ಮಾರ್ಚ್ ತಿಂಗಳು ಬಂದಿತೆಂದರೆ ಪರೀಕ್ಷೆಗಳ ಸುಗ್ಗಿ ಸಮಯ. ಪರೀಕ್ಷೆ ಎಂಬ ಪದವೇ ಎಲ್ಲರಲ್ಲೂ ಒಂದು ಚಿಕ್ಕ ರೀತಿಯ ಭಯವನ್ನು, ಇನ್ನೂ ಕೆಲವರಿಗೆ ದೊಡ್ಡ ಮಟ್ಟಿಗೆ ಭಯ ಹುಟ್ಟು ಹಾಕುತ್ತದೆ. ಅಂತಹ ಪವರ್ ಪರೀಕ್ಷೆಗಿದೆ. ಪ್ರೆಗ್ನನ್ಸಿ ಪರೀಕ್ಷೆ ಪಾಸಿಟಿವ್ ಬರಲಿ ಎಂದು ಹಂಬಲಿಸುವ ನಾವು ಇನ್ಯಾವುದೇ ರೋಗ ಸಂಬಂಧಿತ ಪರೀಕ್ಷೆಗಳಲ್ಲಿ ನೆಗೆಟಿವ್ ಬರಲಿ ಎಂದು ಆಶಿಸುತ್ತೇವೆ. ಇನ್ನೂ ಗಂಡು ಹೆಣ್ಣು ಇಷ್ಟಪಟ್ಟಿದ್ದರೆ ವಧು ಪರೀಕ್ಷೆ ಹಣ್ಣಾಗಲಿ ಎಂದುಕೊಂಡರೆ, ಇಬ್ಬರಲ್ಲಿ ಒಬ್ಬರಿಗೆ ಇಷ್ಟವಿಲ್ಲದಿದ್ದರೂ ಕಾಯಿಯಾಗಿಯೇ ಉಳಿಯಲಿ ಎಂದು ಪ್ರಾರ್ಥಿಸುತ್ತೇವೆ.
ಆದರೆ ನಾನಿಂದು ಹೇಳಲು ಹೊರಟಿರುವುದು ವಿದ್ಯಾರ್ಥಿ ಜೀವನದ ಪರೀಕ್ಷೆಗಳ ಕುರಿತು. ಪುಟ್ಟ ಮಕ್ಕಳಿಂದ ಹಿಡಿದು ಡಿಗ್ರಿ ತನಕ, ಇಲ್ಲದಿದ್ದರೆ ಇನ್ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಾಗ ಕಾಡುತ್ತದಲ್ಲ ಫೀವರ್, ಆ ಫೀವರ್ ಗೆ ಕಾರಣವಾಗುವ ಪರೀಕ್ಷೆಯ ಬಗ್ಗೆ..!
ಈ ಪರೀಕ್ಷೆಯ ಫಿಯರ್ ಒಂದು ರೀತಿಯಲ್ಲಿ ಒಳ್ಳೆಯದೇ. ಅದು ಒಳ್ಳೆಯ ಫಿಯರ್ ಆಗಿರಬೇಕೇ ಹೊರತು, ಫೀವರ್ ಆಗಿ ಚೇಂಜ್ ಆಗಬಾರದು ಅಷ್ಟೇ..! ಏಕೆಂದರೆ ಯಾವುದೇ ವಿಷಯದಲ್ಲಿ ಗೆಲ್ಲಬೇಕೆಂದರೆ, ಅದರ ಬಗ್ಗೆ ಒಂದು ಮಟ್ಟಿಗಿನ ಭಯ ಇರಬೇಕು. ಭಯವಿಲ್ಲದಿದ್ದರೆ ನಾವು ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಸೀರಿಯಸ್ ಆಗಿಲ್ಲವೆಂದರೆ ಸೋಲು ಕಟ್ಟಿಟ್ಟಬುತ್ತಿ.
