ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸಿ ನಿಲ್ಲುವ ಗಟ್ಟಿಗಿತ್ತಿ ಹೆಣ್ಣು: ಸಂಧ್ಯಾ ಹೊನಗುಂಟಿಕರ್

Upayuktha
0

ಸುರಪುರ: ಹೆಣ್ಣೆಂದರೆ ಬಾಳ ಬದುಕಿನ ರೂವಾರಿ. ಹೆಣ್ಣು ಈ ಸಮಾಜದ ಕಣ್ಣು, ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸಿ ನಿಲ್ಲುವ ಗಟ್ಟಿಗಿತ್ತಿ ಆಕೆ. ಹೆಣ್ಣು ಪ್ರತಿಯೊಂದು ಕುಟುಂಬದ ಮೂಲ ಸ್ತಂಭ ಎಂದು ಕಲಬುರಗಿಯ ಹಿರಿಯ ಸಾಹಿತಿ ಸಂಧ್ಯಾ ಹೊನಗುಂಟಿಕರ್ ಹೇಳಿದರು.


ಇಲ್ಲಿಯ ಗರುಡಾದ್ರಿ ಕಲಾ ಮಂದಿರದಲ್ಲಿ ಭಾನುವಾರ ಬಣಗಾರ ಫೌಂಡೇಷನ್ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಸೃಷ್ಟಿಯ ಅದ್ಭುತ ರೂಪ, ಭಾವನೆಗಳ ಒಡತಿ, ಸಾಧನೆಯ ಮೂರ್ತಿ. ನಮ್ಮ ದೇಶದ ನದಿಗಳಿಗೂ ಸಹ ಹೆಣ್ಣಿನ ಹೆಸರಿದೆ. ಹೆಣ್ಣಿನಿಂದಲೇ ಜೀವನ, ಹೆಣ್ಣಿನಿಂದಲೇ ಬಾಳು ಬಂಗಾರ ಎಂದರು.


ಮಹಿಳೆಯರಿಲ್ಲದ ಕ್ಷೇತ್ರವೇ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಕಾಲಿರಿಸಿ ಗಣನೀಯವಾದ ಸಾಧನೆ ಮಾಡಿದ್ದಾರೆ. ಬದ್ಧತೆ ಮತ್ತು ನಿಷ್ಠೆಯಿಂದ ಕೆಲಸ ಮಾಡುವ ಮಹಿಳೆಯರಿಗೆ ಯಾವುದೇ ಕೆಲಸ ನೀಡಿದರೂ ಯಶಸ್ವಿಯಾಗುತ್ತಾರೆ. ಇಂದು ಪುರಷರಿಗಿಂತ ಮಹಿಳೆಯರೇನೂ ಕಡಿಮೆಯಿಲ್ಲ ಎಂಬ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ. ಈ ಹಿಂದೆ ನಾಲ್ಕು ಗೋಡೆಗಳ ಮಧ್ಯೆ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ಇಂದು ತನ್ನ ಜ್ಞಾವನ್ನು ಬೆಳೆಸಿಕೊಂಡು ಸಮಾಜದ ಎಲ್ಲಾ ರಂಗಗಳಲ್ಲೂ ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಡುತ್ತಿದ್ದಾಳೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.


ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಜಯಲಲಿತಾ ಪಾಟೀಲ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶ ಮಹಿಳೆಯ ಹಕ್ಕುಗಳನ್ನು ಸರಂಕ್ಷಿಸುವುದಾಗಿದೆ. 1995 ರಲ್ಲಿ ಬೀಜಿಂಗ್ ಘೋಷಣೆಯಲ್ಲಿ 189 ದೇಶಗಳು ಪಾಲ್ಗೊಂಡು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅನುಮೋದಿಸಿದವು. ಅಂದಿನಿಂದಲೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಶಕ್ತಿ ನೀಡಿ, ಸ್ಫೂರ್ತಿ ಮತ್ತು ಉನ್ನತಿ ಗೊಳಿಸಿ ಈ ವರ್ಷದ ಥೀಮ್.ಮಹಿಳೆ ಅಬಲೆ ಅಲ್ಲ, ಸಬಲೆ. ಹಳ್ಳಿಯಿಂದ ದಿಲ್ಲಿಯವರೆಗೆ ಸದ್ದು ಮಾಡಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದ್ದಾಳೆ ಹಾಗೂ ಗುರುತಿಸಿಕೊಂಡಿದ್ದಾಳೆ. ಮಹಿಳೆಯರ ಪರ ಹಲವಾರು ಕಾನೂನುಗಳಿವೆ ಎಂದು ತಿಳಿಸಿದರು.


