ಲೇಖಾ ಲೋಕ-35: ತಟಸ್ಥ ನಿಲುವಿನ ವಿಮರ್ಶಕ ಜಿ.ಎಸ್ ಅಮೂರ

Upayuktha
0


ನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಯಲ್ಲಿ ಅಧ್ಭುತ ಪ್ರಭುತ್ವ ಹೊಂದಿದ ಗುರುನಾಥ ಶ್ಯಾಮಾಚಾರ್ಯ ಅಮೂರ ಅವರು ಕನ್ನಡ ನಾಡಿಗೆ ದೊರೆತ ಅಪರೂಪದ ಸಾಹಿತಿ. ಪೂರ್ವಗ್ರಹಗಳ ಪೀಡಿತ ಮನಸ್ಥಿತಿಯ ವಿಮರ್ಶೆ ಮುಂತಾದವುಗಳಿಂದ ದೂರ ನಿಂತು ಯಾವ ಸಿದ್ಧಾಂತದ ಗೊಡವೆಗೆ ಹೋಗದೆ, ತಟಸ್ಥ ನಿಲುವು ಪಡೆದ ವಿಮರ್ಶಕರು. ಇವರ ಅಧ್ಯಯನ ಆಳ ಅಗಲಕ್ಕೆ ಸಿಗದು. ಕನ್ನಡ ಸಾಹಿತ್ಯ ಕೃತಿಗಳನ್ನು ತಮ್ಮದೇ ಆದ ವಿಮರ್ಶಾತ್ಮಕ ನಿರ್ಲಿಪ್ತ ದೃಷ್ಟಿಕೋನದಲ್ಲಿ ವಿಶ್ಲೇಷಣೆ ಮಾಡುವ ಪ್ರಬುದ್ಧ ಸಾಹಿತಿ. 


ಧಾರವಾಡ ಜಿಲ್ಲೆಯ ಚಿಕ್ಕ ಗ್ರಾಮ ಬೊಮ್ಮನಹಳ್ಳಿಯಲ್ಲಿ ತಾ॥ 8-5-1925 ರಂದು ಶ್ಯಾಮಾಚಾಯ೯ ಮತ್ತು ಗಂಗೂಬಾಯಿ ದಂಪತಿಗಳಿಗೆ ಪುತ್ರನಾಗಿ  ಜನಿಸಿದರು. ಬಾಲ್ಯದ ಶಿಕ್ಷಣ ಶಿರಹಟ್ಟಿಯ ಸೂರಣಿಗೆಯಲ್ಲಿ ನಂತರ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಹಾವೇರಿಯಲ್ಲಿ ಪೂರೈಸಿದರು. ಮಂಬಯಿಯಲ್ಲಿ ಮೆಟ್ರಿಕ್ ಪರೀಕ್ಷೆ ಪಾಸು ಮಾಡಿದರು.


ಪದವಿ ಪಡೆದ ನಂತರ ಗದಗ ಶ್ರೀ ತೋಂಟದಾರ್ಯ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ನಂತರ ವಿದ್ಯಾಭ್ಯಾಸ ಮಾಡಿ, ಸ್ನಾತಕೋತ್ತರ ಪದವಿ ಮುಂಬಯಿಯಲ್ಲಿ ಪಡೆದರು. ಪಿ ಎಚ್ ಡಿ ಪದವಿ ಪಡೆದು, ಧಾರವಾಡದಲ್ಲಿರುವ ಕನಾ೯ಟಕ ವಿಶ್ವ ವಿದ್ಯಾಲಯದಲ್ಲಿ ರೀಡರ್ ಆಗಿ ನಂತರ ಔರಂಗಾಬಾದ್ ಮರಾಠ ವಿಶ್ವವಿದ್ಯಾಲಯದ ಫ್ರೋಫೆಸರ್ ಹುದ್ದೆ ಅಲಂಕರಿಸಿ, 1988 ಅಮೆರಿಕ, ಇಂಗ್ಲೆಂಡ್ ಫೆಲೋಶಿಪ್ ಪ್ರವಾಸವನ್ನು ಮಾಡಿದರು.


ಅಮೇರಿಕಾದ ವಿದ್ವಾಂಸ ಪೀಟರ್ ನಜರತ್ ಅವರು ಇವರನ್ನು "ಭಾರತದ ಪ್ರಥಮ ದರ್ಜೆಯ ವಿಮರ್ಶಕ" ಎಂದು ಪ್ರಶಂಸಿಸಿರುವುದು ವಿಶೇಷ. ಜಿ.ಎಸ್ ಅಮೂರ ಅವರು ಆದಶ೯ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಯ ಜೊತೆಗೆ, ಕನ್ನಡ, ಇಂಗ್ಲೀಷ್ ಸಾಹಿತ್ಯವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, 50 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಮುಖ್ಯ ಒಲವು ವಿಮರ್ಶೆ ಕಡೆಗೆ ಮನಸ್ಸಾಗಿತ್ತು. ಇವರ ಪಿ ಎಚ್ ಡಿ ಪದವಿಯ ವಿಷಯ "the concept of comedy" ಆಗಿತ್ತು. ಜಿ ಎಸ್ ಅಮೂರರು ಡಾ॥ದ.ರಾ.ಬೇಂದ್ರೆಯವರ ಬಗ್ಗೆ ಬರೆದ  "ಭುವನದ ಭಾಗ್ಯ "ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.

