ಶಿಕ್ಷಣದಲ್ಲಿ ಭಾರತೀಯ ಪರಂಪರೆಯನ್ನು ಅಳವಡಿಸಬೇಕು-ರಘುನಂದನ್

Upayuktha
0

 


ಪುತ್ತೂರು: ಇಲ್ಲಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಾವರ್ಕರ್ ಸಭಾಭವನದಲ್ಲಿ ವಿದ್ಯಾಭಾರತಿ ಉಚ್ಚ ಶಿಕ್ಷಾ   ಸಂಸ್ಥಾನ - ಕರ್ನಾಟಕ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ಸಹಯೋಗದಲ್ಲಿ ಪ್ರಾಧ್ಯಾಪಕರ ಸಮಾಗಮ  ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನದ ಸಂಘಟನಾ ಕಾರ್ಯದರ್ಶಿ  ರಘುನಂದನ್ , ಶಿಕ್ಷಣದಲ್ಲಿ ಭಾರತೀಯ ಪರಂಪರೆಯನ್ನು ಅಳವಡಿಸುವ ಅಗತ್ಯವಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ದೇಶದ ಸಂಸ್ಕೃತಿ ಮತ್ತು ಮೌಲ್ಯಗಳಿಗೆ ಪ್ರಾಧಾನ್ಯ ನೀಡಬೇಕು. ವಿದ್ಯಾರ್ಥಿಗಳು ಈ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅದನ್ನು ಮುಂದುವರಿಸಿ ಬೆಳೆಸುವಂತೆ ಶಿಕ್ಷಣ ವ್ಯವಸ್ಥೆ ರೂಪಗೊಳ್ಳಬೇಕು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ   ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ,  ಶಿಕ್ಷಣ ಕೇವಲ ಪಠ್ಯಪುಸ್ತಕಗಳ ತಿಳುವಳಿಕೆಗೆ ಸೀಮಿತವಾಗಬಾರದು. ಮಕ್ಕಳಿಗೆ ಮೊದಲಿಗೆ ಮಾತೃಭಾಷೆಯ ಮೂಲಕ ಶಿಕ್ಷಣ ನೀಡಬೇಕು. ಜೊತೆಗೆ, ಪ್ರಾಯೋಗಿಕ ಆಧಾರಿತ ಕಲಿಕೆಯ ಮೂಲಕ ನೈಜ ಜೀವನದ ಮೌಲ್ಯಗಳನ್ನು ಕಲಿಸಲು  ಸೂಕ್ತವಾದ ವಿಧಾನಗಳನ್ನು ಬಳಸಬೇಕು ಎಂದು ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನ - ಕರ್ನಾಟಕ, ದಕ್ಷಿಣ ಪ್ರಾಂತದ ಅಧ್ಯಕ್ಷ ಡಾ. ಶ್ಯಾಮ್ ಪ್ರಸಾದ್ ಟಿ.ಎಸ್. ಅವರು ಮಾತನಾಡಿ ಶುಭಹಾರೈಸಿದರು ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನದ ರಾಷ್ಟ್ರೀಯ ಮಂತ್ರಿ ಡಾ. ಶೋಭಿತಾ ಸತೀಶ್ ಸ್ವಾಗತಿಸಿ, ವಿವೇಕಾನಂದ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ ವಂದಿಸಿದರು. ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಉಪನ್ಯಾಸಕಿ  ನಿರೂಪಮ ನಿರೂಪಿಸಿದರು. 


ಸಭಾ ಕಾರ್ಯಕ್ರಮದ ನಂತರ, ಮಾಹೆ, ಮಣಿಪಾಲದ ತತ್ವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾದ ಡಾ. ಶ್ರೀನಿವಾಸ್ ಕುಮಾರ್ ಎನ್. ಆಚಾರ್ಯ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಅವರು "ಭಾರತೀಯ ಜ್ಞಾನ ಪರಂಪರೆ" ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ನಂತರ, ವಿವಿಧ ಶೈಕ್ಷಣಿಕ ಸಂಸ್ಥೆಗಳ ಪ್ರಾಧ್ಯಾಪಕರು ಹಾಗೂ ಪ್ರಾಚಾರ್ಯರು "ಉತ್ತಮ ಶಿಕ್ಷಣ ಪದ್ಧತಿಗಳು ಮತ್ತು ಮೌಲ್ಯಾಧಾರಿತ ಶಿಕ್ಷಣ" ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.


ಕಾರ್ಯಕ್ರಮದ ಸಮಾರೋಪ ಸಮಾರಂಭ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ  ಸತೀಶ್ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನದ ಸಂಘಟನಾ ಕಾರ್ಯದರ್ಶಿ ರಘುನಂದನ್ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ವೇದಿಕೆಯಲ್ಲಿ ಡಾ. ಪ್ರವೀಣ್ ಕುಮಾರ್ ಮಳ್ಳಳ್ಳಿ (ಕಾರ್ಯದರ್ಶಿ, ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನ - ಕರ್ನಾಟಕ, ದಕ್ಷಿಣ ಪ್ರಾಂತ), ಡಾ. ಶೋಭಿತಾ ಸತೀಶ್ (ರಾಷ್ಟ್ರೀಯ ಮಂತ್ರಿ, ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನ) ಉಪಸ್ಥಿತರಿದ್ದರು.


ಸಮಾರೋಪ  ಸಮಾರಂಭದ ಅತಿಥಿಗಳನ್ನು ವಿವೇಕಾನಂದ ಕಾಲೇಜು ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸ್ ನ ಪ್ರಾಂಶುಪಾಲರಾದ ಡಾ. ಗುರುರಾಜ್ ಸ್ವಾಗತಿಸಿ,  ಕೃಷ್ಣ ಪ್ರಸಾದ್ ಕೆ.ಎನ್. ಕ್ಷೇತ್ರೀಯ ಸಂಯೋಜಕರು, ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನ - ಕರ್ನಾಟಕ ವಂದಿಸಿದರು.



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top