ಸತಿ ಸಹಗಮನ- ಸುಧಾರಣೆಯ ಹಾದಿಯಲ್ಲಿ ತೊಡೆದುಹೋದ ಸಮಾಜದ ಕಳಂಕ

Upayuktha
0


ರತ ಖಂಡವು ಅತ್ಯಂತ ಶ್ರೀಮಂತ ಪ್ರಾಕೃತಿಕ, ಐತಿಹಾಸಿಕ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಹೊಂದಿದ ದೇಶ. ಅನಾದಿಕಾಲದಿಂದಲೂ ಇಲ್ಲಿನ ಋಷಿಮುನಿಗಳು ರಾಜ ಮಹಾರಾಜರು ಸಂತ ಸನ್ಯಾಸಿಗಳು ಋಗ್ವೇದ ಕಾಲದಿಂದ ಪ್ರಸ್ತುತ ಕಲಿಯುಗದ 21ನೇ ಶತಮಾನದ ಅಂಚಿನವರೆಗೂ ಒಂದು ಪಕ್ಷಿ ನೋಟವನ್ನು ಹರಿಸಿದಾಗ ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳನ್ನು ಪೂಜಿಸಿದಷ್ಟೇ, ಗೌರವಿಸಿದಷ್ಟೇ ಪ್ರಮಾಣದಲ್ಲಿ ಅವರನ್ನು ನಿಕೃಷ್ಟವಾಗಿ ಕಂಡಿದ್ದಾರೆ ಎಂದರೆ ತಪ್ಪಿಲ್ಲ.


ಅಂದಿನ ಸಾಮಾಜಿಕ ಮತ್ತು ಧಾರ್ಮಿಕ ಪರಿಸ್ಥಿತಿಗಳು ಏನೇ ಇದ್ದರೂ ಹೆಣ್ಣು ಮಕ್ಕಳ ಶೋಷಣೆ ತಪ್ಪಿದ್ದಿಲ್ಲ. ಅದರಲ್ಲೂ ಭಾರತೀಯ ಸಂಪ್ರದಾಯದಲ್ಲಿ ಪ್ರಾಣಕ್ಕಿಂತಲೂ ತನ್ನ ಶೀಲವೇ ಮುಖ್ಯವೆಂದು ಪರಿಭಾವಿಸಿದ ಹೆಣ್ಣು ಮಕ್ಕಳು ಬದುಕಿನ ಕೆಲವು ಹಂತಗಳಲ್ಲಿ ತಮ್ಮ ಶೀಲವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಪ್ರಾಣವನ್ನೇ ತೆತ್ತಿರುವ ಉದಾಹರಣೆಗಳಿವೆ,ಅವುಗಳಲ್ಲಿ ಸತಿ ಸಹಗಮನವೂ ಒಂದು. 


ಸತಿ ಸಹಗಮನ.. ಹಾಗೆಂದರೇನು?

ಯುದ್ಧ, ಪ್ರಾಕೃತಿಕ ವಿಪತ್ತು, ಅಪಘಾತಗಳ ಸಮಯದಲ್ಲಿ ಪತಿಯು ಮರಣ ಹೊಂದಿದ ನಂತರ ಆತನ ಅಂತ್ಯ ಸಂಸ್ಕಾರದ ಸಮಯದಲ್ಲಿ ಪತ್ನಿಯೂ ಕೂಡ ಆತನ ಜೊತೆಯಲ್ಲಿ ಚಿತೆಯನ್ನು ಏರಿ ತನ್ನ ಪ್ರಾಣವನ್ನು ಅಗ್ನಿಗೆ ಅರ್ಪಿಸುವ ವಿಧಾನವೇ ಸಹಗಮನ.


