ಶ್ರೀ ವಾಸವಿ ವಿದ್ಯಾಲಯದಲ್ಲಿ ಉಚಿತ ಬೇಸಿಗೆ ಶಿಬಿರ ಪುಸ್ತಕ ಬಿಡುಗಡೆ

Upayuktha
0



ಬಳ್ಳಾರಿ: ಶ್ರೀ ವಾಸವಿ ಎಜ್ಯುಕೇಶನ್ ಟ್ರಸ್ಟ್‌ನ  ಸಹಯೋಗದೊಂದಿಗೆ ಶ್ರೀ ವಾಸವಿ ವಿದ್ಯಾಲಯದಲ್ಲಿ ಭಾನುವಾರದಂದು ಉಚಿತ ಬೇಸಿಗೆ ಶಿಬಿರಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಿದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.


ಈ ಪುಸ್ತಕವು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಎನ್‌ಸಿಎಫ್ ಮತ್ತು ಕಲಿಕೆಯ ಕನಿಷ್ಠ ಸಾಮರ್ಥ್ಯಗಳ ಆಧಾರದ ಮೇಲೆ ಶಾಲೆಯ ಶಿಕ್ಷಕ ವೃಂದವು ತಯಾರಿಸಿದ್ದು, ವಿದ್ಯಾರ್ಥಿಗಳಿಗೆ ಉಪಯುಕ್ತವಾದ ವಿವಿಧ ಚಟುವಟಿಕೆಗಳ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಒಳಗೊಂಡಿದೆ. ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆ ಮತ್ತು ವಾಸವಿ ಮಾತೆಗೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಈ ಕಾರ್ಯಕ್ರಮದಲ್ಲಿ ವಾಸವಿ ಎಜ್ಯುಕೇಶನ್ ಟ್ರಸ್ಟ್‌ನ  ಗೌರವಾನ್ವಿತ ಅಧ್ಯಕ್ಷರಾದ ಜಯಪ್ರಕಾಶ್ ಜೆ. ಗುಪ್ತಾ, ಅಧ್ಯಕ್ಷ ವಿಠ್ಠಲ ಕೃಷ್ಣಕುಮಾರ್, ಉಪಾಧ್ಯಕ್ಷ ಶ್ರೀನಿವಾಸಲು, ಕಾರ್ಯದರ್ಶಿ ಪಿ. ಎನ್. ಸುರೇಶ್, ಜಂಟಿ ಕಾರ್ಯದರ್ಶಿ ಬಿಂಗಿ ಸುರೇಶ್, ಸಾರಿಗೆ ವ್ಯವಸ್ಥೆಯ ಕಾರ್ಯದರ್ಶಿ  ಸಿದ್ದಾರ್ಥ್, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ, ಆರ್ ಎಸ್ ಬಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಪೋಲಾ ರಾಧಕೃಷ್ಣ, ಸದಸ್ಯರಾದ ಅಗಡಿ ಗವಿಸಿದ್ದೇಶ್ವರ ಪ್ರಸಾದ್, ಅರ್ಜುನ್, ಸನ್ಮಾನ್ಯ ಸ್ನೇಹಿತರ ಬಳಗದ ಕಾರ್ಯದರ್ಶಿ ಚಂದ್ರಶೇಖರ್ ಆಚಾರಿ, ಶಾಲಾ  ಮುಖ್ಯೋಪಾಧ್ಯಾಯ ವೀರೇಶ್. ಯು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ಪೋಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.


