ಕಬಡ್ಡಿ ಪಂದ್ಯಾವಳಿ; ಎಸ್.ಡಿ.ಎಂ ಕಾಲೇಜಿನ ತಂಡಕ್ಕೆ ಚಾಂಪಿಯನ್‌ಶಿಪ್

Upayuktha
0

 ಮಂಗಳೂರು ವಿವಿ ಅಂತರ್‌ಕಾಲೇಜು ಕಬಡ್ಡಿ ಪಂದ್ಯಾವಳಿ; ಸತತ ನಾಲ್ಕನೇ ಸಲ ವಿಜೇತಪಟ್ಟ


ಉಜಿರೆ: ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿತ ಮಂಗಳೂರು ವಿಶ್ವವಿದ್ಯಾಲಯದ ಅಂತರ್‌ಕಾಲೇಜು ಪುರುಷ ಕಬ್ಬಡ್ಡಿ  ಪಂದ್ಯಾವಳಿಯಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ತಂಡವು ಚಾಂಪಿಯನ್‌ಶಿಪ್ ಮನ್ನಣೆಗೆ ಪಾತ್ರವಾಗಿ ಶ್ರೀರತ್ನವರ್ಮ ಹೆಗ್ಗಡೆ ಸ್ಮಾರಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.


ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ್ ಪಿ ಟ್ರೋಫಿ ನೀಡಿದರು. ಈ ಸಂದರ್ಭದಲ್ಲಿ ‘ಕನಸಿನ ಮನೆ’ಯ ಪ್ರೊಪ್ರೈಟರ್ ಕೆ.ಮೋಹನ್ ಕುಮಾರ್, ಮಂಗಳೂರು ವಿ.ವಿ.ಯ ಕಬ್ಬಡ್ಡಿ ಪಂದ್ಯಾವಳಿಯ ವೀಕ್ಷಕ ರಾಧಾಕೃಷ್ಣ ಉಪಸ್ಥಿತರಿದ್ದರು. 


ಉಜಿರೆಯ ಎಸ್.ಡಿ.ಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಗುರುವಾರ ಆರಂಭವಾಗಿದ್ದ ಈ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಕಾಲೇಜುಗಳ 24  ತಂಡಗಳು ಭಾಗವಹಿಸಿದ್ದವು. ಫೈನಲ್ ಹಂತದ ಹಣಾಹಣಿಯಲ್ಲಿ ಮುನ್ನಡೆ ಸಾಧಿಸಿದ ಎಸ್.ಡಿ.ಎಂ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಮೂಲಕ ಎಸ್.ಡಿ.ಎಂ ಕಾಲೇಜಿನ ತಂಡವು ಸತತ ನಾಲ್ಕನೇ ಬಾರಿಗೆ ಚಾಂಪಿಯನ್‌ಶಿಪ್‌ನ ಹೆಗ್ಗಳಿಕೆಯನ್ನು ಪಡೆದಂತಾಗಿದೆ.


ಆಳ್ವಾಸ್ ಕಾಲೇಜು ತಂಡವು ರನ್ನರ್ ಅಪ್ ಮನ್ನಣೆ ಪಡೆಯಿತು. ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜು ತಂಡ ಮೂರನೇ ಸ್ಥಾನ, ಸುಳ್ಯದ ಎನ್.ಎಂ.ಸಿ ಕಾಲೇಜು ತಂಡ ನಾಲ್ಕನೇ ಸ್ಥಾನ ಪಡೆದವು. ಪ್ರತಿವರ್ಷದಂತೆ ಈ ಸಲವೂ ಪಂದ್ಯಾವಳಿ ಫೈನಲ್ ಹಂತ ತಲುಪುವ ಹೊತ್ತಿಗೆ ಚಾಂಪಿಯನ್‌ಶಿಪ್ ಯಾರ ಮುಡಿಗೇರಬಹುದು ಎಂಬ ನಿರೀಕ್ಷೆ ಗರಿಗೆದರಿತ್ತು. ಅದಕ್ಕನುಗುಣವಾಗಿಯೇ ಈ ಹಂತ ತಲುಪಿದಾಗ ಎಸ್.ಡಿ.ಎಂ ಮತ್ತು ಆಳ್ವಾಸ್‌ನ ಎರಡೂ ತಂಡಗಳ ಪ್ರದರ್ಶನವು ರೋಚಕತೆಯ ಸ್ಪರ್ಶ ಪಡೆಯಿತು.  ಪಟ್ಟು ಮತ್ತು ಪ್ರತಿಪಟ್ಟುಗಳ ಬಲದಲ್ಲಿ ಎರಡೂ ತಂಡಗಳ ಹಣಾಹಣಿ ಗಮನ ಸೆಳೆಯಿತು.


