ಕಥೆ: ಜೀವನ ಮಾಧುರ್ಯ

Upayuktha
0



ಮುಂಜಾನೆಯ ತಂಗಾಳಿಗೆ ಮೈಯೊಡ್ಡಿ ನಿಂತಿದ್ದಳು ಮಾಧುರ್ಯ. ಮನಸ್ಸು ಮಾತ್ರ ಎಲ್ಲೆಲ್ಲೋ ಅಲೆದಾಡುತ್ತಿತ್ತು. ಕೈಯಲ್ಲಿರುವ ಲೇಖನಿ, ಕೆಳಗಿರಿಸಿದ ಕಾಗದ ತನ್ನನ್ನು ನೋಡಿ ಅಣಕಿಸುವಂತೆ ತೋರಿತು ಮಾಧುರ್ಯಳಿಗೆ.


' ಇದು ಎಷ್ಟನೇ ಗರ್ಭಪಾತ ' ಮನದಲ್ಲೇ ಲೆಕ್ಕ ಹಾಕಿಕೊಂಡಳು. ಬಹುಶಃ ಹನ್ನೆರಡನೆಯದಿರಬಹುದೇ ?' ಅದರ ನೋವು ಸಂಕಟ ಅವಳನ್ನು ಕಾಡುತ್ತಿತ್ತು. ಒಡಲಿನಲ್ಲಿ ಕುಡಿಯನ್ನು ಹೊತ್ತವಳಿಗೆ ಗರ್ಭಪಾತವಾದರೆ ಅದೆಷ್ಟು ಸಂಕಟವಾಗುತ್ತದೆಯೋ ಅದೇ ರೀತಿಯಲ್ಲಿ ಲೇಖಕಿಯೊಬ್ಬಳಿಗೆ ತನ್ನ ಕಥೆಯೊಂದನ್ನು ಪೂರ್ಣಗೊಳಿಸಲಾರದೆ ಅಪೂರ್ಣವಾಗಿ ಕೈ ಬಿಡಬೇಕಾಗಿ ಬಂದಾಗ ನೋವಾಗುತ್ತದೆ ಎಂಬುದು ಅವಳ ಅನುಭವ.


ಚಿಕ್ಕಂದಿನಿಂದಲೇ ಓದುವ ಹವ್ಯಾಸ ರೂಢಿಸಿಕೊಂಡ ಮಾಧುರ್ಯಾಳಿಗೆ ಯಾವಾಗ ಬರವಣಿಗೆ ಜೀವನದ ಒಂದು ಭಾಗವಾಗಿ ಅಂಟಿಕೊಂಡಿತು ಎಂದು ಗೊತ್ತಿಲ್ಲ. ಬಾಲಮಂಗಳ, ಚಂದಮಾಮ ಎಂದು ಮಕ್ಕಳ ಕಥೆಗಳನ್ನು ಓದಿ ತನ್ನದೇ ಕಲ್ಪನಾ ಲೋಕದಲ್ಲಿ ತೇಲಿದವಳಿಗೆ ತನಗೂ ಬರೆಯಬೇಕೆಂಬ ಹಂಬಲ ಮೂಡಿದಾಗ ತನ್ನ ಭಾವನೆಗಳನ್ನು ಅಕ್ಷರ ರೂಪಕ್ಕೆ ಇಳಿಸಲಾರಂಬಿಸಿದಳು.


ಕಾಲೇಜ್ ಹಂತದಲ್ಲಿ ಅವಳ ಬರವಣಿಗೆಗೆ ಉತ್ತಮ ಪ್ರೋತ್ಸಾಹ ದೊರಕಿತು. ಅನೇಕ ಮಂದಿ ಅವಳ ಪ್ರತಿಭೆಯನ್ನು ಗುರುತಿಸಿ ಹೊಗಳಿದರು. ಕಾಲೇಜ್ ಜೀವನದ ಅನೇಕ ಘಟನೆಗಳು ಅವಳ ಲೇಖನಿಯಲ್ಲಿ ಅಕ್ಷರರೂಪವಾಗಿ ಮೂಡಿ ಕಥೆಗಳಾಗಿ ರೂಪಾಂತರಗೊಂಡವು.


