ಮುಡಿಪು ಹೈಸ್ಕೂಲ್‌ನಲ್ಲಿ ಮತ್ತೆ ಬಾಲಕ ಬಾಲಕಿಯರಾದ ಹಳೆ ವಿದ್ಯಾರ್ಥಿಗಳು
ಮುಡಿಪು: ಎಲ್ಲರೂ 50ರ ಹರೆಯದ ಆಸುಪಾಸಿನವರು. ಅವರೆಲ್ಲರೂ ಮೂವತ್ತೈದು ವರ್ಷ ಹಿಂದೆ ಸರಿದರೆ ಏನಾಗುತ್ತದೆ? ಅವರೆಲ್ಲರೂ 15ರ ಬಾಲಕ ಬಾಲಕಿಯರಾಗಿ ತಮ್ಮ ಪ್ರತಿಫಲನವನ್ನು ನೋಡಿಕೊಳ್ಳಬಹುದಲ್ಲವೇ?
ಹೌದು. ತಮ್ಮ ಬಾಲ್ಯವನ್ನು, ಹೈಸ್ಕೂಲ್ ಜೀವನವನ್ನು ಪ್ರತಿಫಲಿಸುವ ಕನ್ನಡಿ, 1987-90ರ ಸಹಪಾಠಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಮೂಲಕ ಪ್ರತಿಫಲಿತವಾಯಿತು. ಭಾನುವಾರ ಅಂದರೆ ಮಾರ್ಚ್ 30 ರಂದು, ಉಳ್ಳಾಲ ತಾಲೂಕಿನ ಅಮ್ಮೆಂಬಳ ಪಿ.ಯು. ಕಾಲೇಜಿನ (ಈಗ ಡಿಗ್ರಿ ಕಾಲೇಜಾಗಿ ಪರಿವರ್ತನೆಯಾಗಿದೆ) ಆವರಣಲ್ಲಿ ಅಂತಹ ವಿಶೇಷ ಕಾರ್ಯಕ್ರಮವೊಂದು ನಡೆಯಿತು!
ಎಂಟನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಒಟ್ಟಾಗಿ ಕಲಿತ ಆ ಎಲ್ಲಾ ಹಳೆಯ ವಿದ್ಯಾರ್ಥಿಗಳು, ʼಎಂಟರಿಂದ ಹತ್ತು.. ಹೀಗಿತ್ತು.." ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಖುಷಿಯ ಕ್ಷಣಗಳಿಗೆ ಜತೆಯಾದರು.
ವಿಶೇಷ ಎಂದರೆ, ಇಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ, ಗೃಹಿಣಿಯರಾಗಿ ಸಂಸಾರ ಜವಾಬ್ದಾರಿ ಹೊತ್ತಿರುವ ಸುಮಾರು 25 ಮಂದಿ ಮಧ್ಯವಸ್ಕರು ಬಾಲಕ ಬಾಲಕಿಯರಾಗಿ ರಾರಾಜಿಸಿದರು. ಮೂರು ವರ್ಷಗಳ ಹೈಸ್ಕೂಲ್ ಜೀವನದಲ್ಲಿ ಒಟ್ಟಾಗಿ ಕಲಿತ ಅಷ್ಟೂ ಸಹಪಾಠಿಗಳು ಅದೇ ಶಿಕ್ಷಣ ಸಂಸ್ಥೆಯ ಕಿರು ಸಭಾಂಗಣದಲ್ಲಿ ಇಡೀ ದಿನ ಕಳೆದರು. ತಮ್ಮ ತುಂಟಾಟ, ಮುಗ್ಧತೆ, ರಸವತ್ತಾದ ಕ್ಷಣಗಳನ್ನು ಸ್ಮರಿಸಿ ಸಂಭ್ರಮಿಸಿದರು.
ಮೂವತ್ತೈದು ವರ್ಷಗಳ ಹಿಂದೆ ಸಹಪಾಠಿಗಳಾಗಿದ್ದವರು ಮಾತ್ರ ಜತೆ ಸೇರಿದ್ದಲ್ಲ. ಅವರಿಗೆ ಕಲಿಸಿ, ಈಗ ನಿವೃತ್ತ ಜೀವನವನ್ನು ಕಳೆಯುತ್ತಿರುವ ಶಿಕ್ಷಕರೂ ತಮ್ಮ ಅಧ್ಯಾಪನ ವೃತ್ತಿಯ ನೆನಪುಗಳನ್ನು ಮೆಲುಕು ಹಾಕಿದರು. ಈ ವಿಶೇಷ ಕಾರ್ಯಕ್ರಮದಲ್ಲಿ "ಹೈಸ್ಕೂಲ್ ಫ್ರೆಂಡ್ಸ್ʼ ಜತೆ ಸೇರಿದರೆ, ಶಿಕ್ಷಕರಾಗಿದ್ದ ಶ್ರೀ ಶೀನ ಶೆಟ್ಟಿ (ದೈಹಿಕ ಶಿಕ್ಷಕರು), ಶ್ರೀ ಅಪ್ಪಣ್ಣ ನಾಯಕ್ (ಗಣಿತ ಶಿಕ್ಷಕರು), ಶ್ರೀ ಜಯರಾಮ ಶೆಟ್ಟಿ (ಗಣಿತ ಶಿಕ್ಷಕರು), ಬಸವರಾಜ ಪಲ್ಲಕಿ (ಕನ್ನಡ, ಸಮಾಜ ಶಿಕ್ಷಕರು), ಸುಮನಾ ಗಾಂವ್ಕರ್ (ಕನ್ನಡ ಶಿಕ್ಷಕಿ) ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆರುಗು ತಂದರು.
