ಪ್ರತಿ ಕಠಿಣ ಪ್ರಯತ್ನಕ್ಕೂ ಒಂದು ಫಲವಿದೆ, ಆದರೆ ಅದನ್ನು ಪಡೆಯಬೇಕಾದರೆ ಸಾಧಿಸುವ ಛಲ, ಪ್ರಯತ್ನ ಅತೀ ಮುಖ್ಯ. ಕನಸುಗಳು ಸಾಧನೆಯ ಶಿಖರವಿದ್ದಂತೆ ಗುರಿ ಇಟ್ಟು ಏರಿದಾಗ ಮಾತ್ರ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಗೆಲುವು ಸಾಧಿಸಬಹುದು. ಅಂತಹ ಅನೇಕ ಪ್ರತಿಭೆಗಳಲ್ಲಿ ಕನಸನ್ನೇ ಬದುಕು ಎಂದು ಕಲೆಯನ್ನು ಅಪ್ಪಿಕೊಂಡು, ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಬಹುಮುಖಪ್ರತಿಭೆ ಪುನೀತ್. ಆರ್ ತೊಕ್ಕೊಟ್ಟು.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ತೊಕ್ಕೊಟ್ಟು ಇಲ್ಲಿನ ದಿ.ಪುರುಷೋತ್ತಮ ಮತ್ತು ಗಾಯತ್ರಿ ದಂಪತಿಗಳ ಪುತ್ರ. ಶೈಕ್ಷಣಿಕವಾಗಿ ಪ್ರಾಥಮಿಕ ಶಿಕ್ಷಣವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಿಲಾರಿನಲ್ಲಿ, ಪ್ರೌಢ ಶಿಕ್ಷಣವನ್ನು ಸೈನ್ಸ್ ಸೆಬೆಸ್ಟಿಯನ್ ಶಾಲೆ ತೊಕ್ಕೊಟ್ಟು ಮತ್ತು ಎಸ್.ಎಸ್ ಎಲ್. ಸಿ ಯನ್ನು ಭಾರತ ಪ್ರೌಢ ಶಾಲೆ ಉಳ್ಳಾಲ ಮತ್ತು ಪ್ರಸ್ತುತ ಶಿಕ್ಷಣವನ್ನು ಭಾರತ್ ಪದವಿ ಪೂರ್ವ ಕಾಲೇಜು ಉಳ್ಳಾಲ ಇಲ್ಲಿ ವಾಣಿಜ್ಯ ವಿಭಾಗವನ್ನು ವ್ಯಾಸಂಗ ಮಾಡುತ್ತಿದ್ದಾರೆ.
ಸಾಧನೆಯ ಹೆಜ್ಜೆ:
ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಕನಸು ಹೊತ್ತ ಇವರ ಕಲಾಪಯಣದ ಆಸಕ್ತಿ ಕಿರಿಯ ವಯಸ್ಸಿನಲ್ಲೆ ಚಿಗುರಿತು. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಯ ಹೆಜ್ಜೆ ಊರಬೇಕೆಂದು ಕನಸು ಹೊತ್ತ ಇವರು ನಿರೂಪಕ, ಗಾಯಕ, ನೃತ್ಯ, ರಂಗಭೂಮಿ ಹೀಗೆ ಹಲವಾರು ಕ್ಷೇತ್ರದಲ್ಲಿ ತನ್ನ ಕಲಾ ಹೆಜ್ಜೆ ಇರಿಸಿದ ತನ್ನನ್ನು ತಾನು ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬೆಳೆಯುತ್ತಿರುವ ಅಪ್ರತಿಮ ಪ್ರತಿಭೆ.
ಕನಸು ಕಾಣುವುದು ಮುಖ್ಯವಲ್ಲ ಆ ಕನಸಿನೊಡನೆ ಪಯಣಿಸಿ ನನಸಾಗಿಸುವುದು ಅತೀ ಮುಖ್ಯ. ಈ ಮಾತಿನಂತೆ ಸ್ವಯಂ ಪರಿಶ್ರಮದಿಂದ ಸಾಧನೆಯ ಹಾದಿಯಲ್ಲಿ ಬೆಳೆದು ಬಂದ ಇವರ ಕನಸಿನ ಹಾದಿಗೆ ಇವರ ತಾಯಿ ಹಾಗೂ ಮನೆಯವರ ಪ್ರೋತ್ಸಾಹವೇ ಶಕ್ತಿ. ನಾನು ಹಾಡಬೇಕು, ಸಂಗೀತಗಾರನಾಗಿ ಹೆಸರು ಪಡೆಯಬೇಕು ಎಂಬ ಬಹುದೊಡ್ಡ ಕನಸು ಹೊತ್ತ ಇವರು ಇಂದು ಸಂಗೀತ ಪಯಣದಲ್ಲಿ ಯಶಸ್ವಿಯಾಗಿ ಮುಂದುವರೆಯುತ್ತಿದ್ದಾರೆ.
