ದುರ್ಗುಣಗಳು ಕ್ಷಯಿಸಲಿ, ಸದ್ಗುಣಗಳು ಅಕ್ಷಯವಾಗಲಿ

Upayuktha
0



ವೈಶಾಖ ಮಾಸದ ಮಹತ್ವ: ವಿಶಾಖ ನಕ್ಷತ್ರದಲ್ಲಿ ಬರುವ ಈ ಮಾಸವನ್ನು ವೈಶಾಖ ಎಂದು ಕರೆಯಲಾಗುತ್ತದೆ. ವಿಶಾಖ ನಕ್ಷತ್ರವು ಬೃಹಸ್ಪತಿ ಮತ್ತು ಇಂದ್ರನ ಆಳ್ವಿಕೆಯಲ್ಲಿದೆ. ಈ ತಿಂಗಳು ಸ್ನಾನ, ಉಪವಾಸ ಮತ್ತು ಪೂಜಿಸುವುದು ಅತ್ಯಂತ ಪುಣ್ಯವನ್ನು ನೀಡುತ್ತದೆ. ಈ ಮಾಸದಲ್ಲಿ ಪರಶುರಾಮ ಜಯಂತಿ, ಅಕ್ಷಯ ತೃತೀಯ, ಮೋಹಿನಿ ಏಕಾದಶಿ ಮುಂತಾದ ಪ್ರಮುಖ ಹಬ್ಬಗಳಿವೆ. ಸ್ಕಂದ ಪುರಾಣದಲ್ಲಿ ಕೂಡಾ ವೈಶಾಖ ಮಾಸವನ್ನು ಉಲ್ಲೇಖಿಸಲಾಗಿದೆ. ದೇವರ ಆರಾಧನೆ, ಉಪಕಾರ ಮತ್ತು ಪುಣ್ಯಕ್ಕೆ ಇದು ಸೂಕ್ತ ತಿಂಗಳು. ಅದಕ್ಕಾಗಿಯೇ ಈ ಮಾಸದಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರಿನ ತೊಟ್ಟಿಗಳನ್ನು ಸ್ಥಾಪಿಸುವುದು, ಮರಗಳನ್ನು ರಕ್ಷಿಸುವುದು, ಬಡವರಿಗೆ ಸಹಾಯ, ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡುವುದು ಮಾಡಿದರೆ, ಸಂತೋಷ ಮತ್ತು ಸಂಪತ್ತು ಸಿಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.


ಸ್ಕಂದ ಪುರಾಣವು ವೈಶಾಖ ಮಾಸವನ್ನು, ವೈಶಾಖ ಮಾಸದಂತೆ ಇನ್ನೊಂದು ಮಾಸವಿಲ್ಲ, ಸತ್ಯಯುಗ ದಂತಹ ಯುಗವಿಲ್ಲ, ವೇದಕ್ಕಿಂತ ಬೇರೆ ಗ್ರಂಥವಿಲ್ಲ, ಗಂಗೆಯಂತೆ ತೀರ್ಥ ಇಲ್ಲ. ಈ ವೈಶಾಖ ಮಾಸದಲ್ಲಿ ಬರುವುದೇ ಅಕ್ಷಯ ತೃತೀಯ.


ಮೂಲತಃ ಅಕ್ಷಯ ಎಂಬು ಪದವು, ಎಂದೂ ಕ್ಷಯವಿಲ್ಲದ ಎಂಬ ಅರ್ಥಹೊಂದಿದ್ದರೆ; ತೃತೀಯಾ ತಿಥಿ ಎಂಬುದು 'ಮೂರನೆಯ ದಿನ' ಎಂಬ ಅರ್ಥವನ್ನು ನೀಡುತ್ತದೆ. ಅಕ್ಷಯ ತೃತೀಯಾವನ್ನು ವೈಶಾಖ ಮಾಸದ ಶುದ್ಧ ತದಿಗೆಯಂದು ಆಚರಿಸುತ್ತಾರೆ.

