ಕಲೆ- ಅದು ಗಮಕ ಇರಲಿ, ಯಕ್ಷಗಾನ ಇರಲಿ, ಸಂಗೀತ ಇರಲಿ, ಸಾಹಿತ್ಯ ಇರಲಿ, ಭಜನೆ ಇರಲಿ... ಮನಸ್ಸುಗಳನ್ನು ಅರಳಿಸುತ್ತದೆ, ಮನಸ್ಸುಗಳನ್ನು ಬೆಸೆಯುತ್ತದೆ. ಅಂತಿಮವಾಗಿ ಎಲ್ಲಾ ಕಲೆಗಳ ಉದ್ದೇಶ ದೇವರನ್ನು ನೆನೆಯುವುದು, ಮನಸ್ಸಿಗೆ ನೆಮ್ಮದಿ ಕೊಡುವುದು, ಬದುಕಿಗೊಂದು ಸುಂದರತೆಯನ್ನು ಪಡೆಯುವುದು ಆಗಿರುತ್ತದೆ.
ಡಿವಿಜಿಯವರು ಹೇಳುವಂತೆ:
ಕವಿ ಚಿತ್ರಕೋವಿದನು ಪರತತ್ತ್ವಶೋಧಕನು ।
ವಿವಿಧ ವಾದನ ಗೀತ ನೃತ್ಯ ಕುಶಲಿಗಳು ॥
ನವನವತೆಯಂ ಮನಸಿಗೀವೆಲ್ಲ ಕಲೆಗಾರ- ।
ರವರಿಂದ ಸುಂದರತೆ - ಮಂಕುತಿಮ್ಮ ॥
(ಅರ್ಥ: ಕವಿ, ಚಿತ್ರ ಕಲಾವಿದ, ಪರತತ್ವವನು ಶೋಧಿಸುವವನು, ವಿವಿಧ ವಾದ್ಯಗಳನ್ನು ನುಡಿಸುವ ಕಲಾವಿದರು, ಸಂಗೀತ, ನೃತ್ಯ ಮುಂತಾದ ಕಲೆಗಳಲ್ಲಿ ನಿಪುಣತೆಯನ್ನು ಪಡೆದ ಕುಶಲಿಗಳು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರವನ್ನು ಮಾಡಿ, ಹೊಸವಿಚಾರಗಳನ್ನು ನಮಗೆ ನೀಡಿ ಆನಂದವನ್ನು ನೀಡುವರು, ಇವರ ಸೃಷ್ಟಿಯೂ ಸಹ ‘ಸುಂದರತೆ’ಯನ್ನು ಜಗತ್ತಿಗೆ ನೀಡುತ್ತದೆ)
ಈ ದೃಷ್ಟಿಯಿಂದ ಗಮಕವೂ ಸೇರಿದಂತೆ ಎಲ್ಲ ಕಲೆಗಳು ಹೆಚ್ಚ್ಹೆಚ್ಚು ಜನರು ಕಲಿಯುವುದರಿಂದ, ಕಲೆಯನ್ನು ಪ್ರೇಕ್ಷಕರಿಗೆ ಕೊಡುವುದರಿಂದ, ಕಲಿತವರಿಗೂ, ಆಸ್ವಾದಿಸುವವರಿಗೂ ಬದುಕಿನ-ಮನಸ್ಸಿನ ಸುಂದರತೆಯನ್ನು ಹೆಚ್ಚಿಸುತ್ತದೆ. ಎಲ್ಲರ ಸೃಜನಶೀಲತೆಯನ್ನು ವಿಸ್ತರಿಸುತ್ತದೆ.
