ಗೋವು, ಕರು, ನಂದಿಗಾಗಿ ಗೋಸನ್ನಿಧಿ, ಸದಾಶಿವನ ಹಿನ್ನೆಲೆಯ ಸೆಲ್ಫೀ ಪಾಯಿಂಟ್
ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ನಾಳೆ (ಫೆ.11) ಆರಂಭವಾಗಲಿದೆ. ಬೆಳಗ್ಗೆ 8.30ಕ್ಕೆ ಸಾಮಗಾನ ಪ್ರಿಯ ವೇದಿಕೆಯಲ್ಲಿ ಭಜನಾರ್ಪಣಮ್ ಉದ್ಘಾಟನೆಗೊಳ್ಳಲಿದೆ. ಮಧ್ವಾದೀಶ ವಿಠಲದಾಸ ಗಡಿನಾಡಿನ ಹರಿ ಸಂಕೀರ್ತನಕಾರ ಶ್ರೀ ರಾಮಕೃಷ್ಣ ಕಾಟುಕುಕ್ಕೆ ದೀಪಬೆಳಗಿಸಿ ಭಜನೆಗೆ ಚಾಲನೆ ನೀಡಲಿದ್ದಾರೆ.
ಸಿಂಧೂರ ಮಹಿಳಾ ಭಜನಾ ಮಂಡಳಿ ಆರ್ಲಪದವು ಪಾಣಾಜೆ, ಕೊರತ್ತಿ ಬಂಟ್ಸ್ ಮಹಿಳಾ ಭಜನಾ ಮಂಡಳಿ ಬದಿಯಡ್ಕ, ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ದೈಹಿತ್ಲು ಸ್ವರ್ಗ, ಶ್ರೀ ಮಹಾವಿಷ್ಣು ಭಜನಾ ಸಂಘ ಆಲಿಂಜ ಬೆಳಿಂಜ, ಅಯ್ಯಪ್ಪ ಭಜನಾ ಸಂಘ ಉಕ್ಕಿನಡ್ಕ ಭಜನಾ ಸೇವೆ ನಡೆಸಿಕೊಡಲಿದ್ದಾರೆ. 10.30ರಿಂದ ಏತಡ್ಕ ಪೇಟೆಯಿಂದ ಶ್ರೀ ದೇವರ ಸನ್ನಿಧಿಗೆ ಭಗವದ್ಭಕ್ತರ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ಶ್ರೀಕ್ಷೇತ್ರದಲ್ಲಿ ಸಮರ್ಪಣೆ, ಶಶಿಭೂಷಣ ಶಾಸ್ತ್ರಿ ಕೊಲ್ಲೆಂಕಾನ ಉಗ್ರಾಣ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.
ಸಂಜೆ 4.30ಕ್ಕೆ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳು ಮತ್ತು ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರ ಆಗಮನ, ಪೂರ್ಣಕುಂಭ ಸ್ವಾಗತ, ಶೋಭಾಯಾತ್ರೆ ನಡೆಯಲಿದೆ. 5.30ಕ್ಕೆ ನಡೆಯುವ ಶಿವಸಂದೇಶ ಸಭಾದಲ್ಲಿ ಶ್ರೀಗಳು ಹಾಗೂ ತಂತ್ರಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.
ನಾಡಿನ ಪ್ರಸಿದ್ಧ ಗಣ್ಯರಾದ ಕೆ.ಕೆ.ಶೆಟ್ಟಿ, ವಸಂತ ಪೈ ಬದಿಯಡ್ಕ, ಸಿಎ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ ಶಾಮ ಭಟ್ ಬೆಂಗಳೂರು ಉಪಸ್ಥಿತರಿರುವರು. ಸಂಜೆ ಕಲಾರ್ಪಣಮ್ ವೇದಿಕೆಯಲ್ಲಿ 6.30ರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳದವರಿಂದ ಉಷಾ ಶ್ಯಾಮ್ ವೈ ಮತ್ತು ಶ್ಯಾಮ ಭಟ್ ವೈ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಶಿವಲೀಲಾಮೃತ ಯಕ್ಷಗಾನ ಬಯಲಾಟ ನಡೆಯಲಿದೆ.