✅ ಪೋಷಕರಿಗೆ ಕೆಲವು ಸಲಹೆಗಳು
🔷 ಈಗಿನ ಪೋಷಕರು ನೆರೆಹೊರೆಯವರ ಮತ್ತು ಸಂಬಂಧಿಕರ ಮಕ್ಕಳೊಂದಿಗೆ ತಮ್ಮ ಮಕ್ಕಳ ಪ್ರಗತಿಯನ್ನು ಹೋಲಿಕೆ ಮಾಡುವುದು ಸರಿಯಲ್ಲ. ಪ್ರತಿಯೊಂದು ಮಗುವೂ ಅದರದೇ ಆದ ವೈಶಿಷ್ಟ್ಯಗಳನ್ನು ತುಂಬಿಕೊಂಡಿರುತ್ತದೆ. ಪರೀಕ್ಷೆಯಲ್ಲಿ ದೊರೆತ ಮಾರ್ಕ್ಸ್ ನಿಂದ ಹೋಲಿಸಿ, ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ತಪ್ಪಾಗುತ್ತದೆ.
🔷 ಹಾಗಂತ ಓದುವುದರ ಬಗ್ಗೆ ಕೇಳಲೇಬೇಡಿ ಎಂದಲ್ಲ. ಕೇಳಿ, ವಿಚಾರಿಸಿ ಆದರೆ ಅದು ಆರೋಗ್ಯಕರವಾಗಿರಲಿ. ಯಾವುದನ್ನೂ ಅತಿಯಾಗಿ "ನೀನು ಮಾಡಲೇಬೇಕು" ಎಂದು ಹೇರಬೇಡಿ.
🔷 ಸ್ನೇಹಿತರಂತೆ ವಿಚಾರಿಸಿ. ಅವರ ವ್ಯಾಸಂಗದ ಬಗ್ಗೆ ಗಮನಹರಿಸಿ. ಇಷ್ಟ ಕಷ್ಟಗಳನ್ನು ತಿಳಿದುಕೊಂಡು ಆ ನಿಟ್ಟಿನಲ್ಲಿ ನಿಮ್ಮ ಮಕ್ಕಳನ್ನು ಬೆಂಬಲಿಸಿ.
🔷 ಪರೀಕ್ಷೆ ಬಂತೆಂದು ನಿಮ್ಮ ಮನೆಯಲ್ಲಿ ಕರ್ಫ್ಯೂ ಜಾರಿಗೊಳಿಸಬೇಡಿ. ಮನೆಯಲ್ಲಿ ಮಕ್ಕಳಿಗೆ ಓದುವ ಒಳ್ಳೆಯ ವಾತಾವರಣವನ್ನು ಕಲ್ಪಿಸಿ.
🔷 ಈ ಸಮಯದಲ್ಲಿ ಹೊರಗೆ ಸುತ್ತಾಡಬೇಡಿ. ಪರೀಕ್ಷೆ ಮುಗಿದ ನಂತರ ನಿಮ್ಮ ಟ್ರಿಪ್ ಗಳಿಗೆ ಜಾಗವಿರಲಿ. ನೆಂಟರಿಷ್ಟರ ಬರುವಿಕೆ, ಫಂಕ್ಷನ್ ಗಳನ್ನು ಅಟೆಂಡ್ ಮಾಡುವುದನ್ನು ಮುಂದೂಡಿ.
🔷 ಆರೋಗ್ಯಭರಿತವಾದ ಅಡುಗೆಗಳನ್ನು ಮಕ್ಕಳಿಗೆ ಮಾಡಿಕೊಡಿ. ಹಣ್ಣು ತರಕಾರಿಗಳು ಹೆಚ್ಚು ಬಳಸಿ. ಮಕ್ಕಳಿಗೆ ಓದುವಾಗ ನೀರನ್ನು ಆಗಾಗ ಕುಡಿಯುತ್ತಿರಬೇಕು ಎಂದು ಜ್ಞಾಪಿಸಿ.
🔷 ಪರೀಕ್ಷೆ ಶುರುವಾಗಲು ಕೌಂಟ್ ಡೌನ್ ದಿನಗಳನ್ನು ಎಣಿಸಲು ಪ್ರಾರಂಭಿಸಬೇಡಿ. ಅವುಗಳಿಗೆಲ್ಲ ಅರ್ಥವಿಲ್ಲ ಎನಿಸುತ್ತದೆ. ಏಕೆಂದರೆ ಹತ್ತನೇ ತರಗತಿಯ ನಂತರ ಪಿಯುಸಿ, ನಂತರ ಡಿಗ್ರಿ, ನಂತರ ಸ್ಪರ್ಧಾತ್ಮಕ ಪರೀಕ್ಷೆಗಳು ಹೀಗೆ ನಮ್ಮ ಜೀವನದಲ್ಲಿ ಒಂದಾದರೊಂದರ ಮೇಲೆ ಪರೀಕ್ಷೆಗಳು ಬರುತ್ತಲೇ ಇರುತ್ತವೆ..!