ಮಲೆನಾಡಿನ ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಭಾಗದ ಸುಮಾರು 44 ಜನರು ಕರ್ನಾಟಕ ಗಮಕ ಕಲಾ ಪರಿಷದ್ ವತಿಯಿಂದ ನಡೆಸಿರುವ ಈ ವರ್ಷದ ಪ್ರೌಢ ಗಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಎಲ್ಲರಿಗೂ ಅಭಿನಂದನೆಗಳು. ಅವರನ್ನು ಗಮಕಿಗಳಾಗಿ ತಯಾರು ಮಾಡಿದ ಗುರುಗಳಾದ ಶ್ರೀಮತಿ ಗಾಯತ್ರಿ ನಾಗರಾಜ್ ಮತ್ತು ಶ್ರೀಮತಿ ಮನೋನ್ಮಣಿ ಮೂರ್ತಿಯವರಿಗು ಕೂಡ ಅಭಿನಂದನೆಗಳು, ಅಭಿವಂದನೆಗಳು.
ಈ ಹಿನ್ನಲೆಯಲ್ಲಿ ಗಮಕ ಕಲಿತ, ಕಲಿಯುತ್ತಿರುವ ಎಲ್ಲರಲ್ಲಿ ಒಂದೆರಡು ಸಲಹೆ ರೂಪದ ವಿನಂತಿ:
1) ಎಲ್ಲ ಗಮಕ ವಾಚನ ಕಲಾವಿದರು ವೇದಿಕೆಯಲ್ಲಿ ಕಾರ್ಯಕ್ರಮ ಕೊಡುವುದಕ್ಕೆ ಸ್ವಯಂಪ್ರೇರಿತರಾಗಿ ಮುಂದೆ ಬರಲಿ. ವೇದಿಕೆಯಲ್ಲಿ ಗಮಕ ವಾಚನ ಕಾರ್ಯಕ್ರಮ ಕೊಡುವಂತಹ ತರಬೇತಿ ಕಾರ್ಯಕ್ರಮಗಳನ್ನು ತಮ್ಮ ತಮ್ಮ ಮನೆಗಳಲ್ಲಿ, ಊರಿನ ದೇವಸ್ಥಾನಗಳಲ್ಲಿ ಗುರುಗಳ ಉಪಸ್ಥಿತಿಯೊಂದಿಗೆ ಆಯೋಜನೆ ಆಗಲಿ. ಪ್ರಾರಂಭದಲ್ಲಿ 5-10 ಜನ ಪ್ರೇಕ್ಷಕರಿದ್ದರೂ ಪರವಾಗಿಲ್ಲ, ಕಾರ್ಯಕ್ರಮಗಳಾಗಲಿ. ಪ್ರತೀ ಕಾರ್ಯಕ್ರಮದಲ್ಲೂ ಇಬ್ಬರು-ಮೂವರು ವಾಚನ ಮಾಡಬಹುದು.
2) ಗಮಕ ಗಾನ ವೈವಿದ್ಯ (ವ್ಯಾಖ್ಯಾನ, ಅರ್ಥಗಾರಿಕೆ ಇಲ್ಲದೇನೆ) ಕಾರ್ಯಕ್ರಮಗಳನ್ನು ಮಾಡಬಹುದು.
3) ರೂಪಕದ ರೀತಿ ಮಾಡಬಹುದು- ಬೇರೆ ಬೇರೆ ಕವಿಗಳ ಆಯ್ದ ಪದ್ಯಗಳನ್ನು ಒಂದು ಪುಟ್ಟ ನಿರೂಪಣೆಯೊಂದಿಗೆ ಮಾಡಬಹುದು.
4) ಕವಿ ಕಾವ್ಯ ಪರಿಚಯ- ನಿರ್ದಿಷ್ಟ ಕವಿಯ, ಬೇರೆ ಬೇರೆ ಭಾಗಗಳ, ವಿಶೇಷ ಪದ್ಯಗಳನ್ನು ಆಯ್ದುಕೊಂಡು ಪುಟ್ಟ ನಿರೂಪಣೆಯೊಂದಿಗೆ ಕವಿಯ ಪರಿಚಯ, ಕಾವ್ಯದ ಸೊಗಡುಗಳ ಪರಿಚಯ ಮಾಡಬಹುದು.