ಬರೆದ ಬರಹಗಳಿಗೆ ಮನೆಯವರ ಪ್ರೋತ್ಸಾಹ ದೊರಕಿದಾಗ ಅವೆಲ್ಲವುಗಳನ್ನು ಪತ್ರಿಕೆಗಳಿಗೆ ಕಳುಹಿಸಿದಳು. ಸಣ್ಣಪುಟ್ಟ ಕವನಗಳು, ಲೇಖನಗಳು, ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದಾಗ ಹೆಮ್ಮೆಯಿಂದ ಹಿಗ್ಗಿದಳು ಮಾಧುರ್ಯ. ಸುತ್ತಮುತ್ತಲ ಸಮಾಜದಲ್ಲಿ ಗುರುತಿಸಿದ ವಿಚಾರಗಳನ್ನು ವಸ್ತುವನ್ನಾಗಿ ಆಯ್ಕೆ ಮಾಡಿ ಅವಳು ಬರೆದ ಕಥೆಗಳು ಜನ ಮಾನಸದಲ್ಲಿ ಗುರುತಿಸಲ್ಪಟ್ಟವು.


" ನೀವು ತುಂಬಾ ಸೊಗಸಾಗಿ ಬರೆಯುತ್ತೀರಿ "


" ನಿಮ್ಮ‌ಕಥೆಗಳನ್ನು ಓದುವಾಗ ನಾವೂ ಆ ಕಥೆಯ ಭಾಗವಾಗಿ ಬಿಡುತ್ತೇವೆ. ಅಂತಹ ಆಕರ್ಷಣೆಯಿದೆ ನಿಮ್ಮ ಬರಹಕ್ಕೆ " ಎಂದು ಓದುಗರು ಮೆಚ್ಚುಗೆ ಸೂಚಿಸುವಾಗ ಸಹಜವಾಗಿ ಅವಳಿಗೆ ತನ್ನ ಬಗ್ಗೆ ಹೆಮ್ಮೆ ಮೂಡುತ್ತಿತ್ತು.


ತನ್ನ ಸುತ್ತಲೂ ನಡೆಯುವ ಸಣ್ಣಪುಟ್ಟ ವಿಷಯಗಳನ್ನೇ ಅವಳು ಕಥಾವಸ್ತುವನ್ನಾಗಿ ಆಯ್ಕೆ ಮಾಡುತ್ತಿದ್ದಳು. ಕೆಲವೊಂದು ಬಾರಿ ಒಂದು ಹೂವು ಕಂಡರು ಅವಳಿಗೆ ಕಥೆಯ ವಸ್ತು ದೊರಕುತ್ತಿತ್ತು. ಕೆಲವು ಕವನದ ಸಾಲುಗಳು. ಕೆಲವು ಗಾದೆ ಮಾತುಗಳು. ಕೆಲವು ವ್ಯಕ್ತಿಗಳು. ಹೀಗೆ ತನ್ನ ಮನಸ್ಸಿಗೆ ಆಕರ್ಷಕವಾಗಿ ಕಂಡವುಗಳನ್ನೆಲ್ಲ ತನ್ನ ಕಥೆಯಲ್ಲಿ ಸೇರಿಸಿಕೊಂಡು ಸಾಹಿತ್ಯ ಕೃಷಿ ನಡೆಸಿದಳು ಮಾಧುರ್ಯ


ಪದವಿ, ಪಿಜಿ ಮುಗಿಸಿ ಬಿ ಎಡ್ ಮುಗಿಸುವಷ್ಟರಲ್ಲಿ ಅವಳು ಅತ್ಯುತ್ತಮ ಲೇಖಕಿಯಾಗಿ ಪಳಗಿ ಹೋಗಿದ್ದಳು.  ಅವಳ ಬರಹಗಳನ್ನು ಕಂಡು ಅನೇಕ ಮಂದಿ ಯುವಕರು ಅವಳಲ್ಲಿ ಪ್ರೇಮ ಭಿಕ್ಷೆಯಾಚಿಸಿದರು. ಆದರೆ ಅವಳು ಯಾರಿಗೂ ಬಗ್ಗಲಿಲ್ಲ. ಅವಳ ಮನಸ್ಸು ಯಾರನ್ನು ಒಪ್ಪಲಿಲ್ಲ. ತನ್ನ ಕಥೆಗಳ ನಾಯಕನಂತೆ ಅತ್ಯುತ್ತಮ ಗುಣದ ವ್ಯಕ್ತಿಯನ್ನು ಕೈಹಿಡಿಯಲು ಅವಳು ಕಾಯುತ್ತಿದ್ದಳು. ತನಗೆ ಪ್ರೋತ್ಸಾಹ ನೀಡುವ ತನ್ನ ತಂದೆ ಒಪ್ಪಿದ ವರನನ್ನು ಮದುವೆಯಾಗಲು ತೀರ್ಮಾನಿಸಿದ ಅವಳು ತನ್ನ ಅಭಿಲಾಷೆಯನ್ನು ಅಪ್ಪನ ಮುಂದಿಟ್ಟಳು.


