ಸ್ಕಿಲ್ ಇಂಡಿಯಾದಲ್ಲಿ ದ.ಕ.ದ ನೂರಾರು ಯುವಕರಿಗೆ ತರಬೇತಿ

Upayuktha
0

 ಸಂಸದ ಕ್ಯಾ. ಬ್ರಿಜೇಶ್ ಚೌಟರ ಪ್ರಶ್ನೆಗೆ ಲೋಕಸಭೆಯಲ್ಲಿ ಉತ್ತರ




ನವದೆಹಲಿ: ಮಂಗಳೂರಿನಲ್ಲಿ ಯುವಕರಿಗೆ ನೀಡಲಾಗುತ್ತಿರುವ ಪ್ರಾದೇಶಿಕ ಪೂರಕ ಕೌಶಲ್ಯಾಭಿವೃದ್ಧಿ ತರಬೇತಿಯ ಕುರಿತು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ 'ಕೌಶಲ್ಯ ಭಾರತ ಕಾರ್ಯಕ್ರಮದಡಿ ದಕ್ಷಿಣ ಕನ್ನಡದಲ್ಲಿ ನೂರಾರು ಯುವಕರಿಗೆ ತರಬೇತಿ ನೀಡುತ್ತಿದ್ದು, ಅವರನ್ನು ವಲಯಗಳಾದ್ಯಂತ ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುತ್ತಿದೆ ಎಂದು ತಿಳಿಸಿದೆ.


ಲೋಕಸಭೆಯಲ್ಲಿ ಸಂಸದರು  ಚುಕ್ಕೆ ಗುರುತಿಲ್ಲದ ಕೇಳಿದ ಪ್ರಶ್ನೆಗೆ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ರಾಜ್ಯ ಸಚಿವರಾದ ಜಯಂತ್ ಚೌಧರಿ ಅವರು ಸೋಮವಾರ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (PMKVY 4.0), ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಚಾರ ಯೋಜನೆ (NAPS), ಮತ್ತು ಜನ ಶಿಕ್ಷಣ ಸಂಸ್ಥಾನ (JSS) ಗೆ ಬೆಂಬಲ ನೀಡುವ ಯೋಜನೆಯನ್ನು ಒಳಗೊಂಡಿರುವ ಕೌಶಲ್ಯ ಭಾರತ ಕಾರ್ಯಕ್ರಮವು 2022-23ನೇ ಹಣಕಾಸು ವರ್ಷದಿಂದ ಮಂಗಳೂರು ನಗರವನ್ನು ಒಳಗೊಂಡ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಭಾರತದಾದ್ಯಂತ ಪ್ರಾದೇಶಿಕ ಅಗತ್ಯಗಳಿಗೆ ಅನುಗುಣವಾಗಿ ಉದ್ಯಮ-ಸಂಬಂಧಿತ ಕೌಶಲ್ಯಗಳೊಂದಿಗೆ ಯುವಕರನ್ನು ಸಜ್ಜುಗೊಳಿಸುತ್ತಿದೆ. 


ಪಿಎಂಕೆವಿಐ 4.0 ಕಾರ್ಯಕ್ರಮದಡಿ ದಕ್ಷಿಣ ಕನ್ನಡದಲ್ಲಿ ಮೀನುಗಾರಿಕೆ ಹಾಗೂ ಸೀಫುಡ್ ಸಂಸ್ಕರಣೆ ಸಂಬಂಧ 570 ಮಂದಿ ತಂತ್ರಜ್ಞರಿಗೆ ಹಾಗೂ ಪ್ರವಾಸೋದ್ಯಮ ಮತ್ತು ಆತಿಥ್ಯಕ್ಕೆ ಸಂಬಂಧಿಸಿದಂತೆ 636 ಮಂದಿಗೆ ತರಬೇತಿ ನೀಡಲಾಗಿದೆ. ಜತೆಗೆ  ಶಿಪ್ ಬಿಲ್ಡಿಂಗ್ ಹಾಗೂ ಸಮುದ್ರ ಪ್ರವಾಸೋದ್ಯಮದ ಬಗ್ಗೆಯೂ ತರಬೇತಿ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.


ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಪಿಎಂಕೆವಿವೈ 4.0 ಯೋಜನೆಯಡಿ ದಕ್ಷಿಣ ಕನ್ನಡದಲ್ಲಿ 14 ತರಬೇತಿ ಸೆಂಟರ್ ಗಳನ್ನು ಪಟ್ಟಿ ಮಾಡಲಾಗಿದೆ. ಆ ಮೂಲಕ ಏರೋಸ್ಪೇಸ್ ಹಾಗೂ ವಿಮಾನಯಾನದ ಬಗ್ಗೆ 90 ಮಂದಿ ಹಾಗೂ 191 ಮಂದಿಯನ್ನು ಕೈಗಾರಿಕಾ ತರಬೇತುಗೊಳಿಸಲಾಗಿದೆ. 