ಪ್ರಮುಖರಾದ ಶಕುಂತಲಾ ಜಾಲವಾದಿ, ಪಾರ್ವತಿ ಬೂದೂರು, ಶಿವಲೀಲಾ ಮುರಾಳ, ಜ್ಯೋತಿ ದೇವಣಗಾಂವ್‌, ಸುನಂದಾ ನಾಲವಾರ, ಅನ್ನಪೂರ್ಣ ಸಂಗೋಲಿ, ಬಸಮ್ಮ ಚನ್ನಪ್ಪ ಹೇರುಂಡಿ ಮಾತನಾಡಿದರು.


ಬಣಗಾರ ಫೌಂಡೇಷನ್ ಅಧ್ಯಕ್ಷ ವಸಂತಕುಮಾರ (ಪ್ರಕಾಶ) ಬಣಗಾರ, ಪ್ರಮುಖರಾದ ರೇಣುಕಾ ನಿಂಗಣ್ಣ ನಾಯಕ, ಬಸವರಾಜೇಶ್ವರಿ ಹೂಗಾರ, ಮಹಾದೇವಮ್ಮ ಬಣಗಾರ, ಶಶಿಕಲಾ ಬಸವರಾಜ ಮಾಲಿ ಪಾಟೀಲ್, ರಮಾ ಆನಂದ ಬಾರಿಗಿಡದ, ವಿಜಯಲಕ್ಷ್ಮೀ ಉದ್ದಾರ, ರೂಪಾ ರುಮಾಲ್ ಇನ್ನಿತರರು ವೇದಿಕೆಯಲ್ಲಿದ್ದರು. ಸುರಪುರ ಅರ್ಬನ್ ಬ್ಯಾಂಕ್ ನಿರ್ದೇಶಕಿ ಚವ್ಹಾಲಕ್ಷ್ಮೀಪದ್ಮಾವತಿ ಹಾಗೂ ಬಸವೇಶ್ವರ ಬ್ಯಾಂಕ್‌ ನಿರ್ದೇಶಕಿ ನೀಲಮ್ಮ ಕುಂಬಾರಗೆ ವಿಶೇಷ ಸನ್ಮಾನ ನೀಡಲಾಯಿತು. ಮಹಾಲಕ್ಷ್ಮೀ ಶೋಸ್ಸಿ ಪ್ರಾಸ್ತಾವಿಕ ಮಾತನಾಡಿದರು. ಶರಣಮ್ಮ ದೊಡ್ಡಮನಿ ನಿರೂಪಿಸಿದರು. ದೀಪಿಕಾ ಉದ್ಧಾರ ಪ್ರಾರ್ಥಿಸಿದರು. ಲಲಿತಾ ಯಾದವ ಸ್ವಾಗತಿಸಿದರು. ಐಶ್ವರ್ಯ ವಂದಿಸಿದರು.


ಮಹಿಳಾ ಸಾಧಕಿಯರಿಗೆ ಸನ್ಮಾನ:

ಸಹ ಶಿಕ್ಷಕರಾದ ಗೌರಮ್ಮ ಶಕೀಲಾ ಬೇಗಂ ಕೆಂಭಾವಿ (ಶಿಕ್ಷಣ), ಚಾಂದಬೀ ಸೂಲಗಿತ್ತಿ ವಾಗಣಗೇರಾ, ಅಂಬಿಕಾ ಚವ್ಹಾಣ, ರೇಣುಕಾ ಪಾಟೀಲ್ ಗೋನಾಲ (ಸಾಮಾಜಿಕ), ಪ್ರೇಮಾ ಪೊಲೀಸ್ ಪಾಟೀಲ್ (ಸಹಕಾರಿ), ಮೇಘನಾ ಹಳಿಸಗರ ಪತ್ತಾರ (ಸಂಗೀತ), ಮೇಘಾ ಎಸ್‌.ಭಜಂತ್ರಿ ಹುಣಸಗಿ (ಯೋಗ) ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top