ಕೊನೆಗೂ ಅಪ್ಪ ಮದುವೆಗೆ ವರನನ್ನು ಆಯ್ಕೆ ಮಾಡಿದಾಗ ಅವಳು ಅವನಲ್ಲಿ ಕೇಳಿದ ಒಂದೇ ಕೋರಿಕೆ ಇದು ಮಾತ್ರ. " ನನ್ನ ಬರವಣಿಗೆಗೆ ಪ್ರೋತ್ಸಾಹ ಕೊಡಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಲು ನನಗೆ ನನ್ನದೇ ಸಮಯ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು " ಎಂಬ ಮಾತಿಗೆ ಜೀವನ್ ಒಪ್ಪಿದ್ದ.


ಗುರುಹಿರಿಯರ ಆಶೀರ್ವಾದ ಪಡೆದು ಬಹಳ ಸಂಭ್ರಮದಿಂದಲೇ ಅವರ ಮದುವೆ ನಡೆದಿತ್ತು. ಮದುವೆ ದಿನ ಮಂಟಪದಲ್ಲಿ ಕುಳಿತಿರುವಾಗಲೇ ಮಾಧುರ್ಯಳ ದೃಷ್ಟಿ ಬಂದವರಿಗೆ ಜ್ಯೂಸ್ ವಿತರಿಸುವ ಒಬ್ಬ ಯುವಕನ ಮೇಲೆ ಬಿತ್ತು. ಕೊರಳಿಗೆ ಕೇಸರಿ ಬಣ್ಣದ ಶಾಲು ಹಾಕಿಕೊಂಡು ನಗುಮುಖದಿಂದ ಜ್ಯೂಸ್ ವಿತರಣೆ ಮಾಡುತ್ತಿದ್ದರು ಅವನ ಕಂಗಳ ಆಳದಲ್ಲಿ ಅಡಗಿರುವ ನೋವನ್ನು ಮಾಧುರ್ಯ ಗುರುತಿಸಿದ್ದಳು.


" ತಾಯ್ತಂದೆಯರಿಗೆ ಒಬ್ಬನೇ ಮಗ. ಮನೆಯಲ್ಲಿ ಸ್ವಲ್ಪ ತೋಟವಿದೆ. ಎಂ.ಎ. ಓದಿದ್ದಾನೆ. ಸರಕಾರಿ ಕೆಲಸ ಸಿಗಲಿಲ್ಲ. ಹಾಗಾಗಿ ಮದುವೆ, ಉಪನಯನ, ಗೃಹಪ್ರವೇಶದಂತಹ ಕಾರ್ಯಕ್ರಮಗಳಿಗೆ ಆತಿಥೇಯರಿಗೆ ಸಹಾಯಕನಾಗಿ ಕೆಲಸ ಮಾಡಲು ಹೋಗುತ್ತಾನೆ. ವಯಸ್ಸು ಮೂವತ್ತು ಆಗುತ್ತಾ ಬಂತು. ಆದರೆ ಸರಿಯಾದ ಉದ್ಯೋಗವಿಲ್ಲದ ಅವನಿಗೆ ಹೆಣ್ಣು ಕೊಡುವವರು ಯಾರು ?" ಎಂದು ಮಂಟಪದ ಪಕ್ಕದಲ್ಲೇ ಯಾರೋ ಮಾತನಾಡುವುದು ಕೇಳಿಸಿತು ಅವಳಿಗೆ.


ಆ ಯುವಕನನ್ನೇ ಸ್ವಲ್ಪ ಹೊತ್ತು ಗಮನಿಸಿ ಅವನಿಗೆ ಮನದಲ್ಲಿಯೇ ದಿಲೀಪ್ ಎಂದು ಹೆಸರಿಟ್ಟಳು ಮಾಧುರ್ಯ. ಅವನ ಬಗ್ಗೆ ಮನದಲ್ಲಿ ಯೋಚಿಸುತ್ತಾ ಅವನ ಸುತ್ತಲೂ ಸುಂದರವಾದ ಒಂದು ಕಥೆಯನ್ನು ಹೆಣೆಯುವ ಯೋಚನೆ ಬಂದಾಗ ಮದುವೆ ಮಂಟಪದಲ್ಲಿದ್ದರೂ ಅವಳು ತನ್ನದೇ ಕಲ್ಪನೆಯಲ್ಲಿ ಮುಳುಗಿದಳು.