ಈ ಅಪರೂಪದ ಕಾರ್ಯಕ್ರಮದಲ್ಲಿ ಶಿಕ್ಷಕರು, ಅಷ್ಟೂ ಹಳೆ ವಿದ್ಯಾರ್ಥಿಗಳು ಇನ್ನೂ ಜೀವನದಲ್ಲಿ ಸಾಧಿಸುವಂತೆ ಹಾರೈಸಿದರು, ಜತೆಗೆ, ಬಾಲಕ-ಬಾಲಕಿಯರಂತಾಗಿದ್ದ 50ರ ಹರೆಯದ ಹಳೆಯ ವಿದ್ಯಾರ್ಥಿಗಳು ವಿಧೇಯರಾಗಿ ತಮ್ಮ ಪ್ರೀತಿಯ ಶಿಕ್ಷಕರ ಮಾತುಗಳನ್ನು ಆಲಿಸಿದರು.
ಜತೆಗೆ, ಆ ಎಲ್ಲಾ ಶಿಕ್ಷಕರು ತಮ್ಮ ಜೀವನದಲ್ಲಿ ಯಾವ ರೀತಿಯಲ್ಲಿ ಬದಲಾವಣೆ ತಂದರು, ಬೆತ್ತದ ರುಚಿ ತೋರಿಸಿ ತಮ್ಮನ್ನು ಯಾವ ರೀತಿಯ ತಿದ್ದಿ ತೀಡಿದರು, ಕಬ್ಬಿಣದ ಕಡಲೆಯಾದ ಗಣಿತವನ್ನು ಅದು ಹೇಗೆ ಸುಲಭ ಸಾಧ್ಯವಾಗಿಸಿದರು.. ಎಂಬುದನ್ನೆಲ್ಲಾ ಅಷ್ಟೂ ʼಬಾಲಕ-ಬಾಲಕಿʼಯರು ಹಂಚಿಕೊಂಡರು. ಅಷ್ಟೂ ಹಳೆಯ ವಿದ್ಯಾರ್ಥಿಗಳು ʼಮುಗ್ಧತೆಯಿಂದ ಪ್ರಬುದ್ಧತೆಗೆ ಹೇಗೆ ಹೊರಳಿದರೆಂಬʼ ಜೀವನ ಪಾಠದ ಬಗ್ಗೆ ಶಿಕ್ಷಕರೂ ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
ಆ ಕಾಲದಲ್ಲಿ ಶಾಲಾ ಆರಂಭ ಗೀತೆಯಾಗಿದ್ದ "ಜ್ಯೋತಿ ಬೆಳಗಿ ಬರಲಿ, ಜ್ಞಾನದ ಜ್ಯೋತಿ ಬೆಳಗಿ ಬರಲಿ," ಎಂಬ ಹಾಡನ್ನು ಹಳೆಯ ವಿದ್ಯಾರ್ಥಿನಿಯರು ಹಾಡಿ ಒಂದು ರೀತಿಯ ಭಾವುಕ ಕ್ಷಣಕ್ಕೆ ಕಾರಣರಾದರು.
ಬೆಂಗಳೂರು, ಮಂಗಳೂರು, ದುಬೈ, ಚೆನ್ನೈ ಮತ್ತಿತರ ಊರುಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಕಾರ್ಯತತ್ಪರರಾಗಿರುವ ಈ ಎಲ್ಲಾ ಹಳೆಯ ವಿದ್ಯಾರ್ಥಿಗಳು "ಎಂಟರಿಂದ ಹತ್ತು.. ಹೀಗಿತ್ತು" ಎಂಬ ವಿಶೇಷ ಕಾರ್ಯಕ್ರಮಕ್ಕೆ ಬಂದು ಸ್ನೇಹ ಸಮ್ಮಿಲನಕ್ಕೆ ಉದಾಹರಣೆಯಾದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