ಕೆಲ ಬಾರಿ ಸ್ವಇಚ್ಛೆಯಿಂದ, ಮತ್ತೆ ಹಲವು ಸಲ  ಬೇರೆಯವರ ಒತ್ತಾಯದಿಂದ ಪತಿಯ ಮರಣದ ನಂತರ ಆತನ ಶವದ ಜೊತೆ ಚಿತೆಗೇರುವ ಈ ಅನಿಷ್ಟ ಪದ್ಧತಿ ಶತಶತಮಾನಗಳಿಂದ ನಮ್ಮಲ್ಲಿ ಚಾಲ್ತಿಯಲ್ಲಿತ್ತು. ಪತಿಯ ಶವದೊಂದಿಗೆ ಚಿತೆ ಏರುವುದನ್ನು ಸಹಗಮನ ಎಂದು ಹೇಳಿದರೆ, ದೂರದಲ್ಲೆಲ್ಲೋ ಯುದ್ಧದಲ್ಲಿ, ಅಪಘಾತದಲ್ಲಿ ಪತಿ ಸಾವನ್ನಪ್ಪಿದ್ದು, ಆ ಸಾವಿನ ಅಧಿಕೃತ ಮಾಹಿತಿ ಪತ್ನಿಗೆ ದೊರೆತು ಆಕೆ ಅಗ್ನಿಕುಂಡದಲ್ಲಿ ಹಾರಿ ತನ್ನನ್ನು ತಾನು ಅಗ್ನಿಗೆ ಸಮರ್ಪಿಸಿಕೊಳ್ಳುವುದನ್ನು ನಿಗಮನ ಎಂದು ಹೇಳುತ್ತಾರೆ.


ಸಹ ಗಮನಕ್ಕೆ ಕಾರಣಗಳು ಹೀಗಿವೆ...

ರಾಜ ಮಹಾರಾಜರ ಕಾಲದಲ್ಲಿ ಯುದ್ಧದಲ್ಲಿ ಮಹಾರಾಜನು ಮಡಿದಾಗ ಆತನ ಪತ್ನಿ ಮತ್ತು ಉಪಪತ್ನಿಯರನ್ನು ಗೆದ್ದ ರಾಜ್ಯದ ಅರಸರು ಮತ್ತು ಅವರ ಪರಿವಾರದ ಪುರುಷರು ತಮ್ಮ ಭೋಗ ಲಾಲಸೆಗೆ ಈಡು ಮಾಡುತ್ತಿದ್ದುದು, ಪೈಶಾಚಿಕ ಕ್ರೌರ್ಯವನ್ನು ಮೆರೆಯುತ್ತಿದ್ದುದು  ಮೂಲ ಕಾರಣವಾದರೆ, ಪ್ರಾಣಕ್ಕಿಂತ ಮಾನವೇ ಹೆಚ್ಚು ಎಂಬ ಸಂಪ್ರದಾಯಸ್ಥ ಮನಸ್ಥಿತಿಯ ಸ್ತ್ರೀಯರ ಸಹಗಮನಕ್ಕೆ ಆಕೆಯ ಕುಟುಂಬದ ಇತರ ಜನರು ಪುಷ್ಟಿಯನ್ನು ನೀಡುತ್ತಿದ್ದರು.


 ಪತಿಯ ಮರಣದ ನಂತರ ಆಕೆಯ ಬದುಕು ಗಾಳಿಗೆ ಇಟ್ಟ ಸೊಡರಿನಂತೆ ಆಗಬಾರದು ಎಂಬ ಸದಾ?!ಶಯ, ಧರ್ಮವಿರೋಧಿಗಳ ಯುದ್ಧ ಪಿಪಾಸುಗಳ ಅತ್ಯಾಚಾರಕ್ಕೆ ಒಳಗಾಗಬಾರದು ಎಂಬುದು ಅವರ ವಾದವಾಗಿದ್ದು ಅಂದಿನ ಸಾಮಾಜಿಕ ಕಾಲಘಟ್ಟದಲ್ಲಿ ಇದು ತಪ್ಪು ಎಂದು ಪರಿಗಣಿಸುವುದು ಅಸಾಧ್ಯವಾಗಿತ್ತು.