5) ಗಮಕ ವಾಚನ- ವ್ಯಾಖ್ಯಾನ ನಿರ್ದಿಷ್ಟ ಕವಿಯ ಕಾವ್ಯದ ಒಂದು ಕಥಾ ಭಾಗದೊಂದಿಗೆ 2-3 ಗಂಟೆಗಳ ಕಾರ್ಯಕ್ರಮ
6) ಗಮಕಾರ್ಥಗಾರಿಕೆ ನಿರ್ದಿಷ್ಟ ಕವಿಯ ಕಾವ್ಯದ ಒಂದು ಕಥಾ ಭಾಗದೊಂದಿಗೆ 2-3 ಗಂಟೆಗಳ ಕಾರ್ಯಕ್ರಮ
7) ಈಗೀಗ ನಿರಂತರವಾಗಿ ನೆಡೆಯುವ ಭಜನೆಯಲ್ಲೂ, ಅಖಂಡ ಭಜನಾ ಕಾರ್ಯಕ್ರಮಗಳಲ್ಲೂ ಗಮಕದ ಪದ್ಯಗಳನ್ನು ಮಧ್ಯ ಮಧ್ಯ ಹಾಡಬಹುದು.
8) ಯಾವುದೇ ರೀತಿಯ ಸಭಾ ಕಾರ್ಯಕ್ರಮಗಳಲ್ಲಿ ಪ್ರಾರ್ಥನೆಯಾಗಿಯೂ ಗಮಕ ಶೈಲಿಯಲ್ಲಿ ಭಕ್ತಿ ಪದ್ಯಗಳನ್ನು ಹಾಡಬಹುದು.
9) ಭೋಜನ ಕೂಟಗಳಲ್ಲಿ, ಊಟದ ಮಧ್ಯೆ ಚೂರ್ಣಿಕೆಯಾಗಿ ಗಮಕ ಪದ್ಯಗಳನ್ನು (ಯಾವುದೇ ಕವಿಯ ಯಾವುದೇ ಪದ್ಯಗಳನ್ನು) ಹಾಡಬಹುದು.
10) ಕೆಲವು ವಾಟ್ಸಪ್ ಗ್ರೂಪ್‌ಗಳಲ್ಲಿ ನಿತ್ಯ ಪ್ರಾರ್ಥನೆಯೊಂದಿಗೆ ಗ್ರೂಪ್‌ನ ಚಟುವಟಿಕೆ ಪ್ರಾರಂಭವಾಗುತ್ತದೆ. ಅಂತಹ ಗ್ರೂಪ್‌ಗಳಲ್ಲಿ ಗಮಕ ವಾಚನದಲ್ಲಿ ಭಕ್ತಿ ಪ್ರಾರ್ಥನೆಯನ್ನು ಆಗಾಗ ಮಾಡಬಹುದು.
11) ಗಮಕ ವಾಚನ ಕಾರ್ಯಕ್ರಮಗಳಲ್ಲಿ ಹಾಡಿದ ವಾಚನ ಪದ್ಯಗಳನ್ನು ಕಲಾವಿದರು ಅಥವಾ ಕಾರ್ಯಕ್ರಮದಲ್ಲಿದ್ದ ಪ್ರೇಕ್ಷಕರು ವಾಟ್ಸಪ್‌ಗಳಲ್ಲಿ ಅಥವಾ ಇತರ ಜಾಲತಾಣಗಳಲ್ಲಿ ರೀಲ್ಸ್ ಆಗಿಯೂ ಹಂಚಿಕೊಳ್ಳಬಹುದು.
12) ಗಮಕ ವಾಚನ, ಗಮಕ ವಾಚನ ವ್ಯಾಖ್ಯಾನ, ಗಮಕಾರ್ಥಗಾರಿಕೆ, ಕವಿ-ಕಾವ್ಯ ಪರಿಚಯ ವಾಚನಗಳ ಕಾರ್ಯಕ್ರಮಗಳನ್ನು ಯೂಟ್ಯೂಬ್‌ನಲ್ಲಿ ಸಂಗ್ರಹಿಸಿ, ವಾಟ್ಸಪ್ ಮತ್ತಿತರ ಮಾಧ್ಯಮಗಳ ಮೂಲಕ ಲಿಂಕ್ ಹಂಚಿಕೊಳ್ಳಬಹುದು.