' ಸುಂದರವಾದ, ವಿದ್ಯಾವಂತೆಯಾದ ಯುವತಿಯೊಬ್ಬಳು ಅವನನ್ನು ಮೆಚ್ಚಿ ಮದುವೆಯಾದಂತೆಯೂ, ಅವಳ ಕಾಲ್ಗುಣದಿಂದ ಅವನ ಬದುಕು, ಹಸನಾದಂತೆಯು ಕಥೆಗೆ ರೂಪುರೇಷೆ ಹಾಕಿಕೊಂಡಳು. ಮದುವೆಯ ಕಾರ್ಯಕ್ರಮಗಳೆಲ್ಲ ಮುಗಿದು ಜೀವನ್ ಮನೆಗೆ ಅವಳು ಬಲಗಾಲಿಟ್ಟು ಒಳಗೆ ಪ್ರವೇಶಿಸುವಾಗಲು ದಿಲೀಪ್ ಅವಳ ಮನವನ್ನು ಕಾಡುತ್ತಿದ್ದ. 


' ಅವನನ್ನು ಪ್ರೀತಿಸುವ ಹುಡುಗಿ ಹೇಗಿರಬೇಕು, ಅವಳಿಗೂ ಅವನಿಗೂ ಮೊದಲ ಭೇಟಿಯೆಲ್ಲಿ ?' ಎಂದೆಲ್ಲಾ ಮನದಲ್ಲೇ ಯೋಚಿಸುತ್ತಿದ್ದಳು ಮಾಧುರ್ಯ. ಪತಿಯ ಮನೆಯವರು ಕೇಳಿದ ಪ್ರಶ್ನೆಗೆಲ್ಲ ಒಂದೆರಡು ವಾಕ್ಯಗಳಲ್ಲಿ ಉತ್ತರಿಸಿ ದಿಲೀಪನ ಬಗ್ಗೆ ಕಥೆ ಬರೆಯುವ ಯೋಚನೆಗೆ ಆದ್ಯತೆ ಕೊಟ್ಟಳು ಮಾಧುರ್ಯ. ಮನದಲ್ಲಿರುವ ಭಾವಗಳಿಗೆ ಅಕ್ಷರ ರೂಪ ನೀಡದಿದ್ದರೆ ತನಗೆ ನೆಮ್ಮದಿ ಇಲ್ಲ ಎಂದೆನಿಸಿದಾಗ ಮೊದಲ ರಾತ್ರಿಯಲ್ಲಿ ಮೊಬೈಲ್ ಹಿಡಿದುಕೊಂಡು ಕಥೆ ಬರೆಯಲಾರಂಭಿಸಿದಳು ಅವಳು.


" ನೀನು ಹಾಲು ಹಿಡಿದುಕೊಂಡು ನನ್ನ ಕೋಣೆಗೆ ಬರುವೆ ಎಂದು ಭಾವಿಸಿದರೆ ಇಲ್ಲಿ ಮೊಬೈಲ್ ನೋಡುತ್ತಾ ಕುಳಿತಿರುವೆಯಾ ?" ಎನ್ನುತ್ತಾ ಜೀವನ್ ಕೋಣೆಯೊಳಗೆ ಬಂದಾಗ ಅವಳ ಕಥೆಯ ಎಳೆ ತುಂಡಾದಂತಾಯಿತು. ತಾನು ಮದುಮಗಳು, ಜೀವನ್ ನ ಪತ್ನಿ ಎಂಬುದನ್ನು ನೆನಪಿಸಿಕೊಂಡು ಅನಿವಾರ್ಯವಾಗಿ ತನ್ನ ಯೋಚನೆಗಳನ್ನು ಕಿತ್ತೆಸೆದು ಅವನ ಕಡೆಗೆ ಗಮನ ಹರಿಸಿದಳು.