ಆಕೆ ಗಂಡ ಸತ್ತ ಹೆಣ್ಣು ಮಗಳ ಮುಂದಿನ ಬದುಕಿನ ನಿರ್ವಹಣೆ  ಒಂದು ರೀತಿಯ ಸವಾಲೆನಿಸಿದರೆ, ಕಾಮುಕರು ಮತ್ತು ದುಷ್ಟರಿಂದ ಪಾರಾಗಲು ಆಕೆಗೆ ಇದ್ದ ಒಂದೇ ಉಪಾಯವೆಂದರೆ ಆಕೆ ಸಹಗಮನ ಮಾಡುವುದು ಎಂಬ ಸಾಮಾಜಿಕ ಹೇರುವಿಕೆ.


 ಸಹಗಮನದ ಹಿನ್ನೆಲೆಗಳು.. 

ಮಹಾಭಾರತದಲ್ಲಿ ಪಾಂಡು ಮಹಾರಾಜನ ಸಾವಿಗೆ ತಾನೇ ಕಾರಣಳಾದೆ ಎಂಬ ಪಾಪಪ್ರಜ್ಞೆಯಿಂದ ಮುಕ್ತಳಾಗಲು, ಆತನ ಎರಡನೆ ಪತ್ನಿ ಮಾದ್ರಿದೇವಿಯು ಪ್ರಾಯಶ್ಚಿತ್ತ ಭಾವದಿಂದ ತನ್ನಿಬ್ಬರು ಮಕ್ಕಳಾದ ನಕುಲ ಸಹದೇವರನ್ನು ಪತಿಯ ಮೊದಲ ಪತ್ನಿ ಕುಂತಿ ದೇವಿಯ ವಶಕ್ಕೊಪ್ಪಿಸಿ ತಾನು ಸಹಗಮನ ಮಾಡಿದಳು.


ಚಿತ್ತೂರದ ರಾಣಿ ಪದ್ಮಾವತಿಯ ಸೌಂದರ್ಯದ ಕುರಿತು ಕೇಳಿದ ಅಲ್ಲಾವುದ್ದೀನ್ ಖಿಲ್ಜಿಯು ಆಕೆಯನ್ನು ತನ್ನವಳನ್ನಾಗಿಸಿಕೊಳ್ಳಬೇಕೆಂಬ ಹಲವಾರು ಪ್ರಯತ್ನಗಳ ನಂತರ ಯುದ್ಧದಲ್ಲಿ ಆಕೆಯ ಪತಿ ರತ್ನಸೇನನನ್ನು ಕೊಂದು ಹಾಕಿದಾಗ ಖಿಲ್ಜಿಯಿಂದ ತಪ್ಪಿಸಿಕೊಳ್ಳಲು ರಾಣಿ ಪದ್ಮಾವತಿಯು ತನ್ನ ರಾಣಿವಾಸದ ಮಹಿಳೆಯರೊಂದಿಗೆ ಬೃಹತ್ತಾಗಿ ರಚಿಸಿದ ಚಿತೆಯ ಕುಂಡದಲ್ಲಿ ಹಾರಿ ತನ್ನನ್ನು ತಾನು ಅಗ್ನಿಗೆ ಅರ್ಪಿಸಿಕೊಳ್ಳುತ್ತಾಳೆ.


ನಮ್ಮ ಕರ್ನಾಟಕದ ಲಕ್ಕುಂಡಿ ಭಾಗದಲ್ಲಿ ದಾನ ಚಿಂತಾಮಣಿ ಎಂದು ಹೆಸರಾದ ಅತ್ತಿಮಬ್ಬೆ ಮತ್ತು ಆಕೆಯ ಅವಳಿ ಸಹೋದರಿ ಗುಂಡಲಬ್ಬೆ (ಅಬ್ಬಲಬ್ಬೆ) ಯರನ್ನು ಚಾಲುಕ್ಯ ಚಕ್ರವರ್ತಿ ಅಹವಮಲ್ಲನ ಬಲಗೈಯಂತಿದ್ದ ದಂಡಾಧಿಕಾರಿ ಧಲ್ಲಪನ ಮಗ ನಾಗದೇವನಿಗೆ ಕೊಟ್ಟು ಮದುವೆ ಮಾಡಿದ್ದು, ಯುದ್ಧದಲ್ಲಿ ಪತಿಯ ಮರಣದ ನಂತರ ಮಗ ಅಣ್ಣಿಗ ದೇವನ ಜವಾಬ್ದಾರಿಯನ್ನು ಅವಳಿ ಸಹೋದರಿ ಅತ್ತಿಮಬ್ಬೆಗೆ ಒಪ್ಪಿಸಿ  ಗುಂಡಲಬ್ಬೆ ಪತಿಯ ಜೊತೆಗೆ ಸಹಗಮನ ಮಾಡಿದ ಉಲ್ಲೇಖಗಳನ್ನು ಕಾಣಬಹುದು.


