ಪ್ರಜ್ಞಾಪ್ರವಾಹದ ಔನ್ನತ್ಯಕ್ಕೆ ಪುಸ್ತಕಗಳು ಸಹಕಾರಿ

Upayuktha
0

ನಿಮ್ಮದೇ  ರೀತಿಯಲ್ಲಿ ಓದಿ ಎನ್ನುತ್ತದೆ ವಿಶ್ವ ಪುಸ್ತಕ ದಿನ 



ದುಗರನ್ನು ಪ್ರೇರೇಪಿಸಬೇಕು. ಓದುಗರನ್ನು ಪ್ರೋತ್ಸಾಹಿಸಬೇಕು. ಓದುಗರ ಮನಸ್ಸಿನಲ್ಲಿ ನವಸಂಚಲನವನ್ನು ಮೂಡಿಸಬೇಕು. ಕವಿಗಳ , ಸಾಹಿತಿಗಳ, ಲೇಖಕರ, ನಾಟಕಕಾರರ, ಕಾದಂಬರಿಕಾರರ,  ವಿಮರ್ಶಕರ, ವಿಡಂಬನೆಗಾರರ, ಹಾಸ್ಯಗಾರರ, ಕಥೆಗಾರರ ಬರವಣಿಗೆಗಳನ್ನು ಓದುಗ ಮಹಾಶಯರಿಗೆ ತಲುಪಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) 1995 ರಲ್ಲಿ ಏಪ್ರಿಲ್‌ 23 ನೇ ತಾರೀಖನ್ನು ಮೊದಲ ಬಾರಿಗೆ ಅಂತರ ರಾಷ್ಟ್ರೀಯ ಪುಸ್ತಕ ದಿನವನ್ನಾಗಿ ಆಚರಿಸಬೇಕೆಂದು ನಿರ್ಧರಿಸಿತು. 


ಈ ದಿನವನ್ನು ಪ್ರತಿ ವರ್ಷ ಏಪ್ರೀಲ್ 23 ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವೆಂದು ಪರಿಗಣಿಸಿ ಆಚರಿಸಲಾಗುತ್ತಿದೆ. ಓದುವಿಕೆ, ಪ್ರಕಾಶನ ಮತ್ತು ಕೃತಿಸ್ವಾಮ್ಯಗಳ ಬಗ್ಗೆ ಅರಿವು ಮತ್ತು ಪ್ರಚಾರ ನೀಡಲು ಯುನೆಸ್ಕೋ ಈ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಈ ವಿಶೇಷ ಕಾರ್ಯಕ್ರಮವನ್ನು ರೂಪಿಸುವ ಮೂಲಕ ಯುನೇಸ್ಕೊ ಯುವಜನತೆಯಲ್ಲಿ ಪುಸ್ತಕದ ಬಗೆಗೆ ಆಸಕ್ತಿ, ಓದಿನಲ್ಲಿ ಸಂತೋಷವನ್ನು ಹೆಚ್ಚಿಸುವ ಮತ್ತು ಉತ್ತಮ ಬರಹಗಾರರನ್ನು ಗೌರವಿಸುವ ಮತ್ತು ಪ್ರೋತ್ಸಾಹಿಸುವ ಹಂಬಲ ಹೊಂದಿದೆ.  


