- ಬಾಧಿತ ಹಳ್ಳಿಗಳಲ್ಲಿ ಗರ್ಭದಲ್ಲಿರುವ ಭ್ರೂಣಕ್ಕೆ ರೋಗ
- ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿಗೆ ಶೀಘ್ರ ದೂರು
- ಪ್ರತಿಮನೆಗೊಬ್ಬರು ಹಸಿರು ಸೈನಿಕರು ಬರಲು ಕರೆ.
- ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯಿಂದ ಆಂದೋಲನ
ಚಿತ್ರದುರ್ಗ: ರಾಜ್ಯದ ಗಣಿ ಬಾಧಿತ ಪ್ರದೇಶಗಳ ಜನರು ನಿತ್ಯ ಧೂಳಿನಿಂದಾಗುವ ಅಪಾಯಕಾರಿ ರೋಗಗಳಿಂದ ನರಳುತ್ತಿದ್ದು ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಅಭಿವೃದ್ಧಿ, ಅರಣ್ಯ ಅಭಿವೃದ್ಧಿ, ಪರಿಸರ ಪುನಃಶ್ಚೇತನ, ನೀರಾವರಿ, ಕುಡಿಯುವ ನೀರು, ನೈರ್ಮಲ್ಯ ಹಾಗೂ ಗ್ರಾಮೀಣ ರಸ್ತೆ, ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳ ವಿಶೇಷ ಅಭಿವೃದ್ಧಿ ಮಾಡಿ ಜನ ಜಾನುವಾರು ರಕ್ಷಣೆ, ಪ್ರಮುಖವಾಗಿ ಧೂಳಿನಿಂದ ತಾಯಿಗರ್ಭದಲ್ಲಿರುವ ಭ್ರೂಣಕ್ಕೆ ರೋಗಗಳು ಬರುತ್ತವೆ ಅದನ್ನು ರಕ್ಷಣೆ ಮಾಡಬೇಕೆಂದು ಆಗ್ರಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿಗಳನ್ನು ಭೇಟಿ ಮಾಡುತ್ತೇವೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್ ಹೇಳಿದರು.
ಹೊಳಲ್ಕೆರೆ ತಾಲೂಕಿನ ಸಾಸಲುಹಳ್ಳ ಗ್ರಾಮದಲ್ಲಿ ಹೊಳಲ್ಕೆರೆ ತಾಲ್ಲೂಕಿನ ಗಣಿಬಾದಿತ ಹಳ್ಳಿಗಳ ಮುಖಂಡರು ಮತ್ತು ಗ್ರಾಮಪಂಚಾಯಿತಿ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ತಾಲೂಕಿನ ಗಣಿಭಾದಿತ ಪ್ರದೇಶಗಳ ಜನರು ನಿತ್ಯ ಧೂಳಿನಿಂದಾಗುವ ಅಪಾಯಕಾರಿ ರೋಗಗಳಿಂದ ನರಳುತ್ತಿದ್ದು ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೆ ಹುಲ್ಲಿನ ಮೇಲೆ ಮೈನಿಂಗ್ ಧೂಳು ಬೀಳುವುದರಿಂದ ಜಾನುವಾರುಗಳಿಗೂ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಗಣಿಭಾದಿತ ಹಳ್ಳಿಗಳ ಜನರಿಗೆ ಸೂಕ್ತ ಸೌಲಭ್ಯಗಳ ಅಗತ್ಯ ಇದೆ. ಸರ್ಕಾರ ಗಣಿಗಾರಿಕೆ ಮಾಡುವ ಜಿಲ್ಲೆಯ ಆರ್ಥಿಕತೆಯನ್ನು ರಾಜ್ಯಕ್ಕೆ ಹಂಚಿಕೆ ಮಾಡುತ್ತದೆ. ಆದರೆ ದೀಪದ ಕೆಳಗೆ ಕತ್ತಲೇ ಎನ್ನುವಂತೆ ಮಾಡಿದೆ ಎಂದರು.