ಮಾರನೆಯ ದಿನದಿಂದ ಪತಿಯ ಮನೆಯಲ್ಲಿ ಅವಳ ದಿನಚರಿ ಆರಂಭವಾಗಿತ್ತು. ಅತ್ತೆ, ಮಾವ ಮೈದುನರ ಜೊತೆ ಮಾತನಾಡುವಾಗ ತನ್ನ ಕಲ್ಪನೆಯ ದಿಲೀಪ್ ನ ಕಥೆಯನ್ನು ಮುಂದುವರಿಸಲು ಪ್ರಯತ್ನಿಸಿದರೂ ಅವಳಿಂದ ಸಾಧ್ಯವಾಗಲಿಲ್ಲ. ಒಂದೆರಡು ದಿನಗಳಲ್ಲಿ ದಿಲೀಪ್ ಅವಳ ಮನದಿಂದ ಮರೆಯಾದ. ಅರ್ಧ ಬರೆದ ಕಥೆಯೊಂದನ್ನು ಅಪೂರ್ಣವಾಗಿ ಕೈ ಬಿಟ್ಟಾಗ ಗರ್ಭಪಾತವಾದಷ್ಟು ಸಂಕಟವಾಗಿತ್ತು ಅವಳಿಗೆ.


ಪತಿಯ ಜೊತೆ ಮೊದಲ ಬಾರಿಗೆ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಹೂವು ಮಾರುವ ಮಹಿಳೆಯ ಮೇಲೆ ಮಾಧುರ್ಯಳ ಗಮನ ಹರಿಯಿತು. ಅವಳ ಬದುಕನ್ನಾಧರಿಸಿ ಕಥೆ ಬರೆಯೋಣವೆಂದು ಹೊರಟಳು ಮಾಧುರ್ಯ. ಆದರೆ ಮನೆಯ ವಾತಾವರಣದಿಂದಾಗಿ ಅವಳಿಗೆ ಕಥೆ ಬರೆಯಲು ಸರಿಯಾದ ಅವಕಾಶ ದೊರಕಲಿಲ್ಲ.


ಕೆಲವು ಬಾರಿ ಕಥೆ ಬರೆಯಲೆಂದು ಹೊರಟರೆ ಅತ್ತೆ ಏನಾದರೂ ಒಂದು ಕೆಲಸ ಹೇಳುತ್ತಿದ್ದರು. ಇಲ್ಲವಾದರೆ ಯಾರಾದರೂ ಅವಳನ್ನು ಒಂದು ಮಾತನಾಡಿಸಲು ಮನೆಗೆ ಬರುತ್ತಿದ್ದರು. ತನ್ನಿಂದಾಗಿ ಯಾರು ಮುಜುಗರ ಪಡಬಾರದು ತೊಂದರೆ ಪಡಬಾರದು ಎಂಬ ಯೋಚನೆಯಿಂದಾಗಿ ತನ್ನ ಬರವಣಿಗೆಯನ್ನು ಪಕ್ಕಕ್ಕಿರಿಸಿ ಮಾಧುರ್ಯ ಅವರ ಕಡೆಗೆ ಗಮನಹರಿಸುತ್ತಿದ್ದಳು. ಆದರೆ ನಾಲ್ಕಾರು ಬಾರಿ ಹೀಗಾದಾಗ ಮಾನಸಿಕವಾಗಿ ನೊಂದಳು ಮಾಧುರ್ಯ. 


'ಇನ್ನು ಮುಂದೆ ಹೀಗಾಗಬಾರದು. ಏನೇ ಆದರೂ ನಾನು ಕಥೆಯನ್ನು ಅರ್ಥದಲ್ಲಿ ನಿಲ್ಲಿಸುವುದಿಲ್ಲ ಎಂದು ಮನದಲ್ಲಿ ತೀರ್ಮಾನಿಸಿಕೊಂಡು ಹೊಸ ಕಥಾವಸ್ತುವಿನ ವಿಷಯಕ್ಕಾಗಿ ಹೊಸ ವಾತಾವರಣದಲ್ಲಿ ಹುಡುಕಾಡತೊಡಗಿದಳು. ಈ ನಡುವೆ ಜೀವನ್ ಗೆ ದೂರದ ಊರಿಗೆ ವರ್ಗಾವಣೆಯಾಗಿತ್ತು. ಅತ್ತೆಮಾವ ಅವಳನ್ನು ಸಂತಸದಿಂದಲೇ ಮಗನ ಜೊತೆ ಕಳುಹಿಸಿಕೊಟ್ಟರು.