ಇಂದು ಶಾಲೆ, ಕಾಲೇಜು,  ವಿಶ್ವವಿದ್ಯಾಲಯಗಳು, ಗ್ರಂಥಾಲಯಗಳು, ಸಾಂಸ್ಕೃತಿಕ ಸಂಘ ಸಂಸ್ಥೆಗಳು ಮತ್ತು ಸಾಹಿತ್ಯ ವೇದಿಕೆಗಳು ವಿಶ್ವದಾದ್ಯಂತ ಪುಸ್ತಕ ಪ್ರಕಾಶರನ್ನು ಮತ್ತು ಪುಸ್ತಕ ವ್ಯಾಪಾರಿಗಳನ್ನು ಪ್ರೋತ್ಸಾಹಿಸುವ ಮೂಲಕ ಅವರನ್ನೂ ಒಳಗೊಂಡಂತೆ ಪುಸ್ತಕ ಪ್ರೇಮಿಗಳಿಗೆ ಸ್ಪೂರ್ತಿಯನ್ನು ನೀಡುವ ಮಹತ್ಕಾರ್ಯವನ್ನು ಮಾಡುತ್ತಿವೆ. ಏಪ್ರಿಲ್‌ 23 ರಂದು ವಿಲಿಯಂ ಷೇಕ್ಸ್‌ಪಿಯರವರು ಮರಣ ಹೊಂದಿದ ದಿನವಾಗಿದೆ. ಅಷ್ಟಲ್ಲದೇ , ಬಹಳಷ್ಟು ಬರಹಗಾರರ ಜನ್ಮದಿನವೂ ಹೌದು ಮರಣ ದಿನವೂ ಹೌದು. ಅವರೆಲ್ಲರನ್ನೂ ಸ್ಮರಿಸುವ ದೃಷ್ಟಿಯಿಂದಾಗಿ ಯುನೆಸ್ಕೊ ಏಪ್ರಿಲ್‌ 23 ನ್ನು ಪುಸ್ತಕ ದಿನವನ್ನಾಗಿ ಆಯ್ಕೆ ಮಾಡಿ ಆಚರಿಸಲು ನಿರ್ಣಯಿಸಿತು. 


ಪ್ರತೀ ವರ್ಷ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋ ಸಂಸ್ಥೆಯು ಒಂದು ಘೋಷಾ ವಾಕ್ಯವನ್ನು ನೀಡುತ್ತದೆ. 2025 ರ ವಿಶ್ವ ಪುಸ್ತಕ ದಿನದ ಘೋಷಾ ವಾಕ್ಯವು ಇಂತಿದೆ " ನಿಮ್ಮ ರೀತಿಯಲ್ಲಿ ಓದಿ ". ಈ ಘೋಷಾ ವಾಕ್ಯವು ಮಕ್ಕಳು ತಮ್ಮದೇ ಆದ ರೀತಿಯಲ್ಲಿ ಓದುವುದನ್ನು ಕಂಡುಕೊಳ್ಳಲು ಮತ್ತು ಪ್ರಕ್ರಿಯೆಯನ್ನು ಆನಂದಿಸಲು ಪ್ರೋತ್ಸಾಹಿಸುತ್ತದೆ. ಇದು ಸಂತೋಷಕ್ಕಾಗಿ ಓದುವುದರ ಮೇಲೆ ಕೇಂದ್ರೀಕರಿಸುತ್ತದೆ, ಮಕ್ಕಳು ತಾವು ಆನಂದಿಸುವ ಪುಸ್ತಕಗಳು ಮತ್ತು ಓದುವ ವಿಧಾನಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.


ಮಾರ್ಕ್ ಟ್ವೈನ್ ಹೇಳುವಂತೆ ಒಳ್ಳೆಯ ಸ್ನೇಹಿತರು, ಒಳ್ಳೆಯ ಪುಸ್ತಕಗಳು ನಿದ್ರೆಯ ಮನಸ್ಸಾಕ್ಷಿ: ಇದು ಆದರ್ಶ ಜೀವನ. ಅರ್ನೆಸ್ಟ್ ಹೆಮಿಂಗ್ವೇ ರವರು ಹೇಳುವಂತೆ "ಪುಸ್ತಕದಷ್ಟು ನಿಷ್ಠಾವಂತ ಸ್ನೇಹಿತ ಇಲ್ಲ." ಪುಸ್ತಕ ಪ್ರೇಮಿಗಳು ಈ ಪುಸ್ತಕ ದಿನದಂದು ಪುಸ್ತಕಗಳನ್ನು ಖರೀದಿಸುವುದು ಮತ್ತು ಓದುವುದು ಒಂದು ಒಳ್ಳೆಯ ಅಭ್ಯಾಸ ಮತ್ತು ಹವ್ಯಾಸ. 


ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಗಣ್ಯರಿಗೆ ನೆನಪಿನ ಕಾಣಿಕೆಯಾಗಿ ಪುಸ್ತಕಗಳನ್ನು ಕೊಡುವುದು, ಸ್ನೇಹಿತರು ಮತ್ತು ಬಂಧು ಬಾಂಧವರ ಜನ್ಮದಿನದಂದು ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವುದು , ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪುಸ್ತಕಗಳನ್ನು ಬಹುಮಾನವಾಗಿ ವಿತರಿಸುವ ಮೂಲಕ ಓದುಗರ ಬಳಗವನ್ನು ಪ್ರೇರೇಪಿಸಿ ಪ್ರೋತ್ಸಾಹಿಸಬಹುದು. ನಮ್ಮಲ್ಲಿರುವ ಸಜೀವ ಸೌಂದರ್ಯ ಮತ್ತು ಸಂಪತ್ತು ಎಂದರೆ ಜ್ಞಾನ ಮತ್ತು ವಿದ್ಯೆ. ಇವುಗಳಿಗೆ ಮೂಲ ಆಕರ ಪುಸ್ತಕಗಳು. ಹಾಗಾಗಿ ಪುಸ್ತಕಗಳ ಮಹತ್ವವನ್ನು ಭವಿಷ್ಯದ ಜನಾಂಗಕ್ಕೆ ಪ್ರವಾಹಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ.


ಒಂದು ಒಳ್ಳೆಯ ಪುಸ್ತಕ ಒಬ್ಬ ಒಳ್ಳೆಯ ಗೆಳೆಯನಂತೆ ಮಾರ್ಗದರ್ಶನ ಮಾಡುತ್ತದೆ. ಪುಸ್ತಕವು ಹೊಸ ಹೊಸ ಚಿಂತನೆಗಳಿಗೆ ದಾರಿಮಾಡಿಕೊಡುತ್ತದೆ. ಆ ಚಿಂತನೆಗಳನ್ನು ಪ್ರಾಯೋಗಿಕ ನೆಲೆಗಟ್ಟಿಗೆ ತಂದಾಗ ವಿಚಿತ್ರಕಾರಕ ಮತ್ತು ಅಚ್ಚರಿಯ ಅನುಭವ ನಮಗಾಗುತ್ತದೆ. ಪುಸ್ತಕಗಳಲ್ಲಿನ ಬರಹ ಚರಿತ್ರೆಗೆ ಸಾಕ್ಷಿ, ಆ ಮೂಲಕ ಸಂಶೋಧನೆಗೆ ಆಧಾರ. "ಪುಸ್ತಕಗಳು ಜ್ಞಾನಾರ್ಜನೆಗೆ ಅತ್ಯುತ್ತಮ ಸಾಧನವಾಗಿದೆ". ನಾವು ಮೌಲ್ಯಿಕ ಪುಸ್ತಕಗಳನ್ನು ಸಂಗ್ರಹಿಸಿ ಓದಿದರೆ ಅತ್ಯುತ್ತಮ ಜ್ಞಾನವನ್ನು ಪಡೆಯುತ್ತೇವೆ. 


ನಮ್ಮ ಒಡನಾಟದಲ್ಲಿರುವವರನ್ನು ಓದುವಂತೆ ಪ್ರೇರೇಪಿಸಿ ಪ್ರೋತ್ಸಾಹಿಸಬೇಕು. ವಿವಿಧ ಕಾರ್ಯಗಳಲ್ಲಿ ಗಣ್ಯರಿಗೆ ನೀಡುವ ನೆನಪಿನ ಕಾಣಿಕೆ ಮತ್ತು ಸ್ಪರ್ಧೆಗಳಲ್ಲಿ ಬಹುಮಾನವಾಗಿ ಪುಸ್ತಕಗಳನ್ನು ನೀಡುವ ಮೂಲಕ ಜ್ಞಾನವನ್ನು ಹಂಚಬಹುದು. ಓದಿ, ಚರ್ಚಿಸಿ, ವಿನಿಮಯ ಮಾಡಿಕೊಳ್ಳುವ ಮೂಲಕ ವಿವಿಧ ಅನುಭವವನ್ನು ಪಡೆಯುತ್ತೇವೆ. ಹಿರಿಯರು ಹೇಳುತ್ತಾರೆ, " ಪುಸ್ತಕವು ಗ್ರಂಥಾಲಯದ ಸರಸ್ವತಿ ಮಂದಿರ." ಯಾವ ಪುಸ್ತಕ ಓದಿದರೂ ಜ್ಞಾನಕ್ಕೆ ನಷ್ಟವಿಲ್ಲ. ಆದರೆ ಉತ್ತಮ ಪುಸ್ತಕಗಳನ್ನು ಆಯ್ಕೆ ಮಾಡಿ ಓದುವುದರಿಂದ ಅತ್ಯುತ್ತಮ ಜೀವನಾನುಭವ ನಮಗಾಗುತ್ತದೆ. 