ಚಿತ್ರದುರ್ಗ, ಬಳ್ಳಾರಿ, ತುಮಕೂರು ಜಿಲ್ಲೆಯ ಗಣಿಗಾರಿಕೆಯ ಪ್ರದೇಶಗಳಲ್ಲಿ ಇದ್ದ ಅನೇಕ ವನ್ಯಜೀವಿಗಳು ಇಂದು ಸರ್ವನಾಶವಾಗಿವೆ. ಗಣಿ ಹೆಸರಿನಲ್ಲಿ ಅಕ್ರಮ ಅರಣ್ಯ ಲೂಟಿಗಿಳಿದ ಮೇಲೆ ಅಂತರ್ಜಲ ಕುಸಿದಿದೆ, ಕೋಟ್ಯಾಂತರ ಜೀವವೈವಿಧ್ಯಗಳ ನಾಶ, ಪರಿಸರದ ವಾತಾವರಣದ ವ್ಯತ್ಯಯದಿಂದ ಮಳೆ ಕೊರತೆ, ಬೆಳೆ ಅಭಾವ. ರೈತರ ಬದುಕು ಮೂರಾಬಟ್ಟೆಯಾಗಿದೆ. ಹಾಗಾಗಿ ಹೋರಾಟ ಅನಿವಾರ್ಯ ಮತ್ತು ಸರ್ಕಾರಕ್ಕೆ ಎಚ್ಚರಿಕೆ ಕೊಡುವುದು ಅನಿವಾರ್ಯ ಎಂದರು.
ಹೋರಾಟಗಾರ ಬಿ.ದುರ್ಗ ರಮೇಶ್ ಮಾತನಾಡಿ, ಕರ್ನಾಟಕ ರಾಜ್ಯದ ಗಣಿಭಾದಿತ ಹಳ್ಳಿಗಳಲ್ಲಿ ಇದೀಗ ಜೇನುನೊಣಗಳೇ ಇಲ್ಲ. ಜೇನ್ನೊಣಗಳಿಲ್ಲ ಎಂದಾಗ ಪರಾಗಸ್ಪರ್ಶ ಇಲ್ಲ. ಬೆಳೆ ಇಲ್ಲ, ರೈತರ ಬದುಕು ಇಲ್ಲ. ಮಾನವ ಸಂಕುಲನಾಶಕ್ಕೆ ತಯಾರಿ. ಹೌದು ನಮ್ಮ ಅಜ್ಜ ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆಯುತ್ತಿದ್ದರು, ನಮ್ಮ ಕಾಲಕ್ಕೆ ಅಡಕೆ ಹಾಕಿದ್ದೇವೆ. ದುರಂತ ಎಂದರೆ ಅಡಕೆ ಮೇಲೆ ಧೂಳು ಕುಳಿತು ಜೇನುನೊಣಗಳೇ ಬರುತ್ತಿಲ್ಲ. ಹಾಗಾಗಿ ಬೆಳೆ ಇಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಗಣಿಭಾದಿತ ಹಳ್ಳಿಗಳ ಹೋರಾಟ ಸಮಿತಿ ಕಟ್ಟುವ ಚಿಂತನೆ ನಡೆದಿದೆ. ಈ ಭಾಗದ ಅನೇಕರು ಲಾರಿಗಳನ್ನು ಮೈನಿಂಗ್ ಕೆಲಸಕ್ಕೆ ಬಿಟ್ಟು ದುಡಿಯುತ್ತಿರಬಹುದು, ಆದರೆ ಅವರ ಹೆಂಡತಿ ಮಕ್ಕಳು ಈ ಧೂಳಿನ ದುಷ್ಪರಿಣಾಮವನ್ನು ನಿತ್ಯ ಎದುರಿಸುವಂತಾಗಿದೆ ಎಂದರು.
ಗಣಿಗಾರಿಕೆ ಮುನ್ನ ನಮ್ಮ ಕಾಡುಗಳಲ್ಲಿ ಕರಡಿ, ಚಿರತೆ, ಕೊಂಡುಕುರಿ, ಜಿಂಕೆ, ಮೊಲ, ನವಿಲು, ಹಂದಿ ಸೇರಿದಂತೆ ಅನೇಕ ಪ್ರಾಣಿಗಳಿದ್ದವು ಎಲ್ಲವೂ ಇಲ್ಲವಾಗಿವೆ. ಕೊನೆಗೆ ಇಲಿ ಹೆಗ್ಗಣಗಳೇ ಇಲ್ಲವಾಗಿವೆ. ಇದಕ್ಕೆ ಯಾರು ಹೊಣೆ ಎಂದು ರಮೇಶ್ ಆಕ್ರೋಶ ಹೊರಹಾಕಿದರು.
ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿವೃತ್ತ ಅಧಿಕಾರಿ ರಾಮಸ್ವಾಮಿ, ನಿವೃತ್ತ ಇಂಜಿನಿಯರ್ ಗುರುಮೂರ್ತಿ, ಗಂಜಿಗಟ್ಟೆ ಮಹೇಶ್ವರಪ್ಪ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಟಿ. ರುದ್ರಮುನಿ, ಸಾಮಾಜಿಕ ಹೋರಾಟಗಾರ ರಮೇಶ್ ನಾಯ್ಕ ಗಂಜಿಗಟ್ಟೆ ಮಾತನಾಡಿದರು.
ಮದಕರಿಪುರ ರಂಗನಾಥ್, ಗ್ರಾಮ ಪಂಚಾಯತಿ ಸದಸ್ಯರಾದ ಪರಮೇಶ್ ಕಾಗಲಗೆರೆ, ಮುಖಂಡರಾದ ತಿಮ್ಮೇಶ್, ವಿಶ್ವನಾಥನಹಳ್ಳಿ ರಂಗಸ್ವಾಮಿ, ಮೋಹನ್ ಕುಮಾರಿ, ಅಜ್ಜಪ್ಪ ಕಲ್ಲವ್ವ ನಾಗತಿಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳ ಅನೇಕರು ಭಾಗವಹಿಸಿದ್ದರು.
ಗಣಿಭಾದಿತ ಹಳ್ಳಿಗಳ ಜನರ ಧ್ವನಿಯಾಗಿ ಇರುವ ಸಂಕಲ್ಪದೊಂದಿಗೆ ಪ್ರತಿ ಮನೆಗೊಬ್ಬರು ಹಸಿರು ಸೈನಿಕರು ಬರಲು ಕರೆನೀಡಲಾಯಿತು.
ಸಮಸ್ಯೆಗಳನ್ನು ಆಲಿಸಲು ಸ್ಥಳ ಪರಿಶೀಲನೆ ಮಾಡಲಿ.
ಸರ್ವೋಚ್ಚ ನ್ಯಾಯಾಲಯದಲ್ಲಿ ಗಣಿಗಾರಿಕೆ ಬಗ್ಗೆ ದಾಖಲಾಗಿರುವ ಕೇಸುಗಳಿಗೆ ಸಂಬಂಧಿಸಿದಂತೆ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆಯ ಪ್ರಭಾವಕ್ಕೊಳಗಾದ ವಲಯಗಳ ಸುಧಾರಣೆ ಹಾಗೂ ಪುನರ್ವಸತಿಗಾಗಿ ಗಣಿಗಾರಿಕೆಯ ಪ್ರಭಾವಕ್ಕೆ ಒಳಗಾದ ವಲಯಗಳಿಗೆ ಸಮಗ್ರ ಪರಿಸರ ಯೋಜನೆ ಹಂತ ಹಂತವಾಗಿ ಅನುಷ್ಟಾನಗೊಳಿಸುವ ಕೆಲಸವಾಗಬೇಕು. ಕರ್ನಾಟಕ ಗಣಿ ಪರಿಸರ ಪುನ:ಶ್ಚೇತನ ನಿಗಮದ ಅಧಿಕಾರಿಗಳು, ನ್ಯಾಯಾಧೀಶರು, ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಜಿಲ್ಲಾಧಿಕಾರಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ಗಣಿಬಾಧಿತ ಹಳ್ಳಿಗಳ ಹೋರಾಟ ಸಮಿತಿಯ ಮುಖಂಡರ ಸಭೆ ಕರೆದು ಸಮಸ್ಯೆಗಳನ್ನು ಆಲಿಸುವ ಮತ್ತು ಸ್ಥಳ ಪರಿಶೀಲನೆ ಮಾಡುವ ಕೆಲಸ ಮಾಡಲಿ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಟಿ.ರುದ್ರಮುನಿ, ಕರ್ನಾಟಕ ರಾಜ್ಯ ಗಣಿಬಾಧಿತ ಹಳ್ಳಿಗಳ ಹೋರಾಟ ಸಮಿತಿ ಮುಖಂಡರ ಬಿ.ದುರ್ಗ ರಮೇಶ್ ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