ಇನ್ನು ಐಟಿಐ ನೆಟ್ವರ್ಕ್ ಅನ್ನು ಬಲಪಡಿಸುವುದಕ್ಕೆ ತರಬೇತಿ ಮಹಾ ನಿರ್ದೇಶನಾಲಯ(ಡಿಜಿಟಿ) ಮೂಲಕ ಇಂಧನ, ಎಲೆಕ್ಟ್ರಾನಿಕ್ಸ್, ಬಂಡವಾಳ ಸರಕು ಮತ್ತು ಉತ್ಪಾದನೆ, ಕೈಗಾರಿಕಾ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಎರಡು ಸರ್ಕಾರಿ ಹಾಗೂ 10 ಖಾಸಗಿ ಸಂಸ್ಥೆಗಳಿವೆ. ಆ ಮೂಲಕ ನಾನಾ ಕ್ಷೇತ್ರಗಳಲ್ಲಿ ವಿಪುಲ ಉದ್ಯೋಗಾವಕಾಶ ಸೃಷ್ಟಿಸುವ ನುರಿತ ಮಾನವ ಸಂಪತ್ತನ್ನು ತಯಾರು ಮಾಡಲಾಗುತ್ತಿದೆ ಎಂದು ಸಚಿವಾಲಯ ತನ್ನ ಉತ್ತರದಲ್ಲಿ ತಿಳಿಸಿದೆ.


ಯುವಕರಿಗೆ ಔದ್ಯೋಗಿಕವಾಗಿ ಉಜ್ವಲ ಭವಿಷ್ಯವನ್ನು ರೂಪಿಸುವುದಕ್ಕೆ ಶೈಕ್ಷಣಿಕವಾದ ಕಲಿಕೆ ಜತೆಗೆ ಪ್ರಬಲವಾದ ವೃತ್ತಿಪರ ತರಬೇತಿಯನ್ನು ಸಂಯೋಜನೆಗೊಳಿಸಬೇಕು. ಇದರಿಂದ ಕೈಗಾರಿಕೆಗಳಿಗೂ ತಮ್ಮ ನಿರೀಕ್ಷೆ-ಆದ್ಯತೆಗೆ ಅನುಕೂಲವಾಗುವ ಅಭ್ಯರ್ಥಿಗಳನ್ನು ನೇಮಕಗೊಳಿಸುವುದಕ್ಕೆ ಅನುಕೂಲವಾಗುತ್ತದೆ. ತಂತ್ರಜ್ಞಾನದಲ್ಲಿ ವೇಗವಾಗಿ ಆಗುತ್ತಿರುವ ಬದಲಾವಣೆಯಿಂದ ಕೌಶಲ್ಯಾಧಾರಿತ ಅಭ್ಯರ್ಥಿಗಳನ್ನು ತಯಾರಿಸುವುದು ಕೂಡ ಒಂದು ದೊಡ್ಡ ಸವಾಲಾಗಿದೆ. 


ಹೀಗಿರುವಾಗ, ದಕ್ಷಿಣ ಕನ್ನಡದ ಯುವ ಸಮುದಾಯಕ್ಕೆ ನಾವಿನ್ಯ ತಂತ್ರಜ್ಞಾನ ಆವಿಷ್ಕಾರಗಳನ್ನು ಆಧರಿಸಿ ದೊರೆಯುವ ಕೌಶಲ್ಯಾಧಾರಿತ ತರಬೇತಿಯು ಸಾಗರೋದ್ಯಮ, ಪ್ರವಾಸೋದ್ಯಮ, ಉತ್ಪಾದನಾ ವಲಯಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶವನ್ನು ಸೃಷ್ಟಿಸಲಿದೆ. ಹೀಗಾಗಿ, ಕೇಂದ್ರ ಸರ್ಕಾರದ ಈ ರೀತಿ ಕೌಶಲಾಭಿವೃದ್ಧಿ ಯೋಜನೆ-ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಸದನಾಗಿ ಜಿಲ್ಲೆಯಲ್ಲಿ ಹೆಚ್ಚಿನ ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತೇನೆ ಎಂದು ಕ್ಯಾ. ಬ್ರಿಜೇಶ್ ಚೌಟ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top