✅ ಮಕ್ಕಳಿಗೆ ಕೆಲವು ಸಲಹೆಗಳು
🔷 ಯಾವುದೇ ವಿಷಯವನ್ನು ಇಷ್ಟಪಟ್ಟು ಓದಿ. ಓದಲು ಕಷ್ಟವಾಗುತ್ತಿದೆ ಎಂದರೆ, ಸ್ವಲ್ಪ ಹೊತ್ತು ಬ್ರೇಕ್ ತೆಗೆದುಕೊಳ್ಳಿ. ಒಂದೇ ಜಾಗದಲ್ಲಿ ಕುಳಿತು ಓದುತ್ತಿದ್ದರೆ, ನಿದ್ದೆ ಬರುತ್ತದೆ. ಪೂರ್ತಿ ಒಂದೇ ವಿಷಯವನ್ನು ಓದಬೇಡಿ, ಬೇಸರವೆನಿಸಿದಾಗ ಇನ್ನೊಂದು ಸಬ್ಜೆಕ್ಟ್ ಓದಿ.
🔷 ಆಗಾಗ ನೀರನ್ನು ಕುಡಿಯುತ್ತಿರಿ. ಹಸಿವಾದಾಗ ಲೈಟಾಗಿ ಏನಾದರೂ ತಿನ್ನಿ. ಹಸಿದುಕೊಂಡು ಓದುವ ಪ್ರಮೇಯ ಬೇಡ.
🔷 ಮೊಬೈಲ್ ವೀಕ್ಷಣೆಯಿಂದ ದೂರವಿರಿ. ಪರೀಕ್ಷೆಗಳ ಕುರಿತಾಗಿ ಸಂದೇಹಗಳಿದ್ದರೆ ಗೆಳೆಯರೊಂದಿಗೆ ಪರಿಹರಿಸಿಕೊಳ್ಳಿ. ಆದರೆ ಎಲ್ಲದಕ್ಕೂ ಟೈಮ್ ಲಿಮಿಟ್ ಇರಲಿ.
🔷 ಓದುವಾಗ ಹಾಳೆಗಳಲ್ಲಿ ಅಥವಾ ಒಂದು ಪುಸ್ತಕದಲ್ಲಿ ಮುಖ್ಯವಾದ ಪಾಯಿಂಟ್ ಗಳನ್ನು ಪಟ್ಟಿ ಮಾಡಿಟ್ಟುಕೊಳ್ಳಿ. ಜೋಪಾನವಾಗಿ ಅದನ್ನು ಫೈಲ್ ನಲ್ಲಿ ಇಟ್ಟು, ಪರೀಕ್ಷೆ ಹತ್ತಿರವಾದಾಗ ಆಗಾಗ ಅದನ್ನು ಪುನರಾವರ್ತಿಸಿ. ಪರೀಕ್ಷೆ ಬರೆಯುವಾಗ ನಿಮಗೆ ಬಹಳ ಉಪಯೋಗವಾಗುತ್ತದೆ.
🔷 ಯಾವುದೇ ವಿಷಯದ ಕುರಿತು ಹೆಚ್ಚು ಪಾಯಿಂಟ್ಸ್ ಗಳಿದ್ದರೆ, ಅದನ್ನು ನೆನಪಿಡಲು "ಫಸ್ಟ್ ಲೆಟರ್ ಕೋಡ್" ಬಳಸಿ. ಅಂದರೆ ನಾಲ್ಕು ಪಾಯಿಂಟ್ ಗಳಿದ್ದವು ಎಂದುಕೊಳ್ಳಿ. ಅವುಗಳ ಮೊದಲ ಅಕ್ಷರಗಳನ್ನು ಬರೆದಿಟ್ಟುಕೊಳ್ಳಿ. ಉದಾಹರಣೆ B A R S. ಉತ್ತರ ಬರೆಯುವಾಗ ಅದನ್ನು ವಿಸ್ತರಿಸಿ ಬರೆಯಿರಿ.