ಹೊಸ ಊರು, ಹೊಸ ಮನೆ ಅವಳಿಗೆ ಹೊಸ ಉತ್ಸಾಹ ತುಂಬಿತು. ಗಂಡ ಆಫೀಸಿಗೆ ಹೋದಾಗ ಕಥೆ ಬರೆಯಬಹುದು ಎಂಬ ಯೋಜನೆ ಯೊಂದಿಗೆ ಮನದಲ್ಲೇ ಹೊಸ ಕಥಾವಸ್ತುವಿನ ಅನ್ವೇಷಣೆಗೆ ತೊಡಗಿದಳು. ಆದರೆ ಅವಳು ಸಫಲಳಾಗಲಿಲ್ಲ. ಅವಳು ಆರಂಭಿಸಿದ ಯಾವ ಕಥೆಯು ಪೂರ್ಣವಾಗುತ್ತಿರಲಿಲ್ಲ. ಎಲ್ಲವೂ ಅಪೂರ್ಣವಾಗಿಯೇ ಕೊನೆಗೊಂಡಾಗ ಮಾನಸಿಕವಾಗಿ ಹಿಂಸೆಯಾಗುತ್ತಿತ್ತು ಮಾಧುರ್ಯಳಿಗೆ. ಆ ಮಾನಸಿಕ ತೊಳಲಾಟದಿಂದಾಗಿ ಮನೆ ಕೆಲಸಗಳು ಅಸ್ತವ್ಯಸ್ತಗೊಂಡವು.


ಸಾಂಬಾರ್ ತಳ ಹಿಡಿಯತೊಡಗಿತು. ದೋಸೆ ಕಪ್ಪಾಯಿತು. ಪಲ್ಯಕ್ಕೆ ಉಪ್ಪು ಜಾಸ್ತಿಯಾಗತೊಡಗಿತು. ಹಾಲು ಉಕ್ಕಿ ಚೆಲ್ಲದ ದಿನಗಳೇ ಇರಲಿಲ್ಲ. ಬಟ್ಟೆ ಒಗೆಯಲು ಮರೆತು ಹೋಯಿತು. ಒಗೆದ ಬಟ್ಟೆಗಳನ್ನು ಒಪ್ಪವಾಗಿ ಮಡಿಚಿ ಇಡಲು ನೆನಪಿಲ್ಲದಾಯಿತು. ಒಟ್ಟಿನಲ್ಲಿ ಮನೆ ಕೆಲಸದ ಶಿಸ್ತು ತಪ್ಪಿ ಹೋದಾಗ ಜೀವನ್ ಗೆ ತುಸು ಅಸಮಾಧಾನ ಮೂಡಲಾರಂಭಿಸಿತು. ಆಫೀಸಿಗೆ ಹೋಗಿ ಬಂದು ತಾನೇ ಎಲ್ಲದಕ್ಕೂ ಗಮನ ಕೊಡಬೇಕು ಎಂಬ ಸ್ಥಿತಿ ತಲುಪಿದಾಗ ರೋಸಿ ಹೋದ ಜೀವನ್ ರೇಗಲಾರಂಭಿಸಿದ.


ನವದಂಪತಿಗಳ ನಡುವೆ ಸರಸದ ಬದಲು ವಿರಸದ ಕ್ಷಣಗಳೇ ಹೆಚ್ಚಾಗಲಾರಂಭಿಸಿದವು. ಕಸಗುಡಿಸಲಿಲ್ಲ, ಪಾತ್ರೆ ತೊಳೆಯಲಿಲ್ಲ, ನೆಲ ಒರೆಸಲಿಲ್ಲ ಎಂಬ ಕಾರಣಕ್ಕೆ ಇಬ್ಬರ ನಡುವಿನ ವಿರಸದ ಕಂದಕ ಅಗಲವಾಗತೊಡಗಿತು. ತನ್ನ ಕಥೆಗಳಲ್ಲಿ ನವದಂಪತಿಗಳ ರಸನಿಮಿಷಗಳ ವರ್ಣನೆಯನ್ನು ಮೋಹಕವಾಗಿ ಚಿತ್ರಿಸಿದ ಅವಳ ಬದುಕಿನಲ್ಲಿ ಅಂತಹ ಕ್ಷಣಗಳೇ ಇಲ್ಲದಂತಾಗಿ ಹೋಯಿತು. ಕೊನೆಗೊಂದು ದಿನ ಜೀವನ್ ಅವಳಲ್ಲಿ " ನಾವು ಹೊರಗೆ ಹೋಗೋಣ. ಹೊರಟು ನಿಲ್ಲು " ಎಂದ. ಅವಳ ಮನಸ್ಸು ಮತ್ತೆ ಕಲ್ಪನೆಯ ತೇರೇರಿ ಸಾಗಿತು. ಪತಿಯ ಜೊತೆ ಹೊರಗೆ ಹೋಗಿ ಐಸ್ ಕ್ರೀಮ್ ಮೆಲ್ಲುವ ಕನಸು ಕಂಡಳು. 