13) ಆಕಾಶವಾಣಿಯಲ್ಲಿ ಗಮಕ ವಾಚನ ಮಾಡುವವರಿಗೆ ಅವಕಾಶಗಳು ತುಂಬ ಇದೆ. ಅಲ್ಲಿ ಗಮಕವಾಚನ ಕಾರ್ಯಕ್ರಮಗಳನ್ನು ಕೊಡುವ ಬಗ್ಗೆ ಪ್ರಯತ್ನಿಸಬಹುದು. ಒಮ್ಮೆ ಧ್ವನಿ ಪರೀಕ್ಷೆಯೊಂದಿಗೆ ಆಯ್ಕೆಯಾದರೆ, ಆಕಾಶವಾಣಿಯವರೇ ಆಗಾಗ ಕಾರ್ಯಕ್ರಮ ನೀಡಲು ಆಹ್ವಾನಿಸುತ್ತಾರೆ. ಆಲಾಶವಾಣಿಯಲ್ಲಿ ಹೋಗಿ ಬರುವ ಖರ್ಚು ಮತ್ತು ಗೌರವ ಸಂಭಾವನೆಯನ್ನು ಕೊಡುತ್ತಾರೆ.
14) ಗಣೇಶೋತ್ಸವ, ನವರಾತ್ರಿ, ಚೈತ್ರ ನವರಾತ್ರಿ, ದೀಪೋತ್ಸವಗಳಲ್ಲಿ ಗಮಕ ವಾಚನಗಳ ಕಾರ್ಯಕ್ರಮಗಳಿಗೆ ಸಿದ್ದರಾಗುವುದು, ಪ್ರಯತ್ನಿಸುವುದು.
15) ಲಾಸ್ಟ್ ಬಟ್ ನಾಟ್ ಲೀಸ್ಟ್: ಇವತ್ತು ಎಲ್ಲಾ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಇರುವಂತೆ, ಗಮಕವಾಚನದಲ್ಲೂ ಹೊಸದಾಗಿ ಕಲಿತು ಕಲಾವಿದರಾಗುತ್ತಿರುವವರು ತಮ್ಮ ಕಲಿತ ಪ್ರತಿಭೆಯನ್ನು ಪ್ರಾರಂಭದಲ್ಲಿ ತಾವೇ ಬೂಸ್ಟ್ ಮಾಡಿಕೊಳ್ಳಬೇಕು, ಹಿಂಜರಿತವಿಲ್ಲದೆ ತಾವೇ ಪ್ರಚಾರ ಮಾಡಿಕೊಳ್ಳಬೇಕು, ಅವಕಾಶಗಳನ್ನು ತಾವೇ ಸೃಷ್ಟಿ ಮಾಡಿಕೊಳ್ಳಬೇಕು. ಒಂದಿಷ್ಟು ಕಾರ್ಯಕ್ರಮಗಳಾದ ಮೇಲೆ ಮತ್ತೆ ಅವಕಾಶಗಳು ತನ್ನಿಂದ ತಾನೆ ಬರುತ್ತವೆ. ಕಲಾ ಶಾರದೆಯ ದೇಗುಲದ ದಾರಿಯೇ ಹಾಗೆ, ಮೊದಲು ಎರಡು ಹೆಜ್ಜೆಗಳು ಕಲಾವಿದರಾಗುವವರೇ ಇಡಬೇಕು. ನಂತರ ಶಾರದೆಯೇ ನೆಡೆಸುತ್ತಾಳೆ!!!
