ಹಾಸನ: ಆಧುನಿಕ ಯುಗದಲ್ಲಿ ಬದುಕುತ್ತಿರುವ ನಾವು ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅನಿವಾರ್ಯವಾಗಿದೆ. ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಸೋಲು ಮತ್ತು ಗೆಲುವುಗಳ ಅನುಭವವನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಕೆ.ಜೆ.ವಿ.ಎಸ್. ವರ್ಷದಲ್ಲಿ ಎರಡು ಬಾರಿ ವಿದ್ಯಾರ್ಥಿಗಳಿಗೆ ಆನ್ ಲೈನ್ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡುತ್ತಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಈ. ಬಸವರಾಜು ಹೇಳಿದರು.
ತಾಲ್ಲೂಕಿನ ಕಂದಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಕಳೆದ ಫೆಬ್ರವರಿ ತಿಂಗಳಲ್ಲಿ ಹಮ್ಮಿಕೊಂಡಿದ್ದ ಆನ್ ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬಹುಮಾನ ವಿತರಣೆ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರಶ್ನಿಸುವ ಮೂಲಕ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ ಸಂಶೋಧನೆ ಹಾದಿ ಹಿಡಿದು ಸಾಗಬೇಕು. ಆಗ ಜಗತ್ತಿಗೆ ಅಗತ್ಯವಾದ ವಿನೂತನವಾದ ಕೊಡುಗೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದರು.
ಶಿಕ್ಷಕರಾದ ಕೆ.ಎನ್. ಚಿದಾನಂದ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಜ್ಞಾನದ ಕ್ರಮಬದ್ಧವಾದ ಅಧ್ಯಯನವೇ ವಿಜ್ಞಾನ. ವಿಜ್ಞಾನವು ವಿಶ್ವದ ಸರ್ವ ಶ್ರೇಷ್ಠ ಜ್ಞಾನಾಂಶಗಳ ಗುಚ್ಛವಾಗಿದೆ. ಅಸಂಖ್ಯಾತ ವಿಸ್ಮಯಗಳ ಲೋಕವೂ ವಿಜ್ಞಾನವೇ ಆಗಿದೆ. ಸಾರ್ವತ್ರಿಕ ಸತ್ಯಾಂಶಗಳನ್ನು ಮಾತ್ರ ಒಪ್ಪುತ್ತದೆ ಮತ್ತು ಹೇಳುತ್ತದೆ.
ಪೂರ್ವಾಗ್ರಹಪೀಡಿತ ಭಾವನೆಗಳಿಂದ ವಿಜ್ಞಾನವು ದೂರವಿರುತ್ತದೆ. ಅನ್ವೇಷಣಾ ಮನೋಭಾವ ಬೆಳೆಸುವ ಮೂಲಕ ಸತ್ಯಾಸತ್ಯತೆಗಳ ಸಂಶೋಧನೆಗೆ ದಾರಿ ಮಾಡಿಕೊಡುತ್ತದೆ. ವಿಜ್ಞಾನವು ನಿಖರತೆ, ನಿರ್ದಿಷ್ಟತೆ ಮತ್ತು ಸ್ಪಷ್ಟತೆಗಳನ್ನು ಮೈಗೂಡಿಸಿಕೊಂಡಿರುತ್ತದೆ ಎಂದು ಹೇಳಿದರು. ಮುಂದುವರಿದು ವಿಜ್ಞಾನದ ಬೆಳವಣಿಗೆಗೆ ಇವರ ಕೊಡುಗೆ ಅಪಾರ. ಪ್ರತಿ ವರ್ಷ ಫೆಬ್ರವರಿ 28 ನ್ನು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.
1928 ರ ಫೆಬ್ರವರಿ 28 ರಂದು ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿವಿ ರಾಮನ್ ಅವರು ರಾಮನ್ ಪರಿಣಾಮವನ್ನು ಕಂಡುಹಿಡಿದುದನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಫೆಬ್ರವರಿ 28 ರಂದು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳುತ್ತಾ ಸರ್. ಸಿ.ವಿ.ರಾಮನ್ ರವರ ಜೀವನ ವೃತ್ತಾಂತವನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ "ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರನ್ನು ಸಬಲೀಕರಣಗೊಳಿಸುವುದು" ಎಂಬ ವೈಚಾರಿಕ ಹಾಗೂ ಮಹತ್ವಪೂರ್ಣ ಘೋಷವಾಕ್ಯದೊಂದಿಗೆ 2025ರ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ ಅಲ್ಲದೆ ನಿತ್ಯ ಜೀವನದಲ್ಲಿ ವಿಜ್ಞಾನವು ಹಾಸುಹೊಕ್ಕಾಗಿದೆ ಎಂದು ಹೇಳಿದರು.