ಬ್ರಹ್ಮಕಲಶೋತ್ಸವಕ್ಕೆ ಗೋಸನ್ನಿಧಿ:
33 ಕೋಟಿ ದೇವತೆಗಳ ಆವಾಸಸ್ಥಾನವೆಂದೇ ನಂಬಿದ ಗೋವಿಗಾಗಿ ಶ್ರೇಷ್ಠವಾದ ಸ್ಥಾನವನ್ನು ನೀಡಬೇಕೆಂಬ ಬ್ರಹ್ಮಕಲಶೋತ್ಸವ ಸಮಿತಿಯ ಉದ್ದೇಶಕ್ಕೆ ನಾರಾಯಣ ಭಟ್ ದಂಬೆಮೂಲೆ ಅವರ ನೇತೃತ್ವದಲ್ಲಿ ಪಳ್ಳತ್ತಡ್ಕ ಹವ್ಯಕ ವಲಯದ ಸೇವಾಬಿಂದುಗಳು ಈ ಕಾರ್ಯವನ್ನು ಪೂರೈಸಿದ್ದಾರೆ. ಪ್ರಾಕೃತಿಕವಾಗಿ ಲಭಿಸುವ ವಸ್ತುಗಳನ್ನೇ ಬಳಸಿ ಗೋಸನ್ನಿಧಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಗೋವು, ಕರು, ಹಾಗೂ ನಂದಿಯು ವಿಶೇಷ ಆಕರ್ಷಣೆಯನ್ನು ಪಡೆದುಕೊಂಡು ಪೂಜಿಸಲ್ಪಡಲಿದೆ. ತ್ರಿಶೂಲ ಹಾಗೂ ಡಮರಿನಿಂದ ಕೂಡಿದ ಸ್ವಾಗತ ಕಮಾನು, ಶಿವಲಿಂಗ ಹಾಗೂ ಸದಾಶಿವನ ಮೂರ್ತಿಯ ಹಿನ್ನೆಲೆಯಿರುವ ಸೆಲ್ಫೀಪಾಯಿಂಟ್‌ಗಳು ಭಗವದ್ಭಕ್ತರನ್ನು ಆಕರ್ಷಿಸಲಿದೆ.
ಪುಣ್ಯ ಜಲ ಸಂಗ್ರಹ:
ಸಿಂಧು ನದಿ, ಲಡಾಕ್, ಗಂಗಾಜಲ, ಹೃಷಿಕೇಶ್, ಗಂಗ, ಯಮುನ, ಸರಸ್ವತಿ, ಪ್ರಯಾಗ್ ರಾಜ್, ಕುಂಭಮೇಳ, ವೈಷ್ಣೋದೇವಿ ತೀರ್ಥ ಸಹಿತ 21ಕ್ಕೂ ಹೆಚ್ಚು ನದಿಗಳ ಜಲ, ಕೈತಪ್ರಂ ಯಜ್ಞಭೂಮಿ, ಕುಮಾರ ಪರ್ವತ, ಚಾಮುಂಡಿಬೆಟ್ಟ ಮೊದಲಾದ ಸ್ಥಳಗಳ ಮೃತ್ತಿಕೆ, ಎತ್ತಿನ ಕೊಂಬಿನ ಮಣ್ಣುಗಳನ್ನು ತಂತ್ರಿಗಳ ಆದೇಶದಂತೆ ಬ್ರಹ್ಮಕಲಶಾಭಿಷೇಕಕ್ಕಾಗಿ ಸಂಗ್ರಹಿಸಲಾಗಿದೆ. ಶಿವಾರ್ಪಣಂ ಯೋಜನೆಯು ಎಲ್ಲಾ ಜನರನ್ನೂ ಸೇವಾಕಾರ್ಯದಲ್ಲಿ ತೊಡಗಿಸಿದೆ.
ಒಂದು ಊರಿನ ದೇವಸ್ಥಾನದ ಬ್ರಹ್ಮಕಲಶೋತ್ಸವವಾದಾಗ ಆ ಊರು ಪರಿವರ್ತನೆಯಾಗಬೇಕು. ಧಾರ್ಮಿಕ ಚಿಂತನೆಯ ಜಾಗೃತಿಯುಂಟಾಗುವುದರೊಂದಿಗೆ ನಾಡು ಸುಭಿಕ್ಷವಾಗಬೇಕು.
- ವೈ ಶಾಮ ಭಟ್,
ಅಧ್ಯಕ್ಷರು, ಏತಡ್ಕ ಶ್ರೀ ಸದಾಶಿವ ದೇವಸ್ಥಾನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