ಮಂಗಳೂರು: ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಉದ್ಯೋಗಕ್ಕೆ ಸಂಬಂಧಪಟ್ಟ ಪರೀಕ್ಷಾ ತಯಾರಿಯಲ್ಲಿ ತೊಡಗಿಸಿಕೊಳ್ಳಬೇಕು. ಉದ್ಯೋಗಕ್ಕೆ ಸಂಬಂಧಿಸಿದಂತೆ ತರಬೇತಿಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕವೂ ಪಡೆಯಬಹುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ (ಆಡಳಿತ) ರಾಜು ಮೊಗವೀರ ಅವರು ತಿಳಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಕನ್ನಡ ಸಂಘ ಹಾಗೂ ಉದ್ಯೋಗ ಮತ್ತು ವೃತ್ತಿ ಸಮಲೋಚನಾ ಕೋಶ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ನಗರ ಹೋಬಳಿ ಘಟಕದ ಸಹಯೋಗದೊಂದಿಗೆ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ತಯಾರಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಯೂ ಪಾಲ್ಗೊಳ್ಳಲು ಅವಕಾಶವಿದೆ. ಅದನ್ನು ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಸಮಯ ಮೀಸಲಿಡುವ ಅಗತ್ಯವಿದೆ ಎಂದು ಹೇಳಿದರು.
ಕೊಡಗು ಮೀನುಗಾರಿಕಾ ಇಲಾಖೆ ಸಹಾಯ ನಿರ್ದೇಶಕಿ ಮಿಲನ ಕೆ. ಭರತ್, ದೇಶದಲ್ಲಿ ಪ್ರತಿವರ್ಷ 25 ಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ಹೊರ ಬರುತ್ತಾರೆ. ಆದರೆ ಶೇ. 65ರಷ್ಟು ವಿದ್ಯಾರ್ಥಿಗಳು ಮಾತ್ರವೇ ಉದ್ಯೋಗ ಪಡೆಯವ ಶಕ್ತರಾಗುತ್ತಾರೆ. ಉಳಿದ ಶೇ.35ರಷ್ಟು ಮಂದಿ ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ಸಾಧನೆಗಳು ಮಾತಾಡಿದಾಗ ಮಾತ್ರವೇ ಗುರಿ ತಲುಪಲು ಸಾಧ್ಯ. ಜೀವನದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೇ, ತಮ್ಮದೇ ಸ್ವಂತ ದಾಖಲೆಗಳನ್ನು ನಾವೇ ಮುರಿಯುತ್ತೇನೆ ಎಂಬ ಛಲವಿರಬೇಕು. ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತಯಾರಿ ಮಾಡಿಕೊಳ್ಳಲು ಗ್ರಂಥಾಲಯಗಳ ಮೊರೆ ಹೋಗುವುದು ಉತ್ತಮ. ಶಿಕ್ಷಣ ಬದುಕಿಗೆ ಗೌರವ ಮತ್ತು ಉದ್ಯೋಗಕ್ಕೆ ಮಾತ್ರ ಅವಕಾಶ ನೀಡುವುದಿಲ್ಲ, ಜ್ಞಾನಾರ್ಜನೆಗೂ ಸಹಾಯ ಮಾಡುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಕನ್ನಡ ಸಾಹಿತ್ಯ ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಲ್ಲ. ಇಡೀ ದೇಶದ ಇತಿಹಾಸದ ಕುರಿತು ಅಧ್ಯಯನ ಮಾಡಲು ಪ್ರೇರೇಪಣೆ ನೀಡುತ್ತದೆ. ಬದುಕಿನಲ್ಲಿ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಲ| ಚಂದ್ರಹಾಸ ಶೆಟ್ಟಿ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಎಲ್. ಲಕ್ಷ್ಮಿದೇವಿ, ಕನ್ನಡ ಸಂಘದ ಸಂಚಾಲಕ ಡಾ. ಮಾಧವ, ಕ.ಸಾ.ಪ. ಮಂಗಳೂರು ಹೋಬಳಿ ಘಟಕದ ಅಧ್ಯಕ್ಷ ರೇಮಂಡ್ ಡಿಕುನಾ ತಾಕೊಡೆ, ಉದ್ಯೋಗ ಮತ್ತು ವೃತ್ತಿ ಸಮಾಲೋಚನಾ ಕೋಶದ ಸಂಯೋಜಕಿ ಡಾ. ಭಾರತಿ ಪ್ರಕಾಶ್ ಸೇರಿದಂತೆ ವಿವಿಧ ವಿಭಾಗಗಳು ಉಪನ್ಯಾಸಕರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