ಬಾಬು ಜಗಜೀವನ ರಾಮ್ ಜೀವನಮೌಲ್ಯಗಳು ಸರ್ವ ಕಾಲಕ್ಕೂ ಆದರ್ಶ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ

Upayuktha
0

ಉಡುಪಿ: ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ, ಜಾತಿಪದ್ಧತಿ ವಿರುದ್ಧ ಹೋರಾಡಿ, ದೀನದಲಿತರಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಅವಿರತವಾಗಿ ಶ್ರಮಿಸಿದ ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ. ಬಾಬು ಜಗಜೀವನ ರಾಮ್ ರವರ ಜೀವನಮೌಲ್ಯಗಳು ಸರ್ವ ಕಾಲಕ್ಕೂ ಆದರ್ಶಪ್ರಾಯವಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್‌ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಪ.ಜಾತಿ, ಪ.ಪಂಗಡಗಳ ಸಂಘಟನೆಗಳ ಆಶ್ರಯದಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ರವರ 118 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ. ಬಾಬು ಜಗಜೀವನ ರಾಮ್ ಜನ್ಮ ದಿನಾರಣೆ ವಿಶಿಷ್ಠವಾದ ಕಾರ್ಯಕ್ರಮ. ಶತಮಾನದ ಹಿಂದೆ ಸಾಮಾಜಿಕ ನ್ಯಾಯದ ಕಲ್ಪನೆಯೇ ಇಲ್ಲದೇ, ಸಮಾಜದಲ್ಲಿ ಸಮಾನತೆ ಕನಸಾಗಿದ್ದ ಸಂದರ್ಭದಲ್ಲಿ ಅಸ್ಪೃಷ್ಯತೆ, ಜಾತಿಪದ್ಧತಿ ತಾಂಡವವಾಡುತ್ತಿದ್ದಾಗ ಹೋರಾಡಿ ಸಮಾನತೆಯನ್ನು ತಂದಿದ್ದಾರೆ. ಎಲ್ಲಾ ಅವಮಾನಗಳನ್ನು ಎದುರಿಸಿ, ಆತಂಕಗಳನ್ನು ನಿವಾರಿಸಿಕೊಂಡು ಅತ್ಯಂತ ಪ್ರಮುಖ ಸ್ಥಾನವನ್ನು ಅಲಂಕರಿಸಿದವರು. ಬದುಕಿನ ಬಹು ಭಾಗವನ್ನು ಅಧಿಕಾರದಲ್ಲಿ ಕಳೆದರೂ ಸಮಾಜದ ಉನ್ನತಿಗಾಗಿ  ಜೀವನವನ್ನು ಸಮರ್ಪಣೆ ಮಾಡಿದ್ದಾರೆ. ದೇಶದಲ್ಲಿ ಬರಗಾಲ ಬಂದ ಸಂದರ್ಭದಲ್ಲಿ ಕೃಷಿ ಮಂತ್ರಿ ಆಗಿದ್ದ ಅವರು ಯಾರೂ ಊಹಿಸದಂತಹ ರೀತಿಯಲ್ಲಿ ಆಹಾರದ ಉತ್ಪಾದನೆ ಹಾಗೂ ವಿತರಣೆ ಮಾಡಿದ್ದಾರೆ. ಕಾರ್ಮಿಕ ಮಂತ್ರಿಯಾಗಿದ್ದಾಗ ಸಮಾಜದ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದರೊಂದಿಗೆ ಜನರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ ಎಂದರು.

ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಸಮಕಾಲೀನ ರಾದ ಡಾ. ಬಾಬು ಜಗಜೀವನ ರಾಮ್ ರವರು ಕೇಂದ್ರದ ಕಾರ್ಮಿಕ ಹಾಗೂ ರಕ್ಷಣಾ ಸಚಿವರಾಗಿದ್ದಾಗ ದೂರದೃಷ್ಟಿಯಿಂದ ತೆಗೆದು ಕೊಂಡ ನಿಲುವುಗಳು ಹಾಗೂ ರೂಪಿಸಿದ ಕಾನೂನುಗಳು ಆಡಳಿತ ವ್ಯವಸ್ಥೆಗೆ ಮಾದರಿಯಾಗುವಂತದ್ದು. ಬಾಬು ಜಗ ಜೀವನ  ರಾಮ್ ರವರ ಕುರಿತು ಲೇಖನಗಳು, ಪುಸ್ತಕಗಳು, ಅವರ ಆದರ್ಶ, ಚಿಂತನೆಗಳು, ಜೀವನ ಶೈಲಿಯನ್ನು ಪ್ರತಿಯೊಬ್ಬ ಯುವ ಪೀಳಿಗೆಯು ಅವಲೋಕನ ಮಾಡುವುದರೊಂದಿಗೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. 

ಅಜ್ಜರಕಾಡು ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ನಿಕೇತನ ಜಗಜೀವನ ರಾಮ್ ರವರ ಕುರಿತು ಉಪನ್ಯಾಸ ನೀಡಿ, ಮೂವತ್ತು ವರ್ಷ ವಿವಿಧ ಸಚಿವರಾಗಿ, ಉಪಪ್ರಧಾನಿಯಾಗಿ ಆಡಳಿತ ನಿರ್ವಹಿಸಿದ ಅವರು, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಸಮಾಜವಾದಿ ಸಿದ್ಧಾಂತದ ನಿಲುವಿನೊಂದಿಗೆ ಜೀವನವನ್ನು ಮುನ್ನಡೆಸಿಕೊಂಡು ಬಂದ ಧೀಮಂತ ಪ್ರತಿಭೆ. ಭಾರತ ಪ್ರಕಾಶಮಾನವಾಗಿರಲು ಪ್ರತಿಯೊಬ್ಬರೂ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಹೊಂದಿ ಅರ್ಹರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂಬ ಆಶಯ ಹೊಂದಿದ್ದರು ಎಂದರು.

ಶತಮಾನದ ಹಿಂದೆ ಜಾತ್ಯಾತೀತ ನಿಲುವನ್ನು ಪ್ರತಿಪಾದನೆ ಮಾಡುವ ಸಂದರ್ಭದಲ್ಲಿ ವ್ಯಕ್ತಿಯಾಗಿ ಶಕ್ತಿಯಾಗಿ ಪ್ರಭಾವ ಬೀರಿದ್ದ ವರು ಅವರ ಪೋಷಕರು. ಬಾಲ್ಯದಲ್ಲಿಯೇ ತುಂಟಾಟದ ಹುಡುಗನಾಗಿದ್ದ ಜಗಜೀವನ ರಾಮ್ ರವರು ಪ್ರತಿಯೊಬ್ಬರ ಮಾತು ಗಳನ್ನು ತಾಳ್ಮೆಯಿಂದ ಆಲಿಸುವ ಮನೋವ್ಯಕ್ತಿತ್ವ ಹೊಂದಿದ್ದರು. ಅವರ ಮಾನವೀಯ ನೆಲೆಯ ಆಲೋಚನೆಗಳು ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಎಲ್ಲರಿಗೂ ಪ್ರೇರಣೇಯಾಗಿದ್ದವು ಎಂದ ಅವರು, ನಮ್ಮ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ  ಇಂದಿಗೂ ಡಾ. ಬಾಬು ಜಗಜೀವನ ರಾಮ್ ಅವರನ್ನು ಧೀಮಂತ ನಾಯಕರಾಗಿ ಸ್ಮರಿಸಿಕೊಳ್ಳುತ್ತಿರವುದೇ ಅವರ ಆದರ್ಶಕ್ಕೆ ನಾವು ನೀಡುವ ದೊಡ್ಡ ಉಡುಗೊರೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಪೌರಾಯುಕ್ತ ಡಾ.ಉದಯ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಎಂ, ಸ್ವಾಗತಿಸಿ, ವಂದಿಸಿದರು, ವಾರ್ಡನ್ ಶ್ರೀದೇವಿ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top