ಸಮಕಾಲೀನ ಕನ್ನಡ ಸಾಹಿತ್ಯ ಲೋಕದಲ್ಲಿ ಕಥೆಗಾರ್ತಿಯಾಗಿ, ಕವಯಿತ್ರಿಯಾಗಿ, ವಿಮರ್ಶಕಿಯಾಗಿ ಹೆಸರು ಮಾಡಿದವರು ಶ್ರೀಮತಿ ಮಾಲಾ ಚೆಲುವನಹಳ್ಳಿ. ಇವರು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿಯ ಚೆಲುವನಹಳ್ಳಿ ಗ್ರಾಮದ ಗೃಹಿಣಿ ಹಾಗೂ ರೈತ ಕುಟುಂಬದ ಮಹಿಳೆಯಾಗಿದ್ದಾರೆ. ಪತಿ ಚಂದ್ರಶೇಖರ್ ಹಾಗೂ ಮಗ ಯಶಸ್ ಜತೆಗೆ ವಾಸಿಸುತ್ತಿದ್ದಾರೆ.
ರಂಗೋಲಿ ಬಿಡಿಸುವುದು, ಹಾಡುವುದು, ನೇಯ್ಗೆ, ಕಸೂತಿ, ವಿವಿಧ ಮಾದರಿಯ ಹತ್ತಿಯ ಹಾರಗಳನ್ನು ತಯಾರಿಸುವುದು, ಕೈತೋಟದಲ್ಲಿ ಹಲವಾರು ರೀತಿಯ ಹೂವಿನ ಗಿಡ ಹಾಗೂ ಅಲಂಕೃತ ಗಿಡಗಳನ್ನು ಬೆಳೆಯುವುದು, ಪ್ರಾಣಿಗಳನ್ನು ಸಾಕುವುದು ಇವರ ಹವ್ಯಾಸಗಳು.
2020ರ ಸೆಪ್ಟೆಂಬರ್ 2 ರಿಂದ ಅಧಿಕೃತವಾಗಿ ಸಿರಿಗನ್ನಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ದಿ| ಎಂ.ಎಸ್ ವೆಂಕಟರಾಮಯ್ಯ ಅವರ ಅಣತಿಯ ಮೇರೆಗೆ ಸಿರಿಗನ್ನಡ ವೇದಿಕೆ ಹಾಸನ ಜಿಲ್ಲಾ ಬಳಗ ಎಂಬ ವಾಟ್ಸಪ್ ಬಳಗವನ್ನು ಸ್ಥಾಪಿಸಿ ಸಂಘಟಕಿಯಾಗಿ, ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.
2020 ರ ಮೇ ತಿಂಗಳಿನಿಂದ ಇಲ್ಲಿಯವರೆಗೂ ಪ್ರತೀ ಭಾನುವಾರ ಸಾಹಿತ್ಯದ ಹಲವು ಪ್ರಕಾರದ ಸುಮಾರು 100ಕ್ಕೂ ಹೆಚ್ಚು ರಾಜ್ಯಮಟ್ಟದ ಸ್ಪರ್ಧೆಗಳನ್ನು ವಾಟ್ಸಪ್ ಸ್ಪರ್ಧಾ ಬಳಗದ ಮೂಲಕ ನಡೆಸಿಕೊಂಡು ಬಂದಿರುತ್ತಾರೆ.
2021 ರ ಮೇ ತಿಂಗಳು ಸಾಹಿತ್ಯ ಪರ್ವ ಎಂಬ ಅಂತರ್ಜಾಲ ಕಾರ್ಯಕ್ರಮವನ್ನು ಆಯೋಜಿಸಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಹಾಗೂ ಕೃತಿಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ನಡೆಸಿದ್ದಾರೆ. ಮಾಸದ ವನಸುಮ ಮಾಲಿಕೆಯಲ್ಲಿ ಜಿಲ್ಲೆಯ ಪ್ರತಿಭಾವಂತ ಕವಿ ಸಾಹಿತಿಗಳ ಪರಿಚಯ, ಕವಿಗೋಷ್ಠಿ, ಶ್ರವಣ ಬೆಳಗೊಳದ ಐತಿಹ್ಯದ ಬಗ್ಗೆ ಮಾಹಿತಿ ಹೀಗೇ ನುರಿತವರಿಂದ ಉಪನ್ಯಾಸ ಮಾಲಿಕೆಯ 40 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಇತ್ತೀಚೆಗೆ ಕವಿ ಸಂಗಮ ಎಂಬ ಶೀರ್ಷಿಕೆಯೊಂದಿಗೆ ಮುದುವರೆಯುತ್ತಿದೆ ಮತ್ತು ಪ್ರತೀ ಕಾರ್ಯಕ್ರಮದ ವರದಿಗಳೂ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನ, ಹೊಸಪೇಟೆಯಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿ, ಹಾಸನದ ರಾಜ್ಯಮಟ್ಟದ ಚುಟುಕು ಗೋಷ್ಠಿ, ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಕವಿಗೋಷ್ಠಿ ಹಾಸನ, ಹಾಗೂ ಹಲವು ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ, ಮೈಸೂರು ಹಾಗೂ ಬೆಂಗಳೂರಿನಲ್ಲಿ ನಡೆದ ಬುದ್ಧ ಬಸವ ಗಾಂಧಿ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಸಮಾವೇಶದಲ್ಲಿ ಹಾಸನ ಜಿಲ್ಲೆಯನ್ನು ಪ್ರತಿನಿಧಿಸಿರುತ್ತಾರೆ.
