ಮಂಗಳೂರು: ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ನ ಇತಿಹಾಸ ವಿಭಾಗವು ‘INSPIRE– ಚಾಪ್ಟರ್ 4’ ಅನ್ನು ಗುರುವಾರ ಆಯೋಜಿಸಿತ್ತು. ಇದು ಸಮಾಜದಲ್ಲಿ ಪರಿವರ್ತನೆಗೆ ವೇಗವರ್ಧಕರಾಗಿ ಕೆಲಸ ಮಾಡುವ ವ್ಯಕ್ತಿಗಳಿಗೆ ವೇದಿಕೆ ಒದಗಿಸುವ ಮಹತ್ವದ ಉಪಕ್ರಮವಾಗಿದೆ. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಟೆರೆನ್ಸ್ ಆಂಡ್ರೇಡ್ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪಾಕಿಸ್ತಾನದಲ್ಲಿ ಬೆಳೆದ ಅನುಭವಗಳನ್ನು ವಿವರಿಸುತ್ತ, ತಮ್ಮ ಪ್ರತಿಭೆಯನ್ನು ಗುರುತಿಸಲು ಮತ್ತು ಸ್ನೇಹ ಬೆಳೆಸಲು ಅಲ್ಲಿನ ವಾತಾವರಣ ಹೇಗೆ ನೆರವಾಯಿತು ಎಂಬುದನ್ನು ನೆನಪಿಸಿಕೊಂಡರು. ಮಾಧ್ಯಮಗಳು ರಾಜಕೀಯ ಲಾಭಕ್ಕಾಗಿ ಸಮುದಾಯಗಳ ನಡುವೆ ವಿಭಜನೆ ಮತ್ತು ದ್ವೇಷವನ್ನು ಶಾಶ್ವತವಾಗಿ ಇರುವಂತೆ ಮಾಡುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಸಮಾನ ಸಾಂಸ್ಕೃತಿಕ ಮತ್ತು ನಾಗರಿಕ ಪರಂಪರೆಯನ್ನು ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕಿವಿಮಾತು ನುಡಿದರು.
ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ. ಮೋನಾ ಮೆಂಡೋನ್ಸಾ ಅವರು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ರಿಜಿಸ್ಟ್ರಾರ್ (SAC) ಡಾ. ಆಲ್ವಿನ್ ಡಿಸಾ, ಅಡ್ಮಿನ್ ಬ್ಲಾಕ್‌ನ ನಿರ್ದೇಶಕ ಡಾ. ಚಾರ್ಲ್ಸ್ ಫುರ್ಟಾಡೊ ಮತ್ತು ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿಶೋರ್ ಚಂದ್ರ ಭಾಗವಹಿಸಿದ್ದರು. 90 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಾದಾತ್ಮಕ ಅಧಿವೇಶನದಲ್ಲಿ ತೊಡಗಿಕೊಂಡರು.
ಯಾರು ಈ ಆಂಡ್ರೇಡ್?:
1940 ರ ದಶಕದ ಆರಂಭದಲ್ಲಿ ಮಂಗಳೂರಿನಿಂದ ಪಾಕಿಸ್ತಾನದ ಕರಾಚಿಗೆ ವಲಸೆ ಹೋದ ವಿಲಿಯಂ ಆಂಡ್ರೇಡ್ ಎಂಬವರ ಪುತ್ರ ಟೆರೆನ್ಸ್ ಆಂಡ್ರೇಡ್. ಪ್ರಸ್ತುತ ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ನೆಲೆಸಿದ್ದಾರೆ. ಕರಾಚಿಯಲ್ಲಿ ಜನಿಸಿದ ಟೆರೆನ್ಸ್ ಆಂಡ್ರೇಡ್, ಕರಾಚಿಯ ಸೇಂಟ್ ಪ್ಯಾಟ್ರಿಕ್ ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಅವರು ಅಸಾಧಾರಣ ಪ್ರತಿಭೆಯ ವಿದ್ಯಾರ್ಥಿಯಾಗಿದ್ದರು. ಅಲ್ಲಿ ಅವರು 1956 ರಿಂದ 1968 ರವರೆಗೆ ಅಧ್ಯಯನ ಮಾಡಿದರು. ಪ್ರತಿಭಾವಂತ ಹಾಕಿ ಆಟಗಾರರಾಗಿದ್ದ ಅವರು NED ಕಾಲೇಜು ತಂಡಕ್ಕೆ ಸೇರಿದರು. ನಂತರ ಹಲವಾರು ಕಾಲೇಜು ಮತ್ತು ವಿಶ್ವವಿದ್ಯಾಲಯ ಚಾಂಪಿಯನ್‌ಶಿಪ್‌ಗಳಲ್ಲಿ ತಂಡವನ್ನು ಮುನ್ನಡೆಸಿದರು. 1971 ರಲ್ಲಿ, ಅವರು ಆಲ್-ಪಾಕಿಸ್ತಾನ್ ಇಂಟರ್-ಯೂನಿವರ್ಸಿಟಿ ಹಾಕಿ ಚಾಂಪಿಯನ್‌ಶಿಪ್‌ಗಳಿಗಾಗಿ ಕರಾಚಿ ವಿಶ್ವವಿದ್ಯಾಲಯ ಪದವಿ ಕಾಲೇಜುಗಳ ತಂಡದಲ್ಲಿ ಸ್ಥಾನ ಪಡೆದರು.
ಅನಂತರ 1973ರಲ್ಲಿ ಅವರು NED ಕಾಲೇಜಿನಲ್ಲಿ (ಈಗ ವಿಶ್ವವಿದ್ಯಾನಿಲಯ) ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಬಳಿಕ ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಎಂಎಸ್ ಮುಗಿಸಿದರು. ಪ್ರಮುಖ ಸಿಲಿಕಾನ್ ವ್ಯಾಲಿ ಕಂಪನಿಗಳಿಂದ ಬಹು ಉದ್ಯೋಗಾವಕಾಶವಿದ್ದರೂ, ಅವರು 1979 ರಲ್ಲಿ AMD ಗೆ ಸೇರಿದರು. ಅವರು AMD ಯ ಮೈಕ್ರೊಪ್ರೊಸೆಸರ್ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು, ಎಂಟು ತಲೆಮಾರುಗಳ ಪ್ರೊಸೆಸರ್‌ಗಳ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