ವಿಜಯನಗರ ಸಾಮ್ರಾಜ್ಯದಲ್ಲಿಯೂ ಕೂಡ ಸತಿ ಸಹಗಮನ ಪದ್ಧತಿ ಬಳಕೆಯಲ್ಲಿದ್ದುದನ್ನು ಕಾಣಬಹುದು. ಹೀಗೆ ಸತಿ ಹೋದ ಮಹಿಳೆಯರ ಹೆಸರಿನಲ್ಲಿ ಮಾಸ್ತಿ( ಮಹಾಸತಿಯ) ಕಲ್ಲುಗಳನ್ನು ನಿರ್ಮಿಸಿ ಅವುಗಳನ್ನು ಪೂಜಿಸುತ್ತಿದ್ದ ಉದಾಹರಣೆಗಳನ್ನು ಕಾಣಬಹುದು.. ತನ್ನ ಬಲಗೈಯನ್ನು ಮೇಲೆ ಸ್ವರ್ಗದತ್ತ ತೋರಿಸುವ ವೀರನ ಪತ್ನಿಯ ಕೆತ್ತನೆಯುಳ್ಳ ಮಾಸ್ತಿ ಕಲ್ಲುಗಳನ್ನು ನಾವು ಕರ್ನಾಟಕದ ಹಲವಡೆಗಳಲ್ಲಿ ಕಾಣುತ್ತಿದ್ದು ಬಹುತೇಕ ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ಸ್ವ ಇಚ್ಛೆಯಿಂದ ಸತಿ ಹೋಗುತ್ತಿದ್ದರು ಎಂದು ತಿಳಿಯಬಹುದಾಗಿದೆ. 


 ಉತ್ತರ ಭಾರತದ ಕೆಲ ಸಂಪ್ರದಾಯಗಳಲ್ಲಿ ಅದರಲ್ಲೂ ರಾಜಸ್ಥಾನ ಮತ್ತು ರಜಪೂತ ಜನಾಂಗಗಳಲ್ಲಿಯೂ ಸತಿ ಪದ್ಧತಿಯನ್ನು ಅನುಮೋದಿಸಲಾಗುತ್ತಿತ್ತು.


ವಿಶಾಲವಾದ ಜಾಗದಲ್ಲಿ ಮರಣ ಹೊಂದಿದ ವೀರನ  ಅಲಂಕೃತ ಪಾರ್ಥಿವ ಶರೀರವನ್ನು ಚಿತೆಯ ಮೇಲೆ  ಇರಿಸಿರುತ್ತಾರೆ. ನವ ವಧುವಿನ ವೇಷದಲ್ಲಿ ಆಕೆಯ ಮದುವೆಯ ಉಡುಗೆಯನ್ನು ತೊಟ್ಟ ಆತನ ಪತ್ನಿ ಷೋಡಶಾಲಂಕಾರಗಳಿಂದ ಶೋಭಿತಳಾಗಿ ತನ್ನ ಮುಖ ಕಾಣದಂತೆ ಮುಸುಕನ್ನು ಹೊದ್ದು ತವರು ಮನೆಯವರು ಹಾಕಿದ ಉಡಿಯಕ್ಕಿಯ ಗಂಟನ್ನು ಒಂದು ಕೈಯಲ್ಲಿ ಹಿಡಿದು ಮತ್ತೊಂದು ಕೈಯಲ್ಲಿ ತವರಿನ ಬಾಂಧವರ ಕೈ ಹಿಡಿದು ಚಿತೆಯನ್ನು ಏರಲು ಅನುಕೂಲವಾಗುವಂತೆ ನಿರ್ಮಿಸಿದ ಮರಳಿನ ದಿಬ್ಬವನ್ನು ಏರಿ ಮಡಿಲಕ್ಕಿಯ ಗಂಟಿನೊಂದಿಗೆ ಚಿತೆಯಲ್ಲಿ ಹಾರುತ್ತಾಳೆ.