      

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ (ತದಿಗೆ) "ಅಕ್ಷಯ ತೃತೀಯಾ" ಆಚರಿಸುತ್ತಾರೆ.


"ಅಕ್ಷಯ' ಎಂದರೆ ವೃದ್ಧಿಯಾಗು ಎಂದರ್ಥ. ಎಲ್ಲರೂ ಶ್ರೇಷ್ಠವಾದ, ವಿಶೇಷವಾದ ಕೆಲಸವನ್ನ ಕೈಗೊಳ್ಳುತ್ತಾರೆ. ಏಕೆಂದರೆ ಶುಭಕಾರ್ಯಗಳು ವೃದ್ಧಿ ಆಗುತ್ತಾ ಹೋಗುತ್ತವೆ ಎಂದು, ಈ ದಿನ ವಿಶೇಷವಾಗಿ, ಖರೀದಿ ಮಾಡುವಂತಹ ಬೆಳ್ಳಿ, ಬಂಗಾರ, ಏನೇ ಇದ್ದರೂ ಇವತ್ತು ಇಡಿ ದಿನ "ಸಾಡೇ ತೀನ್"  ಮುಹೂರ್ತ ಇರುವದರಿಂದ ಏನು ಒಳ್ಳೆಯ ಕೆಲಸ ಮಾಡಿದರು ಶುಭವಾಗುತ್ತೆ ಹಾಗೆಯೇ ವೃದ್ಧಿ ಆಗುತ್ತೆ. 


ಭವಿಷ್ಯತ್ ಪುರಾಣದಲ್ಲಿ ಶ್ರೀಕೃಷ್ಣಪರಮಾತ್ಮನೇ ಅಕ್ಷಯ ತೃತೀಯದ ಅಸಾಧಾರಣ ಮಹಿಮೆಯನ್ನು ವರ್ಣಿಸಿರುವುದಾಗಿ ಉಲ್ಲೇಖವಿದೆ.


ಶ್ಲೋಕ: ಬಹುನಾತ್ರ ಕಿಮುಕ್ತೇನ ಕಿಂ ಬಹ್ವಕ್ಷರಮಾಲಯಾ |

ವೈಶಾಖಸ್ಯ ಸಿತಾಮೇಕಾಂ ತೃತೀಯಾಮಕ್ಷಯಾಂ ಶೃಣು ||


ಈ ದಿನದಲ್ಲಿ ಸೂರ್ಯ- ಚಂದ್ರರರು ಗರಿಷ್ಠ ಮಟ್ಟದ ಕಾಂತಿಯನ್ನು ಹೊಂದಿರುತ್ತಾರೆ. ಇದು ಶುಭ ಕಾರ್ಯ ಮಾಡಲಿಕ್ಕೆ ಶುಭಕರವಾದ ದಿನ .ಅಂತೆಯೇ ಜನರು ಇಂದು ಅಕ್ಷರಾಭ್ಯಾಸ, ಮದುವೆ, ಉಪನಯನ, ಗೃಹ ಪ್ರವೇಶ ಇನ್ನು ಅನೇಕ ವ್ಯವಹಾರಗಳು, ಕೆಲಸಗಳು ಮಾಡುತ್ತಾರೆ.


ಈ ದಿನದಂದು ನಾವು ಆಚರಿಸುವ ಸಂಕಲ್ಪ ಪೂರ್ವಕ ಸ್ನಾನ, ಜಪ ತಪ, ಅಧ್ಯಯನ, ತರ್ಪಣ, ದಾನಾದಿಗಳೆಲ್ಲವೂ ಅಕ್ಷಯವಾದ ಫಲವನ್ನು ನೀಡುವುದರಿಂದ "ಇಂದಿನ ಶುಭ ದಿನವನ್ನುಅಕ್ಷಯ ತೃತೀಯಾ" ಎಂದು ಕರೆಯಲ್ಪಡುವುದು.