ಜೀವನ್ ತನ್ನ ಹತ್ತಿರ ಕುಳಿತು ಐಸ್ ಕ್ರೀಮ್ ಬಾಯಿಗೆ ಕೊಟ್ಟಂತೆ ಕಲ್ಪಿಸಿಕೊಂಡು ಹಿಗ್ಗಿದಳು. ಆದರೆ ಅವನ ಜೊತೆ ಹೊರಗೆ ಬಂದಾಗಲೇ ಅವಳಿಗೆ ತಿಳಿದಿದ್ದು ಅವನು ತನ್ನನ್ನು ಕರೆದುಕೊಂಡು ಬಂದಿದ್ದು ಸೈಕಾಲಜಿಸ್ಟ್ ಬಳಿಗೆ ಎಂದು. ಡಾಕ್ಟರ್ ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸುವಾಗ ಅವಳಿಗೆ ತಾನು ತನ್ನ ಅನೇಕ ಕಥೆಗಳಲ್ಲಿ ಇಂತಹ ಸಮಸ್ಯೆಗಳನ್ನೆಲ್ಲ ಬಹಳ ಸುಲಭವಾಗಿ ಬಗೆಹರಿಸಿದ್ದೇನೆ ಎಂದೆನಿಸಿತು.


ಅವರ ಮಾತುಗಳಿಗೆ ಕಿವಿ ಕೊಡುವಾಗ' ಇಂತಹ ವಿಚಾರದ ಬಗ್ಗೆ ಅವರಿಗಿಂತಲೂ ಹೆಚ್ಚು ಅನುಭವ ತನಗಿದೆ ' ಎಂದು ತೋರಿತು ಅವಳಿಗೆ. ತನ್ನ ಕಥೆಯ ಬಗ್ಗೆ ಅವರ ಬಳಿ ಮಾತನಾಡಲೇ ಇಲ್ಲ ಮಾಧುರ್ಯ. ಅದನ್ನು ಅವರು ಹುಚ್ಚು ಎಂದು ಭಾವಿಸಿದರೆ ಎಂಬ ಆತಂಕ ಅವಳಿಗಿತ್ತು. ಡಾಕ್ಟರ್ ಇಬ್ಬರಿಗೂ ಒಂದಿಷ್ಟು ಉಪದೇಶಗಳನ್ನು ನೀಡಿ ಒಂದಿಷ್ಟು ಮಾತ್ರೆಗಳ ಹೆಸರುಗಳನ್ನು ಚೀಟಿಯಲ್ಲಿ ಬರೆದು ಕಳುಹಿಸಿದರು.


ಜೀವನ್ ತಂದುಕೊಟ್ಟ ಮಾತ್ರೆಗಳನ್ನು ತಿನ್ನಬೇಕೆಂದು ಅವಳಿಗೆ ಅನಿಸಲೇ ಇಲ್ಲ. ನೀಲಿ ಕಂಗಳ ಯುವತಿಯೊಬ್ಬಳಿಗೆ ಕಥೆ ಬರೆಯುವ ಹಂಬಲ ಉದಿಸಿದಾಗ ಅವಳ ಗಂಡನ ಪ್ರೋತ್ಸಾಹದ ಬದಲು ಹುಚ್ಚಿ ಎಂಬ ಪಟ್ಟ ದೊರಕಿದ ಕಥಾ ವಸ್ತುವನ್ನು ಆಯ್ಕೆ ಮಾಡಿಕೊಂಡು ಮತ್ತೊಮ್ಮೆ ಕತೆ ಬರೆಯಲು ಹೊರಟಳು ಮಾಧುರ್ಯ. ಅದು ಪೂರ್ಣವಾಗದೇ ಮತ್ತೊಂದು ಗರ್ಭಪಾತವಾಗಿತ್ತು.


ಆದರೆ ತನ್ನ ಗರ್ಭದಲ್ಲಿ ಹೊಸ ಕುಡಿಯೊಂದು ಚಿಗುರೊಡೆಯುವ ಸಂಭ್ರಮವನ್ನು ಅವಳು ಕೆಲವೇ ದಿನಗಳಲ್ಲಿ ಅರಿತುಕೊಂಡಳು. ಟೆಸ್ಟ್ ಮಾಡಿದ ತಕ್ಷಣವೇ ಆ ವಿಚಾರವನ್ನು ಜೀವನ್ ಗೆ ಫೋನ್ ಮಾಡಿ ತಿಳಿಸಿದಾಗ ಒಂದಿಷ್ಟು ಸಿಹಿ ತಿಂಡಿಗಳೊಂದಿಗೆ ಆ ಕ್ಷಣವೇ ಓಡೋಡಿ ಬಂದಿದ್ದ. 