ಆ ಕೂಡಲೇ ಆಕೆಯ ಬಂಧು ಬಾಂಧವರು ಜೀವಂತವಾಗಿ ಹಾರಿದ ಆಕೆಯ ನರಳಾಟವನ್ನು ಬೇರೆಯವರು ನೋಡಬಾರದು ಎಂಬ ಉದ್ದೇಶದಿಂದ ಕಟ್ಟಿಗೆಯನ್ನು ಆಕೆಯ ದೇಹದ ಮೇಲೆ ಹಾಕಿ ಆಕೆ ಯಾರಿಗೂ ಕಾಣದಂತೆ ಮುಚ್ಚಿ ಬಿಡುತ್ತಾರೆ.  ಭೇರಿ ನಗಾರಿಗಳು ಬಾರಿಸಲ್ಪಟ್ಟು ಅವುಗಳ ಜೋರಾದ ಧ್ವನಿಯಲ್ಲಿ, ಜನರ ಜೋರಾದ ಹಾಡುವಿಕೆಯ ಆರ್ಭಟದಲ್ಲಿ ಆಕೆಯ ಆರ್ತನಾದ ಯಾರಿಗೂ ಕೇಳುವುದೇ ಇಲ್ಲ.ಬೆಂಕಿಯ ಕೆನ್ನಾಲಗೆಗೆ ಆಕೆಯ ದೇಹ ಸಂಪೂರ್ಣ ಬೆಂದು ಹೋಗುವವರೆಗೂ ಕೆಲ ಜನ ಅಲ್ಲಿಯೇ ಉಳಿದುಕೊಳ್ಳುತ್ತಾರೆ.

  

17ನೇ ಶತಮಾನದ ಅಂತ್ಯದವರೆಗೂ ಈ ಪದ್ಧತಿ ಅಲ್ಲಲ್ಲಿ ಜೀವಂತವಾಗಿತ್ತು. 17ನೇ ಶತಮಾನದ ಅಂತ್ಯದಲ್ಲಿ ಬ್ರಹ್ಮ ಸಮಾಜದ ಸ್ಥಾಪಕರಾದ ಸಾಮಾಜಿಕ ಸುಧಾರಣೆಯ ಬಹುದೊಡ್ಡ ಹೆಸರಾದ ರಾಜಾರಾಮ್ ಮೋಹನ್ ರಾಯ್ ಅವರು ಹೆಣ್ಣು ಮಕ್ಕಳ ಮೇಲೆ ಆಗುತ್ತಿದ್ದ ಇಂತಹ ಭಾರತೀಯ ಸಮಾಜದ ಅಪಸವ್ಯಗಳನ್ನು ತಪ್ಪಿಸಲು ಬಾಲ್ಯ ವಿವಾಹ, ಬಹುಪತ್ನಿತ್ವ ಮತ್ತು ಸಹಗಮನ ಪದ್ಧತಿಗಳನ್ನು ವಿರೋಧಿಸಿದರು. 


ಜೀವಂತವಾಗಿರುವ ಹೆಣ್ಣು ಮಕ್ಕಳನ್ನು ಅಮಾನುಷವಾಗಿ ಬಲಿ ಕೊಡುವ ಈ ಪದ್ಧತಿ ಮನುಕುಲಕ್ಕೆ ಮಾರಕವಾದದ್ದು ಎಂದು ರಾಜಾರಾಮ್ ಮೋಹನ್ ರಾಯರು ಬಲವಾಗಿ ಪ್ರತಿಪಾದಿಸಿದ ಪರಿಣಾಮವಾಗಿ ಅಂದಿನ ಸಮಾಜೋ ಧಾರ್ಮಿಕ ಚಳುವಳಿಯ ಪರಿಣಾಮವಾಗಿ ಎಲ್ಲ ಅನಿಷ್ಟ ಪದ್ಧತಿಗಳನ್ನು ನಿಷೇಧಿಸಲು ಹೋರಾಟ ನಡೆಯಿತು.