ಶ್ರೀ ವಾಸವಿ ಎಜ್ಯುಕೇಶನ್ ಟ್ರಸ್ಟ್ ಕಳೆದ ನಾಲ್ಕು ದಶಕಗಳಿಂದ ಬಳ್ಳಾರಿ ನಗರದ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ಶುಲ್ಕದಲ್ಲಿ ಶಿಕ್ಷಣವನ್ನು ಒದಗಿಸುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಉಚಿತವಾಗಿ ಬೇಸಿಗೆ ಶಿಬಿರವನ್ನು ನಡೆಸುತ್ತಿದೆ. ಈ ವರ್ಷದ ಬೇಸಿಗೆ ಶಿಬಿರದ ವಿಶೇಷವೆಂದರೆ ಸ್ವತಃ ಟ್ರಸ್ಟ್ನ ವತಿಯಿಂದ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಪುಸ್ತಕವನ್ನು ರಚಿಸಿರುವುದು. ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ವೀರೇಶ್. ಯು ರವರು ಪ್ರಾತ್ಯಕ್ಷಿತೆಯ ಮೂಲಕ ಬಳ್ಳಾರಿಯ ಬಿಸಿಲಿನ ತಾಪಮಾನ ಮತ್ತು ಮಕ್ಕಳು ರಜಾ ದಿನಗಳಲ್ಲಿ ಮೊಬೈಲ್‌ನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಶಿಕ್ಷಣದಲ್ಲಿ ನಿರಂತರತೆಯ ಕೊರತೆ ಉಂಟಾಗಿ ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ ಎಂದು ಹೇಳುತ್ತಾ ಈ ಬೇಸಿಗೆ ಶಿಬಿರದ ಸಂಪೂರ್ಣ ಮಾಹಿತಿಯನ್ನು ಪೋಷಕರಿಗೆ ವಿವರಿಸಿದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜಯಪ್ರಕಾಶ್ ಜೆ. ಗುಪ್ತಾರವರು ಮಾತನಾಡಿ, “ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ವಿದ್ಯಾರ್ಥಿಗಳು ಕಲಿಕಾ ಮೆಟ್ಟಿಲುಗಳತ್ತ ಸದೃಢವಾಗಿ ಮುನ್ನಡೆಯಲು ಈ ತರಹದ ಬೇಸಿಗೆ ಶಿಬಿರಗಳು ಅತ್ಯಂತ ಸಹಾಯಕ.  


ಈ ಶಿಬಿರವನ್ನು ಉಚಿತವಾಗಿ ಆಯೋಜಿಸಿರುವುದು ಶ್ಲಾಘನೀಯ. ಇದರಿಂದ ವಿದ್ಯಾರ್ಥಿಗಳು ಹೊಸ ಕಲಿಕೆಗೆ ಅವಕಾಶ ಪಡೆಯುತ್ತಾರೆ. ಶಾಲೆಯ ಶಿಕ್ಷಕರು ಶ್ರಮಪಟ್ಟು ತಯಾರಿಸಿದ ಈ ವಿಶೇಷ ಪುಸ್ತಕವು ಶಿಬಿರದ ಅನುಭವವನ್ನು ಇನ್ನಷ್ಟು ಸರಳಗೊಳಿಸುತ್ತದೆ” ಎಂದು ಪ್ರಶಂಶಿಸಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಷ್ಟಿ ರುದ್ರಪ್ಪ ಅವರು ಶಿಬಿರದ ಮಹತ್ವ ಹಾಗೂ ಈ ಪುಸ್ತಕದ ಪ್ರಾಮುಖ್ಯತೆ ಕುರಿತು ಮಾತನಾಡಿದರು. “ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಸಮಗ್ರ ಅಭಿವೃದ್ದಿಗೆ ಈ ರೀತಿಯ ಶಿಬಿರಗಳು ಬಹಳ ಅವಶ್ಯಕ. ಬೇಸಿಗೆ ರಜಾ ದಿನಗಳನ್ನು ಫಲಪ್ರದವಾಗಿ ಬಳಸಿಕೊಳ್ಳಲು ಶ್ರೀ ವಾಸವಿ ವಿದ್ಯಾಲಯದ ಈ ಉಚಿತ ಶಿಬಿರ ದೊಡ್ಡ ಅವಕಾಶ ನಿರ್ಮಿಸಿರುವುದು ಸಂತೋಷಕರ ಸಂಗತಿ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಯ ಜೊತೆಗೆ ಹೊಸ ಕೌಶಲ್ಯಗಳನ್ನು ಕಲಿಯುವ ಅವಕಾಶ ಸಿಗಲಿದೆ. ಇಂತಹ ವಿನೂತನ ಪುಸ್ತಕಗಳು ಶಿಬಿರದ ಪ್ರಯೋಜನವನ್ನು ಮತ್ತಷ್ಟು ವೃದ್ಧಿಸುತ್ತದೆ” ಎಂದರು.