ಸಂಗೀತ ಕ್ಷೇತ್ರದ ಪಯಣ:
ಪ್ರತಿಯೊಂದು ಆರಂಭವು ಸಣ್ಣ ಹೆಜ್ಜೆಯಿಂದ ಮುನ್ನುಡಿ ಬರೆಯುತ್ತದೆ. ಅಂತೆಯೇ ಸಂಗೀತದಲ್ಲಿ ಅಪಾರ ಆಸಕ್ತಿಯಿದ್ದ ಇವರಿಗೆ ಭಜನಾ ಸೇವೆಯೇ ಮೊದಲ ಹೆಜ್ಜೆ. ಭಜನಾ ತಂಡ ಶ್ರೀ ವೈದ್ಯನಾಥ ಭಜನಾ ಮಂದಿರ ಅಂಬೇಡ್ಕರ್ ನಗರ ಚೆಂಬುಗುಡ್ಡೆ,ಶ್ರೀ ದುರ್ಗಾ ಭಜನಾ ಮಂಡಳಿ ಅರಿಕೆ ಪದವು ಮೂಡುಪೇರೇರ ಭಜನಾ ತಂಡ ಇಲ್ಲಿ ದಿನ ನಿತ್ಯ ಭಜನೆ ಹೇಳುತ್ತಲೇ ಗಾಯನ ಆರಂಭಿಸಿದ ಇವರು ಇಂದು ಉತ್ತಮ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಶಿಕ್ಷಕರ ಪ್ರೋತ್ಸಾಹ, ಸ್ನೇಹಿತರ, ಸನ್ ಶೈನ್ ತೊಕ್ಕೊಟ್ಟು ತಂಡದ ಬೆಂಬಲದಿಂದ ಗಾಯನ ಕ್ಷೇತ್ರ ದಲ್ಲಿ ಬೆಳೆಯುತ್ತಿರುವ ಇವರು ಅನೇಕ ಗಾಯನ ಸ್ಪರ್ಧೆಗಳನ್ನು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.ಸ್ವಯಂ ಕಲಿಕೆಯಿಂದ ಕಲಿಯಬೇಕು ಎಂಬ ಇವರ ಕನಸಿಗೆ ಹೊಸದೊಂದು ರೆಕ್ಕೆ ಕಟ್ಟಿದ ಇವರು ಯಾವುದೇ ತರಬೇತಿ ಇಲ್ಲದೆ ಸ್ವಯಂ ಕಲಿಕೆಯಿಂದ ಗುರುತಿಸಿಕೊಂಡ ಅಸಾಮಾನ್ಯ ಪ್ರತಿಭೆಯೂ ಹೌದು.
ವಾಕ್ ಚಾತುರ್ಯ ನಿರೂಪಕ: ಮಾತು ಎಂಬುದು ಕೂಡ ಒಂದು ಕಲೆ. ಅದನ್ನು ವಿಭಿನ್ನ ಶೈಲಿಯಲ್ಲಿ ಪ್ರಸ್ತುತ ಪಡಿಸಿ ಮಾತಿನಿಂದಲೇ ಪ್ರೇಕ್ಷಕರ ಮನಗೆಲ್ಲೋ ಅದ್ಬುತ ಒಂದು ಪ್ರತಿಭೆ ಎಂದರೆ ಅದು ನಿರೂಪನೆ. ನಿರೂಪಕನಾಗಿ ವಿಭಿನ್ನವಾದ ಮಾತಿನ ಶೈಲಿಯ ಮೂಲಕ ಮಾತುಗಾರಿಕೆಯಲ್ಲೇ ಜನರನ್ನು ತನ್ನತ್ತ ಸೆಳೆಯುವ ಇವರು ಉಡುಪಿ, ಮಣಿಪಾಲ, ಕಾರ್ಕಳ, ಇನ್ನಿತರ ಕಡೆಗಳಲ್ಲಿ ನಿರೂಪಣೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲೂ ಆಸಕ್ತಿ: ಬರವಣಿಗೆ ಕ್ಷೇತ್ರದಲ್ಲೂ ಆಸಕ್ತಿಯನ್ನು ಬೆಳೆಸಿಕೊಂಡ ಇವರು ಕವನ, ಹಾಡುಗಳಿಗೆ ಸಾಹಿತ್ಯಗಳನ್ನು ಬರೆದಿದ್ದಾರೆ. ಸ್ವತಃ ಸಾಹಿತ್ಯ ಬರೆದು ತನ್ನ ದ್ವನಿಯಲ್ಲೇ ಸಂಗೀತಕ್ಕೆ ದ್ವನಿಯಾಗುವ ಇವರ ಸಾಹಿತ್ಯದ ಒಲವು ಅಪಾರ. 2022 ರಲ್ಲಿ ಸ್ವಾಮಿ ಅಜ್ಜ ಎಂಬ ಹಾಡಿಗೆ ಸಾಹಿತ್ಯ ಮತ್ತು 2023ರಲ್ಲಿ ತುಳುನಾಡ ಪೊಲಬು ಎಂಬ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ಹುಲಿ ಹೆಜ್ಜೆ ಕಲಾವಿದ: ತುಳುನಾಡಿನಲ್ಲಿ ನವರಾತ್ರಿ ಸಂದರ್ಭದಲ್ಲಿ ಹುಲಿ ವೇಷವು ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದ್ದು, ಆ ಸಂದರ್ಭದಲ್ಲಿ ಇವರು ಶ್ರೀ ರಾಧಾಕೃಷ್ಣ ಹುಲಿ ಮಂಜೇಶ್ವರ ಇಲ್ಲಿನ ಹುಲಿ ಹೆಜ್ಜೆ ಕಲಾವಿದನಾಗಿ ಅನೇಕ ಹುಲಿ ಕುಣಿತ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಶ್ರೀ ರಾಧಾಕೃಷ್ಣ ಹುಲಿ ಮಂಜೇಶ್ವರ ಎಂಬ ತಂಡದಲ್ಲಿ ಇರುವ ಇವರು, ಮಂಜೇಶ್ವರ ಪೀಳಿಗೊಬ್ಬು ಇಲ್ಲಿ ಪ್ರಥಮ ಬಹುಮಾನ, ಎಸ್ ಕೆ ಬಿ ಟೈಗರ್ಸ್ ಕುಂಪಲ, ಪುತ್ತೂರು ಪಿಲಿಗೊಬ್ಬಿನಲ್ಲಿ ಪೀಳಿನಲಿಕೆ ಬೆಸ್ಟ್ ರಂಗ್, ಪಿಲಿಪರ್ಬ ಬೆಸ್ಟ್ ರಂಗ್ ಬಹುಮಾನ ಪಡೆದಿದ್ದಾರೆ. ಉತ್ತಮ ಮೆರವಣಿಗೆ ಹೀಗೆ ಅನೇಕ ರೀತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡ ಇವರದು.
ಸಮಾಜ ಸೇವಕನಾಗಿ ಸೇವಾಕಾರ್ಯ: ಇವರು ಶೈಕ್ಷಣಿಕ, ಸಾಂಸ್ಕೃತಿಕ ಮಾತ್ರವಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಗೆಳೆಯರಾದ ಮನೀಶ್, ಪ್ರಧ್ವಿನ್ ಇವರೊಂದಿಗೆ ಸೇರಿ ತೊಕ್ಕೊಟ್ಟಿನಲ್ಲಿ "ಜನನಿ" ಎಂಬ ತಂಡ ಕಟ್ಟಿ ಸೇವೆಯೇ ಪರಮೋಧರ್ಮ ಎಂಬ ಧ್ಯೆಯ ವಾಕ್ಯದೊಂದಿಗೆ ಧನ ಸಹಾಯದ ಮೂಲಕ ಆಸರೆಯಾಗಿದ್ದರೆ. ಕಿರಿಯ ವಯಸ್ಸಿನವರಾದ ಇವರು ಇಂತಹ ಮಹತ್ಕಾರ್ಯದಲ್ಲಿ ತೊಡಗಿಕೊಂಡಿದ್ದು ಇವರ ಈ ಸಹಾಯ ಮನೋಭಾವವನ್ನು ಮೆಚ್ಚಲೇಬೇಕು.
ಪ್ರಶಸ್ತಿ- ಪುರಸ್ಕಾರಗಳು:
ಇವರ ಈ ಸಾಧನೆಯನ್ನು ಗುರುತಿಸಿ ಹಲವು ಸಂಘ- ಸಂಸ್ಥೆಗಳನ್ನು ಇವರನ್ನು ಗೌರವಿಸಿ ಪುರಸ್ಕರಿಸಿವೆ.
• 2024 ನವೆಂಬರ್ 22ರಂದು ರಾಯಚೂರಿನ "ಬೆಳಕು" ಸಂಸ್ಥೆಯ ವತಿಯಿಂದ ಈ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ "ರಾಜ್ಯೋತ್ಸವದ ಕಾಯಕ ಪ್ರಶಸ್ತಿ"
* 2024 ನವೆಂಬರ್ 29 ರಂದು ಕಲಾಭೂಮಿ ಪ್ರತಿಷ್ಠಾನ ಬೆಂಗಳೂರು ಈ ಸಂಸ್ಥೆಯ ವತಿಯಿಂದ ಕಲಾ ಭೂಮಿ ರಾಜ್ಯೋತ್ಸವ ಪ್ರಶಸ್ತಿ.
* 2024 ಡಿಸೆಂಬರ್ 06 ರಂದು ಇನ್ಶೂರೆನ್ಸ್ ಸಂಸ್ಥೆ ಮಂಗಳೂರು ಇದರ ವತಿಯಿಂದ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಅಭಿಮತ ಟಿವಿಯಲ್ಲಿ ಇವರ ಸಾಧನೆಯ ಪರಿಚಯವನ್ನು ಸಂದರ್ಶನ ನೀಡಿದ್ದಾರೆ.
- ವಿಜಯಲಕ್ಷ್ಮಿ ಬಿ ಕೆಯ್ಯೂರು
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