ಇವರ ವಿಮರ್ಶಾ ದೃಷ್ಟಿಯಲ್ಲಿ ಕನ್ನಡ ಕಾದಂಬರಿಗಳ ಬೆಳವಣಿಗೆ, ಕನ್ನಡ ಕಥನ ಸಾಹಿತ್ಯ, ಕಾದಂಬರಿಗಳು ಅದರ ಸ್ವರೂಪ, ಹೊಸ ಚಿಂತನೆ, ಅರ್ಥಲೋಕ, ಸಮಕಾಲೀನ ಕಥೆ, ಕಾದಂಬರಿಗಳು ಅದರ ಹೊಸ ಪ್ರಯೋಗ, ಸಾತ್ವಿಕ ಪಥ, ಕೃತಿ ಪರೀಕ್ಷೆ, ಮಂತಾದವುಗಳನ್ನು ಆಳವಾಗಿ ವಿಮರ್ಶೆ ಮಾಡಿದರು. ಬೇಂದ್ರೆ ಕಾವ್ಯದ ಪ್ರತಿಮಾ ಲೋಕ ಮತ್ತು ಅವರ ಗ್ರಂಥಗಳನ್ನು ವಿಮರ್ಶಾ ಲೋಕಕ್ಕೆ ಒಳಪಡಿಸಿ, ಅದ್ಭುತ ಕೃತಿಗಳು ಲೋಕಾರ್ಪಣೆಗೊಂಡವು. ನವೋದಯ, ನವ್ಯ, ಕಾಲದ ಎಲ್ಲಾ ಕೃತಿಗಳನ್ನು ಇವರು ಅವಲೋಕನ ಮಾಡಿ, ಅವುಗಳ ಬಗ್ಗೆ ಅನೇಕ ಬರಹಗಳನ್ನು ಬರೆದು ನಾಡಿಗೆ ನೀಡಿದ್ದಾರೆ. ಕುವೆಂಪು, ಗೋಕಾಕ, ಭೂಸನೂರ ಮಠರ ಕಾವ್ಯಗಳ ಬಗ್ಗೆ ದೀರ್ಘ ಲೇಖನಗಳನ್ನು ಬರೆದಿದ್ದಾರೆ. ಮಿಲ್ಟನ್, ಬೇಂದ್ರೆ, ಶ್ರೀರಂಗ, ಅ ನ ಕೃ ಮೊದಲಾದವರ ಬಗ್ಗೆ ಜೀವನ ಚರಿತ್ರೆ ರಚಿಸಿದ ಮಹನೀಯರು.


ಇವರು ಸಣ್ಣ ಕಥೆಗಳನ್ನು ಸಹ ಬರೆದು ನಾಡಿಗೆ ನೀಡಿದ್ದಾರೆ. 15ಕ್ಕೂ ಹೆಚ್ಚು ಇಂಗ್ಲಿಷ್ ಕೃತಿಗಳನ್ನು ಬರೆದಿದ್ದಾರೆ. ವಿಮರ್ಶೆ ಹೇಗಿರಬೇಕು ಎಂಬ ಸೈದ್ಧಾಂತಿಕ ಘನತೆ ತಂದುಕೊಟ್ಟ ಸಾಹಿತಿ. ಇವರ ವಿಮಶಾ೯ ದೃಷ್ಟಿಕೋನವು ಉಚ್ಚ ಮಾದರಿಯೆನಿಸಿ ಅನುಕರಣೀಯ. ಸಾಹಿತ್ಯ ವಲಯದಲ್ಲಿ ಅಪಾರ ಗೌರವ ಸಂಪಾದಿಸಿ ವಿವಾದಾತೀತರಾದ ವಿಮರ್ಶಕರು.


ಡಾ॥ ಜಿ ಎಸ್ ಅಮೂರ ಅವರಿಗೆ ಅನೇಕ ಪ್ರಶಸ್ತಿಗಳು ದೊರಕಿವೆ. ನೃಪತುಂಗ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಪಂಪ ಪ್ರಶಸ್ತಿ, ಡಾ. ದ.ರಾ ಬೇಂದ್ರೆ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ, ಎಸ್.ಎಸ್ ಮಾಳವಾಡ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮಂತಾದ ಗೌರವಗಳು ಲಭಿಸಿವೆ. 


ಡಾ॥ ಜಿ ಎಸ್ ಅಮೂರ ಅವರು ಮೂರು ಗಂಡು, ಒಬ್ಬ ಪುತ್ರಿಯನ್ನು ಅಗಲಿ ವಯೋಸಹಜ ಕಾಯಿಲೆಯಿಂದ 28-9-2020 ರಂದು ನಾಡನ್ನು ಅಗಲಿ ನಿಧನರಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top