ಸಂವಹನವನ್ನು ರಚನಾತ್ಮಕವಾಗಿ ಸಾಕಾರಗೊಳಿಸಬೇಕು: ಪ್ರಣವ ಕೆ

Upayuktha
0

 ಅಂಬಿಕಾ ಪದವಿ ಕಾಲೇಜಿನ ಇಂಗ್ಲಿಷ್ ವಿಭಾಗದಿಂದ ಉಪನ್ಯಾಸ ಕಾರ್ಯಕ್ರಮ



ಪುತ್ತೂರು: ನಾವಾಡುವ ಮಾತುಗಳನ್ನು ಎಷ್ಟು ಸೊಗಸಾಗಿ ಪ್ರಸ್ತುತಪಡಿಸಬಹುದು ಎಂಬುದನ್ನು ನಿರಂತರವಾಗಿ ಯೋಚಿಸುತ್ತಿರಬೇಕು. ಸಂವಹನವನ್ನು ರಚನಾತ್ಮಕವಾಗಿ ಸಾಕಾರಗೊಳಿಸಿದಾಗ ಅದು ಪರಿಣಾಮಕಾರಿ ಎನಿಸುತ್ತದೆ. ಹೇಳಬೇಕಾದದ್ದನ್ನು ಎಷ್ಟು ಕಡಿಮೆ ಶಬ್ದಗಳಲ್ಲಿ ಹೇಳಬಹುದು ಎಂದು ಯೋಚಿಸಿ ಮುಂದುವರೆದಾಗ ನಮ್ಮ ಮಾತು ಮತ್ತೊಬ್ಬರಿಗೆ ಕಿರಿಕಿರಿ ಎನಿಸಲಾರದು ಎಂದು ಮಲ್ಲಪುರಂನ ರೀಜನಲ್ ಕಾಲೇಜ್ ಆಫ್ ಸೈನ್ಸ್ ಅಂಡ್ ಹ್ಯುಮಾನಿಟೀಸ್‍ನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರಣವ ಕೆ. ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಪೀಕ್ ಸ್ಮಾರ್ಟ್ – ದ ಆರ್ಟ್ ಆಫ್ ಸೇಯಿಂಗ್ ಮೋರ್ ವಿದ್ ಫ್ಯೂವರ್ ವರ್ಡ್ಸ್‌ (ಕಿರಿದರಲ್ಲಿ ಪಿರಿದರ್ಥ) ಎಂಬ ವಿಷಯದ ಬಗೆಗೆ ಶುಕ್ರವಾರ ಮಾತನಾಡಿದರು.


ನಾವು ಮಾತನಾಡುವುದಕ್ಕೆ ಹಾಗೂ ಬರೆಯುವುದಕ್ಕೆ ನಿರಂತರವಾಗಿ ಪ್ರಯತ್ನಿಸುತ್ತಿರಬೇಕು. ಹಾಗೆ ಪ್ರಯತ್ನ ಪಟ್ಟಾಗಲಷ್ಟೇ ಒಳ್ಳೆಯ ಮಾತು ಹಾಗೂ ಉತ್ತಮ ಬರವಣಿಗೆ ಮೈಗೂಡುವುದಕ್ಕೆ ಸಾಧ್ಯ. ನಿತ್ಯ ಡೈರಿ ಬರೆಯುವಂತಹ ಅಭ್ಯಾಸ ಇಟ್ಟುಕೊಳ್ಳುವುದು ಬರವಣಿಗೆಯನ್ನು ಸುಂದರಗೊಳಿಸುವುದಕ್ಕಿರುವ ಅತ್ಯುತ್ತಮ ಮಾರ್ಗ. ನಮ್ಮಲ್ಲಿ ಮೂಡುವ ಪ್ರಶ್ನೆಗಳನ್ನು ತಜ್ಞರಲ್ಲಿ ಕೇಳಿ ಉತ್ತರ ಕಂಡುಕೊಳ್ಳುವುದೂ ನಮ್ಮ ಮೌಖಿಕ ಸಂವಹನವನ್ನು ಸೊಗಸುಗೊಳಿಸುವ ದಾರಿಯೇ ಆಗಿದೆ ಎಂದು ಅಭಿಪ್ರಾಯಪಟ್ಟರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಸಂವಹನ ಒಂದು ಕಲೆ. ಅದನ್ನು ನಮ್ಮದಾಗಿಸಿಕೊಳ್ಳುವುದಕ್ಕೆ ಶ್ರಮವಹಿಸಬೇಕು. ನಮ್ಮ ನಿತ್ಯ ಜೀವನದಲ್ಲಿ ಎದುರಾಗುವ ಸಮಸ್ಯೆಗಳಲ್ಲಿ ಹೆಚ್ಚಿನವುಗಳನ್ನು ನಮ್ಮ ಉತ್ಕøಷ್ಟ ಮಾದರಿಯ ಸಂವಹನದ ಮೂಲಕವೇ ಪರಿಹರಿಸಿಕೊಳ್ಳುವುದಕ್ಕೆ ಸಾಧ್ಯ. ಹಾಗೆಯೇ ಅನೇಕರು ತಮ್ಮ ಕೆಟ್ಟ ಸಂವಹನದ ಕಾರಣದಿಂದಲೇ ಹಲವು ಸಮಸ್ಯೆಗಳನ್ನು ತಂದುಕೊಳ್ಳುತ್ತಾರೆ ಎಂಬುದೂ ನಿಜ ಎಂದು ಹೇಳಿದರು. 


ಅಂತಿಮ ವರ್ಷದ ಇಂಗ್ಲಿಷ್ ಐಚ್ಚಿಕ ವಿದ್ಯಾರ್ಥಿನಿ ಶ್ರಾವ್ಯಾ ಪ್ರಾರ್ಥಿಸಿ, ದ್ವಿತೀಯ ವರ್ಷದ ಇಂಗ್ಲಿಷ್ ಐಚ್ಚಿಕ ವಿದ್ಯಾರ್ಥಿ ಅಕ್ಷಿತ್ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ ಪ್ರಸಾದ್ ಎ. ವಂದಿಸಿ, ಅಂತಿಮ ವರ್ಷದ ಇಂಗ್ಲಿಷ್ ಐಚ್ಚಿಕ ವಿದ್ಯಾರ್ಥಿನಿ ತೃಪ್ತಿ ಎಂ. ಮಯ್ಯಾಳ ಕಾರ್ಯಕ್ರಮ ನಿರ್ವಹಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top