ನಮ್ಮ ಚಿಂತನೆ, ಕಲ್ಪನೆಗಳು ಧನಾತ್ಮಕವಾಗುತ್ತವೆ. ಪುಸ್ತಕಗಳನ್ನು ಓದುವ ಮೂಲಕ ನಾವೂ ಪುಸ್ತಕಗಳನ್ನು ಬರೆಯಬಹುದು ಮತ್ತು ಉತ್ತಮ ಸಾಹಿತಿಗಳಾಗಲೂ ಅವಕಾಶ ಒದಗಿಬರುತ್ತದೆ. ಪುಸ್ತಕ ಓದುವುದು ಮತ್ತು ಬರೆಯುವುದು ಒಂದು ವಿಶಿಷ್ಟ ಕಲೆಯಾಗಿದೆ. ಬದುಕಿನಲ್ಲಿ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದೋಣ. ಹೆಚ್ಚು ಹೆಚ್ಚು ಜ್ಞಾನ ಅನುಭವವನ್ನು ಪಡೆಯೋಣ. ಪುಸ್ತಕಗಳ ಅಧ್ಯಯನದಿಂದ ಜ್ಞಾನಗಂಗೆಯ ಪ್ರಜ್ಞಾಪ್ರವಾಹದ ಮಟ್ಟ ಜ್ಞಾನ ಶಿಖರದ ಉತ್ತುಂಗವನ್ನೇರಲು ಸಹಾಯಕವಾಗುತ್ತದೆ. ಮನೋಲಹರಿಯನ್ನು ವಿವಿಧ ಮಾರ್ಗಗಳಲ್ಲಿ ಹೊತ್ತೊಯ್ಯುವ ಈ ಹೊತ್ತಿಗೆ ಮಾನಸಿಕವಾಗಿ ನಮ್ಮನ್ನು ಚಿಂತಕರನ್ನಾಗಿಸುತ್ತದೆ ಮತ್ತು ಮುದ ನೀಡುತ್ತದೆ. 


ವ್ಯಕ್ತಿತ್ವ ಬೆಳವಣಿಗೆಯಲ್ಲಿ ಪುಸ್ತಕಗಳ ಪಾತ್ರ ಪ್ರಮುಖವಾದುದು. ವೈಚಾರಿಕವಾಗಿ ಚಿಂತಿಸುವ, ವೈಜ್ಞಾನಿಕವಾಗಿ ಆಲೋಚಿಸುವ ಮತ್ತು ಸಮಾಜವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಪುಸ್ತಕಗಳನ್ನು ಓದುವುದರಿಂದ ರೂಢಿಸಿಕೊಳ್ಳಬಹುದು. ಎಲ್ಲರೂ ಓದುವ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. 


ವಿದ್ಯಾರ್ಥಿಗಳು ಮತ್ತು ಯುವಜನತೆ ಜನಪದ, ಕಲೆ, ಸಂಸ್ಕೃತಿ, ಇತಿಹಾಸ, ನಾಡು-ನುಡಿ ಅರಿಯಲು ಪುಸ್ತಕ ಪ್ರೇಮ ಹೊಂದುವುದು ಅತ್ಯಗತ್ಯವಾದದ್ದು "ನನ್ನ ಪುಸ್ತಕ ನನ್ನ ಗೆಳೆಯ " ಎಂಬ ಮನೋಭಾವದಿಂದ, ನಾವೆಲ್ಲರೂ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದೋಣ. ಆಗ ಮಾತ್ರವೇ ವಿಶ್ವ ಪುಸ್ತಕ ದಿನ ಸಾರ್ಥಕವೆನಿಸುತ್ತದೆ. 


-ಕೆ. ಎನ್. ಚಿದಾನಂದ.  ಹಾಸನ 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top