“ಶಿಕ್ಷಣವು ಕೇವಲ ಪಾಠಶಾಲೆಗಷ್ಟೇ ಸೀಮಿತವಾಗಿರಬಾರದು. ಬೇಸಿಗೆ ಶಿಬಿರಗಳಂತಹ ಉಪಕ್ರಮಗಳು ಮಕ್ಕಳಲ್ಲಿ ನೂತನ ಕಲಿಕೆಯ ಆಸಕ್ತಿಯನ್ನು ಮೂಡಿಸುತ್ತವೆ. ಶ್ರೀ ವಾಸವಿ ವಿದ್ಯಾಲಯವು ಉಚಿತ ಶಿಬಿರವನ್ನು ಆಯೋಜಿಸಿರುವುದು ಬಳ್ಳಾರಿಯ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ದೊಡ್ಡ ಆಶೀರ್ವಾದ. ಇದರಿಂದ ಅವರು ಹೊಸ ಕೌಶಲ್ಯಗಳನ್ನು ಅರ್ಥಮಾಡಿಕೊಳ್ಳಬಹುದು, ತಮ್ಮ ಪ್ರತಿಭೆಗಳನ್ನು ಬೆಳಸಬಹುದು. ವಿದ್ಯಾರ್ಥಿಗಳಲ್ಲಿ ಸ್ನೇಹ, ಸಹಕಾರ ಮತ್ತು ಸ್ಪರ್ಧಾತ್ಮಕ ಅಂಶಗಳನ್ನು ಕಲಿಯಬಹುದು ಎಂದು ಪೋಲಾ  ರಾಧಾಕೃಷ್ಣರವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. 


ಬೇಬಿ ಕ್ಲಾಸ್ ನಿಂದ 7ನೇ ತರಗತಿವರೆಗಿನ ಉಚಿತ ಬೇಸಿಗೆ ಶಿಬಿರದ ಪುಸ್ತಕಗಳನ್ನು ಎಲ್ಲಾ ಮುಖ್ಯ ಅತಿಥಿಗಳು ಗಣ್ಯರು ಒಟ್ಟಾಗಿ ಅನಾವರಣ ಗೊಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪೋಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಈ ಸುವರ್ಣ ಸಂದರ್ಭಕ್ಕೆ ಸಾಕ್ಷಿಯಾದರು. 


ಮೂಲ ಶಿಕ್ಷಣ ಮತ್ತು ಮೂಲಭೂತ ಶಿಕ್ಷಣ ವೆಂಬುದು ಟ್ರಸ್ಟ್ ನ ಉದ್ದೇಶವಾಗಿದ್ದು, ಬಳ್ಳಾರಿ ನಗರದ ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಶಿಬಿರದ ಮೂಲಕ ಸಮಾಜಕ್ಕೆ ಉತ್ತಮ ನಾಗರಿಕರನ್ನು ರೂಪಿಸುವುದು ನಮ್ಮೆಲ್ಲರ ಗುರಿಯಾಗಿದೆ ಎಂದು ಕಾರ್ಯಕ್ರಮದ ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವನ್ನು ಶಾಲಾ ಸಹ ಶಿಕ್ಷಕಿಯರಾದ ಹೆಚ್. ಎಮ್. ಸುಜಾತ ಮತ್ತು ಬಸವರಾಜೇಶ್ವರಿಯವರು ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top