ಇಡೀ ಸಂವತ್ಸರಲ್ಲಿ ಮೂರು ಬಾರಿ "ಸಾಡೇ ತೀನ" ಮುಹೂರ್ತ ಇರುತ್ತದೆ. ಅವುಗಳೆಂದರೆ- 1) ಯುಗಾದಿ, 2) ಅಕ್ಷಯ ತೃತೀಯಾ, 3) ವಿಜಯ ದಶಮಿ. 


ಈ ವೈಶಾಖ ಮಾಸದ ಅಕ್ಷಯ ತೃತೀಯದಲ್ಲಿ ಆಚರಿಸುವ ಸ್ನಾನ, ಜಪ, ತಪಸ್ಸು, ಅಧ್ಯಯನ, ತರ್ಪಣ, ದಾನಾದಿಗಳೆಲ್ಲವೂ ಅಕ್ಷಯವಾದ ಫಲವನ್ನು ನೀಡುವುದರಿಂದ ಇದನ್ನು ಅಕ್ಷಯ ತೃತೀಯ ಎಂದು ಕರೆಯಲಾಗಿದೆ ಎಂದು ವ್ರತರಾಜದಲ್ಲಿ ಉಲ್ಲೇಖಿಸಿದೆ. ಅಕ್ಷಯವಾದ ಮೋಕ್ಷಕ್ಕೆ ಕಾರಣವಾಗುತ್ತದೆ.


ದೇವತೆಗಳ ಪೂಜೆಗೆ ಮಾತ್ರವಲ್ಲದೆ ಪಿತೃಗಳ ಪೂಜೆಗೂ ಪ್ರಶಸ್ತವೆನಿಸಿರುವ ತಿಥಿ ಅಕ್ಷಯ ತೃತೀಯಾ. ಪಿತೃಗಳನ್ನು ಕುರಿತು ತರ್ಪಣ ಮಾಡಿ ಪಿಂಡಪ್ರದಾನವನ್ನು ಮಾಡಬಹುದು ಎಂದು ಧರ್ಮಸಿಂಧು ವಿನಲ್ಲಿ ಉಲ್ಲೇಖಿಸಿದೆ.


ಇದಕ್ಕೆ ಬಹಳ ಪೌರಾಣಿಕ ಹಿನ್ನೆಲೆಗಳು ಬಹಳ ಇವೆ.


ಪೌರಾಣಿಕ ಹಿನ್ನೆಲೆ

  • ಶ್ರೀ ಮಹಾವಿಷ್ಣು ಪರಶುರಾಮನಾಗಿ ಜನಿಸಿದ ದಿನ.
  • ಈ ದಿನವು ತ್ರೇತಾಯುಗದ ಆರಂಭವನ್ನು ಸೂಚಿಸುತ್ತದೆ 
  • ಬಲರಾಮನು ಜನಿಸಿದ ದಿನ.
  • ಶ್ರೀ ಕೃಷ್ಣನು ಪಾಂಡವರಿಗೆ ಅಕ್ಷಯ ಪಾತ್ರೆ ಕೊಟ್ಟ ದಿನ.
  • ಗಂಗೆಯು ಸ್ವರ್ಗದಿಂದ ಧರೆಗಿಳಿದ ದಿನ
  • ಸಂಪತ್ತಿನ ಒಡೆಯನಾದ ಕುಬೇರ ಲಕ್ಷಿಮಿಯ ಪೂಜೆ  ಮಾಡಿದ ದಿನ.
  • ಸೀತೆಯು ತನ್ನ ಪವಿತ್ರತೆಯನ್ನ ಅಗ್ನಿ ಪರೀಕ್ಷೆಗೆ ಒಳಪಡಿಸಿದ ದಿನ .

