ಉಜಿರೆ: ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಹಯೋಗದೊಂದಿಗೆ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಡಿಜಿಟಲ್ ಮೀಡಿಯಾ, ಫಿಲ್ಮ್ ಮೇಕಿಂಗ್ ಬಿ.ವೊಕ್ ಪದವಿ ವಿಭಾಗದ ಜಂಟಿ ಆಶ್ರಯದಲ್ಲಿ ಮಾರ್ಚ್ 13 ಮತ್ತು 14ರಂದು ‘ಸಮೂಹ ಮಾಧ್ಯಮ ವೃತ್ತಿಪರತೆ ಮತ್ತು ಸದ್ಯದ ಸವಾಲುಗಳು’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಜರುಗಲಿದೆ.
ಕಾಲೇಜಿನ ಸಮ್ಯಕ್‌ದರ್ಶನ ಸಭಾಂಗಣದಲ್ಲಿ ಮಾರ್ಚ್ 13ರಂದು ಬೆಳಿಗ್ಗೆ 9ಕ್ಕೆ ಶಿರಾದ ವರ್ಧಮಾನ್ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ, ಶಿಕ್ಷಣ ತಜ್ಞ ಸಂಜಯ್ ಎಸ್.ಗೌಡ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಮುಖ್ಯ ಅತಿಥಿಯಾಗಿ ಮಾತನಾಡಲಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಸಹನಾ ಎಂ ಉಪಸ್ಥತರಿರಲಿದ್ದಾರೆ. ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ ಅಧ್ಯಕ್ಷತೆ ವಹಿಸಲಿದ್ದಾರೆ.
ನಂತರ ನಡೆಯಲಿರುವ ಮೊದಲ ಗೋಷ್ಠಿಯಲ್ಲಿ ವಿಚಾರ ಸಂಕಿರಣದ ಪ್ರಧಾನ ಆಶಯವನ್ನು ಪ್ರಸ್ತುತಪಡಿಸಲಿರುವ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಅವರು ‘ಸರ್ಕಾರಿ, ಖಾಸಗಿ ವಾಹಿನಿಗಳ ಸುದ್ದಿ ವರದಿಗಾರಿಕೆ ಮತ್ತು ಪ್ರಯೋಗಶೀಲತೆ’ ಕುರಿತು ವಿಚಾರಗಳನ್ನು ಮಂಡಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಮಧ್ಯಾಹ್ನ 2.30ರಿಂದ ‘ಫೋರ್ಥ್ ಪಿಲ್ಲರ್’ ಕುರಿತ ಎರಡನೇ ಗೋಷ್ಠಿ ಸಮನ್ವಯಕಾರರಾಗಿ ಹಿರಿಯ ಪತ್ರಕರ್ತ, ಸುದ್ದಿಜೀವಿ ಯೂಟ್ಯೂಬರ್ ಸುಭಾಷ್ ಹೂಗಾರ ನಡೆಸಿಕೊಡಲಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಮೈಸೂರಿನ ಬ್ಯೂರೋ ಚೀಫ್ ಶಿವಕುಮಾರ್, ಹಿರಿಯ ಪತ್ರಕರ್ತರಾದ ಜಯಂತ್ ಕೋಡ್ಕಣಿ, ಎಸ್.ಡಿ.ಎಂ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಶೈಲೇಶ್ ಕುಮಾರ್ ವಿಷಯ ಮಂಡಿಸಲಿದ್ದಾರೆ.
ಸಂಜೆ 4ರಿಂದ 5 ಗಂಟೆಯವರೆಗೆ ನಡೆಯಲಿರುವ ಸಂಶೋಧನಾ ಪ್ರಬಂಧಗಳ ಮಂಡನೆಯ ಗೋಷ್ಠಿಯ ಸಮನ್ವಯಕಾರರಾಗಿ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಡಾ. ಸತೀಶ್ ಕುಮಾರ್ ಅಂಡಿಂಜೆ ನಡೆಸಿಕೊಡಲಿದ್ದಾರೆ.
ಮರುದಿನ ಮಾರ್ಚ್ 14ರಂದು ಪರ್ಯಾಯ ವೇದಿಕೆಗಳಲ್ಲಿ ಆಯೋಜಿತವಾಗಲಿರುವ ಎರಡು ಸಂಶೋಧನಾ ಪ್ರಬಂಧ ಮಂಡನೆಯ ಗೋಷ್ಠಿಗಳ ಸಮನ್ವಯಕಾರರಾಗಿ ಬೆಂಗಳೂರು ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ. ವಾಹಿನಿ ಅರವಿಂದ್, ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಎನ್. ಮಮತಾ ಉಪಸ್ಥಿತರಿರಲಿದ್ದಾರೆ. ಈ ಗೋಷ್ಠಿಗಳಲ್ಲಿ ಕರ್ನಾಟಕ ಮತ್ತು ಹೊರರಾಜ್ಯದ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ.
ಸಂಜೆ 3.30ಕ್ಕೆ ಆಯೋಜಿತವಾಗಲಿರುವ ಸಮಾರೋಪ ಸಮಾರಂಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಐಟಿ ಮತ್ತು ವಸತಿ ನಿಲಯಗಳ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರನ್ ವರ್ಮ ಸಮಾರೋಪ ಭಾಷಣ ಪ್ರಸ್ತುತಪಡಿಸಲಿದ್ದಾರೆ. ಎಸ್.ಡಿ.ಎಂ ಕಾಲೇಜಿನ ಆಡಳಿತಾಂಗ ಕುಲಸಚಿವ ಪ್ರೊ. ಶ್ರೀಧರ ಎನ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಎರಡು ದಿನಗಳ ಅವಧಿಯಲ್ಲಿ ‘ಮಾಧ್ಯಮ ಪರ್ವ’ ಶೀರ್ಷಿಕೆಯಡಿ ರಿಪೋರ್ಟ್ ರೈಟಿಂಗ್, ರೇಡಿಯೋ ಜಾಕಿ, ಫೋಟೋಗ್ರಫಿ, ಕ್ರೈಂಸಿಸ್ ಮ್ಯಾನೇಜ್‌ಮೆಂಟ್, ರೀಲ್ಸ್ ಮೇಕಿಂಗ್, ಕಿರುಚಿತ್ರ ನಿರ್ಮಾಣ, ರಸಪ್ರಶ್ನೆ, ಲೈವ್ ನ್ಯೂಸ್ ಆ್ಯಂಕರಿಂಗ್ ಮತ್ತು ನೃತ್ಯ ವೈವಿಧ್ಯ ಸಂಬಂಧಿತ ಸ್ಪರ್ಧೆಗಳು ಏರ್ಪಡಲಿವೆ. ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳು, ಪ್ರತಿಷ್ಠಿತ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