ಮುರಲೀ ಮೋಹನ್ ಚೂಂತಾರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