ಮೌಢ್ಯತೆ, ಕಂದಾಚಾರ, ಅಂಧಕಾರಗಳನ್ನು ಹೋಗಲಾಡಿಸುವ ವಿಶೇಷ ಜ್ಞಾನದ ಬೆಳಕು ವಿಜ್ಞಾನ. ವಿಜ್ಞಾನದ ಅರಿವಿಲ್ಲದೆ ಹೋದರೆ ಜ್ಞಾನವು ಪೂರ್ಣವಾಗುವುದಿಲ್ಲ. ಭಾರತದಲ್ಲಿ ವಿಜ್ಞಾನದ ಹುಟ್ಟು ಇಂದು ನಿನ್ನೆಯದಲ್ಲ. ಯಾವಾಗ ಸಿಂಧೂ ಬಯಲಿನ ಸಂಸ್ಕೃತಿ ಹುಟ್ಟಿಕೊಂಡಿತೋ ಅಂದೇ ವಿಜ್ಞಾನದ ಪ್ರಯೋಗ ಯಶಸ್ವಿಯಾಗಿ ನಡೆದಿತ್ತು. ಪ್ರಪಂಚದಲ್ಲಿ ಬೆಂಕಿ ಮತ್ತು ಚಕ್ರದ ಹುಟ್ಟು ಎಂದು ಮೊದಲಾಯಿತೋ ಅಂದಿನ ದಿನವೇ ವಿಜ್ಞಾನ ಜನ್ಮತಳೆಯಿತು ಎಂದು ಪ್ರಸ್ತಾಪಿಸಿದರು.
ಮುಖ್ಯ ಶಿಕ್ಷಕಿ ಪ್ರಸವಿ ಯವರು ಮಾತನಾಡಿ ಕುವೆಂಪು ರವರ ವಿಚಾರಕ್ರಾಂತಿಗೆ ಆಹ್ವಾನ ಮತ್ತು ವೈಜ್ಞಾನಿಕ ಚಿಂತನಗಳ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದುವ ಮೂಲಕ ಹೊಸ ಆಲೋಚನೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಯಾವುದನ್ನು ಪ್ರಶ್ನಿಸದೇ ಒಪ್ಪಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು. ಹೊಳೆನರಸೀಪುರ ಕೆ.ಜೆ.ವಿ.ಎಸ್. ತಾಲ್ಲೂಕು ಘಟಕದ ಮಂಜುನಾಥ್ ರವರು ಎಲ್ಲರನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲಾ ಕಾರ್ಯದರ್ಶಿಯವರಾದ ವಿಶ್ವನಾಥ. ಡಿ ರವರು . ವೈಜ್ಞಾನಿಕ ಮನೋಭಾವನೆಗಳನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಈ ರೀತಿಯ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಮತ್ತು ಕಾರ್ಯಕ್ರವನ್ನು ಸುಸೂತ್ರವಾಗಿ ಆಯೋಜಿಸಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಆನ್ ಲೈನ್ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ತೇಜಸ್ವಿನಿ ಸಿ.ಸಿ. ಒಂಭತ್ತನೇ ತರಗತಿ ವಿಜಯ ಶಾಲೆ ಹಾಸನ ಇವರು ಪ್ರಥಮ ಬಹುಮಾನವನ್ನು ಗಳಿಸಿದ್ದು ಮತ್ತು ಪೃಥ್ವಿ ಹೆಚ್.ಟಿ. ಎಂಟನೇ ತರಗತಿ ಪ್ರಿಯದರ್ಶಿನಿ ಶಾಲೆ ಹೊಳೆನರಸೀಪುರ ಇವರು ದ್ವಿತೀಯ ಬಹುಮಾನಗಳನ್ನು ಪಡೆದಿದ್ದು ಇಬ್ಬರಿಗೂ ನಗದು ರೂಪದಲ್ಲಿ ಬಹುಮಾನ ನೀಡಿ ಸನ್ಮಾನ ಮಾಡಿ ಅಭಿನಂದಿಸಲಾಯಿತು.
ರಾಜ್ಯಮಟ್ಟದ ಸಮಾಧಾನಕರ ಬಹುಮಾನ ಪಡೆದ ವಿದ್ಯಾರ್ಥಿಗಳಾದ ಕು.ವರುಣ್ ಗೌಡ. ಎಂ.ಡಿ. ಎಂಟನೇ ತರಗತಿ ಪ್ರಿಯದರ್ಶಿನಿ ಶಾಲೆ ಹೊಳೆನರಸೀಪುರ ಮಹಮ್ಮದ್ ಫೈಜನ್ ಒಂಭತ್ತನೇ ತರಗತಿ ವೆಂಕಟೇಶ್ವರ ಪ್ರೌಢಶಾಲೆ ಹೊಳೆನರಸೀಪುರ ಇವರಿಗೆ ನಗದು ಬಹುಮಾನವನ್ನು ವಿತರಿಸಿ ರಾಜ್ಯಮಟ್ಟದ ಸಮಾಧಾನಕರ ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಮಟ್ಟದಲ್ಲಿ ಸಮಾಧಾನಕರ ಬಹುಮಾನ ಪಡೆದ ನಾಲ್ವರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು. ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜಯಪ್ರಕಾಶ್, ವಿಜೇತ ವಿದ್ಯಾರ್ಥಿಗಳ ಶಿಕ್ಷಕರು ಮತ್ತು ಪೋಷಕರು ಮತ್ತು ಮೊರಾರ್ಜಿ ವಸತಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