ಲಂಕಾ ನಗರವು ಮೊದಲು ಅಕ್ಷಯ ತೃತೀಯಾದಂದು ಕುಬೇರನು ವಿಶ್ವಕರ್ಮರಿಂದ ನಿರ್ಮಾಣ ಮಾಡಿಸಿದ್ದನು. ತದನಂತರ ಅಣ್ಣನಾದ ರಾವಣನು ರುದ್ರ ದೇವರ ತಪಸ್ಸು ಮಾಡಿ ವರ ಪಡೆದಿದ್ದನು, ಹಾಗೆಯೇ ಬಲಾಢ್ಯ ಇದ್ದರಿಂದ ಕುಬೇರನನ್ನು ಉತ್ತರ ದಿಕ್ಕಿಗೆ ಓಡಿಸಿ ತಾನು ವಶಪಡಿಸಿಕೊಂಡನು. ಮುಂದೆ ಇದು ಲಂಕಾ ಬದಲಾಗಿ ಸ್ವರ್ಣ ಲಂಕೆ ಆಯಿತು. ರಾಮಾಯಣದಲ್ಲಿ ಉಲ್ಲೇಖ ಇದೆ.

  • ಮಹಾಭಾರತವನ್ನು ವ್ಯಾಸರು ರಚಿಸಿದ ದಿನವೂ ಅಕ್ಷಯ ತೃತೀಯ.
  • ಭಗೀರಥ ನು ಶಿವನ ಜಟೆಯಲ್ಲಿದ್ದ ಗಂಗೆಯನ್ನು ಭೂಮಿಗೆ ತಂದ ದಿನವೂ ಅಕ್ಷಯ ತೃತೀಯಾ.
  • ಆದಿ ಶಂಕರಾಚಾರ್ಯರು ಕನಕಧಾರ ಸ್ತೋತ್ರವನ್ನು ರಚಿಸಿದ ದಿನ 


ತನ್ನ ಆಪ್ತ ಸ್ನೇಹಿತನಾದ ಕೃಷ್ಣನಿಗೆ ಕುಚೇಲನು ತನ್ನಲ್ಲಿರುವ ಮುಷ್ಠಿ ಅವಲಕ್ಕಿಯನ್ನು ತನ್ನ ಪ್ರೀತಿ ಪಾತ್ರ ಸ್ನೇಹಿತನಿಗಾಗಿ ತೆಗೆದುಕೊಂಡು ಹೋಗಿ ಸಮರ್ಪಿಸಿದ ದಿನ ಅಂದು ಶ್ರೀಕೃಷ್ಣ ಪರಮಾತ್ಮ ಕುಚೇಲನಿಗೆ, ನೀಡಿದ ಅಕ್ಷಯವಾದಂತಹ ಐಶ್ವರ್ಯ ಪ್ರಾಪ್ತಿಗಳು.


ಇಂದು ಅಣ್ಣ ಜಗದ ಜ್ಯೋತಿ ಬಸವಣ್ಣ ಹುಟ್ಟಿದ ದಿನ "ಬಸವ ಜಯಂತಿ"ಯನ್ನಾಗಿ ಆಚರಿಸುವರು.


ಲೌಕಿಕ ಸಾಧನೆ, ಲೌಕಿಕ ಫಲ- ಎರಡೂ ಕ್ಷಯ- ತಾತ್ಕಾಲಿಕ. ಪಾರಮಾರ್ಥಿಕ ಸಾಧನೆ, ಪರಮ ಪುರುಷಾರ್ಥ ಫಲ- ಈ ಎರಡೂ ಅಕ್ಷಯ. ನಾಶವಾಗದ ಸಾಧನೆ, ಮತ್ತು  ಮೋಕ್ಷವೆಂಬ ಶಾಶ್ವತ ಸುಖಕ್ಕೆ ಕಾರಣ.