ಅದೇ ಸಮಯದಲ್ಲಿ ಭಾರತದ ಗವರ್ನರ್ ಜನರಲ್ ಆಗಿದ್ದ ಬ್ರಿಟಿಷರ ಲಾರ್ಡ್ ವಿಲಿಯಂ ಬೆಂಟಿಂಕ್ ಕೂಡ ಇದನ್ನು ಅನುಮೋದಿಸಿ ಬ್ರಿಟಿಷ್ ಆಡಳಿತದ ಭಾರತ ದೇಶದಲ್ಲಿ ಈ ಪದ್ಧತಿಯನ್ನು ನಿಷೇಧಿಸಿದನು.


1987 ರಲ್ಲಿ ರಾಜಸ್ಥಾನದ ರೂಪ ಕುವರಬಾ ಕನ್ವರ್ ಎಂಬ ರಜಪೂತ ಮಹಿಳೆ ತನ್ನ ಪತಿ ಮಾಲ್ ಸಿಂಗ್ ಕುವರ ನ ಮರಣದ ಮರುದಿನ ಸಹಗಮನ ಮಾಡಿದ್ದು ರಾಜಸ್ಥಾನ್ ರಾಜ್ಯ ಸರ್ಕಾರಕ್ಕೆ ತಡವಾಗಿ ಗಮನಕ್ಕೆ ಬಂದಿದ್ದು ಕೂಡಲೇ ಕ್ರಮ ಕೈಗೊಂಡ ಸರ್ಕಾರವು ಸತಿ ಪದ್ಧತಿಯನ್ನು ಅನುಮೋದಿಸುವ ಮತ್ತು ಸತಿ ಪದ್ಧತಿಗೆ ಮೊರೆ ಹೋಗುವವರಿಗೆ ಸಹಾಯ ಮಾಡುವವರಿಗೆ ಕಠಿಣಾತಿಕಠಿಣ ಶಿಕ್ಷೆಗಳನ್ನು ವಿಧಿಸುವ ಕಾನೂನನ್ನು ಜಾರಿಗೆ ತಂದಿತು. 


ಮುಂದೆ ಹಲವಾರು ವರ್ಷಗಳ ಕಾಲ ರೂಪಾ ಕನ್ವರ್ ಳ ಸಹಗಮನಕ್ಕೆ ಅನುಮೋದನೆ ನೀಡಿದ ಆಕೆಯ ಸಂಬಂಧಿಕರು ಕೋರ್ಟು ಕಚೇರಿಗೆ ಅಲೆದಾಡುವಂತಾಯಿತು.ಮರು ವರ್ಷ 1988 ರಲ್ಲಿ ಭಾರತ ಸರ್ಕಾರವು ಸಂಪೂರ್ಣ ಸತಿ ಪದ್ಧತಿಯನ್ನು ನಿಷೇಧಿಸಿ ಕಾನೂನನ್ನು ಜಾರಿಗೆ ತಂದಿತು.


ಹೆಣ್ಣು ಮಕ್ಕಳು ತಾವು ಇಚ್ಚಿಸಲಿ, ಇಚ್ಛಿಸದೇ ಹೋಗಲಿ ಸಹಗಮನ ಪದ್ಧತಿಯು ಅಮಾನವೀಯ ಆಚರಣೆ ಎಂದು ಪರಿಗಣಿಸಲ್ಪಟ್ಟಿದ್ದು ಆ ಪದ್ಧತಿಯನ್ನು ನಿಷೇಧಿಸಿ ಕಾನೂನನ್ನು ಹೊರಡಿಸಿದ್ದು ಇದೀಗ ಈ ಪದ್ಧತಿಯು ಸಂಪೂರ್ಣವಾಗಿ ನಿರ್ಮೂಲನೆ ಯಾಗಿರುವುದು  ಶ್ಲಾಘನೀಯ.


 -ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top