ಬೆಂಗಳೂರು: ‘ನಾವೆಲ್ಲರೂ ಭಾರತ ದೇಶ ಅಭಿವೃದ್ಧಿ ಹೊಂದಿದ ಬಲಿಷ್ಠ ರಾಷ್ಟ್ರವಾಗಬೇಕೆಂದು ಬಯಸುತ್ತೇವೆ. ಆದರೆ ಇದು ಸಾದ್ಯವಾಗುವುದು ನಮ್ಮ ಜನಸಂಖ್ಯೆಯ ಅರ್ಧ ಭಾಗ, ಅಂದರೆ, ಸ್ತ್ರೀಯರು ಸುಸ್ಥಿರ ನಿರ್ವಹಣೆ ಮತ್ತು ವಹಿವಾಟು ಕ್ಷೇತ್ರಗಳಲ್ಲಿ ಹಾಗೂ ಕೈಗಾರಿಕೆಗಳ ಉತ್ಪಾದನಾ ಸಾಮರ್ಥ್ಯದ ವರ್ಧನೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಾಗ ಮಾತ್ರ. ನಮ್ಮ ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಪೂರ್ಣ ಪ್ರಮಾಣದಲ್ಲಿ ಸಕ್ರಿಯರಾಗಬೇಕು. ಆಗ ನಮ್ಮ ದೇಶ ನಿಜಕ್ಕೂ ಅಭಿವೃದ್ಧಿಯತ್ತ ಸಾಗುತ್ತದೆ’, ಎಂದು ರೇಮಂಡ್ ಸಂಸ್ಥೆಯ ಸಿಲ್ವರ್‌ಸ್ಪಾರ್ಕ್ ಅಪರೆಲ್ ಲಿಮಿಟೆಡ್‌ನ ಕಾರ್ಯನಿರ್ವಹಣೆ ವಿಭಾಗದ ನಿರ್ದೇಶಕ ಕೌಶಲೇಂದ್ರ ನಾರಾಯಣ್ ನುಡಿದರು.
ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿಭಾಗ ಆಯೋಜಿಸಿದ್ದ ‘ನಿರ್ವಹಣೆ ಹಾಗೂ ಆಡಳಿತದಲ್ಲಿ ಪ್ರಾದುರ್ಭಾವಗೊಳ್ಳುತ್ತಿರುವ ನವನವೀನ ಅನ್ವೇಷಣೆಗಳ ಕುರಿತ ಎರಡು-ದಿನಗಳ ವಾರ್ಷಿಕ ಅಂತಾರಾಷ್ಟ್ರೀಯ ಸಮಾವೇಶ’ವನ್ನು (ಎರ್ಮಾ-2025) ಉದ್ಘಾಟಿಸಿ ಮಾತನಾಡುತ್ತಿದ್ದರು.
‘ಸುಸ್ಥಿರ ವಹಿವಾಟಿನಲ್ಲಿ ಸಾಂಸ್ಥಿಕ ಜವಾಬ್ದಾರಿಗಳು ಹಾಗೂ ಅವಕಾಶಗಳು' ಎಂಬುದು ಈ ಬಾರಿಯ ಸಮ್ಮೇಳನದ ಚರ್ಚೆಯ ಪ್ರಧಾನ ವಿಷಯವಾಗಿದೆ.
‘ಗ್ರಾಹಕರು ಇತ್ತೀಚೆಗೆ ಸುಸ್ಥಿರ (ಪರಿಸರ ಸ್ನೇಹಿ) ಉತ್ಪಾದನೆಗಳನ್ನು ಹೆಚ್ಚು ಹೆಚ್ಚು ಬಯಸುತ್ತಿದ್ದಾರೆ. ಇದಕ್ಕಾಗಿ ಬಹುತೇಕ ಉದ್ಯಮಗಳು ಈ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಅಧಿಕ ಪ್ರಮಾಣದಲ್ಲಿ ತೋರುತ್ತಿವೆ. ಅಗತ್ಯಕ್ಕಿಂತ ಕಡಿಮೆ ಇಂಧನ ಬಳಕೆ, ಸೂಕ್ತ ಕಸ ನಿರ್ವಹಣೆ ಹಾಗೂ ಸಂಪನ್ಮೂಲಗಳ ಸಮರ್ಪಕ ವಿನಿಯೋಗಗಳು ನಮ್ಮನ್ನು ಯಶೋಮಾರ್ಗದಲ್ಲಿ ಕರೆದೊಯ್ಯಬಲ್ಲವು. ಹೀಗಾಗಿ ಮ್ಯಾನೇಜ್‌ಮೆಂಟ್ ಬೋಧಿಸುವ ಶಿಕ್ಷಣ ಸಂಸ್ಥೆಗಳು ಹಾಗೂ ಉತ್ಪಾದನೆಯಲ್ಲಿ ತೊಡಗಿರುವ ಉದ್ಯಮಗಳ ಜವಾಬ್ದಾರಿ ಅತ್ಯಂತ ಗುರುತರವಾದುದು. ನಿಜ ಹೇಳಬೇಕೆಂದರೆ ಹೊಸ ಅವಕಾಶಗಳತ್ತ ನಾವು ಧಾವಿಸಬೇಕಿದೆ’, ಎಂದು ನುಡಿದರು.
ಸಮಾವೇಶದಲ್ಲಿ 150ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು. ದೇಶ ಹಾಗೂ ಜಗತ್ತಿನ ಇತರೆಡೆಗಳಿಂದ ಬಂದಿದ್ದ ವಿಷಯ ತಜ್ಞರು ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳೊಡನೆ ಹಾಗೂ ಉದ್ಯಮಗಳ ಪ್ರಮುಖರ ಜತೆ ಅರ್ಥಪೂರ್ಣ ಸಂವಾದ ನಡೆಸಿದರು. ಅತ್ಯುತ್ತಮ ಪ್ರಬಂಧಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿಗಳೂ ಸೇರಿದಂತೆ ಆರು ತಜ್ಞರಿಗೆ ಪ್ರಶಸ್ತಿಗಳನ್ನು ನೀಡಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಗೌರವ ಪ್ರಾಧ್ಯಾಪಕ ಡಾ. ವಿ. ಶ್ರೀಧರ್, ಸಂಸ್ಥೆಯ ಶೈಕ್ಷಣಿಕ ಮುಖ್ಯಸ್ಥ ಡಾ. ಜೆ. ಸುಧೀರ್ ರೆಡ್ಡಿ, ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಅಜಯ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂದಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