ಅಕ್ಷಯ ತೃತಿಯಾ- ಬಂಗಾರ ಕೊಂಡಿಟ್ಟುಕೊಳ್ಳಿ ಎನ್ನುತ್ತಾರೆ ಮನೆಯಲ್ಲಿ ಹಿರಿಯರು. ಏನದು ಬಂಗಾರ? ಎಂಥ ಬಂಗಾರ? ಮತ್ತೆ ಆಭರಣದ ಬಂಗಾರವಾದರೆ- ಅದು ತಾತ್ಕಾಲಿಕ. ಇಂದು ನಮ್ಮದು, ನಾಳೆ ಮತ್ತೊಬ್ಬರದು. ಶಾಶ್ವತ, ನಾಶವಾಗದ ಬಂಗಾರ ಕೊಳ್ಳಿ ಎನ್ನುತ್ತಾರೆ ಜ್ಞಾನಿಗಳು.


'ರಂಗನಾಥನ ದಿವ್ಯ ಮಂಗಳ ನಾಮವೆಂಬ ಬಂಗಾರವಿಡಬಾರೆ' ಇದು ನಿನಗೊಪ್ಪುವ ಬಂಗಾರ. ಇದನ್ನೇ ಇಡು, ತೊಡು. ಶಾಶ್ವತ ಸುಖ ಸೂರಾಡು.- ಎನ್ನುತ್ತಾರೆ ಪುರಂದರವಿಠಲನಿಗೆ ಅತಿ ಪ್ರಿಯದಾಸರು.


ಹರಿನಾಮ ತಂದು ಕೊಡುವಂಥ ಸುಖವೇ ನಿಜವಾದ ಬಂಗಾರದಂಥ ಸುಖ. ಅದಕ್ಕೂ ಮಿಗಿಲೂ ಹೌದು. ಯಾಕೆ? ಕಲಿಯುಗದಲ್ಲಿ ಹರಿನಾಮವೇ ಸಾಧಕ, ಮತ್ತೆ ತಾರಕ.


ಶರೀರ ನಾಶವಾಗುತ್ತದೆ. ಅದಕ್ಕಾಗಿ ಶರೀರ ವಿರುವವರೆಲ್ಲಾ ಕ್ಷರರು. ಲಕ್ಷ್ಮೀದೇವಿ ಅಪ್ರಾಕೃತ ಶರೀರೆ. ನಾಶವಿಲ್ಲ ಅವಳ ಶರೀರಕ್ಕೆ ಅವಳು 'ಅಕ್ಷರ'ಳು. ಈ ಕ್ಷರ ಅಕ್ಷರರಿಗಿಂತ ನಾನು ಉತ್ತಮ, ಪುರುಷೋತ್ತಮ ಎಂದು ಸರ್ವೋತ್ತಮ ಶ್ರೀ ಕೃಷ್ಣ ಗೀತೆಯಲ್ಲಿ ಸಾರುತ್ತಾನೆ.  


ಶ್ರೀ ಹರಿಯೇ ಕೃಷ್ಣ, ಅದಕ್ಕಾಗಿ ಹರಿನಾಮವೇ೦ಬ ಶ್ರೇಷ್ಠ ಬಂಗಾರ ಅದನ್ನು ಸ್ಮರಿಸುತ್ತಾ ಪುಣ್ಯವನ್ನು ಅಕ್ಷಯ ಮಾಡಿಕೊಳ್ಳೋಣ. ಇದು ಪರದ ಲೋಕಕ್ಕೆ ಸುಖ ಕೊಟ್ಟರೆ, ಈ ದಿನ ಬಂಗಾರವನ್ನು ಜನರು ಹೆಚ್ಚಾಗಿ ಬೆಳ್ಳಿ, ಬಂಗಾರ ತಗೆದು ಕೊಳ್ಳುತ್ತಾರೆ, ಇದು ಇಹದ ಲೋಕಕ್ಕೆ  ಸುಖಾಭಿವೃದ್ಧಿ ನೀಡುತ್ತದೆ.