ಸಿಹಿತಿಂಡಿಗಳನ್ನು ಹಿಡಿದುಕೊಂಡು ಬಂದ ಅವನ ಕೈಯಲ್ಲಿ ಇನ್ನೊಂದು ದೊಡ್ಡದಾದ ಕಟ್ಟು ಇತ್ತು." ಇದನ್ನು ನೀನೇ ಬಿಡಿಸಿ ನೋಡು " ಎಂದು ಅವಳತ್ತ ಚಾಚಿದ. ಕುತೂಹಲದಿಂದ ಆ ಕಟ್ಟನ್ನು ಬಿಡಿಸಿದ ಅವಳ ಕಂಗಳು ಆಶ್ಚರ್ಯ ಹಾಗೂ ಸಂತಸದಿಂದ ಅರಳಿದವು.


' ಜೀವನ ಮಾಧುರ್ಯ ' ಎಂಬ ಶೀರ್ಷಿಕೆಯೊಂದಿಗೆ ಅವಳು ಈ ಹಿಂದೆ ಬರೆದ 25 ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿತ್ತು. ತನ್ನ ಇಷ್ಟದ ಕಥೆಗಳನ್ನೆಲ್ಲ ಆಯ್ಕೆ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ ಪತಿಯ ಬಗ್ಗೆ ಅವಳ ಮನದಲ್ಲಿ ಹೆಮ್ಮೆಯ ಭಾವ ಮೂಡಿತು.  ಸಂತಸದಿಂದ ಅವನನ್ನಪ್ಪಿ ಅತ್ತಳು ಅವಳು. " ಅಳಬೇಡ ಚಿನ್ನಾ..ಪುಸ್ತಕದ ಶೀರ್ಷಿಕೆ ಇಷ್ಟವಾಯಿತೇ ?" ಎಂದು ಜೀವನ್ ಕೇಳಿದಾಗ ಮಾಧುರ್ಯಳ ಕಂಗಳು ಸಂತಸದಿಂದ ಮತ್ತಷ್ಟು ತುಂಬಿ ಬಂದವು. ಆ ಕ್ಷಣದಿಂದ ಮಾಧುರ್ಯ ಎಂಬ ಲೇಖಕಿಯ ಪುನರ್ಜನ್ಮ ಆರಂಭವಾಗಿತ್ತು.


ಪತಿಯ ಅಕ್ಕರೆಯ ಪ್ರೋತ್ಸಾಹದಲ್ಲಿ ಜೀವನ ಮಾಧುರ್ಯದ ಸವಿ ಕ್ಷಣಗಳನ್ನು ಸವಿಯುವಾಗ ಬದುಕು ಬದಲಾದಂತೆ ತೋರಿತು ಅವಳಿಗೆ.  ತನ್ನ ಮನದ ಭಾವಗಳನ್ನು ಲೇಖನಿಯ ಮೂಲಕ ಭಟ್ಟಿ ಇಳಿಸಿ ಹೊಸ ಹೊಸ ಕಥೆಗಳು ಜನ್ಮ ತಾಳಿದಾಗ ಅವಳ ಮನದ ಸಂತಸ ಇಮ್ಮಡಿಯಾಯಿತು. ಅಪೂರ್ಣ ಕಥೆಗಳೆಲ್ಲ ಪೂರ್ಣ ರೂಪದಲ್ಲಿ ಸೃಷ್ಟಿಯಾಗಿ ಒಡಲಿನಿಂದ ಪುಟ್ಟ ಕಂದ ಧರೆಗಿಳಿಯುವ ಹೊತ್ತಿನಲ್ಲಿ ಮಾಧುರ್ಯಳ ಮತ್ತೊಂದು ಕೃತಿ ಬಿಡುಗಡೆಗೆ ಸಿದ್ಧವಾಗಿತ್ತು.



-ಪ್ರಸನ್ನಾ ವಿ.ಚೆಕ್ಕೆಮನೆ

  ಕಾಸರಗೋಡು ಜಿಲ್ಲೆ

 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top