ಸೆಮಿಫೈನಲ್‌ವರೆಗೂ ಅತ್ಯುತ್ತಮ ಆಟ ಪ್ರದರ್ಶಿಸಿದ ಉಜಿರೆಯ ಎಸ್.ಡಿ.ಎಂ ಕಾಲೇಜು  ಮತ್ತು ಮೂಡಬಿದರೆಯ ಆಳ್ವಾಸ್ ಕಾಲೇಜಿನ ತಂಡಗಳು ಫೈನಲ್ ಪ್ರವೇಶಿಸಿದ್ದವು. ಆರಂಭದಿಂದಲೂ ಎರಡೂ ತಂಡಗಳು ಪರಸ್ಪರ ಪೈಪೋಟಿ ನೀಡುತ್ತಾ ತಂಡಸ್ಫೂರ್ತಿಯೊಂದಿಗೆ ಆಟಕ್ಕೆ ರೋಚಕತೆಯನ್ನು ನೀಡಿದವು. ನಿರ್ಣಾಯಕ ಹಂತದಲ್ಲಿ ಕಡಿಮೆ ಅಂಕಗಳ ಅಂತರದಲ್ಲಿ ಆಳ್ವಾಸ್ ಕಾಲೇಜಿನ ತಂಡವು ಮುನ್ನಡೆ ಕಾಯ್ದುಕೊಂಡಿತು. ಗೆಲುವಿನ ಗಮ್ಯದ ಹತ್ತಿರದಲ್ಲಿದ್ದಾಗ ಎರಡೂ ತಂಡಗಳು ತಲಾ 37 ಅಂಕಗಳನ್ನು ಪಡೆಯುವ ಮೂಲಕ ಸಮಬಲ ಸಾಧಿಸಿದವು. 


ತದನಂತರ ಮುಂದುವರೆದ ಆಟದಲ್ಲಿ ಎಸ್.ಡಿ.ಎಂ. ಕಾಲೇಜು ತಂಡ ಪ್ರತಿನಿಧಿಸಿದ ಆಟಗಾರರು ರೋಚಕ ಪ್ರತಿಪಟ್ಟುಗಳ ಮೂಲಕ ಮುನ್ನಡೆ ಕಾಯ್ದುಕೊಂಡರು. ಆಳ್ವಾಸ್ ಕಾಲೇಜಿನ ತಂಡಕ್ಕಿಂತಲೂ ಹೆಚ್ಚುವರಿ ಮೂರು ಅಂಕಗಳನ್ನು ಗಳಿಸಿ ಗೆಲುವು ತಮ್ಮದಾಗಿಸಿಕೊಂಡರು. ಅಂತಿಮ ಹಣಾಹಣಿಯಲ್ಲಿ ಆಳ್ವಾಸ್ ಕಾಲೇಜಿನ ತಂಡವು 38 ಅಂಕಗಳನ್ನು ಪಡೆದರೆ, ಎಸ್.ಡಿ.ಎಂ ಕಾಲೇಜಿನ ತಂಡವು 41 ಪಾಯಿಂಟ್‌ಗಳನ್ನು ಪಡೆದು ಪಂದ್ಯಾವಳಿಯ ಚಾಂಪಿಯನ್‌ಶಿಪ್ ಮನ್ನಣೆಗೆ ಪಾತ್ರವಾಯಿತು. 


ಅಂತರ್‌ವಲಯದ ಪಂದ್ಯಾವಳಿಯ ಬೆಸ್ಟ್ ಆಲ್‌ರೌಂಡರ್ ಆಗಿ ಪ್ರಜ್ವಲ್, ಬೆಸ್ಟ್ ಡಿಫೆಂಡರ್ ಆಗಿ ಶಶಾಂಕ್, ಬೆಸ್ಟ್ ರೈಡರ್ ಆಗಿ ಯಶವಂತ್ ಹೆಗ್ಗುರುತು ಮೂಡಿಸಿದರು. ಮಂಗಳೂರು ವಲಯದ ಪಂದ್ಯಾವಳಿಯ ಬೆಸ್ಟ್ ಆಲ್‌ರೌಂಡರ್ ಆಗಿ ಎಸ್.ಡಿ.ಎಂ ಕಾಲೇಜಿನ ಪ್ರಜ್ವಲ್, ಬೆಸ್ಟ್ ಡಿಫೆಂಡರ್ ಆಗಿ ಸುಳ್ಯದ ಎನ್.ಎಂ.ಸಿ ಕಾಲೇಜಿನ ತಂಡದ ಅಭಿಷೇಕ್, ಬೆಸ್ಟ್ ರೈಡರ್ ಆಗಿ ಚೇತನ್ ಪ್ರಾಶಸ್ತ್ಯ ಪಡೆದರು.



Post a Comment

0 Comments
Post a Comment (0)
To Top