ಹರಿನಾಮ ನಾಲಿಗೆ ಮೇಲಿರಲಿ ಎನ್ನುತ್ತಾರೆ ಹಿರಿಯರು. ಮತ್ತೆ ಅಕ್ಷಯ ಫಲ ಕೊಡುವವನು ಶ್ರೀ ಹರಿಯೇ. ನಾವು ಪರಮಾತ್ಮನಿಗೆ ಕೊಡುವದು ಕ್ಷಯ ಮತ್ತು ಮಿತ. ಅದೂ ಅವನದೇ. ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ. ಆದರೆ ಆತನು ಕೊಟ್ಟರೆ ಅನಂತ ಮಡಿ ಮಾಡಿ ಅಕ್ಷಯ, ಅಮಿತವಾಗಿ ಕೊಡುವನು ಎಂದು ದಾಸರು ಹೇಳುತ್ತಾರೆ.


ಆಪತ್ತಿನಲ್ಲಿ ದ್ರೌಪದಿ ಕೊಟ್ಟದ್ದೇನು? ಭಕ್ತಿ ಪುಷ್ಪ. ಕೃಷ್ಣ ಮರಳಿ ಕೊಟ್ಟದ್ದು ಅಕ್ಷಯ ವಸ್ತ್ರ. ತೊಳೆದಿಟ್ಟ ಅಕ್ಷಯ ಪಾತ್ರೆಯಿಂದ ಅಕ್ಷಯ ಅಡಿಗೆ,  ದ್ರೌಪದಿಗೆ ದೊರಕಿಸಿ ಕೊಟ್ಟಿದ್ದು ಶ್ರೀ ಕೃಷ್ಣನೇ. ಒಪ್ಪಿಡಿ ಅವಲಕ್ಕಿಗೆ, ಕುಚೇಲನಿಗೆ ಅಖಿಳಾರ್ಥವ ಕೊಟ್ಟ ಕರುಣಾನಿಧಿ. ತರಳ ಧ್ರುವರಾಯನಿಗೆ, ಭಕ್ತ ವಿಭೀಷಣನಿಗೆ ಅಕ್ಷಯ ಪಟ್ಟವನ್ನಿತ್ತ. 


ಅಹಲ್ಯೆ ಅಕ್ಷಯ ಸೌಭಾಗ್ಯ, ಶಬರಿ ಸದ್ಗತಿ, ಪಡೆದರು. ಹನುಮಂತ ದೇವರು ಬೇಡಿ ನಿಜ ಭಕುತಿ ಪಡೆದವರು. ಜಯ ವಿಜಯರು ಅಕ್ಷಯ ಸುಖದ ಸದ್ಗತಿ ಪಡೆದರು. ಅಕ್ಷಯ ದಾತನಿಂದ, ಅಕ್ಷಯ ಸುಖ ಪಡೆದವರ ಪಟ್ಟಿ ಅಕ್ಷಯವಾಗಿ ಬೆಳೆಯುತ್ತದೆ.  


ಹಿರಿಯರು ಹೇಳಿದಂತೆ ಇಂದು ಬಂಗಾರ ಕೊಳ್ಳೋಣ. ಕೂಡಿಸಿ ಉಳಿಸಿ ಬೆಳೆಸೋಣ. ಭಗವಂತನ ನಾಮವೆಂಬ. ದಿವ್ಯ ಬಂಗಾರ- ಉಚ್ಛರಿಸಿದವರಿಗೆ ಅಕ್ಷಯ ಸುಖ ಕೊಡುವನು. 


ಇನ್ನು ನಾಡಿನಾದ್ಯಂತ ಹಾಗೂ ಅಕ್ಷಯ ತೃತೀಯ ದಿನದಂದು ಬಸವಜಯಂತಿಯನ್ನು ಆಚರಿಸುತ್ತಾರೆ. ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ಮುಂದಾದ ಉದಾತ್ತ ತತ್ವಗಳನ್ನು ಬೋಧಿಸಿದ ಮಹಾನ್ ವ್ಯಕ್ತಿ.