**
ಕಳೆದ ಮೂರ್ನಾಲ್ಕು ವರ್ಷಗಳಿಂದ ಅನೇಕರು ಗಮಕ ಕಲಿತಿರುವುದು, ಕಲಿಯುತ್ತಿರುವುದು ಒಂದು ಸಂತೋಷ ಮತ್ತು ಸಂಭ್ರಮದ ವಿಚಾರ. ಮನೋನ್ಮಣಿಯವರಿಂದ ಮತ್ತು ಗಾಯತ್ರಿಯಕ್ಕರವರಿಂದ ಗಮಕ ಕಲಿತು ಉತ್ತೀರ್ಣರಾದ ನೂರಾರು ಗಮಕಿಗಳಿಂದ, ಗಮಕ ಕಲೆ ಮಲೆನಾಡು ಮತ್ತು ರಾಜ್ಯಾದ್ಯಂತ ಮತ್ತೆ ಮತ್ತು ಮತ್ತಷ್ಟು ಅನುರಣಿಸುವಂತಾಗಲಿ.
***
ಹಾಂ, ಇನ್ನೊ ಒಂದು ಮಾತು: ವ್ಯಾಖ್ಯಾನಕ್ಕೆ, ನಿರೂಪಣೆಗೆ, ಅರ್ಥಗಾರಿಕೆಗೆ ಈ ಬಳಗದಲ್ಲೂ ಸೇರಿದಂತೆ ಸುತ್ತಮುತ್ತಲು ಇರುವ ಕಲಾವಿದರುಗಳನ್ನು (ಜನಾರ್ದನ ಮೇಷ್ಟ್ರು, ಪವನ್ ಕಿರಣ್‌ಕೆರೆ, ಅಶೋಕ ಸಿಗದಾಳ್, ರಜನೀಶ್ ಹೊಳ್ಳ, ರಮೇಶ್ ಅಡ್ಡಗದ್ದೆ, ನಾಗೇಶ್ ಕಾಮತ್, ಇನ್ನೂ ಹಲವರು) ವಾಚನಕಾರರೇ ನೇರವಾಗಿ ಸಂಪರ್ಕಿಸಿ ವ್ಯಾಖ್ಯಾನ, ನಿರೂಪಣೆ, ಅರ್ಥಗಾರಿಕೆ ಸಹಕಾರ ಪಡೆಯಬಹುದು. ಅಥವಾ ತಮ್ಮ ತಮ್ಮ ಗುರುಗಳ ಮೂಲಕ ಅಥವಾ ಅಶೋಕ್ ಸಿಗದಾಳ್ (6361709631) ಮೂಲಕವೂ ಸಂಪರ್ಕಿಸಬಹುದು.
***
ಮುಂದಿನ ತಲೆಮಾರಿಗೆ ರುಚಿಸುವ ಹಾಗೆ ಮಹಾಕಾವ್ಯಗಳನ್ನು ಗಮಕದ ಮೂಲಕ ದಾಟಿಸುವ ಕೆಲಸ ಮಾಡಬೇಕಿದೆ. ಗಮಕ ಕಲಿಯಲು ಆಸಕ್ತಿ ತೋರಿಸಿ ಕಲಿತ ಎಲ್ಲರಿಗೂ, ಕಲಿಯುತ್ತಿರುವ ಎಲ್ಲರಿಗೂ ವಿನಂತಿ- ನೀವು ಕಲಿತಿದ್ದನ್ನು ಡಿವಿಜಿಯವರು ಹೇಳಿದಂತೆ ಹೊಸ ಹೊಸ ಆವಿಷ್ಕಾರಗಳೊಂದಿಗೆ ವೇದಿಕೆಗೆ ತನ್ನಿ. ಎಲ್ಲಾ ಸೇರಿ, ನಿಧಾನವಾಗಿ ಮುಂದಿನ ತಲೆಮಾರಿಗೂ ಹಸ್ತಾಂತರಿಸೋಣ.
ಇಂದೇ ಸಂಕಲ್ಪಿಸಿ, ಒಂದಷ್ಟು ಗಮಕ ಕಾರ್ಯಕ್ರಮಗಳು ಹೊಸ ಸಂವತ್ಸರದಲ್ಲಿ ವಿಸ್ತರಿಸಲಿ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