🔷 ಪರೀಕ್ಷೆ ಬರೆಯುವಾಗ ಮೊದಲು ಗೊತ್ತಿರುವ ಪ್ರಶ್ನೆಗಳಿಗೆ ಚೆನ್ನಾಗಿ ಉತ್ತರಿಸಿ. ಸ್ವಲ್ಪ ಗೊತ್ತಿರುವ ಪ್ರಶ್ನೆಗಳನ್ನು ತದನಂತರ ಉತ್ತರಿಸಿ. ಏನು ಗೊತ್ತೇ ಇಲ್ಲ ಎನ್ನುವ ಪ್ರಶ್ನೆಗಳನ್ನು ಕಡೆಗೆ ಉತ್ತರಿಸಿ. ಸಾಧ್ಯವಾದಷ್ಟು ಎಲ್ಲವನ್ನು ಅಟೆಂಡ್ ಮಾಡಿ.
🔷 ಒಳ್ಳೆಯ ಹ್ಯಾಂಡ್ ರೈಟಿಂಗ್ ನೊಂದಿಗೆ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ. ಗೊತ್ತಿರದ ಪ್ರಶ್ನೆಗಳಿಗೆ ಒಂದೆರಡು ಸಾಲಿನಲ್ಲಿ ಏನಾದರೂ ಬರೆಯಿರಿ. ಅದೃಷ್ಟ ಚೆನ್ನಾಗಿದ್ದರೆ ಅದಕ್ಕೂ ಮಾರ್ಕ್ಸ್ ಸಿಗುತ್ತದೆ..!
🔷 ಪರೀಕ್ಷೆ ಬರೆದ ನಂತರ ರಿಸಲ್ಟ್ ಬಂದಾಗ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಗೆದ್ದಾಗ ಅತಿಯಾಗಿ ಹಿಗ್ಗಲು ಬೇಡಿ, ಸೋತಾಗ ಕುಗ್ಗಲು ಬೇಡಿ. "ಇಟ್ಸ್ ಪಾರ್ಟ್ ಆಫ್ ಅವರ್ ಲೈಫ್" ಎಂದು ಭಾವಿಸಿ..!
ನೆನಪಿರಲಿ ವ್ಯಾಸಂಗದ ಘಟ್ಟದ ಪರೀಕ್ಷೆಗಳಲ್ಲಿ ಫೇಲ್ ಆಗಿಯೂ, ಜೀವನವೆಂಬ ಅಗ್ನಿ ಪರೀಕ್ಷೆಯಲ್ಲಿ ಗೆದ್ದು, ಜೀವನ ನಡೆಸುತ್ತಿರುವ ಎಷ್ಟೋ ಜೀವಂತ ಉದಾಹರಣೆಗಳು ನಮ್ಮ ಮುಂದಿವೆ. ಫೇಲ್ ಆದರೆ ಜೀವನ ಮುಗಿದಂತೆ ಎಂದುಕೊಳ್ಳಬೇಡಿ. ಆ ಕ್ಷಣದಲ್ಲಿ ಜೀವನ ಶೂನ್ಯ ಎನಿಸುತ್ತದೆ. ಆದರೆ ನಿಮಗೆ ನೀವೇ ಧೈರ್ಯ ತಂದುಕೊಳ್ಳಬೇಕು. ಪೋಷಕರೂ ಸಹ ಮಕ್ಕಳಿಗೆ ಬೆಂಗಾವಲಾಗಿ ನಿಲ್ಲಬೇಕು. ಯಾವುದೇ ಅಹಿತಕರ ಘಟನೆ ಅಥವಾ ಪ್ರಾಣ ಹಾನಿಗೆ ಅವಕಾಶ ಕೊಡಬಾರದು.
ಧೈರ್ಯ ತಂದುಕೊಡಬಲ್ಲ ಸ್ಪೂರ್ತಿದಾಯಕ ಪುಸ್ತಕಗಳನ್ನು, ದಿನಪತ್ರಿಕೆಯಲ್ಲಿ ಬರುವ ಲೇಖನಗಳನ್ನು ಪೋಷಕರು ಓದಿ, ಮಕ್ಕಳಿಗೂ ಓದುವಂತೆ ಪ್ರೇರೇಪಿಸಬೇಕು. ನಿಜಕ್ಕೂ ಇಂತಹ ಪುಸ್ತಕಗಳು ಓದುಗರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನೆನಪಿಡಿ "ಪರೀಕ್ಷೆಗಳು ಜೀವನದಲ್ಲಿ ಬರುವ ಒಂದು ಘಟ್ಟವಷ್ಟೇ. ಆದರೆ ಅದೇ ಜೀವನವಲ್ಲ..!"
- ಅಚಲ ಬಿ ಹೆನ್ಲಿ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