ಒಬ್ಬ ಮಹಾನ್ ಕವಿ, ಸಮಾಜ ಸುಧಾರಕ ಮತ್ತು ತತ್ವಜ್ಞಾನಿಯಾಗಿ ಹೊರಹೊಮ್ಮಿದರು. ವಚನಗಳ ಮೂಲಕ ಅವರು ಸಾಮಾಜಿಕ ಜಾಗೃತಿಯನ್ನು ಹರಡಲು ಪ್ರಾರಂಭಿಸಿದರು. ಬಿಜ್ಜಳನ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವಣ್ಣನವರು ಅನುಭವ ಮಂಟಪವನ್ನು ಪ್ರಾರಂಭಿಸಿದರು, ಇದು ನಂತರ ಎಲ್ಲಾ ವರ್ಗದ ಜನರು ಜೀವನದ ಆಧ್ಯಾತ್ಮಿಕ ವಿಷಯಗಳನ್ನು ಮುಕ್ತವಾಗಿ ಚರ್ಚಿಸಲು ಸಾಮಾನ್ಯ ಕೇಂದ್ರವಾಯಿತು. 


ಕಾಯಕಕ್ಕೆ ಪ್ರಧಾನ ಆಧ್ಯತೆಯನ್ನು ನೀಡಿ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದ ಅಪರೂಪದವರು. ಬಸವಣ್ಣನವರು ಕೇವಲ ಸಾಮಾಜಿಕ ಕ್ರಾಂತಿಗೆ ಮಾತ್ರ ಸೀಮಿತಗೊಳಿಸದೇ ಭಕ್ತಿ ಮತ್ತು ರಾಜತಂತ್ರವನ್ನು ಜೊತೆಗೇ ನಡೆಸಲು ಪ್ರೇರಕ ಶಕ್ತಿಯಾದ ಮಾರ್ಗದರ್ಶಕ, ಚೈತನ್ಯವೂ ಹೌದು. ವೇದ ಶಾಸ್ತ್ರಗಳಲ್ಲಿನ ಅರಿವನ್ನು ಸಾಮಾನ್ಯ ಜನರಿಗೆ ಸರಳ ಆಡುವ ಮಾತಿನಲ್ಲಿ ವಚನಗಳ ಮೂಲಕ ಜನರಲ್ಲಿ ಭಕ್ತಿ ರಸ ತುಂಬಿದರು. ಹಾಗೆಯೇ ಸ್ತ್ರೀ ಸಮಾನತೆಯನ್ನು ಬಲಿಷ್ಠಗೊಳಿಸಿದರು.


ಅಕ್ಷಯ ತೃತೀಯ ಸರ್ವರಿಗೂ ಸುಖ-ಸಂತೋಷ-ಶಾಂತಿ-ಆರೋಗ್ಯ-ಸಂಪತ್ತು-ಸ್ನೇಹ-ಪ್ರೀತಿಗಳನ್ನು ಅಕ್ಷಯವಾಗಿಸಲಿ. ಶುಭವಾಗಲಿ. ಸರ್ವೇ ಜನಾಃ ಸುಖಿನೋ ಭವಂತು. ಈ ಅಕ್ಷಯ ಎಲ್ಲರ ಪಾಲಿಗೆ ಆರೋಗ್ಯ ಐಶ್ವರ್ಯ ಸುಖ ಶಾಂತಿ ನೆಮ್ಮದಿ ಎಲ್ಲವನ್ನೂ ಕೊಡಲಿ. ಅದೆಲ್ಲಾ ಅಕ್ಷಯವಾಗಲಿ 


-ಪ್ರಿಯಾ ಪ್ರಾಣೇಶ ಹರಿದಾಸ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top