ಕಥೆ, ಕವನ, ಲೇಖನ, ಗಜಲ್, ಮುಕ್ತಕ, ಅಬಾಬಿ, ಷಟ್ಪದಿಗಳು, ವಿಮರ್ಶೆಗಳು ಹಲವು ರಾಜ್ಯಮಟ್ಟ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಹಾಗೂ ಪುಸ್ತಕಗಳಲ್ಲಿ ಸೇರ್ಪಡೆಯಾಗಿವೆ.
ಹಲವಾರು ರಾಜ್ಯಮಟ್ಟದ ಅಂತರ್ಜಾಲ ಸ್ಪರ್ಧೆಗಳಲ್ಲಿ ಭಾಗವಹಿಸಿ ಅತ್ಯುತ್ತಮ, ಉತ್ತಮ, ಪ್ರಥಮ ದ್ವಿತೀಯ, ತೃತೀಯ ಸ್ಥಾನಗಳಲ್ಲಿ ವಿಜೇತಳಾಗಿ 200ಕ್ಕೂ ಹೆಚ್ಚು ಅಭಿನಂದನಾ ಪತ್ರಗಳನ್ನು ಪಡೆದಿರುತ್ತಾರೆ. ಹಾಸನ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ಕೊಟ್ಟಿರುತ್ತಾರೆ.
ಹಲವಾರು ಮಂದಿ ಕವಿ, ಕವಯತ್ರಿಯರ ಪುಸ್ತಕಗಳಿಗೆ ಮುನ್ನುಡಿ, ಬೆನ್ನುಡಿ, ಆಶಯ ನುಡಿ, ವಿಮರ್ಶೆಗಳನ್ನು ಬರೆದು ಕೊಟ್ಟಿರುತ್ತಾರೆ. ಹಲವಾರು ಸ್ಪರ್ಧಾತ್ಮಕ ಬಳಗಗಳಲ್ಲಿ ಸ್ಪರ್ಧೆಯ ತೀರ್ಪುಗಾರಳಾಗಿ, ವಿಮರ್ಶಕಿಯಾಗಿ ತೀರ್ಪನ್ನು ನೀಡಿರುತ್ತಾರೆ. ನೆನಪಾಗುವ ಮುನ್ನ ಎಂಬ ಕವನ ಸಂಕಲನ ಲೋಕಾರ್ಪಣೆಗೊಂಡಿದೆ.
ಪ್ರಶಸ್ತಿ-ಪುರಸ್ಕಾರಗಳು:
ಅಮ್ಮ ಕವನಕ್ಕೆ 2021ರಲ್ಲಿ ಲಲಿತಾ ಪುರಸ್ಕಾರ; ಸಾಹಿತ್ಯ ಹಾಗೂ ಕನ್ನಡದ ಸೇವೆಗಾಗಿ 2021 ರಲ್ಲಿ ಸಿರಿಗನ್ನಡ ಮಹಿಳಾ ವೇದಿಕೆಯಿಂದ ರಾಜ್ಯಮಟ್ಟದ ಕರ್ನಾಟಕ ರಾಜ್ಯ ಜ್ಞಾನ ಸಿರಿ ಗಂಗೋತ್ರಿ ಪ್ರಶಸ್ತಿ; ಗ್ರಾಮಾಂತರ ಬುದ್ದಿ ಜೀವಿಗಳ ಬಳಗ ಮೈಸೂರ್ ನಿಂದ ಕೆ.ಎಸ್ ನರಸಿಂಹ ಸ್ವಾಮಿ ಕಾವ್ಯ ಪುರಸ್ಕಾರ 2022; ಖಿದ್ಮಾ ಫೌಂಡೇಶನ್ ನಿಂದ ಹೆಮ್ಮೆಯ ಮಹಿಳೆ ಪ್ರಶಸ್ತಿ; ಮಂಗಳೂರಿನ ಕರ್ನಾಟಕ ಭಾವೈಕ್ಯ ಪರಿಷತ್‌ನಿಂದ ಭಾವೈಕ್ಯತಾ ಕಾವ್ಯಸಿರಿ ಪ್ರಶಸ್ತಿಗಳು ಇವರಿಗೆ ಸಂದಿವೆ.
ಸಿರಿಗನ್ನಡ ವೇದಿಕೆ ಹಾಗೂ ಸಿರಿಗನ್ನಡ ಮಹಿಳಾ ವೇದಿಕೆಯಿಂದ 2023 ನವೆಂಬರ್ 19ರಂದು ನಡೆದ ಸುವರ್ಣ ಕರ್ನಾಟಕ ಸಂಭ್ರಮ ಎಂಬ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
- ಸಾವಿತ್ರಮ್ಮ ಓಂಕಾರ್, ಅರಸೀಕೆರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